Sringeri: ಏ.18-22ರವರೆಗೆ ಶೃಂಗೇರಿ ಶಾರದಾ ಪೀಠದಲ್ಲಿ ಶಂಕರ ಜಯಂತೋತ್ಸವ
ಚಿಕ್ಕಮಗಳೂರು: ಜಿಲ್ಲೆಯ ಹಾಗೂ ರಾಜ್ಯದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶೃಂಗೇರಿ ಶಾರದಾ ಪೀಠದಲ್ಲಿ ಇದೇ ಏಪ್ರಿಲ್ 18 ರಿಂದ 22ರವರೆಗೆ ಶಂಕರ ಜಯಂತ್ಯುತ್ಸವ ಜರುಗಲಿದೆ. ಈ ಸಂಬಂಧ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ನಿತ್ಯ ಬೆಳಗ್ಗೆಯಿಂದ ಮಧ್ಯಾಹ್ನ ಹಾಗೂ ಸಂಜೆಯಿಂದ ರಾತ್ರಿವರೆಗೆ ಹಲವು ಕಾರ್ಯಕ್ರಮಗಳಿಗೆ ಭಕ್ತರು ಸಾಕ್ಷಿಯಾಗಲಿದ್ದಾರೆ.
ಪ್ರತಿ ದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12.30ರವರೆಗೆ ಶಂಕರ ಭಗವತ್ಪಾದರ ಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಚತುರ್ವೇದ, ಪ್ರಸ್ಥಾನತ್ರಯ ಭಾಷ್ಯ, ವಿದ್ಯಾರಣ್ಯ ವೇದಭಾಷ್ಯ, ಶಂಕರ ದಿಗ್ವಿಜಯ ಮುಂತಾದ ಪಾರಾಯಣಗಳು ನಡೆಯುತ್ತವೆ. ಅಪಾರ ಭಕ್ತರು ಸೇರಲಿದ್ದಾರೆ.

ಪ್ರತಿ ದಿನ ಸಂಜೆ 5 ಗಂಟೆಯಿಂದ 8 ರವರೆಗೆ ವಿಧುಶೇಖರ ಭಾರತೀ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ವೇದ ಸ್ವಸ್ತಿವಾಚನ, ವಿದ್ವಾಂಸರಿಂದ ಉಪನ್ಯಾಸಗಳು ನಡೆಯಲಿವೆ. ಏಪ್ರಿಲ್ 21ರಂದು ಶಂಕರ ಜಯಂತಿ ಸಮಾರಂಭವು ಅದ್ಧೂರಿಯಾಗಿ ನೆರವೇರಲಿದೆ. ಈ ಪ್ರಯುಕ್ತ ಮಧ್ಯಾಹ್ನ 12ರಿಂದ 2ರವರೆಗೆ ಉಭಯ ಸ್ವಾಮೀಜಿ ಅವರಿಂದ ಶಂಕರ ಭಗವತ್ಪಾದರ ಮೂರ್ತಿಗೆ ವಿಶೇಷ ಪೂಜೆ ಕನಕಾಭಿಷೇಕಗಳು ನಡೆಯುತ್ತವೆ. ಅಂದು ಇಡೀ ದಿನ ಶೃಂಗೇರಿಯಲ್ಲಿ ಹಬ್ಬದ ವಾತಾವರಣ ಕಂಡು ಬರಲಿದೆ.
ಶಂಕರಾಚಾರ್ಯರ ಮಹಾರಥೋತ್ಸವ
ಏಪ್ರಿಲ್ 21ರಂದು ಶಂಕರ ಜಯಂತಿ ಪ್ರಯುಕ್ತ ಮಧ್ಯಾಹ್ನ 12ರಿಂದ 2ರವರೆಗೆ ಉಭಯ ಸ್ವಾಮೀಜಿ ಅವರಿಂದ ಶಂಕರ ಭಗವತ್ಪಾದರ ಮೂರ್ತಿಗೆ ವಿಶೇಷ ಪೂಜೆಗಳು ನಡೆಯುತ್ತವೆ. ಕನಕಾಭಿಷೇಕ ಹಾಗೂ ಸಂಜೆ ಅನುಗ್ರಹ ಭಾಷಣ ನಡೆಸಿಕೊಡಲಿದ್ದಾರೆ. ನಂತರ ಕೊನೆಯ ದಿನ ಏಪ್ರಿಲ್ 22 ರಂದು ಬೆಳಗ್ಗೆ 8.30ಕ್ಕೆ ಶಂಕರಾಚಾರ್ಯರ ಮಹಾರಥೋತ್ಸವ ಜರುಗಲಿದೆ. ರಥಬೀದಿಯಲ್ಲಿ ಸಾಗಲಿದ್ದು, ಭಕ್ತಗಣ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾಗಲಿದ್ದಾರೆ. ಸಂಜೆ ವೇದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಮಾಣಪತ್ರ ವಿತರಣೆ, ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ನಡೆಯುವ ಈ ಎಲ್ಲ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.













Click it and Unblock the Notifications