ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮ್ಮೆ ನೋಡಿದರೆ ಸಾಲದು ...

By Super
|
Google Oneindia Kannada News

ಬೇಸಗೆ ಜೋಗವನ್ನೂ ಬಿಟ್ಟಿಲ್ಲ . ಧಗೆಗೆ ಸೋತ ಜೋಗ ಮಂದಗಮನೆಯಾಗಿದ್ದಾಳೆ. ಹಾಗೆಂದು ಜೋಗಕ್ಕೆ ಹೋಗಬೇಕು ಎಂದುಕೊಂಡಿರುವವರು ಚಿಂತಿಸಬೇಕಿಲ್ಲ. ಮುಂಗಾರು ರಾಜ್ಯದಲ್ಲಿ ಅವಧಿಗೆ ಮುನ್ನವೆ ಅಡಿಯಿಡುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಜೋಗ ಮತ್ತೆ ಮೈ ತುಂಬಿಕೊಂಡು ಭೋರ್ಗರೆವ ದಿನ ದೂರವಿಲ್ಲ. ಆ ಹೊತ್ತಿಗೆ ನೀವಲ್ಲಿಗೆ ಹೋದರೆ ಕಣ್ಣೂ ತಂಪಾದೀತು. ಖರ್ಚು ಮಾಡಿದ ಕಾಸಿಗೂ ಬೆಲೆ ಬಂದೀತು.

ಜೋಗ ಜಲಪಾತದ ಸೌಂದರ್ಯದ ಬಗೆಗೆ ಹೊಸದಾಗಿ ನಾವೇನೂ ಹೇಳಬೇಕಿಲ್ಲ. ಜೋಗದ ಸಿರಿ ಬೆಳಕು ಜಗತ್ತಿಗೇ ಗೊತ್ತು. ಆದರೆ ಜೋಗದಲ್ಲಿ ನ ಪ್ರವಾಸಿ ಸೌಕರ್ಯಗಳ ಬಗೆಗೆ ಈ ಮಾತು ಹೇಳುವಂತಿಲ್ಲ . ಜಲಪಾತ ಎಷ್ಟು ಸುಂದರವೋ, ಪ್ರವಾಸಿ ಸೌಲಭ್ಯಗಳು ಅಷ್ಟೇ ಕೆಟ್ಟದಾಗಿವೆ. ಜೋಗಕ್ಕೆ ಹೋಗುವ ರಸ್ತೆಯಿಂದ ಹಿಡಿದು ಪ್ರವಾಸಿ ಮಂದಿರ, ಹೊಟೇಲ್‌, ಬಸ್‌ ನಿಲ್ದಾಣ ಎಲ್ಲೆಲ್ಲೂ ಅವ್ಯವಸ್ಥೆಯೇ. ಇಲ್ಲಿ ಕಾಸು ಧಾರಾಳವಾಗಿ ಖರ್ಚಾಗುತ್ತದೆ. ಕಾಸಿಗೆ ತಕ್ಕ ಕಜ್ಜಾಯವನ್ನು ಮಾತ್ರ ನಿರೀಕ್ಷಿಸುವಂತಿಲ್ಲ.

ಜೋಗದಲ್ಲಿ ಈ ಪಾಟಿ ತೊಂದರೆಗಳೇ ಎಂದು ನೀವು ಗಾಬರಿಗೊಳ್ಳುವ ಕಾರಣವಿಲ್ಲ . ಈಗ ಜೋಗಕ್ಕೆ ಕಾಯಕಲ್ಪ ನೀಡುವ ಬಗೆಗಿನ ಸುದ್ದಿಯಾಂದು ನಮ್ಮ ಕಿವಿಗೆ ಬಿದ್ದಿದೆ. ಜೋಗದ ಅಭಿವೃದ್ಧಿಗೆ 1.17 ಕೋಟಿ ರುಪಾಯಿ ವಿದೇಶೀ ಬಂಡವಾಳ ಲಭಿಸಲಿದೆಯಂತೆ. ರಾಜ್ಯ ಸರಕಾರ ಜೋಗ ಜಲಪಾತ ಪ್ರವಾಸೀ ತಾಣವನ್ನು ಅಭಿವೃದ್ಧಿ ಪಡಿಸುವುದಕ್ಕೋಸ್ಕರ ಹಾಕಿಕೊಂಡಿರುವ ಯೋಜನೆಗೆ ಪೂರಕವಾಗಿ ಈ ಹಣ ಬಳಕೆಯಾಗಲಿದೆ.

ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವುದಕ್ಕೋಸ್ಕರ ಜೋಗದ ಬಳಿ ರೆಸಾರ್ಟ್‌ ಮಾದರಿಯಲ್ಲಿ ವಿಶ್ರಾಂತಿ ತಾಣ ನಿರ್ಮಾಣವಾಗಲಿದೆ. ಅದಕ್ಕೆ ಬೇಕಾಗುವ ಬಂಡವಾಳವನ್ನು ಜೂನ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಬಂಡವಾಳ ಹೂಡಿಕೆದಾರರ ಜಾಗತಿಕ ಸಮ್ಮೇಳನದಲ್ಲಿ ಹೊಂದಿಸಲಾಗುವುದು. ಜಲಪಾತದಲ್ಲಿ ವರ್ಷಪೂರ್ತಿ ನೀರು ಭೋರ್ಗರೆಯುತ್ತ ಧುಮ್ಮಿಕ್ಕುವುದಿಲ್ಲ . ಆದ್ದರಿಂದ ಪ್ರವಾಸಿಗರು ನೀರಿಲ್ಲದ ಕಾಲದಲ್ಲಿ ಬರುವುದು ಕಡಿಮೆಯೇ. ನಾಲ್ಕು ಕವಲುಗಳಲ್ಲಿ ವರ್ಷವಿಡೀ ನೀರು ಧುಮುಕುವಂತೆ ಮಾಡಲು ಸಣ್ಣ ಅಣೆಕಟ್ಟನ್ನು ನಿರ್ಮಿಸಲಾಗುವುದು. ಇದರಿಂದಾಗಿ ನೀವು ಬಯಸಿದಾಗ ಜೋಗಕ್ಕೆ ಬರುವುದು ಸಾಧ್ಯವಾಗುತ್ತದೆ. ಜಲಪಾತದ ಮುಂಭಾಗದಲ್ಲಿ ಸಂಗೀತ ಕಾರಂಜಿಯನ್ನು ನಿರ್ಮಿಸುವ ಕೆಲಸ ಈಗಾಗಲೇ ಆರಂಭವಾಗಿದೆ.

ಜಲಪಾತದ ಅಕ್ಕಪಕ್ಕದಲ್ಲಿ ಉದ್ಯಾನವನ, ದೋಣಿ ವಿಹಾರ ಕೇಂದ್ರ, ಈಜುಕೊಳ, ವನ್ಯಜೀವಿ ಧಾಮ, ಪಕ್ಷಿ ಧಾಮಗಳನ್ನು ನಿರ್ಮಿಸುವ ಯೋಜನೆಯಿದೆ. ಜಲಪಾತದ ಸುತ್ತ ಮುತ್ತ ಇರುವ ಅರಣ್ಯ ಪ್ರದೇಶದಲ್ಲಿ ಧನ್ವಂತರಿ ವನ ನಿರ್ಮಿಸುವ ಕುರಿತೂ ಸರಕಾರ ಯೋಚಿಸುತ್ತಿದೆ. ಸದ್ಯದಲ್ಲೇ ಜೋಗದಲ್ಲಿ ಜಲಪಾತದ ಜೊತೆಗೆ ಪ್ರವಾಸಿ ಸೌಲಭ್ಯಗಳೂ ಕಳೆಗಟ್ಟಲಿವೆ. ನೀವಿನ್ನು ನಿರುಮ್ಮಳವಾಗಿ ಜೋಗಕ್ಕೆ ಬರಬಹುದು. ಬರುವಿರಿ ತಾನೆ?

English summary
Joga - Heaven on earth
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X