ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ "ಕಾಕದೋಷ" ನಾಟಕ ರಂಗದ ಮೇಲೆ-ಯಾವಾಗ?
ಬೆಂಗಳೂರು, ಏಪ್ರಿಲ್, 22: ಸಾಂಪ್ರದಾಯಿಕ ಕುಟುಂಬಕ್ಕೆ ಸಮಾಜದಲ್ಲಿ ಕೊಡುವ ಮರ್ಯಾದೇನೆ ಬೇರೆ ಇರತ್ತೆ. ಆದರೆ ಒಂದು ವೇಳೆ ಇಂತಹ ಕುಟುಂಬದಲ್ಲಿ ಏನಾದರೂ ತಪ್ಪುಗಳಾದರೆ ಸಮಾಜದಲ್ಲಿ ಇವರನ್ನು ಕಾಣುವ ರೀತಿ ಹೇಗಿರುತ್ತದೆ? ಅದರಲ್ಲೂ ಕುಟುಂಬದಲ್ಲಿ ಗಂಡನನ್ನು ಕಳೆದುಕೊಂಡ ಮಹಿಳೆ ಇದ್ದರೆ, ಅವರನ್ನು ಸಮಾಜ ನೋಡುವ ರೀತಿ ಹೇಗಿರುತ್ತದೆ? ಇದರ ನಡುವೆಯೂ ಆ ಮಹಿಳೆ ಹೇಗೆಲ್ಲಾ ಜೀವನ ಸಾಗಿಸುತ್ತಾಳೆ ಎನ್ನುವ ಕಥೆ ಹೇಳುವ ನಾಟಕವೊಂದು ಏಪ್ರಿಲ್ 26ಕ್ಕೆ ತೆರೆ ಮೇಲೆ ಬರಲಿದೆ.
ಕಥೆಯ ಪ್ರಕಾರ ಬೆಂಗಳೂರಿನಲ್ಲೊಂದು ಸಾಂಪ್ರದಾಯಿಕ ಕುಟುಂಬವೊಂದಿದ್ದು, ಈ ಕುಟುಂಬದಲ್ಲಿ ಗಂಡನನ್ನು ಕಳೆದುಕೊಂಡು ಕುಟುಂಬವನ್ನು ಸಂಭಾಳಿಸುತ್ತಿರುವ ಶಾರದಳಿಗೆ ಇರುವ ಒಂದೇ ಒಂದು ಭರವಸೆ ಎಂದರೆ ದೂರದ ಮುಂಬೈನಲ್ಲಿ ಕೆಲಸ ಮಾಡುತ್ತಿರುವ ಮಗ ಅಕ್ಷಯ್.

ಹಳೆ ತಲೆಮಾರಿನ ಕೊಂಡಿಯಾಗಿ ಸಂಪ್ರದಾಯದ ಆಲದ ಮರವಾಗಿರುವ ಅತ್ತೆ ಸೀತಮ್ಮ ಮತ್ತು ಹೊಸ ಭವಿಷ್ಯದ ಸಂಕೇತವಾಗಿರುವ ಮಗ, ಇವರಿಬ್ಬರ ಮಧ್ಯೆ ನಿಂತಿರುವಳೇ ಶಾರದ ಆಗಿದ್ದು, ಇವರಿಗೆ ಭೂತಕಾಲದ ಸತ್ಯವೊಂದು ನಿಜಭೂತವಾಗಿ ಎದುರು ಬಂದು ನಿಲ್ಲುತ್ತದೆ ಅದೂ ತನ್ನ ಮಗ ಅಕ್ಷಯ್‌ನ ಮೂಲಕ.
ಹೀನಕೃತ್ಯವೊಂದರಲ್ಲಿ ಆರೋಪಿಯಾಗಿ ಮಗ ಮನೆ ಸೇರಿದಾಗ, ಶಾರದಳ ಮುಂದಿರುವ ಆಯ್ಕೆಗಳೇನು? ತಾನು ನಂಬಿದ ಮೌಲ್ಯಗಳು ಆಕೆಗೆ ಸರಿದಾರಿ ತೋರಿಸಿದವೇ ಅಥವಾ ಆಕೆಯ ಮನೆ ಕಾಗೆ ಹೊಕ್ಕ ದೋಷದ ಮನೆಯಾಯಿತೇ? ಎನ್ನುವ ಬಗ್ಗೆ ಅದ್ಭುತ ಮಾಹಿತಿಯನ್ನು ಇಲ್ಲಿ ತರಲಾಗಿದೆ.
ಪ್ರಖ್ಯಾತ ನಾಟಕಕಾರ ಹೆನ್ರಿಕ್ ಇಬ್ಸೆನ್‌ನ "ಘೋಸ್ಟ್ಸ್" ನಾಟಕದ ಎಳೆಯೊಂದನ್ನು ಹಿಡಿದು, ಅದ್ಭುತ ಕತೆಯನ್ನು ರಚನೆ ಮಾಡಲಾಗಿದೆ. ಭಾರತದಲ್ಲಿ 2012ರಲ್ಲಿ ನಡೆದ ನಿಜಘಟನೆಯೊಂದನ್ನು ಆಧರಿಸಿ ಅನುಪಮಾ ಚಂದ್ರಶೇಖರ್ ಅವರ "When the crows visit" ಎಂಬ ನಾಟಕವನ್ನು ವೆಂಕಟೇಶ್ ಪ್ರಸಾದ್ ಅವರು ಕನ್ನಡಕ್ಕೆ "ಕಾಕದೋಷ" ಎಂಬ ಹೆಸರಿನಲ್ಲಿ ಅನುವಾದಿಸಿ ನಿರ್ದೇಶಿಸಿದ್ದಾರೆ.
ಲಂಡನ್‌ನಲ್ಲಿ 2019ರಲ್ಲಿ ಇಂಗ್ಲೀಷ್‌ನಲ್ಲಿ ಮೊದಲಿಗೆ ಪ್ರದರ್ಶನಗೊಂಡ ಈ ನಾಟಕ, ಈಗ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಕನ್ನಡ ಭಾಷೆಯಲ್ಲಿ "ಕಾಕದೋಷ" ಎಂಬ ಹೆಸರಿನಲ್ಲಿ ಏಪ್ರಿಲ್ 26ರಂದು ತೆರೆ ಕಾಣುತ್ತಿದೆ.
ಗತಕಾಲದ ನೆರಳಿನಿಂದ ಹೆಣಗಾಡುತ್ತಿರುವ ಕುಟುಂಬದ ಹಿನ್ನೆಲೆಯಲ್ಲಿ "ಕಾಕದೋಷ" ಶಾರದಾಳ ಜೀವನವನ್ನು ಈ ನಾಟಕದಲ್ಲಿ ಎತ್ತಹಿಡಿಯಲಾಗಿದೆ. ಆಕೆಯ ಮಗ ಅಕ್ಷಯ್ ಘೋರ ಅಪರಾಧದ ಆರೋಪಿಯಾಗಿ ಮನೆಗೆ ಹಿಂದಿರುಗಿದಾಗ ತನ್ನ ಮೌಲ್ಯಗಳನ್ನು ಮತ್ತು ತನ್ನ ಕುಟುಂಬದ ಇತಿಹಾಸದ ಬಗ್ಗೆ ಕಾಡುವ ವಿಚಾರಗಳನ್ನು ಇಲ್ಲಿ ತೆರೆದಿಡಲಾಗಿದೆ.
ಈ "ಕಾಕದೋಷ" ನಾಟಕವು ಆಳವಾದ ಮತ್ತು ಸತ್ಯಾಸತ್ಯತೆಯೊಂದಿಗೆ ಭಾವನೆಗಳ ಶ್ರೀಮಂತ ಚಿತ್ರಣವನ್ನು ಜೀವಂತಗೊಳಿಸುತ್ತದೆ. ಆದ್ದರಿಂದ ಈ ನಾಟಕವನ್ನು ವೀಕ್ಷಿಸುವುದನ್ನು ಮಿಸ್ ಮಾಡಿಕೊಳ್ಳಬೇಡಿ.












Click it and Unblock the Notifications