ಜೋಗದಲ್ಲಿ ಪ್ರವಾಸಿಗರ ಊಟ, ತಿಂಡಿ ವ್ಯವಸ್ಥೆಗೆ ನಿರ್ಬಂಧ
ಸಾಗರ, ಜೂನ್ 8: ಎರಡೂವರೆ ತಿಂಗಳ ನಂತರ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರ ಭೇಟಿಗೆ ಅನುಮತಿ ನೀಡಲಾಗಿದೆ. ಕೊರೊನಾ ವೈರಸ್ ಲಾಕ್‌ಡೌನ್‌ನ ಬಳಿಕ ಮತ್ತೆ ಜೋಗದಲ್ಲಿ ಪ್ರವಾಸಿಗರ ಸದ್ದು ಕೇಳುತ್ತಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗಕ್ಕೆ ರಾಜ್ಯದ ಅನೇಕ ಭಾಗಗಳಿಂದ ಜನರು ಭೇಟಿ ನೀಡುತ್ತಾರೆ. ಲಾಕ್‌ಡೌನ್‌ನಿಂದ ಪ್ರವಾಸಿಗರಿಗೆ ನಿರ್ಬಂಧ ಇತ್ತು, ಆದರೆ, ಇಂದಿನಿಂದ ಪ್ರವಾಸಿಗರು ಜೋಗಕ್ಕೆ ಭೇಟಿ ನೀಡಬಹುದಾಗಿದೆ.
ಕೊರೊನಾ ನಂತರದ ಜೀವನ ಬದಲಾಗಿದೆ. ಹೀಗಾಗಿ, ಜೋಗದಲ್ಲಿಯೂ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಿದೆ. ಪ್ರವಾಸಿಗರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ಈಗಾಗಲೇ ಹಲವು ಕಡೆ ಔಷಧಿ ಸಿಂಪಡನೆ ಮಾಡಿದ್ದು, ಅನೇಕ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಳೆಗಾಲದ ಪ್ರಾರಂಭ ಆಗಿದ್ದು, ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿ ಇರಲಿದೆ. ಜೋಗಕ್ಕೆ ಬರುವ ಪ್ರವಾಸಿಗರಿಗೆ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್‌ಮಾಡಲಾಗುತ್ತದೆ.
ಜೋಗ ನೋಡಲು ಬಂದವರಲ್ಲಿ ಹಲವರು ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಕೂತು ಊಟ ಮಾಡಿ ಕಾಲ ಕಳೆಯುತ್ತಿದ್ದರು. ಆದರೆ, ಸದ್ಯಕ್ಕೆ ಊಟ ಹಾಗೂ ತಿಂಡಿಗೆ ನಿಷೇಧ ಮಾಡಲಾಗಿದೆ. ಪ್ರವಾಸಿಗರಿಗೆ ಜೋಗ ಜಲಪಾತ ನೋಡಲು ಮಾತ್ರ ಅವಕಾಶ ನೀಡಲಾಗಿದೆ.