ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಹೊಸ ಮಾರ್ಗ, ಯೋಜನೆಗಳಿಂದ ಮಾತ್ರವಲ್ಲದೇ ಇತ್ತೀಚೆಗೆ ಮೆಟ್ರೋ ನಿಯಮಗಳ ಉಲ್ಲಘನೆ ವಿಚಾರವಾಗಿಯೂ ಪದೇ ಪದೇ ಸುದ್ದಿ ಆಗುತ್ತಿದೆ. ಮೊನ್ನೆಯಷ್ಟೇ ವ್ಯಕ್ತಿಯೊಬ್ಬ ಆಟಿಕೆ ಗನ್ ಹಿಡಿದು ಜನರಲ್ಲಿ ಭಯ ಹುಟ್ಟಿಸಿದ್ದ. ಇದೀಗ ಯುವತಿಯರ ಗುಂಪು ಮೆಟ್ರೋ ನಿಯಮ ಉಲ್ಲಂಘಿಸಿದೆ. ಇದೆಲ್ಲ ನೋಡಿದರೆ ಬೆಂಗಳೂರು ಮೆಟ್ರೋ ಶೀಘ್ರವೇ ದೆಹಲಿ ಮೆಟ್ರೋದಂತಾಗುತ್ತದೆ. ಇವರೆಲ್ಲ ಪ್ರಯಾಣಿಕರ ಬಳಿ ಕ್ಷಮೆ ಕೇಳಬೇಕು ಎಂಬ ಆಗ್ರಹ ಜೋರಾಗಿದೆ. ಜೊತೆಗೆ ಇವರಿಗೆ ಶಿಕ್ಷೆ ನೀಡದಿದ್ದರೆ ಬೇರೆಯವರ ಇದನ್ನೇ ಅನುಸರಿಸುತ್ತಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಮ್ಮ ಮೆಟ್ರೋಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ವಿಡಿಯೋ ಪ್ರಕಾರ, ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿರುವ ಈ ಹೆಣ್ಣುಮಕ್ಕಳ ಗುಂಪು ಸೀಟುಗಳು ಭರ್ತಿಯಾಗಿದ್ದಕ್ಕೆ ಕೆಳಗೆ (ಫ್ಲೋರ್) ಗುಂಪಾಗಿ ಕೂತು ಜೋರು ಧ್ವನಿಯಲ್ಲಿ ಹಾಡು ಹೇಳಿದ್ದಾರೆ. ಮಹಿಳಾ ಬೋಗಿಯಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ಜೋರಾಗಿ ಹಾಡು ಹೇಳುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಸಹ ಪ್ರಯಾಣಿಕರು ಅವರನ್ನು ಪ್ರಶ್ನಿಸಲು ಮುಂದಾಗಿಲ್ಲ.

ದೆಹಲಿ ಮೆಟ್ರೋದಂತಾಗಲು ಬಿಡಬಾರದು!
ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. 'ನಮ್ಮ ಬೆಂಗಳೂರು ಮೆಟ್ರೋ ರೂಲ್ಸ್ ಪ್ರಕಾರ ಯಾರು ಫ್ಲೋರ್ ಮೇಲೆ ಕುಳಿತುಕೊಳ್ಳುವಂತಿಲ್ಲ. ಅಕ್ಕ ಪಕ್ಕದ ಸಹ ಪ್ರಯಾಣಿಕರಿಗೆ ಈ ರೀತಿ ತೊಂದರೆ ನೀಡುವಂತಿಲ್ಲ. ಇವರು ಮೆಟ್ರೋ ರೈಲಿನಲ್ಲಿ ನಡೆದುಕೊಳ್ಳುತ್ತಿರುವುದು ನೋಡಿದರೆ ಆದಷ್ಟು ಬೇಗ ನಮ್ಮ ಬೆಂಗಳೂರು ಮೆಟ್ರೋ ದೆಹಲಿ ಮೆಟ್ರೋ ರೀತಿ ಆಗುವುದರಲ್ಲಿ ಸಂಶಯವಿಲ್ಲ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯುವತಿಯರ ಗುಂಪು ಕಂಟೆಂಟ್, ಲೈಕ್ಸ್, ಕಾಮೆಂಟ್‌ಗಳಿಗಾಗಿ ಈ ರೀತಿ ಮಾಡುತ್ತಿದ್ದಾರೆ. ಇವರಿಂದ ನಿಯಮ ಉಲ್ಲಂಘನೆ ಆಗಿದೆ. ಇವರ ತಪ್ಪಿಗೆ ದಂಡ, ಶಿಕ್ಷೆ ವಿಧಿಸಬೇಕು. ಇಲ್ಲವಾದರೆ ನಮ್ಮ ಮೆಟ್ರೋ ಘನತೆ, ಬೆಂಗಳೂರಿನ ಘನತೆಗೆ ಧಕ್ಕೆ ಉಂಟಾಗುತ್ತಿದೆ. ದೆಹಲಿ ಮೆಟ್ರೋ ರೀತಿ ಬೆಂಗಳೂರು ಮೆಟ್ರೋ ಆಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಲಾಗಿದೆ. ದೆಹಲಿ ಮೆಟ್ರೋದಲ್ಲಿ ಲವರ್ಸ್ ಕಿಸ್, ರೋಮ್ಯಾನ್ಸ್, ಇನ್ನಿತರ ನಿಯಮ ಉಲ್ಲಂಘನೆ ಪ್ರಕರಣಗಳು ಸರ್ವೆ ಸಾಮಾನ್ಯ ಎಂಬಂತಾಗಿವೆ. ಹೀಗಾಗಿ ದೆಹಲಿಯಂತೆ ಆಗಬಾರದೆಂದು ನೆಟ್ಟಿಗರು ಕೋರಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ರೈಲಿನಲ್ಲಿ ಮೊಬೈಲ್ ಕಿರಿಕಿರಿ ತಪ್ಪಿಸಲು ನಿಯಮ ಜಾರಿಗೆ ತಂದಿದೆ. ಮೊಬೈಲ್‌ನಲ್ಲಿ ಜೋರು ಸೌಂಡ್‌ನಲ್ಲಿ ರೀಲ್ಸ್ ನೋಡುವುದು, ಹಾಡು ಕೇಳುವುದನ್ನು ನಿಷೇಧಿಸಲಾಗಿದೆ. ಇದರೊಂದಿಗೆ ತಿಂಡಿ ತಿನ್ನುವುದು, ನೆಲದ ಮೇಲೆ ಕೂರುವುದು, ಪಾನಮತ್ತ ಸಂಚಾರ, ಗುಟ್ಕಾ ಸೇವನೆ ಸೇರಿ ಹಲವು ನಿರ್ಬಂಧ ನಿಯಮಾವಳಿ ಜಾರಿಗೆ ತಂದಿದೆ. ಸುಗಮ ಮೆಟ್ರೋ ಸಂಚಾರ ದೃಷ್ಟಿಯಿಂದ ಈ ನಿಯಮ ಜಾರಿಯಲ್ಲಿದ್ದು, ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಪಾಲಿಸಬೇಕಿದೆ. ಇಲ್ಲವಾದರೆ ದಂಡ ಜೊತೆಗೆ ಪ್ರಕರಣ ಸಹ ದಾಖಲಿಸಲು ಅವಕಾಶ ಇದೆ ಎಂದು ಮೆಟ್ರೋ ಅಧಿಕಾರಿಗಳು ಈಗಾಗಲೇ ಎಚ್ಚರಿಸಿದ್ದಾರೆ.
ನಮ್ಮ ಬೆಂಗಳೂರು ಮೆಟ್ರೋ ರೂಲ್ಸ್ ಪ್ರಕಾರ ಯಾರು ಫ್ಲೋರ್ ಮೇಲೆ ಕುಳಿತುಕೊಳ್ಳುವ ಹಾಗಿಲ್ಲ, ಅಕ್ಕ ಪಕ್ಕ ಇರುವವರಿಗೆ ಡಿಸ್ಟರ್ಬ್ ಮಾಡಂಗಿಲ್ಲ.
— Aditya Samarth (@aaditya_samarth) March 17, 2026
ಇವರು ಇದರಲ್ಲಿ ಆಡುತ್ತಿರುವುದೆಲ್ಲ ನೋಡಿದರೆ ಆದಷ್ಟು ಬೇಗ ನಮ್ಮ ಬೆಂಗಳೂರು ಮೆಟ್ರೋ ದೆಹಲಿ ಮೆಟ್ರೋ ಆಗಿ ಬಿಡುತ್ತೆ ಅಂತ ಅನಿಸುತ್ತಿದೆ.@OfficialBMRCL @BlrCityPolice @blrcitytraffic pic.twitter.com/ByHoqElxRV
ಗನ್ ಹಿಡಿದು ಯುವಕ ಪ್ರಾಂಕ್, ಪೊಲೀಸ್ ವಶಕ್ಕೆ..
ಇತ್ತೀಚೆಗೆ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ಆಗಮಿಸಿದ್ದ ಬಿಹಾರದ ವ್ಯಕ್ತಿಯೊಬ್ಬ ಆಟಿಕೆ ಗನ್ ಹಿಡಿದು ಪ್ರಾಂಕ್ ಮಾಡಲು ಯತ್ನಿಸಿದ್ದ. ಇದರಿಂದ ಸಹ ಪ್ರಯಾಣಿಕ ಬೆಚ್ಚಿ ಬಿದ್ದಿದ್ದರು. ಈತನ ನಡವಳಿಕೆ ಕಂಡು ಆತಂಕ ಜನರ ಹೊರ ಹಾಕಿದ್ದರು. ಇದು ಪ್ರಯಾಣಿಕರಲ್ಲಿ ಸುರಕ್ಷತೆಯ ಕಳವಳ ಹುಟ್ಟು ಹಾಕಿತ್ತು. ಬಳಿಕ ಆತನನ್ನು ಮೆಟ್ರೋ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ತಪ್ಪೊಪ್ಪಿಗೆ ಬರೆಸಿಕೊಂಡು ಕಳುಹಿಸಿದ್ದರು. ಈ ವೇಳೆ ಬಿಎಂಆರ್‌ಸಿಎಲ್ 400 ರೂಪಾಯಿ ದಂಡ ವಿಧಿಸಿತ್ತು. ಇಂತಹ ಪ್ರಕರಣಗಳು ಆಗಾಗ ಮರುಕಳಿಸುತ್ತಲೇ ಇದೆ. ಇದೀಗ ಯುವತಿಯರ ಗುಂಪಿನಿಂದ ಮೆಟ್ರೋ ರೈಲಿನಲ್ಲಿ ನಿಯಮ ಉಲ್ಲಂಘಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿ ಬಂದಿದೆ.












Click it and Unblock the Notifications