ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹ; ರಾಜ್ಯದ ಎಲ್ಲ ಸಂಸದರಿಗೆ ಪುರುಷೋತ್ತಮ ಬಿಳಿಮಲೆ ಪತ್ರ

ಭಾರತೀಯ ರೈಲ್ವೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ನೇಮಕಾತಿ ಹಾಗೂ ಪದೋನ್ನತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾತ್ರ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು, ಈ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರಾಜ್ಯದ ಎಲ್ಲಾ ಸಂಸದರಿಗೆ ಪತ್ರ ಮುಖೇನ ಆಗ್ರಹಿಸಿದ್ದಾರೆ.

ಇತ್ತೀಚೆಗೆ ರೈಲ್ವೆ ಇಲಾಖೆಯು ರಾಜ್ಯದ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ನಡೆಸಲು ಉದ್ದೇಶಿಸಿದ್ದ ಇಲಾಖಾ ಮುಂಬಡ್ತಿ ಪರೀಕ್ಷೆಗಳಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಸಂಪೂರ್ಣವಾಗಿ ನಿರಾಕರಿಸಲಾಗಿತ್ತು. ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗ ಅಭ್ಯರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದರು. ಪರೀಕ್ಷಾ ಕೇಂದ್ರಗಳಿಗೆ ಮುತ್ತಿಗೆ ಹಾಕಿದ ಹಿನ್ನೆಲೆಯಲ್ಲಿ, ರೈಲ್ವೆ ಇಲಾಖೆಯು ಅನಿವಾರ್ಯವಾಗಿ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಆದರೆ, ಪರೀಕ್ಷೆಗಳ ಮುಂದೂಡಿಕೆಯು ಕೇವಲ ತಾತ್ಕಾಲಿಕ ಗೆಲುವಾಗಿದ್ದು, ಇದನ್ನೇ ಶಾಶ್ವತ ಪರಿಹಾರ ಎಂದು ಭಾವಿಸುವಂತಿಲ್ಲ. ಭವಿಷ್ಯದಲ್ಲಿ ಮತ್ತೆ ಹಿಂದಿ ಹೇರಿಕೆಯಾಗದಂತೆ ತಡೆಯಲು ಸಂಸತ್ತಿನಲ್ಲಿ ಧ್ವನಿ ಎತ್ತುವುದು ಅತ್ಯಗತ್ಯ ಎಂದು ಡಾ. ಬಿಳಿಮಲೆ ಅವರು ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.

Purushottama Bilimale

ತಮ್ಮ ಮಾತೃಭಾಷೆಯಲ್ಲಿ ಪರೀಕ್ಷೆ ಬರೆಯುವ ಅವಕಾಶವನ್ನು ಪಡೆಯುವುದು ಪ್ರತಿಯೊಬ್ಬ ಅಭ್ಯರ್ಥಿಯ ಸಾಂವಿಧಾನಿಕ ಹಾಗೂ ಮೂಲಭೂತ ಹಕ್ಕಾಗಿದೆ. ಭಾರತದಂತಹ ಬಹುಭಾಷಾ ದೇಶದಲ್ಲಿ ಸಮಾನ ಅವಕಾಶಗಳ ಸಿದ್ಧಾಂತದ ಅಡಿಯಲ್ಲಿ, ಹಿಂದಿ ಭಾಷಿಕರಿಗೆ ಸಿಗುವ ಅದೇ ಸೌಲಭ್ಯ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರಿಗೂ ಸಿಗಬೇಕು. ಪ್ರಸ್ತುತ ರೈಲ್ವೆ ನೇಮಕಾತಿ ಮತ್ತು ಪದೋನ್ನತಿ ಪರೀಕ್ಷೆಗಳು ಕನ್ನಡದಲ್ಲಿ ಲಭ್ಯವಿಲ್ಲದಿರುವುದು ಕನ್ನಡಿಗ ಅಭ್ಯರ್ಥಿಗಳಲ್ಲಿ, ಉದ್ಯೋಗಾಕಾಂಕ್ಷಿಗಳಲ್ಲಿ ಮತ್ತು ನಾಡಿನ ಭಾಷಾಭಿಮಾನಿಗಳಲ್ಲಿ ತೀವ್ರ ನಿರಾಸೆ, ಕಳವಳ ಹಾಗೂ ಅಸಮಾಧಾನವನ್ನು ಉಂಟುಮಾಡಿದೆ. ಇದು ಅನ್ಯಾಯದ ಪರಮಾವಧಿಯಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಾಗೂ ದೇಶದ ಅತಿದೊಡ್ಡ ಉದ್ಯೋಗದಾತ ಸಂಸ್ಥೆಯಾಗಿರುವ ರೈಲ್ವೆಯಲ್ಲಿ ಲಕ್ಷಾಂತರ ಹುದ್ದೆಗಳಿವೆ. ಈ ಹುದ್ದೆಗಳಲ್ಲಿ ಸ್ಥಳೀಯ ಯುವಕ-ಯುವತಿಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಬೇಕಾದರೆ, ಪರೀಕ್ಷಾ ಮಾಧ್ಯಮವಾಗಿ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಕನ್ನಡಿಗರು ತಮ್ಮದೇ ನೆಲದಲ್ಲಿ ಉದ್ಯೋಗ ವಂಚಿತರಾಗುವ ಅಪಾಯವಿದೆ ಎಂದು ಅವರು ವಿವರಿಸಿದ್ದಾರೆ. ಕೇವಲ ಭಾಷೆಯ ಕಾರಣದಿಂದಾಗಿ ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳು ಕೇಂದ್ರ ಸರ್ಕಾರದ ಹುದ್ದೆಗಳಿಂದ ವಂಚಿತರಾಗುತ್ತಿರುವುದು ಭಾಷಾ ತಾರತಮ್ಯದ ಸ್ಪಷ್ಟ ನಿದರ್ಶನವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಹೀಗಾಗಿ, ಕರ್ನಾಟಕವನ್ನು ಪ್ರತಿನಿಧಿಸುವ ಲೋಕಸಭೆ ಹಾಗೂ ರಾಜ್ಯಸಭೆಯ ಎಲ್ಲಾ ಸಂಸದರು ಪಕ್ಷಬೇಧ ಮರೆತು ಒಗ್ಗೂಡಬೇಕು. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲಿ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದ ಗಮನ ಸೆಳೆಯಬೇಕು. ಕೇವಲ ಕರ್ನಾಟಕ ಮಾತ್ರವಲ್ಲದೆ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ಇತರೇ ರಾಜ್ಯಗಳ ಸಂಸದರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ರೈಲ್ವೆ ಇಲಾಖೆಯ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯಾ ರಾಜ್ಯಗಳ ಅಧಿಕೃತ ಭಾಷೆಗಳಲ್ಲಿಯೇ ನಡೆಸಲು ಶಾಶ್ವತ ಆದೇಶ ಹೊರಡಿಸುವಂತೆ ಕೇಂದ್ರದ ಮೇಲೆ ತೀವ್ರ ಒತ್ತಡ ಹೇರಬೇಕು ಎಂದು ಡಾ. ಬಿಳಿಮಲೆ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ನಮ್ಮ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಕೈಗೊಳ್ಳುವ ಈ ನಿರ್ಣಾಯಕ ಹೆಜ್ಜೆಯು ಮುಂದಿನ ದಿನಗಳಲ್ಲಿ ಲಕ್ಷಾಂತರ ಕನ್ನಡಿಗ ಯುವಜನತೆಗೆ ಉದ್ಯೋಗದ ಬಾಗಿಲುಗಳನ್ನು ತೆರೆಯಲಿದೆ. ಕೇವಲ ಚುನಾವಣೆಗಳ ಸಂದರ್ಭದಲ್ಲಿ ಮಾತ್ರವಲ್ಲದೆ, ನಾಡಿನ ಅಸ್ಮಿತೆ, ಉದ್ಯೋಗದ ಹಕ್ಕು ಹಾಗೂ ಸಾಂವಿಧಾನಿಕ ಮೌಲ್ಯಗಳ ರಕ್ಷಣೆಗಾಗಿ ಸಂಸದರು ದೃಢವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾದ ತುರ್ತು ಅಗತ್ಯವಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರು ಕಳಕಳಿಯ ವಿನಂತಿ ಮಾಡಿದ್ದಾರೆ.

ರೈಲ್ವೆ ಇಲಾಖೆಯ ನೇಮಕಾತಿ ಪ್ರಕ್ರಿಯೆಯಲ್ಲಿನ ಈ ಭಾಷಾ ತಾರತಮ್ಯವನ್ನು ಸರಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಮತ್ತಷ್ಟು ಉಗ್ರವಾದ ಹೋರಾಟಗಳು ನಡೆಯುವ ಸಾಧ್ಯತೆಗಳಿವೆ. ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ ಸದಾ ಹೋರಾಡಲು ಸಿದ್ಧರಿದ್ದು, ಈ ನಿಟ್ಟಿನಲ್ಲಿ ಸಂಸದರ ಬೆಂಬಲ ಅತ್ಯಮೂಲ್ಯವಾಗಿದೆ. ಕೇಂದ್ರ ಸರ್ಕಾರವು ಸ್ಥಳೀಯರ ಭಾವನೆಗಳಿಗೆ ಬೆಲೆ ಕೊಟ್ಟು ತಕ್ಷಣವೇ ರೈಲ್ವೆ ಪರೀಕ್ಷಾ ನಿಯಮಗಳಲ್ಲಿ ತಿದ್ದುಪಡಿ ತರಬೇಕಿದೆ ಎಂದು ಒಕ್ಕೊರಲಿನಿಂದ ಆಗ್ರಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+