Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರತಿ ಮನೆಗೂ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸುವುದು ಕಡ್ಡಾಯವಾಗಿದೆ. ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದರೂ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಾತ್ರ ಯೋಜನೆ ಹಳ್ಳ ಹಿಡಿದಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಕಟ್ಟುನಿಟ್ಟಿನ ನಿರ್ದೇಶನಗಳಿದ್ದರೂ, ವಾಸ್ತವದಲ್ಲಿ ನಾಗರಿಕರು ಇಂದಿಗೂ ಸಿಲಿಂಡರ್‌ಗಳನ್ನೇ ಅವಲಂಬಿಸುವಂತಾಗಿದೆ.
ಬೆಂಗಳೂರು ನಗರದ ಅತಿದೊಡ್ಡ ಸಮಸ್ಯೆಯೆಂದರೆ ಭೂಗತ ಮೂಲಸೌಕರ್ಯಗಳ ಸರಿಯಾದ ನಕ್ಷೆ ಇಲ್ಲದಿರುವುದು. ರಸ್ತೆಯ ಅಡಿಯಲ್ಲಿ ನೀರಿನ ಪೈಪ್‌ಗಳು, ಒಳಚರಂಡಿ ಮಾರ್ಗಗಳು ಮತ್ತು ವಿದ್ಯುತ್ ಕೇಬಲ್‌ಗಳು ಎಲ್ಲೆಲ್ಲಿವೆ ಎಂಬ ನಿಖರ ಮಾಹಿತಿ ವಾರ್ಡ್ ಮಟ್ಟದಲ್ಲೂ ಲಭ್ಯವಿಲ್ಲ. ಇದರಿಂದಾಗಿ ಗ್ಯಾಸ್ ಪೈಪ್‌ಲೈನ್ ಅಳವಡಿಸಲು ಭೂಮಿ ಅಗೆಯುವಾಗ ಇತರ ಸೇವೆಗಳಿಗೆ ಧಕ್ಕೆಯಾಗುವ ಭೀತಿ ಎದುರಾಗಿದೆ.

ಸಂಪರ್ಕಕ್ಕೆ ಸವಾಲುಗಳೇನು?
ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ರಸ್ತೆಗಳು ಕಿರಿದಾಗಿದ್ದು, ಪೈಪ್‌ಲೈನ್ ಅಳವಡಿಸಲು ಬೇಕಾದ ಸ್ಥಳಾವಕಾಶವೇ ಇಲ್ಲದಂತಾಗಿದೆ. ಇನ್ನು ಸ್ಮಾರ್ಟ್ ಸಿಟಿ ಮತ್ತು ವೈಟ್ ಟಾಪಿಂಗ್ ಯೋಜನೆಯಡಿ ಹೊಸ ರಸ್ತೆಗಳನ್ನು ನಿರ್ಮಿಸುವಾಗ ಗ್ಯಾಸ್ ಪೈಪ್‌ಲೈನ್‌ಗಳಿಗೆ ಪ್ರತ್ಯೇಕ ಜಾಗ ಬಿಡಲಾಗಿಲ್ಲ. ರಸ್ತೆ ಕಾಮಗಾರಿ ಮುಗಿದ ಮೇಲೆ ಮತ್ತೆ ಪೈಪ್‌ಲೈನ್‌ಗಾಗಿ ಅಗೆಯಲು ಅನುಮತಿ ಸಿಗುವುದು ದುಸ್ತರವಾಗಿದೆ.
ಗೇಲ್ (GAIL) ಸಂಸ್ಥೆಯ ಪ್ರಕಾರ ಅನಿಲ ಪೈಪ್‌ಲೈನ್‌ಗಳು ಉಕ್ಕಿನಿಂದ ಮಾಡಲ್ಪಟ್ಟಿರುತ್ತವೆ. ಇವುಗಳನ್ನು ಬಿಬಿಎಂಪಿ ಅಥವಾ ಜಿಬಿಎ ನಿರ್ಮಿಸಿರುವ ಸಣ್ಣ ಡಕ್ಟ್‌ಗಳ ಒಳಗೆ ಬಗ್ಗಿಸಿ ಅಳವಡಿಸಲು ಸಾಧ್ಯವಿಲ್ಲ. ಇದಕ್ಕೆ ಸುದೀರ್ಘವಾದ ಮತ್ತು ನೇರವಾದ ಸ್ಥಳಾವಕಾಶ ಬೇಕು. ಆದರೆ ಅಭಿವೃದ್ಧಿ ಪ್ರಾಧಿಕಾರಗಳು ಈ ತಾಂತ್ರಿಕ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ರಸ್ತೆ ನಿರ್ಮಾಣ ಮಾಡಿರುವುದು ದೊಡ್ಡ ಎಡವಟ್ಟಾಗಿದೆ. ಸ್ಮಾರ್ಟ್ ಸಿಟಿ ರಸ್ತೆಗಳಲ್ಲಿ ಸಾರ್ವಜನಿಕ ಬಳಕೆಗೆ ಡಕ್ಟ್‌ಗಳನ್ನು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳುತ್ತಿದ್ದರೆ, ಅನಿಲ ಪೈಪ್‌ಲೈನ್‌ಗಳು ಉಕ್ಕಿನಿಂದ ಮಾಡಲ್ಪಟ್ಟಿರುವುದರಿಂದ ಸಣ್ಣ ಡಕ್ಟ್‌ಗಳಲ್ಲಿ ಅವುಗಳನ್ನು ಅಳವಡಿಸಲು ಸಾಧ್ಯವಿಲ್ಲ ಎಂದು ಗೇಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
5.77 ಲಕ್ಷ ಮನೆಗಳಿಗೆ ಸಂಪರ್ಕ
ಕರ್ನಾಟಕದಲ್ಲಿ ಒಟ್ಟು 5.77 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದರೂ, ಕೇವಲ 3.5 ಲಕ್ಷ ಮನೆಗಳಿಗೆ ಮಾತ್ರ ಅನಿಲ ಪೂರೈಕೆಯಾಗುತ್ತಿದೆ. ಬೆಂಗಳೂರಿನಲ್ಲಿ 3.5 ಲಕ್ಷ ಮನೆಗಳಿಗೆ ಮೂಲಸೌಕರ್ಯ ಸಿದ್ಧವಿದ್ದರೂ, ಕೇವಲ 1.2 ಲಕ್ಷ ಕುಟುಂಬಗಳಿಗೆ ಮಾತ್ರ ಪೂರೈಕೆ ತಲುಪುತ್ತಿದೆ. ಅಂದರೆ ಸುಮಾರು 2.5 ಲಕ್ಷ ಮನೆಗಳಿಗೆ 'ಲಾಸ್ಟ್ ಮೈಲ್ ಕನೆಕ್ಟಿವಿಟಿ' (ಕೊನೆಯ ಹಂತದ ಸಂಪರ್ಕ) ಕಲ್ಪಿಸಲು ಸಾಧ್ಯವಾಗಿಲ್ಲ.
2023ರ ಕರ್ನಾಟಕ ರಾಜ್ಯ ನಗರ ಅನಿಲ ವಿತರಣಾ ಜಾಲದ ನೀತಿಯ ಪ್ರಕಾರ, ಯಾವುದೇ ಹೊಸ ಕಟ್ಟಡ ಯೋಜನೆಗಳಿಗೆ ಅನುಮತಿ ನೀಡುವಾಗ ಅಥವಾ ನಗರದ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಾಗ ಪೈಪ್‌ಡ್ ಗ್ಯಾಸ್ ಮೂಲಸೌಕರ್ಯಕ್ಕೆ ಅವಕಾಶ ಕಲ್ಪಿಸುವುದು ಕಡ್ಡಾಯ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಹಲವು ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ಈ ನಿಯಮದ ಬಗ್ಗೆ ಅರಿವೇ ಇಲ್ಲದಿರುವುದು ವಿಪರ್ಯಾಸ. ಮುಂಬೈ ಮತ್ತು ದೆಹಲಿಗಳಲ್ಲಿ ಈ ಯೋಜನೆ ಯಶಸ್ವಿಯಾಗಿದ್ದರೂ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನಿರ್ದೇಶನಗಳ ನಡುವೆಯೂ ಬೆಂಗಳೂರಿನಲ್ಲಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.












Click it and Unblock the Notifications