ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಯು.ಆರ್‌. ಅನಂತಮೂರ್ತಿಯವರ ದಿವ್ಯ-ಸ್ವಪ್ನ ?

By Staff
|
Google Oneindia Kannada News

*ಡಾ. ಮೈ.ಶ್ರೀ. ನಟರಾಜ,
ಗೈಥರ್ಸ್‌ ಬರ್ಗ್‌, ಮೇರಿಲ್ಯಾಂಡ್‌, ಯು.ಎಸ್‌.ಎ

My.Sri.Nataraj, Maryland, USಇತ್ತೀಚೆಗೆ ಡಾ.ಅನಂತಮೂರ್ತಿಯವರ ‘ದಿವ್ಯ’ ಕಾದಂಬರಿಯನ್ನೋದುವ ಅವಕಾಶ ಸಿಕ್ಕಿತು. ತುಮಕೂರಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮೆರವಣಿಗೆ ಮಾಡಿಸಿಕೊಂಡು ಮಾಡಿದ ಅವರ ಭಾಷಣವನ್ನು ದಟ್ಸ್‌ಕನ್ನಡ.ಕಾಂನಲ್ಲಿ ಓದಿ ಸಂತೋಷಪಟ್ಟೆ. ಒಂದೆರಡು ವರ್ಷಗಳ ಹಿಂದೆ ಅವರ ‘ಭವ’ ವನ್ನೋದಿದಾಗಲೇ ಇವರ ಇತ್ತೀಚಿನ ಬರವಣಿಗೆಯ ಬಗ್ಗೆ ನನ್ನ ಮನಸ್ಸಿನಲ್ಲಿ ಪ್ರಶ್ನಾರ್ಥಕ ಚಿಹ್ನೆಗಳೆದಿದ್ದದ್ದವು. ಈಗ ‘ದಿವ್ಯ’ ವನ್ನೋದಿದಾಗ ಉಂಟಾದ ಮೊದಲನೇ ಪ್ರತಿಕ್ರಿಯೆ- ನಿರಾಶೆ.

ಸಂಸ್ಕಾರವನ್ನು ಹಲವು ದಶಕಗಳ ಮುನ್ನ ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟ ಅನಂತಮೂರ್ತಿ ಇವರೇಯೇ ಎಂಬ ಪ್ರಶ್ನೆ ನನ್ನನ್ನು ಕಾಡದೇ ಬಿಡಲಿಲ್ಲ . ದೂರದ ಅಮೆರಿಕೆಯಲ್ಲಿ ಕೂತು, ಭಾರತದಲ್ಲಿ ‘ದಿವ್ಯ’ದ ಬಗ್ಗೆ ಪ್ರಕಟವಾಗಿರಬಹುದಾದ ಯಾವ ಲೇಖನ, ಪ್ರತಿಕ್ರಿಯೆ ಅಥವಾ ವಿಮರ್ಶೆಯನ್ನೂ ಓದಿಲ್ಲವಾಗಿ, ನನ್ನ ಅನಿಸಿಕೆ ಬೇರಾರಿಂದಲೂ ಪ್ರಭಾವಿತವಾಗಿಲ್ಲ . ನನ್ನಲ್ಲಿ ಉಂಟಾದ ಎರಡನೇ ಪ್ರತಿಕ್ರಿಯೆ- ಸೋಜಿಗ, ಇಂಥಾ ಕ್ರಾಂತಿಕಾರಿಯೂ ಮೆತ್ತಗಾಗಬಹುದೇ ಎಂದು. ಮೆತ್ತಗಾಗಿದ್ದಾರಲ್ಲ ಎಂದು (ಬ್ರ್ಯಾಕೆಟ್ಟಿನಲ್ಲಿ ) ಸಮಾಧಾನ! ತಮ್ಮ ಹಿಂದಿನ ಚಿಂತನೆಗಳ ಬಗ್ಗೆ ಇವರ ಮನಸ್ಸಿನಲ್ಲೇ ಅನುಮಾನಗಳಂತು ಬಂದಿವೆ ಎಂಬುದು ಓದುಗರ ಮನಸ್ಸಿಗೆ ದಿವ್ಯವನ್ನು ಓದಿದ ಮೇಲೆ ಖಾತ್ರಿಯಾಗುತ್ತದೆ. ಇವರು ಬಣ್ಣಿಸುವ ಮಲೆನಾಡಿನ ಚಿತ್ರ ಸುಂದರವೆನಿಸಿದರೂ ಹೊಸದೆನಿಸದೆ ಚರ್ವಿತ- ಚರ್ವಣವಾಗುತ್ತದೆ. ‘ದಿವ್ಯ’ದಲ್ಲಿ ಬರುವ ಪಾತ್ರಗಳೂ ಸಹ ಹಿಂದೆಲ್ಲೋ (ಇವರ ಮತ್ತು ಇತರರ) ಕತೆ-ಕಾದಂಬರಿಗಳಲ್ಲಿ ಬಂದು ಹೋದ ಪಾತ್ರಗಳಾಗಿಬಿಡುತ್ತವೆ. ಹೊಸ ಸೃಷ್ಟಿ ಎನಿಸದೇ ನಿರಾಶೆಗೊಳಿಸುತ್ತವೆ.

‘ಸಂಸ್ಕಾರ’ದಲ್ಲಿ ಪ್ರಾಣೇಶಾಚಾರ್ಯನಂಥಾ ಸಂಯಮಿಯನ್ನು ಜಾರಿಸಿ ಖುಷಿಪಟ್ಟ, ‘ಭಾರತೀಪುರ’ದಲ್ಲಿ ಮಂಜುನಾಥನನ್ನೇ ಕಿತ್ತೊಗೆವ ಯತ್ನದಲ್ಲಿ ಹೆಮ್ಮೆಪಟ್ಟ, ‘ಅವಸ್ಥೆ’ಯಲ್ಲಿ ಲಕ್ವ ಹೊಡೆದ ಗೋಪಾಲನಿಗೂ ರತಿಕ್ರೀಡೆ ಮಾಡಿಸಿದ, ಇನ್ನೂ ಅನೇಕ ಕತೆಗಳಲ್ಲಿ ದೇವರು, ಧರ್ಮಗಳನ್ನು ಧಿಕ್ಕರಿಸಿ ಮೆರೆದ ಅನಂತಮೂರ್ತಿ, ‘ದಿವ್ಯ’ದಲ್ಲಿ ಸಾಕಷ್ಟು ಸಂಯಮ ತೋರಿ ಓದುಗರನ್ನು ನಿರಾಶೆ ಪಡಿಸಿದ್ದಾರೆ. ಹೊಲೇರ ಕರಿಯನನ್ನು ಕೊಳಲು ಹಿಡಿದ ಕೃಷ್ಣನೆಂದೇ ಬಗೆಯುವ ಗೌರಿಗೆ ಅವನ ಬಗ್ಗೆ ಆಸೆಯಿದ್ದರೂ (ಅವನಿಗೂ ಅವಳ ಬಗ್ಗೆ ಆಸೆಯಿದ್ದರೂ) ಅವರಿಬ್ಬರ ದೈಹಿಕ ಸಂಬಂಧವಾಗದಂತೆ ಕಾಪಾಡಿರುವುದು ವಿಶೇಷದ ಮಾತು. ಕರಿಯ ಜಲಜಳೊಂದಿಗೆ ಮಾಡಿದಂತೆ ಗೌರಿಯಾಡನೆಯೂ ಅಕ್ರಮ ಸಂಬಂಧ ಮಾಡದೇ ಸ್ವರ್ಗಕ್ಕೆ ಹೋಗುವುದೂ ವಿಶೇಷದ ಮಾತೇ! ಭೂವರಾಹನ ವಿಗ್ರಹಕ್ಕೆ ಪೂಜೆ ತಪ್ಪಿಸಿ ಮತ್ತೆಂದೂ ಆವಾಹನೆ ಮಾಡಲಾಗದಂತೆ ಪ್ರದರ್ಶನದ ಗೊಂಬೆಯಾಗಿಸುವುದರಲ್ಲೇ ತೃಪ್ತಿ ಪಟ್ಟು , ಮತ್ತೆ ಅದನ್ನು ಪೆಟ್ಟಿಗೆಯಲ್ಲಿ ಸುತ್ತಿಟ್ಟದ್ದನ್ನು ನೋಡಿದರೆ ಇವರು ಮೆತ್ತಗಾದರು ಎನಿಸಿ ಇವರ ಪುಕ್ಕಲುತನದ ಬಗ್ಗೆ ಸ್ವಲ್ಪ ಕನಿಕರವೂ ಆಗುತ್ತದೆ. ಮುಂದೇನು? ಪೆಟ್ಟಿಗೆಯಲ್ಲಿ ಸುತ್ತಿಟ್ಟ ಭೂವರಾಹಸ್ವಾಮಿ ಗೌರಿಯ ಪ್ರಭಾವದಿಂದ ಪೂಜೆ ಮಾಡಿಸಿಕೊಳ್ಳಲು ಹಿಂದಿರುಗುತ್ತಾನೋ ಕಾಯ್ದು ನೋಡಬೇಕಾಗಿದೆ!

ಎಲ್ಲಕ್ಕಿಂತ ಸ್ವಾರಸ್ಯಕರವಾದ ಸಂಗತಿ ಎಂದರೆ, ಅನಂತಮೂರ್ತಿಯವರ ಟೆಕ್ನೀಕ್‌ ಆಫ್‌ ಆವರೆಜಿಂಗ್‌(ಸರಾಸರೀಕರಣ ತಂತ್ರ). ಮುಂದಿನ ಉದಾಹರಣೆಗಳನ್ನು ನೋಡೋಣ : ಸೀಮೆಗೆ ಹೋಗಿ ಮಾರ್ಕ್ಸ್‌ನನ್ನು ಓದಿ ಬಂದ ಘನಶ್ಯಾಮ ಆಧುನಿಕ ವಿದ್ಯಾಭ್ಯಾಸವೇ ಆಗಿರದ (ಆದರೂ ದಿವ್ಯಜ್ಞಾನಿಯಾದ?) ಗೌರಿಯನ್ನು ಬಯಸಿ ಮೆಚ್ಚುವುದು ; ವೇದಾಧ್ಯಯನ ಮಾಡಿದ ಕರ್ಮಠ ಬ್ರಾಹ್ಮಣ ಪೂಜಾರಿ ಕೇಶವ ಭಟ್ಟ, ಮಂಜಯ್ಯನವರು ‘ಇಟ್ಟುಕೊಂಡವಳಿಗೆ’ ಹುಟ್ಟಿದ ವಿನೋದಿನಿಯನ್ನು ಆಸೆಪಟ್ಟು ಮದುವೆಯಾಗುವುದು ; ಕಾಲೇಜೋದಿ ಪದವೀಧರೆಯಾದ ವಿಮಲೆ ಹೆಚ್ಚೇನೂ ಓದದ ಅಂತಸ್ತಿಲ್ಲದ ಪರಮತೀಯನಾದ ಕ್ರಿಶ್ಚಿಯನ್‌ ಡ್ರೆೃವರ್‌ ಮಿಂಗೋಲಿಯನ್ನು ಪ್ರೀತಿಸಿ ಮದುವೆಗೆ ಮುನ್ನ ಮಗು ಹಡೆಯುವುದು ( ಮತ್ತು ಆ ಸಂಬಂಧವನ್ನು ಇದೇನೂ ವಿಶೇಷವೇ ಅಲ್ಲ- ಅದೂ ಸ್ವಾತಂತ್ರ್ಯಪೂರ್ವ ಭಾರತದಲ್ಲಿ- ಅನ್ನುವಷ್ಟರ ಮಟ್ಟಿಗೆ ಸುತ್ತ ಮುತ್ತಲ ಎಲ್ಲರೂ ಒಪ್ಪಿಕೊಂಡು ಸ್ವಾಗತಿಸಿ ಬಿಡುವುದು!) ; ಬ್ರಾಹ್ಮಣ ಬಾಲ ವಿಧವೆ ಸರಸ್ವತಿ, ಮೋಚಿ ದುರುಗಪ್ಪನನ್ನು ಕದ್ದು ಮೋಹಿಸಿ ಬಸುರಾಗುವುದು (ಮತ್ತು ನಂತರ ಮಗುವನ್ನು ಹೆತ್ತು ಸಾಕಲು ಅವಳ ತಾಯಿ ಗಂಡನ ವಿರೋಧವನ್ನೂ ಲೆಕ್ಕಿಸದೆ ಸಹಾಯಕಳಾಗುವುದು) ; ಜಲಜಳ ‘ಪುರುಸಾನೇ ಅಲ್ಲದ’ ಶಕ್ತಿಹೀನ ಗಂಡ ಅಡಕೆಮರ ಹತ್ತುವ ಸಣಕಲ ಶೀನಪ್ಪ, ದುಷ್ಟ ಕರಿಯನನ್ನು ಕಡಿದುಹಾಕುವುದು; ಜಟ್ಟಿಗಳಂತಿದ್ದ ಕಟುಕರಿಬ್ಬರು (ಕೊಗ್ಗ ಮತ್ತು ಗೊಗ್ಗ) ಒಬ್ಬಂಟಿಗನೂ ನಿಶ್ಯಸ್ತ್ರನೂ ಆದ ದುರುಗನನ್ನು ಕೊಲ್ಲಲಾಗದೆ ಹೋದದ್ದು , ಅದೇ ಕಾರಣಕ್ಕಾಗಿ ಬಡಪಾಯಿ ಗಣಪಯ್ಯ ಕೋವಿ ಉಡಾಯಿಸಿ ಕೊಲೆಗಾರನಾಗಿ ಗಲ್ಲಿಗೇರಿದ್ದು (ಕೊಲೆಗೆ ಮುಂಚಿನ ನಕಲೀ ಹೊಡೆದಾಟ, ನಂತರದ ಕೊಲೆ ಮತ್ತು ಮುಂದೆ ಬರುವ ಕೋರ್ಟಿನ ಪ್ರಸಂಗ ಹಾಗೂ ವಕೀಲನ ವಾದ ಸರಣಿಗಳ ದೃಶ್ಯಗಳಂತೂ ಚಲನಚಿತ್ರಕ್ಕಾಗೇ ಬರೆದಂತಿವೆ!); ಮಡಿ ಹೆಂಗಸಾದ ಅಕ್ಕು ಯಾರೋ ಬಿಟ್ಟುಹೋದ ಮಗುವನ್ನು ಚಕಾರವೆತ್ತದೆ ತನ್ನದೇ ಮಗು ಎಂಬಂತೆ ಸಾಕಿ ಅದರ ಮಾಲೀಕರು ಬಂದು ಕೇಳಿದೊಡನೆ ಪಿಟ್ಟೆನ್ನದೇ ಹಿಂದಿರುಗಿಸುವುದು ; ಇತ್ಯಾದಿ, ಇತ್ಯಾದಿ ಪ್ರಸಂಗಗಳನ್ನು ಮೆಲಕು ಹಾಕಿದರೆ ಅನ್ನಿಸುವುದಿಷ್ಟು . ಹಾಗೂ ಹೀಗೂ ಎಲ್ಲರನ್ನೂ ಒಂದುಗೂಡಿಸಿ ಅರೆದುಹಾಕಿಬಿಟ್ಟರೆ ಒಂದು ಸುಂದರ ಆದರ್ಶ ಸಮಾಜ ಉಂಟಾಗುತ್ತದೆ. ಇಲ್ಲಿ ಮೇಲು-ಕೀಳು , ಸ್ವಜಾತಿ- ವಿಜಾತಿ, ಸ್ವದೇಶಿ-ವಿದೇಶಿ, ಗಂಡು-ಹೆಣ್ಣು ಎಂಬ ಯಾವ ಭೇದವೂ ಇರುವುದಿಲ್ಲ . ಎಂಥ ಸುಂದರ ಕನಸು! ಅದಕ್ಕೇ ಓದಿ ಮುಗಿಸುವ ಹೊತ್ತಿಗೆ ನನಗನ್ನಿಸಿತು ಈ ಕಾದಂಬರಿಯ ಹೆಸರು ‘ದಿವ್ಯ-ಸ್ವಪ್ನ ’ ಎಂದಿರಬೇಕಿತ್ತು ಎಂದು!

ಅನಂತಮೂರ್ತಿಯವರಿಗೆ ಪ್ರಾಚೀನ ಭಾರತದ ಮೌಲ್ಯಗಳ ಬಗ್ಗೆ ಮುಂಚೆ ಇದ್ದ ವಿರೋಧ ಇಂದಿಲ್ಲವೇನೋ. ಆದ್ದರಿಂದಲೇ ಕೇಶವ ಭಟ್ಟ, ಕೃಷ್ಣ ಶಾಸ್ತ್ರಿ , ಅಕ್ಕು, ಗೌರಿ ಇವರೆಲ್ಲ ನಿಷ್ಕಳಂಕರಾಗೇ ಉಳಿದು ಪವಿತ್ರ ಭಾವನೆಗಳನ್ನೇ ಹುಟ್ಟಿಸುತ್ತಾರೆ. ಇದು ಪ್ರಾಯಃ ಅನಂತಮೂರ್ತಿಯವರ ಪುನರ್ಜನ್ಮವೋ ಇಲ್ಲಾ ‘ಸಂಸ್ಕಾರವೋ’? ಎಲ್ಲವನ್ನೂ ಪ್ರಶ್ನಿಸುವ ಹರಿತವಾದ ಅನಂತ ಮೂರ್ತಿಯವರ ಲೇಖನಿಯಲ್ಲಿ ಅನುಭವದಿಂದ ಪಕ್ವವಾದ ಹೊಸ ಮಸಿ ತುಂಬಿದಂತಾಗಿ ಅವರ ನಂಬಿಕೆಗಳ ಪುನರ್ಮೌಲ್ಯೀಕರಣ ಪ್ರಾರಂಭವಾಗಿದೆಯೇ ? ಅಥವಾ ಅನಂತಮೂರ್ತಿಯವರ ಬರಹದಲ್ಲಿ ನನಗೇ ಅರಿವಿಲ್ಲದಂತೆ ಯಾವುದೋ ಅಂಶಗಳನ್ನು ಹುಡುಕುತ್ತಾ ಅವರ ಪಾತ್ರಗಳನ್ನು ಅವರ ಕೈಯಿಂದ ಕಸಿದುಕೊಂಡು ನನಗೆ ಬೇಕಾದ ರೀತಿಯಲ್ಲಿ ಬೆಳೆಸಲು ಪ್ರಯತ್ನ ಮಾಡಿ ವೃಥಾ ನಿರಾಶನಾದೆನೇ ? ಹೀಗಾಗಿ, ನಾನು ಊಹಿಸಿದಂತೆ ಚಿಕ್ಕ ವಯಸ್ಸಿನ ಸುಂದರ ವಿಧವೆ ಅಕ್ಕು ಕಾಮದ ದೌರ್ಬಲ್ಯಗಳಿಗೆ ಒಳಗಾಗಿ ಒಂಟಿ ಬ್ರಾಹ್ಮಣ ಕೃಷ್ಣ ಶಾಸ್ತ್ರಿಗಳೊಂದಿಗೆ ಸಂಬಂಧ ಬೆಳೆಸಲಿಲ್ಲ. ಪರಮ ರಸಿಕತೆಯನ್ನು ಕಾವ್ಯವಾಚನಗಳಲ್ಲಿ ಪಳಗಿಸಿಕೊಂಡಿದ್ದ ಕೇಶವಭಟ್ಟ (ಸಾಧ್ಯವಿದ್ದರೂ) ಗೌರಿಯಾಂದಿಗೆ ಸಂಬಂಧ ಬೆಳೆಸಲಿಲ್ಲ. ಹೀಗಾಗಲು ಅವಕಾಶಗಳು ಇದ್ದಾಗ್ಯೂ ಹಾಗಾಗದಂತೆ ನೋಡಿಕೊಂಡಿರುವುದರಿಂದಲೇ ‘ದಿವ್ಯ’ ವನ್ನು ಓದಿದ ಮೇಲೆ ಒಂದು ರೀತಿಯ ಅನನ್ಯ ಸಮಾಧಾನವೂ ಆಯಿತು. ಮೊದಲೇ ಹೇಳಿದಂತೆ ನಿರಾಶೆ ಸೋಜಿಗ ಮತ್ತು ಸಮಾಧಾನಗಳ ನನ್ನೀ ಪ್ರತಿಕ್ರಿಯೆಯಲ್ಲಿ ನಿರಾಶೆಯೇ ಹೆಚ್ಚೆನಿಸಿದೆ ಎಂದು ಹೇಳದೇ ವಿಧಿಯಿಲ್ಲ. ಕಾರಂತರ ‘ಮರಳಿ ಮಣ್ಣಿಗೆ’ ಯನ್ನು ಬಿಟ್ಟರೆ ನಾನು ನಾನ್‌-ಸ್ಟಾಪ್‌ ಆಗಿ ಓದಿದ ಒಂದೇ ಒಂದು ಕಾದಂಬರಿ ಎಂದರೆ ಸಂಸ್ಕಾರ. ಅದನ್ನು ಬರೆದ ಅನಂತಮೂರ್ತಿ ತರುಣ, ಕ್ರಾಂತಿಕಾರಿ, ಹಾಗೂ ಯಾವ ಹಂಗೂ ಇಲ್ಲದ ನಿರ್ಭೀತ. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವೇ ಇಲ್ಲದೆ ಯಾವುದನ್ನೂ ದುಸ್ಸಾಧ್ಯವೆಂದು ಬಗೆಯದೇ, ಹೊಸ ಸೃಷ್ಟಿ ಮಾಡುವ ಸಂಶೋಧಕ. ಆದರೆ ದಿವ್ಯದ ಸ್ವಪ್ನ ಕಂಡ ಅನಂತ ಮೂರ್ತಿ ಅನುಭವಿ, ಮೆತ್ತಗಾದ, ಸೋತಂತೆ ತೋರುವ ಸಮಾಧಾನಿ, ಒಪ್ಪಂದ ಮಾಡಿಕೊಂಡ ಅನುಮಾನಿ ! ಮತ್ತೊಮ್ಮೆ ಹಿಂದಿನ ಅನಂತಮೂರ್ತಿ ಹಿಂದಿರುಗುವರೇ, ಸಂಸ್ಕಾರದಂಥಾ ಮತ್ತೊಂದು ಕಾದಂಬರಿ ಬರೆಯುವರೇ, ಅಥವಾ ವ್ಯವಸ್ಥೆಯಾಂದಿಗೆ ಇನ್ನೂ ಹೆಚ್ಚು ಹೆಚ್ಚು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾ ಭವ, ದಿವ್ಯಗಳಂಥಾ ಸಪ್ಪೆ ಕಾದಂಬರಿಗಳನ್ನು ಬರೆಯುತ್ತಾ ಹೋಗುವರೇ? ಕಾದು ನೋಡೋಣ.

ಕೊನೆಯದಾಗಿ- ಜ್ಞಾನಪೀಠ ಪ್ರಶಸ್ತಿ ವಿಜೇತ ಅನಂತಮೂರ್ತಿಯವರು ಕನ್ನಡದ ಅತ್ಯಂತ ಪ್ರಭಾವಶಾಲೀ ಬರಹಗಾರರಲ್ಲಿ ಒಬ್ಬರೆಂದು ಮನಃಪೂರ್ವಕವಾಗಿ ಒಪ್ಪಿ , ಅವರ ಕೃತಿಗಳನ್ನು ಪ್ರೀತ್ಯಾದರಗಳೊಂದಿಗೆ ಓದುವ ಅವರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಕೊಂಚ ಕಾಲವೇ ಆದರೂ ಅವರ ಪಾಠ ಕೇಳಿದ ಅದೃಷ್ಟವಂತ. ಮತ್ತೆ ಮತ್ತೆ ಅಮೆರಿಕೆಯಲ್ಲಿ ಅವರನ್ನು ಸಂಧಿಸುವ ಅವಕಾಶದಿಂದಾಗಿ ಅವರ ವಿಶ್ವಾಸವನ್ನು ಗಳಿಸಿಕೊಂಡವರ ಪೈಕಿ ನಾನೂ ಒಬ್ಬನೆಂದು ನಂಬಿದ್ದೇನೆ. ಈ ಎಲ್ಲ ಕಾರಣಗಳಿಂದ ನನ್ನ ಮಾತುಗಳ ಕೇವಲ ವೈಯಕ್ತಿಕ ಅಭಿಪ್ರಾಯ ಮತ್ತು ಪುಸ್ತಕದ ಮೇಲಿನ ಪ್ರತಿಕ್ರಿಯೆ ಎಂದು ಮಾತ್ರ ಓದುಗರು ಭಾವಿಸಬೇಕು, ವಿಮರ್ಶೆ ಎಂದಲ್ಲ.

post your views on Divya

ವಾರ್ತಾ ಸಂಚಯ

‘ದಿವ್ಯ’ದ ಮೂಲಕ ಹೆಡೆಯೆತ್ತಿರುವ ‘ಭವ’ದಲ್ಲಿ ಭಂಗಗೊಂಡ ಅನಂತ ಪ್ರತಿಭೆ
ನಾನು ಬುದ್ಧಿಜೀವಿಯಲ್ಲ ಎಂದಿದ್ದರು ಅನಂತಮೂರ್ತಿ- ಕಂಬಾರರ ‘ದಿವ್ಯ’ ನೆನಪು
ಭವ ಬಂಧನದ ಯು.ಆರ್‌.ಅನಂತಮೂರ್ತಿ !

ಮುಖಪುಟ / ಸಾಹಿತ್ಯ ಸೊಗಡು


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X