Jobs: ಹೈಕೋರ್ಟ್‌ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ
ಕರ್ನಾಟಕ ಹೈಕೋರ್ಟ್‌ನಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುವ ಯುವಜನತೆಗೆ ಇದೊಂದು ಸುವರ್ಣಾವಕಾಶ. ಕರ್ನಾಟಕ ಹೈಕೋರ್ಟ್ 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, 'ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ' (Assistant Court Secretary) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ನ್ಯಾಯಾಂಗ ಇಲಾಖೆಯಲ್ಲಿ ಉನ್ನತ ಮಟ್ಟದ ಸರ್ಕಾರಿ ಉದ್ಯೋಗ ಪಡೆಯಲು ಎದುರುನೋಡುತ್ತಿರುವ ಪದವೀಧರರಿಗೆ ಇದು ಅತ್ಯುತ್ತಮ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 15, 2026 ಕೊನೆಯ ದಿನಾಂಕವಾಗಿದೆ.
ಒಟ್ಟು ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ
ಹೈಕೋರ್ಟ್ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ, ಒಟ್ಟು 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ 59 ಹುದ್ದೆಗಳನ್ನು ಉಳಿಕೆ ಮೂಲ ವೃಂದದಡಿ (RPC) ಮತ್ತು 11 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ವೃಂದದಡಿ (KKR) ಮೀಸಲಿಡಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ 7ನೇ ವೇತನ ಆಯೋಗದ (Level-7) ಅನ್ವಯ, ಮಾಸಿಕ 44,900 ರೂ. ಗಳಿಂದ 1,42,400 ರೂ. ಗಳವರೆಗೆ ಅತ್ಯಂತ ಆಕರ್ಷಕ ವೇತನ ಶ್ರೇಣಿ ಹಾಗೂ ಇತರ ಭತ್ಯೆಗಳು ಸಿಗಲಿವೆ.

ಶೈಕ್ಷಣಿಕ ಅರ್ಹತೆ
ಈ ಪ್ರತಿಷ್ಠಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ, ಕಲೆ, ವಾಣಿಜ್ಯ, ಬಿಸಿನೆಸ್ ಮ್ಯಾನೇಜ್‌ಮೆಂಟ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ಸ್ (BCA) ವಿಷಯಗಳಲ್ಲಿ ಪದವಿ ಪೂರೈಸಿರಬೇಕು. ಇದರ ಜೊತೆಗೆ ಪ್ರಮುಖವಾಗಿ ತಾಂತ್ರಿಕ ಕೌಶಲ್ಯಗಳಾದ ಇಂಗ್ಲಿಷ್ ಶೀಘ್ರಲಿಪಿ (Shorthand) ಮತ್ತು ಇಂಗ್ಲೀಷ್ ಬೆರಳಚ್ಚು (Typing) ನಲ್ಲಿ ಸೀನಿಯರ್ ಗ್ರೇಡ್ (Senior Grade) ಅಥವಾ ಪ್ರೊಫಿಷಿಯೆನ್ಸಿ ಪಾಸ್ ಮಾಡಿರಬೇಕು. ಅಥವಾ ಕಮರ್ಷಿಯಲ್/ಸೆಕ್ರೆಟರಿಯಲ್ ಪ್ರಾಕ್ಟೀಸ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು. ಇದರ ಜೊತೆಗೆ ಕನಿಷ್ಠ ಕಂಪ್ಯೂಟರ್ ಜ್ಞಾನ ಹೊಂದಿರುವುದು ಕಡ್ಡಾಯ.
ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದ (General) ಅಭ್ಯರ್ಥಿಗಳಿಗೆ 40 ವರ್ಷ, ಒಬಿಸಿ (2A, 2B, 3A, 3B) ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 45 ವರ್ಷಗಳಿಗೆ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕದ ಬಗ್ಗೆ ಹೇಳುವುದಾದರೆ, ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 500 ರೂ. ಹಾಗೂ SC/ST/ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳನ್ನು 100 ಅಂಕಗಳ ಶೀಘ್ರಲಿಪಿ ಪರೀಕ್ಷೆ (Shorthand Test) ಮತ್ತು 20 ಅಂಕಗಳ ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತರು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್ ಆದ judiciary.karnataka.gov.in ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಏಪ್ರಿಲ್ 15 ರ ಕಡೆಯ ದಿನಾಂಕದಂದು ಸರ್ವರ್ ಸಮಸ್ಯೆಗಳು ಎದುರಾಗಬಹುದಾದ್ದರಿಂದ, ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಸೂಕ್ತ.












Click it and Unblock the Notifications