Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್
ಶಾಲೆಯ ದಿನಗಳು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಸುಂದರ ಹಾಗೂ ಮರೆಯಲಾಗದ ಕ್ಷಣಗಳನ್ನು ನೀಡಿರುತ್ತವೆ. ಅದರಲ್ಲಿಯೂ ನಮ್ಮ ನೆಚ್ಚಿನ ಶಿಕ್ಷಕರು ಅಥವಾ ಶಿಕ್ಷಕಿಯರೊಂದಿಗಿನ ಒಡನಾಟ ಸದಾ ನೆನಪಿನಲ್ಲಿ ಉಳಿಯುತ್ತದೆ. ತರಗತಿಯಲ್ಲಿ ಎಲ್ಲವೂ ಎಂದಿನಂತೆ ಸಾಮಾನ್ಯವಾಗಿ ನಡೆಯುತ್ತಿತ್ತು. ಆದರೆ, ಆ ಶಿಕ್ಷಕಿ ತನ್ನ ವಿದ್ಯಾರ್ಥಿಗಳಿಗೆ ಹೇಳಿದ ಆ ಒಂದು ಅನಿರೀಕ್ಷಿತ ಸುದ್ದಿ ಇಡೀ ತರಗತಿಯ ವಾತಾವರಣವನ್ನೇ ಬದಲಾಯಿಸಿಬಿಟ್ಟಿತು. ತಾನು ಶಾಲೆಯನ್ನು ಬಿಟ್ಟು ಹೋಗುತ್ತಿರುವುದಾಗಿ, ಅಂದರೆ ಶಾಲೆಯಲ್ಲಿ ಅದೇ ತನ್ನ ಕೊನೆಯ ದಿನ ಎಂದು ಶಿಕ್ಷಕಿ ಹೇಳಿದ ತಕ್ಷಣ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನೆಚ್ಚಿನ ಶಿಕ್ಷಕಿಯನ್ನು ಅಪ್ಪಿಕೊಂಡು ಮಕ್ಕಳು ಕಣ್ಣೀರು ಹಾಕಿರುವ ಈ ಭಾವುಕ ವಿದಾಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಈ ಹೃದಯಸ್ಪರ್ಶಿ ವಿಡಿಯೋವನ್ನು ಎಬಿತಾ ರೈ (Ebita Rai) ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಆರಂಭದಲ್ಲಿ, "ಇಂದು ಶಾಲೆಯಲ್ಲಿ ನನ್ನ ಕೊನೆಯ ದಿನ ಎಂದು ನಾನು ಅವರಿಗೆ ಹೇಳುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು" ಎಂಬ ವಿಡಿಯೋದಲ್ಲಿ ಬರೆಯಲಾಗಿದೆ. ವಿಡಿಯೋದ ಆರಂಭಿಕ ದೃಶ್ಯಗಳಲ್ಲಿ, ಶಿಕ್ಷಕಿ ಎಬಿತಾ ರೈ ಅವರು ತಮ್ಮ ವಿದ್ಯಾರ್ಥಿಗಳೊಂದಿಗೆ ತರಗತಿಯಲ್ಲಿ ನಗುತ್ತಾ, ಖುಷಿಯಿಂದ ಫೋಟೋಗಳಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಆದರೆ, ಶಾಲೆಯಲ್ಲಿ ಇದು ತಮ್ಮ ಕೊನೆಯ ದಿನ ಎಂದು ಅವರು ತಿಳಿಸುತ್ತಿದ್ದಂತೆಯೇ ಅಲ್ಲಿನ ವಾತಾವರಣವೇ ಬದಲಾಗಿಹೋಯಿತು.

ಶಿಕ್ಷಕಿ ಬಿಟ್ಟು ಹೋಗುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಓರ್ವ ವಿದ್ಯಾರ್ಥಿ ತನ್ನ ಕಣ್ಣೀರು ಒರೆಸಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಇತರ ಮಕ್ಕಳು ಎದ್ದುಬಂದು ತಮ್ಮ ನೆಚ್ಚಿನ ಶಿಕ್ಷಕಿಯನ್ನು ಬಿಗಿಯಾಗಿ ಅಪ್ಪಿಕೊಂಡು ಅತ್ತಿದ್ದಾರೆ. ಡೆಸ್ಕ್ ಮೇಲೆ ತಲೆಯಿಟ್ಟು ಕಣ್ಣೀರು ಹಾಕುತ್ತಿರುವ ಹಲವಾರು ವಿದ್ಯಾರ್ಥಿಗಳನ್ನು ಶಿಕ್ಷಕಿಯೇ ಸ್ವತಃ ಸಮಾಧಾನಪಡಿಸುತ್ತಾ, ಅವರನ್ನೂ ತಬ್ಬಿಕೊಂಡು ಸಾಂತ್ವನ ಹೇಳುವ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಕೇವಲ ಪಾಠ ಮಾಡುವುದಷ್ಟೇ ಅಲ್ಲದೆ, ಆ ಶಿಕ್ಷಕಿ ಮಕ್ಕಳೊಂದಿಗೆ ಎಂತಹ ಸುಮಧುರ ಬಾಂಧವ್ಯ ಹೊಂದಿದ್ದರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಈ ಪೋಸ್ಟ್‌ಗೆ ಎಬಿತಾ ರೈ ಅವರು ಅತ್ಯಂತ ಭಾವುಕವಾದ ಶೀರ್ಷಿಕೆಯೊಂದನ್ನು ನೀಡಿದ್ದಾರೆ. "ಒಬ್ಬ ಶಿಕ್ಷಕಿ ಕೇವಲ ಶಿಕ್ಷಣ ನೀಡುವವರಲ್ಲ - ಅವರು ನಮ್ಮನ್ನು ಕಾಳಜಿಯಿಂದ ಪೋಷಿಸುವ, ಮಾರ್ಗದರ್ಶನ ಮಾಡುವ ಮತ್ತು ಪ್ರೇರೇಪಿಸುವ ಎರಡನೇ ತಾಯಿಯಾಗಿದ್ದಾರೆ" ಎಂದು ಬರೆದುಕೊಂಡಿದ್ದಾರೆ. ಅವರ ಈ ಮಾತುಗಳು ಪ್ರತಿಯೊಬ್ಬರ ಮನಮುಟ್ಟುವಂತಿವೆ.
ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಳಕೆದಾರರಿಂದ ಭಾವನಾತ್ಮಕ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಅನೇಕರು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನೆಚ್ಚಿನ ಶಿಕ್ಷಕಿಗೆ ವಿದಾಯ ಹೇಳುವುದು ವಿದ್ಯಾರ್ಥಿಯೊಬ್ಬನ ಜೀವನದ 'ಮೊದಲ ಹೃದಯಘಾತ' ಇದ್ದಂತೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನೂರಕ್ಕೆ ನೂರು ಸತ್ಯವಲ್ಲವೇ?
ತಮ್ಮ ನೆಚ್ಚಿನ ಶಿಕ್ಷಕಿ ಶಾಲೆಯಿಂದ ಹೊರಹೋಗುತ್ತಿದ್ದಾರೆ ಎಂದರೆ ಮಕ್ಕಳು ಎಷ್ಟು ನೊಂದುಕೊಳ್ಳುತ್ತಾರೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ಇದು ಆ ಶಿಕ್ಷಕಿ ಕೇವಲ ಬೋಧನೆಗಿಂತಲೂ ಮಿಗಿಲಾಗಿ ಮಕ್ಕಳನ್ನು ಪ್ರೀತಿಸಿದ್ದರು ಎಂಬುದಕ್ಕೆ ಜೀವಂತ ಸಾಕ್ಷಿ. ಕಾಮೆಂಟ್ ವಿಭಾಗದಲ್ಲಿ ಕೆಲವು ಬಳಕೆದಾರರು ತಮ್ಮ ವೈಯಕ್ತಿಕ ನೆನಪುಗಳನ್ನು ಸಹ ಹಂಚಿಕೊಂಡಿದ್ದಾರೆ. ವರ್ಷಗಳೇ ಕಳೆದರೂ ತಮಗೆ ಪಾಠ ಮಾಡಿದ್ದ ವಿಜ್ಞಾನ ಶಿಕ್ಷಕಿಯನ್ನು ಇಂದಿಗೂ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಒಬ್ರು ನೆನಪಿಸಿಕೊಂಡರೆ, ಮತ್ತೊಬ್ಬರು 'ಒಬ್ಬ ನಿಜವಾದ ಶಿಕ್ಷಕಿಯ ಅತಿದೊಡ್ಡ ಬಹುಮಾನ ಎಂದರೆ ಮಕ್ಕಳ ಈ ಪರಿಶುದ್ಧ ಪ್ರೀತಿ' ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ವೈರಲ್ ವಿಡಿಯೋ ಪ್ರತಿಯೊಬ್ಬರಿಗೂ ತಮ್ಮ ಶಾಲಾ ದಿನಗಳ ನೆಚ್ಚಿನ ಗುರುವೃಂದವನ್ನು ನೆನಪಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications