PG Vs Rent House: ಬೆಂಗಳೂರಲ್ಲಿ ಪಿಜಿ ಉತ್ತಮವೋ, ಬಾಡಿಗೆ ಮನೆ ಮಾಡುವುದು ಉತ್ತಮವೋ
ಬೆಂಗಳೂರಿಗೆ ಬೇರೆ ಬೇರೆ ಊರುಗಳಿಂದ ಉದ್ಯೋಗ ಹಾಗೂ ವಿದ್ಯಾಭ್ಯಾಸಕ್ಕೆಂದು ಬರುವವರು ಪೇಯಿಂಗ್ ಗೆಸ್ಟ್ (Paying Guest) / ಪಿಜಿಗಳಲ್ಲಿ ನೆಲೆಸುವುದು ಇದೆ. ಆದರೆ, ಬೆಂಗಳೂರಿನಲ್ಲಿ ಪಿಜಿಗಳಲ್ಲಿ ಇರುವುದು ಅಷ್ಟೊಂದು ಸುಲಭದ ಮಾತಲ್ಲ. ಸ್ವಚ್ಛತೆ, ಉತ್ತಮ ಊಟ ಹಾಗೂ ಕ್ಲೀನಿಂಗ್ ಎಲ್ಲವೂ ಸರಿಯಾಗಿರಬೇಕಾಗುತ್ತದೆ. ಅಲ್ಲದೆ ಪಿಜಿಗಳ ಬೆಲೆಯು ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ, ಬೆಂಗಳೂರಿನಲ್ಲಿ ಯುವಕರು ಮತ್ತು ಯುವತಿಯರು ಪಿಜಿಯಲ್ಲಿ ಇರುವುದು ಉತ್ತಮವೋ, ಇಲ್ಲ ಒಂದು ಬಿಎಚ್‌ಕೆ ಮಾಡಿಕೊಂಡು ಇರುವುದು ಉತ್ತಮವೋ ಎನ್ನುವ ವಿವರ ಈ ಲೇಖನದಲ್ಲಿದೆ.
ಬೆಂಗಳೂರಿನಲ್ಲಿ ಪಿಜಿ ಮಾಡಿಕೊಳ್ಳುವುದರಿಂದ ಆಗುವ ಮೂರು ಲಾಭಗಳು
ಇನ್ನು ಬೆಂಗಳೂರಿನಲ್ಲಿ ಪಿಜಿ ಅಥವಾ ಪ್ರತ್ಯೇಕವಾಗಿ ಯುವಕರೇ ಸೇರಿ ಮನೆ ಮಾಡಿಕೊಳ್ಳುವುದು ಎರಡರಲ್ಲೂ ಕೆಲವೊಂದು ಸವಾಲುಗಳು ಹಾಗೂ ಲಾಭಗಳು ಎರಡೂ ಸಹ ಇವೆ. ಮೊದಲನೆಯದಾಗಿ ಪಿಜಿಗಳಲ್ಲಿ ನೆಲೆಸುವುದರಿಂದ ಆಗುವ ಲಾಭಗಳು ಇಲ್ಲಿವೆ.

1. ಸಮಯದ ಉಳಿತಾಯ: ಬೆಂಗಳೂರಿನಲ್ಲಿ ಪಿಜಿಗಳಲ್ಲಿ ನೆಲೆಸುವುದರಿಂದ ನಿಮ್ಮ ವೈಯಕ್ತಿಕ ಸಮಯ ಉಳಿತಾಯವಾಗುತ್ತದೆ. ನೀವು ವಿದ್ಯಾಭ್ಯಾಸ ಮಾಡುವುದಕ್ಕೆ ಹಾಗೂ ಉದ್ಯೋಗಕ್ಕೆ ಹೋಗಿ ಬಂದರೆ ಸಹಾಯವಾಗಲಿದೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಹಾಗೂ ಕೆಲಸವನ್ನೂ ಮುಗಿಸಿಕೊಂಡು ಬರುವಾಗಲೇ ಆಯಾಸವಾಗುವುದರಿಂದ ಪಿಜಿಗೆ ಬಂದ ಮೇಲೆ ರೆಸ್ಟ್ ಮಾಡುವುದಕ್ಕೆ ಸಮಯ ಸಿಗುತ್ತದೆ.
2. ಅಡುಗೆ ಖರ್ಚು - ಸಮಯದ ಉಳಿತಾಯ: ಇನ್ನು ಬೆಂಗಳೂರಿನಲ್ಲಿ ಪಿಜಿಗಳಲ್ಲಿ ನೆಲೆಸುವುದರಿಂದ ಅಡುಗೆ ಖರ್ಚು / ಅಡುಗೆ ಮಾಡುವ ಸಮಯವೂ ಉಳಿತಾಯವಾಗುತ್ತದೆ. ಇದರೊಂದಿಗೆ ಮನೆ ಕ್ಲೀನ್ ಮಾಡಿಕೊಳ್ಳುವ ಸಮಯವೂ ಉಳಿತಾಯವಾಗುತ್ತದೆ. ಬೆಂಗಳೂರಿನಲ್ಲಿ ಕೆಲಸ ಮಾಡುವವರು ಅಥವಾ ಬೇರೆ ಊರಿನಿಂದ ಬಂದವರಿಗೆ ಇದೊಂದು ಉತ್ತಮ ಆಯ್ಕೆಯಾಗಿರುತ್ತದೆ.
3. ಮನೆ ಮಾಲೀಕರ ಆಕ್ಷೇಪ ಕಡಿಮೆ / ಹೆಚ್ಚು ಮುಂಗಡ ಹಣ ಕೊಡಬೇಕಿಲ್ಲ: ಬೆಂಗಳೂರಿನಲ್ಲಿ ಪಿಜಿಗಳಲ್ಲಿ ನೆಲೆಸುವುದರಿಂದ ಹೆಚ್ಚು ಮುಂಗಡ ಹಣ ಅಂದರೆ 50 ಸಾವಿರ ರೂ.ದಿಂದ ಲಕ್ಷ ರೂ. ವರೆಗೆ ಕೊಡಬೇಕಾದ ಅವಶ್ಯಕತೆ ಇರುವುದಿಲ್ಲ. ಕೆಲವು ಮನೆ ಮಾಲೀಕರ ಆಕ್ಷೇಪಣೆ ಅಥವಾ ಕಿರಿಕಿರಿಯೂ ಸಹ ಇರುವುದಿಲ್ಲ.
ಯುವಕರು / ಯುವತಿಯರು ಸೇರಿ ಮನೆ ಮಾಡುವುದರಿಂದ ಆಗುವ ಲಾಭಗಳು
1. ಹಣ ಉಳಿತಾಯಕ್ಕೆ ಸಹಕಾರಿ: ಬೆಂಗಳೂರಿನಲ್ಲಿ ಮೂರರಿಂದ ನಾಲ್ಕು ಜನ ಸೇರಿ ಮನೆಯೊಂದನ್ನು ಬಾಡಿಗೆಗೆ ಪಡೆಯುವುದು ಸಹ ಸೂಕ್ತ ನಿರ್ಧಾರವೇ. ಈ ರೀತಿ ಮಾಡುವುದರಿಂದ ಹಣ ಉಳಿತಾಯ ಮಾಡಬಹುದು. ಪಿಜಿಗಳಲ್ಲಿ ಪ್ರತಿ ತಿಂಗಳೂ ಸಹ ಸಾಮಾನ್ಯವಾಗಿ 7,000 ರೂ.ರಿಂದ 8,000 ರೂ. ಇದೆ. ಆದರೆ ಮನೆ ಮಾಡಿಕೊಳ್ಳವುದರಿಂದ ಕನಿಷ್ಠ ಮೂರು ಸಾವಿರ ರೂಪಾಯಿ ಉಳಿಸುವುದಕ್ಕೆ ಸಾಧ್ಯವಿದೆ.
2. ಊಟ, ಸ್ವಚ್ಛತೆ: ಪ್ರತ್ಯೇಕವಾಗಿ ಬಾಡಿಗೆ ಮನೆ ಪಡೆದು ನೆಲೆಸುವುದರಿಂದ ನಿಮಗೆ ಇಷ್ಟವಾದ ಊಟವನ್ನು ಮಾಡಿಕೊಂಡು ಊಟ ಮಾಡಬಹುದು. ಪಿಜಿಗಳಿಗಿಂತಲೂ ಪ್ರತ್ಯೇಕವಾಗಿ ರೂಮ್ ಮಾಡಿಕೊಳ್ಳುವುದರಿಂದ ಅಡುಗೆ ಆಯ್ಕೆಗಳು ಹೆಚ್ಚಾಗಿರುತ್ತವೆ. ಹಣ ಉಳಿತಾಯವನ್ನೂ ಮಾಡಿಕೊಳ್ಳಬಹುದು. ಸಮಾನವಾಗಿ ಹಂಚಿಕೊಂಡು ಕೆಲಸ ಮಾಡುವುದಾದರೆ ಪಿಜಿಗಳಿಗಿಂತಲೂ ಬಾಡಿಗೆ ಮನೆ ಆಯ್ಕೆಯೇ ಉತ್ತಮ.
3. ಪಾರ್ಟಿಗಳು ಅಥವಾ ಗೆಳೆಯರು ಬರುವುದಕ್ಕೂ ಅನುಕೂಲ: ಇನ್ನು ಬೆಂಗಳೂರಿನಲ್ಲಿ ಯುವಕ ಹಾಗೂ ಯುವತಿಯರು ಸೇರಿಕೊಂಡು ಬಾಡಿಗೆ ಮನೆಗಳನ್ನು ಮಾಡಿಕೊಳ್ಳುವುದರಿಂದಾಗಿ ಬರ್ತಡೇ ಪಾರ್ಟಿಗಳು ಅಥವಾ ಗೆಳೆಯರು ಸೇರುವುದಕ್ಕೆ ಸಹಕಾರಿಯಾಗಿದೆ. ಆದರೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮನೆ ಮಾಲೀಕರು ಹೆಚ್ಚು ಜನ ಸೇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಇದೆ. ಆದರೆ, ಸ್ವಚ್ಛತೆ ಕಾಪಾಡಿಕೊಂಡು ಹಾಗೂ ಬೇರೆಯವರಿಗೆ ತೊಂದರೆ ಕೊಡದೆ ಪಾರ್ಟಿಗಳನ್ನು ಮಾಡಬಹುದು.
ಸಾರಾಂಶ: ಬೆಂಗಳೂರಿನಲ್ಲಿ ಪಿಜಿ ಹಾಗೂ ಬಾಡಿಗೆ ಮನೆ ಮಾಡಿಕೊಂಡು ಇರುವುದು ಎರಡೂ ಸಹ ಉತ್ತಮ ಆಯ್ಕೆಗಳೇ. ಆದರೆ ಎರಡರಲ್ಲೂ ಸವಾಲುಗಳು ಸಹ ಇವೆ. ರೂಮ್ / ಬಾಡಿಗೆ ಮನೆ ಪಡೆಯುವುದರಿಂದ ಹಣ ಉಳಿತಾಯ ಹಾಗೂ ಸ್ವಾತಂತ್ರ್ಯ ಇರುತ್ತಾದರೂ ಎಲ್ಲರಲ್ಲೂ ಹೊಂದಾಣಿಕೆ ಇರಬೇಕು. ಅಡುಗೆ ಕೆಲಸ, ಮನೆ ಸ್ವಚ್ಛತೆ ಹಾಗೂ ರೇಷನ್ ತರುವ ವಿಚಾರದಲ್ಲಿ ರೂಮ್‌ನಲ್ಲಿ ಇರುವ ಎಲ್ಲರೂ ಸಹಕರಿಸಬೇಕಾಗುತ್ತದೆ. ಇದರೊಂದಿಗೆ ಪಾತ್ರೆ ತೊಳೆಯುವುದು, ಬಾಡಿಗೆ ಕಟ್ಟುವುದು ಹಾಗೂ ಕರೆಂಟ್‌ಬಿಲ್ ಕಟ್ಟುವುದು ಮತ್ತು ಯಾರು ಎಷ್ಟು ಖರ್ಚು ಮಾಡಿದ್ದಾರೆ ಎನ್ನುವ ವಿಷಯಗಳು ಸಹ ಮುಖ್ಯವಾಗುತ್ತವೆ. ಹೊಂದಾಣಿಕೆ ಕಷ್ಟ ಎನ್ನುವವರಿಗೆ ಪಿಜಿ ಆಯ್ಕೆ ಉತ್ತಮ ಎನ್ನಬಹುದು.












Click it and Unblock the Notifications