B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ
B-Khata: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಪರಿವರ್ತನೆ ಮಾಡಿಕೊಳ್ಳುವ ಯೋಜನೆಗೆ ತೀವ್ರ ಹಿನ್ನಡೆ ಆಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವು ಅವಕಾಶ ಮಾಡಿಕೊಟ್ಟಿತ್ತು. ಆದರೆ, ಆಸ್ತಿಗಳ ಗೈಡ್‌ಲೈನ್ಸ್ ವ್ಯಾಲ್ಯೂ ಆಧಾರದ ಮೇಲೆ ಖಾತಾ ಪರಿವರ್ತನೆ ಮಾಡಿಸಿಕೊಂಡಿದ್ದರಿಂದ ಅಥವಾ ಖಾತಾ ಪರಿವರ್ತನೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಮಧ್ಯಮ ಹಾಗೂ ಸಣ್ಣ ಆಸ್ತಿದಾರರು ಸಂಕಷ್ಟಕ್ಕೆ ಸಿಲುಕುವಂತಾಯಿತು. ದುಬಾರಿ ಮೊತ್ತವನ್ನು ಪಾವತಿ ಮಾಡಿ, ಆಸ್ತಿದಾರರು ಬಿ ಖಾತಾದಿಂದ ಎ ಖಾತಾ ಪರಿರ್ವತನೆ ಮಾಡಿಸಿಕೊಳ್ಳುವ ಅವಶ್ಯಕತೆ ಏನಿದೆ ಎಂದು ಆಸ್ತಿದಾರರು ಪ್ರಶ್ನೆ ಮಾಡಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಲಕ್ಷಾಂತರ ಬಿ ಖಾತಾ ಆಸ್ತಿಗಳಿದ್ದು, ಇದೀಗ ಕೇವಲ 800 ಪ್ಲಸ್ ಆಸ್ತಿಗಳಿಗೆ ಮಾತ್ರ ಎ ಖಾತಾ ಸಿಕ್ಕಿವೆ. ಈ ಯೋಜನೆಯ ಪ್ರಗತಿಯ ವಿವರ ಇಲ್ಲಿದೆ.
ಕರ್ನಾಟಕ ಸರ್ಕಾರವು ಕಳೆದ ವರ್ಷ ಬಿ ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಟ್ಟಿತ್ತು. ರಾಜ್ಯದಲ್ಲಿ ಬಿ ಖಾತಾದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ತಿ ಮಾರಾಟ ಮಾಡುವುದಕ್ಕೆ ಸಾಧ್ಯವಾಗದೆ, ಮನೆ ನಿರ್ಮಾಣವೂ ಮಾಡಿಕೊಳ್ಳಲು ಸಹ ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದರು. ಅಲ್ಲದೆ, ಬಿ ಖಾತಾದ ಪ್ರಾಪರ್ಟಿಗಳಿಗೆ ಒಳ್ಳೆಯ ಬೆಲೆ ಸಹ ಸಿಗುತ್ತಿರಲಿಲ್ಲ. ಆದರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಕರ್ನಾಟಕ ಸರ್ಕಾರವೇ ಅವಕಾಶ ಮಾಡಿಕೊಟ್ಟರೂ ಸಹ ಆಸ್ತಿದಾರರು ಖಾತಾ ಪರಿವರ್ತನೆ ಮಾಡಿಕೊಂಡಿಲ್ಲ. ಇದಕ್ಕೆ ಮುಖ್ಯ ಕಾರಣವೇ ಗೈಡ್‌ಲೈನ್ಸ್ ವ್ಯಾಲ್ಯೂ ನಿಗದಿ ಮಾಡಿರುವುದು.

ಬೆಂಗಳೂರಿನಲ್ಲಿ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಆಸ್ತಿಗಳನ್ನು ಬಿ-ಖಾತಾ ಯಿಂದ ಎ-ಖಾತಾಗೆ ಪರಿವರ್ತನೆ ಅಭಿಯಾನಕ್ಕೆ ಸಾರ್ವಜನಿಕರು ಹೆಚ್ಚು ಆಸಕ್ತಿ ತೋರಿಸಿಲ್ಲ. ಅಲ್ಲದೆ ಕೇವಲ 818 ಆಸ್ತಿಗಳಿಗೆ ಎ ಖಾತಾಗಳಾಗಿ ಪರಿವರ್ತನೆ ಆಗಿವೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು 100 ದಿನಗಳ ವಿಶೇಷ ಅಭಿಯಾನವನ್ನು ಪ್ರಾರಂಭಿಸಿತ್ತು. 2025ರ ಅಕ್ಟೋಬರ್ 15ರಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಇದಕ್ಕೆ ಚಾಲನೆ ನೀಡಿದ್ದರು. ಒಟ್ಟಾರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಒಟ್ಟು 8,308 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಲ್ಲಿಯ ವರೆಗೆ (2026 ಮಾರ್ಚ್ ತಿಂಗಳ ಅಂತ್ಯದ ವರೆಗೆ) 818 ಆಸ್ತಿಗಳು ಎ ಖಾತಾಗೆ ಪರಿವರ್ತನೆ ಮಾಡಲಾಗಿದೆ.
ಬೆಂಗಳೂರಿನಲ್ಲಿವೆ 8,25,150 ಬಿ ಖಾತಾ ಆಸ್ತಿಗಳು
ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಸ್ತಿ ತೆರಿಗೆ ತಂತ್ರಾಂಶದ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 8,25,150 ಬಿ ಖಾತಾ ಆಸ್ತಿಗಳಿವೆ. ಆದರೆ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ 8,308 ಆಸ್ತಿದಾರರು ಮಾತ್ರ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಸರ್ಕಾರವು ಪರಿಚಯಿಸಿರುವ ಬಿ ಖಾತಾ ಅಭಿಯಾನ ಯೋಜನೆಯಲ್ಲಿ ಕೇವಲ ಸೈಟಿನ ಜಾಗಕ್ಕೆ ಮಾತ್ರ ಎ ಖಾತಾ ನೀಡಲಾಗುತ್ತದೆ. ಕಟ್ಟಡಕ್ಕೆ ಈ ಸೌಲಭ್ಯ ಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಕಟ್ಟಡಕ್ಕೂ ಪ್ರತ್ಯೇಕ ಖಾತಾ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಮಾರ್ಗಸೂಚಿ ದರದಲ್ಲಿ ಶೇ.5 ಶುಲ್ಕ ಪಾವತಿ ಮಾಡುವ ಷರತ್ತು ವಿಧಿಸಿರುವುದೇ ಆಸ್ತಿದಾರರಿಗೆ ಭಾರೀ ಹೊರೆಯಾಗಿದೆ. ಈ ವಿಚಾರವು ಈಚೆಗೆ ವಿಧಾನಸಭೆಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು.
ಬಿ ಖಾತಾಗೆ ಇ ಖಾತಾ ಜಿಗ್ಗಾಟ
ಬಿ ಖಾತಾ ಪರಿವರ್ತನೆಯಲ್ಲಿ ಎದುರಾಗಿರುವ ಮತ್ತೊಂದು ಸಮಸ್ಯೆಯೆಂದರೆ, ಬಿ ಖಾತಾ ಆಸ್ತಿ ಮಾಡಿಸಿಕೊಳ್ಳಬೇಕಾದರೆ ಆ ನಿರ್ದಿಷ್ಟ ಆಸ್ತಿಗೆ ಇ ಖಾತಾ ಕಡ್ಡಾಯ ಮಾಡಲಾಗಿದೆ. ಆದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಇ -ಖಾತಾ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ.












Click it and Unblock the Notifications