ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ
ಆರ್ಥಿಕ ವರ್ಷದ ಮೊದಲ ದಿನವೇ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೈಲ ಕಂಪನಿಗಳು ಬಿಗ್ ಶಾಕ್ ನೀಡಿವೆ. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಉದ್ವಿಗ್ನತೆಯ ಪರಿಣಾಮವಾಗಿ, ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ದಿಢೀರನೆ ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ. ಬುಧವಾರ ಪ್ರಕಟವಾಗಿರುವ ಹೊಸ ದರಗಳ ಪ್ರಕಾರ, 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಮತ್ತು 5 ಕೆಜಿ ತೂಕದ ಮಿನಿ ಸಿಲಿಂಡರ್ ಬೆಲೆಗಳು ಗಣನೀಯವಾಗಿ ಏರಿಕೆಯಾಗಿವೆ.
ಮಾಹಿತಿಯ ಪ್ರಕಾರ, ಸಣ್ಣ ವ್ಯಾಪಾರಸ್ಥರು ಬಳಸುವ 5 ಕೆಜಿ ಮಿನಿ ಸಿಲಿಂಡರ್ ಬೆಲೆಯಲ್ಲಿ 51 ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ, ಹೋಟೆಲ್ ಮತ್ತು ಕ್ಯಾಟರಿಂಗ್ ಉದ್ಯಮದಲ್ಲಿ ಅತಿ ಹೆಚ್ಚು ಬಳಕೆಯಾಗುವ 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆಯ ಮೇಲೆ ಬರೋಬ್ಬರಿ 195 ರೂ. ನಿಂದ 218 ರೂಪಾಯಿಗಳವರೆಗೆ ಭಾರಿ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರಗಳು ಬುಧವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿವೆ. ಅದಾಗ್ಯೂ, ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರುವುದು ಸಾಮಾನ್ಯ ಜನರಿಗೆ ಕೊಂಚ ನೆಮ್ಮದಿ ತಂದಿದೆ.

ಪ್ರಮುಖ ನಗರಗಳಲ್ಲಿ ಪರಿಷ್ಕೃತ ದರಗಳೆಷ್ಟು?
ಬೆಲೆ ಏರಿಕೆಯ ನಂತರ, ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 2,078.50 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ ವಾಣಿಜ್ಯ ನಗರಿ ಮುಂಬೈನಲ್ಲಿ ಈ ಸಿಲಿಂಡರ್ ಬೆಲೆ 2,031 ರೂಪಾಯಿಗಳಾಗಿ ದಾಖಲಾಗಿದೆ. ಈ ಎರಡೂ ಪ್ರಮುಖ ಮಹಾನಗರಗಳಲ್ಲಿ ದರವು ತಲಾ 195.5 ರೂಪಾಯಿಗಳಷ್ಟು ಸಮಾನವಾಗಿ ಏರಿಕೆ ಕಂಡಿದೆ.
ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಗರಿಷ್ಠ ದರ
ವಿಶೇಷವೆಂದರೆ, ಮುಂಬರುವ ದಿನಗಳಲ್ಲಿ ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ರಾಜ್ಯಗಳ ರಾಜಧಾನಿಗಳಾದ ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಗರಿಷ್ಠ ಮಟ್ಟದ ಏರಿಕೆ ಮಾಡಲಾಗಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 218 ರೂಪಾಯಿಗಳಷ್ಟು ಹೆಚ್ಚಿಸಲಾಗಿದ್ದು, ಹೊಸ ದರ 2,208 ರೂ. ಗೆ ತಲುಪಿದೆ. ಇನ್ನು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ 203 ರೂಪಾಯಿಗಳಷ್ಟು ಬೆಲೆ ಏರಿಕೆ ಮಾಡಲಾಗಿದ್ದು, ಇಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ದೇಶದಲ್ಲೇ ಅತ್ಯಧಿಕ ಅಂದರೆ 2,246 ರೂಪಾಯಿಗಳಿಗೆ ಮಾರಾಟವಾಗುತ್ತಿದೆ.
ಹೋಟೆಲ್ ಊಟ, ತಿಂಡಿ ದರ ಹೆಚ್ಚಳದ ಭೀತಿ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲದ ಬೆಲೆಗಳಲ್ಲಿನ ಏರಿಳಿತಗಳ ಆಧಾರದ ಮೇಲೆ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಗ್ಯಾಸ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಇದೀಗ ಪಶ್ಚಿಮ ಏಷ್ಯಾದ ಯುದ್ಧದ ಕಾರ್ಮೋಡಗಳು ಕಮಾಡಿಟಿ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತಿರುವುದರಿಂದ ಈ ದಿಢೀರ್ ಬೆಲೆ ಏರಿಕೆ ಮಾಡಲಾಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಒಂದೇ ಬಾರಿಗೆ 200 ರೂಪಾಯಿಗಳ ಆಸುಪಾಸಿನಲ್ಲಿ ಹೆಚ್ಚಳವಾಗಿರುವುದು ಹೋಟೆಲ್, ಬೇಕರಿ ಹಾಗೂ ಬೀದಿ ಬದಿ ಆಹಾರ ವ್ಯಾಪಾರಿಗಳ ಮೇಲೆ ಆರ್ಥಿಕ ಹೊರೆ ಹೆಚ್ಚಿಸಲಿದೆ. ಸಿಲಿಂಡರ್ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೂ ತಟ್ಟಲಿದ್ದು, ಮುಂಬರುವ ದಿನಗಳಲ್ಲಿ ಹೋಟೆಲ್‌ಗಳಲ್ಲಿ ಊಟ ಮತ್ತು ತಿಂಡಿ-ತಿನಿಸುಗಳ ದರ ಏರಿಕೆಗೂ ಕಾರಣವಾಗುವ ಸಾಧ್ಯತೆಗಳು ಹೆಚ್ಚಿವೆ.












Click it and Unblock the Notifications