ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಡುಗೆಮನೆಯಲ್ಲಿ ಗ್ಯಾಸ್ ಸ್ಟವ್ ಜೊತೆಗೆ ಇಂಡಕ್ಷನ್ ಸ್ಟವ್ ಬಳಕೆ ಅತ್ಯಂತ ಸಾಮಾನ್ಯವಾಗಿದೆ. ಇದು ಅಡುಗೆಯನ್ನು ತ್ವರಿತವಾಗಿ ಮಾಡಲು ಸಹಾಯ ಮಾಡುವುದಲ್ಲದೆ, ಸಮಯವನ್ನೂ ಉಳಿಸುತ್ತದೆ. ಆದರೆ, ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಈ ಉಪಕರಣವನ್ನು ಖರೀದಿಸುವಾಗ ಮತ್ತು ಬಳಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಇದೇ ಹಿನ್ನೆಲೆಯಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ - BESCOM) ಸಾರ್ವಜನಿಕರಿಗೆ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ.
ಹೊಸ ಇಂಡಕ್ಷನ್ ಸ್ಟವ್ ಖರೀದಿಸುವಾಗ ಗ್ರಾಹಕರು ಮುಖ್ಯವಾಗಿ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ಸ್ಟವ್‌ನ 'ವ್ಯಾಟೇಜ್' : ಹೆಚ್ಚಿನ ವ್ಯಾಟೇಜ್ (ಉದಾಹರಣೆಗೆ 2000W) ಹೊಂದಿರುವ ಸ್ಟವ್‌ಗಳು ಅಡುಗೆಯನ್ನು ವೇಗವಾಗಿ ಮಾಡುತ್ತವೆ, ಆದರೆ ಅವು ಹೆಚ್ಚು ವಿದ್ಯುತ್ ಅನ್ನು ಬಳಸುತ್ತವೆ. ನಿಮ್ಮ ದೈನಂದಿನ ಅಡುಗೆಯ ಅಗತ್ಯಕ್ಕೆ ತಕ್ಕಂತೆ ಸರಿಯಾದ ಸಾಮರ್ಥ್ಯದ ಸ್ಟವ್ ಆಯ್ಕೆ ಮಾಡಿಕೊಳ್ಳಿ.

2. 'ಪ್ರೀ-ಸೆಟ್ ಮೆನು' (Pre-set menu) ಆಯ್ಕೆಗಳು: ಇತ್ತೀಚಿನ ಸ್ಟವ್‌ಗಳಲ್ಲಿ ಹಾಲು ಕಾಯಿಸಲು, ನೀರು ಕಾಯಿಸಲು, ಅಥವಾ ಗ್ರೇವಿ ಮಾಡಲು ಪ್ರತ್ಯೇಕ ಬಟನ್‌ಗಳಿರುತ್ತವೆ. ಇದು ಬಳಕೆಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಪಾತ್ರೆಯ ಅಳತೆಗೆ ತಕ್ಕಂತೆ ಇರುವ ವಿಸ್ತಾರವಾದ ಮೇಲ್ಮೈ ಹೊಂದಿರುವ ಸ್ಟವ್‌ಗಳು ಹೆಚ್ಚು ಸೂಕ್ತ.
3. 'ಸುರಕ್ಷತಾ ವೈಶಿಷ್ಟ್ಯಗಳು' (Safety Features): ಆಟೋ-ಆಫ್ ಮತ್ತು ಚೈಲ್ಡ್ ಲಾಕ್ ಸೌಲಭ್ಯವಿರುವ ಸ್ಟವ್‌ಗಳನ್ನು ಖರೀದಿಸುವುದು ಜಾಣತನ. ಅಡುಗೆ ಮಾಡುವಾಗ ಸ್ಟವ್ ಅತಿಯಾಗಿ ಬಿಸಿಯಾದರೆ ಅಥವಾ ಅದರ ಮೇಲಿನ ಪಾತ್ರೆ ಖಾಲಿಯಾದರೆ, ತಾನಾಗಿಯೇ ಆಫ್ ಆಗುವ ತಂತ್ರಜ್ಞಾನ ವಿದ್ಯುತ್ ಅವಘಡಗಳನ್ನು ತಪ್ಪಿಸುತ್ತದೆ. ಹಾಗೆಯೇ, ಸ್ಟವ್‌ನ ತಂತಿ ಮತ್ತು ಪ್ಲಗ್ ಉತ್ತಮ ಗುಣಮಟ್ಟದ್ದಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಐಎಸ್‌ಐ ಮುದ್ರೆ ಇರುವ ಗುಣಮಟ್ಟದ ಬ್ರ್ಯಾಂಡ್‌ಗಳನ್ನು ಮಾತ್ರ ಆಯ್ಕೆ ಮಾಡಿ.
ಬೆಸ್ಕಾಂ ನೀಡುವ ಎಚ್ಚರಿಕೆ ಏನು?
ಬೆಸ್ಕಾಂ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ವಿದ್ಯುತ್ ಉಪಕರಣಗಳ ಸುರಕ್ಷತೆಯ ಬಗ್ಗೆ ಗ್ರಾಹಕರಿಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಇಂಡಕ್ಷನ್ ಸ್ಟವ್ ಬಳಸುವಾಗ ಪ್ಲಗ್ ಹಾಕುವ ಸಾಕೆಟ್ ಉತ್ತಮ ಸ್ಥಿತಿಯಲ್ಲಿರಬೇಕು ಮತ್ತು ಮನೆಯಲ್ಲಿ ಸರಿಯಾದ ಅರ್ಥಿಂಗ್ (Earthing) ವ್ಯವಸ್ಥೆ ಇರಬೇಕು. ಒದ್ದೆ ಕೈಯಲ್ಲಿ ಪ್ಲಗ್ ಹಾಕುವ ಅಥವಾ ತೆಗೆಯುವ ಪ್ರಯತ್ನ ಮಾಡಬಾರದು. ಅಲ್ಲದೆ, ಸ್ಟವ್‌ನ ಸಮೀಪದಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡಬಾರದು ಎಂದು ಎಚ್ಚರಿಸಿದೆ.
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಈ ಅಂಶಗಳು ನೆನಪಿನಲ್ಲಿರಲಿ
— Namma BESCOM | ನಮ್ಮ ಬೆಸ್ಕಾಂ (@NammaBESCOM) April 2, 2026
ವಿದ್ಯುತ್ ಸಂಬಂಧಿತ ಅವಘಡಗಳು ಸಂಭವಿಸಿದ್ದಲ್ಲಿ, ಕೂಡಲೇ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ#Bescom #InductionStove #ElectricitySafety #SafetyAwareness pic.twitter.com/k3z5oWyLVJ












Click it and Unblock the Notifications