ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ
ಲಕ್ಷಾಂತರ ರೂಪಾಯಿ ಸಂಬಳ, ಅತ್ಯುತ್ತಮ ಸೌಲಭ್ಯಗಳು, ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ... ಇವೆಲ್ಲವೂ ಇಂದಿನ ಯುವಜನತೆಯ ದೊಡ್ಡ ಕನಸು. ಆದರೆ, ಇವೆಲ್ಲವನ್ನೂ ಹೊಂದಿದ್ದರೂ ಮಾನಸಿಕ ನೆಮ್ಮದಿ ಹಾಗೂ ತಮ್ಮ ನಿಜವಾದ ಆಸಕ್ತಿಯನ್ನು ಅರಸಿ ಹೊರಟಿರುವ ಗೂಗಲ್ ಕಂಪನಿಯ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರ ಕಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಸ್ಥಿರವಾದ ಹಾಗೂ ಅತಿ ಹೆಚ್ಚು ವೇತನ ನೀಡುವ ಗೂಗಲ್ ಉದ್ಯೋಗವನ್ನು ತೊರೆದು, ದೈನಂದಿನ ಜಂಜಾಟದಿಂದ ದೂರವಾಗಿ ಜೀವನವನ್ನು ವಿಭಿನ್ನವಾಗಿ ಅನ್ವೇಷಿಸಲು ನಿರ್ಧರಿಸಿದ ಹರ್ಷಿತ್ ಶರ್ಮಾ ಅವರ ಈ ದಿಟ್ಟ ನಡೆ ಆನ್‌ಲೈನ್‌ನಲ್ಲಿ ಅನೇಕರ ಗಮನ ಸೆಳೆದಿದೆ. ಅವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಸುದೀರ್ಘ ಪೋಸ್ಟ್ ಇದೀಗ ವೈರಲ್ ಆಗಿದೆ.
ಹರ್ಷಿತ್ ಶರ್ಮಾ ಅವರ ಪೋಸ್ಟ್‌ನಲ್ಲಿ ಏನಿದೆ?
ಕಳೆದ ಎರಡು ವರ್ಷಗಳಿಂದ ಗೂಗಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರ್ಷಿತ್ ಶರ್ಮಾ, ತಮ್ಮ ಈ ನಿರ್ಧಾರವನ್ನು 'ಕಹಿ-ಸಿಹಿ' ಅನುಭವ ಎಂದು ಬಣ್ಣಿಸಿದ್ದಾರೆ. ಈ ಗೂಗಲ್ ಉದ್ಯೋಗಿ ರಾಜೀನಾಮೆ ಕುರಿತು ಬರೆಯುತ್ತಾ, "ನಾನು ಗೂಗಲ್ ತೊರೆದಿದ್ದೇನೆ. ಇದು ಕಹಿ-ಸಿಹಿ ಎರಡೂ ಹೌದು. ಕಹಿ ಏಕೆಂದರೆ, ನನ್ನ ಸಹೋದ್ಯೋಗಿಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಅಲ್ಲಿನ ಟೇಬಲ್ ಟೆನಿಸ್ ಆಟಗಳು, ಕಾರ್ಡ್ ಗೇಮ್ಸ್, ಫನ್ ಫ್ರೈಡೇಸ್ ಮತ್ತು ನಾನು ಭೇಟಿಯಾದ ಎಲ್ಲರನ್ನೂ ಖಂಡಿತ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಆದರೆ, ಹರ್ಷಿತ್ ಅವರಿಗೆ ಈ ಕಹಿಗಿಂತ 'ಸಿಹಿ'ಯ ಪಾಲು ಹೆಚ್ಚಾಗಿದೆ. "ಈಗ ನಾನು ಸಂಪೂರ್ಣ ಸ್ವತಂತ್ರ!" ಎಂದು ಹರ್ಷ ವ್ಯಕ್ತಪಡಿಸಿರುವ ಅವರು, ಇಷ್ಟು ವರ್ಷಗಳ ಕಾಲ ತಾವು ಹೇಗೆ ಒಂದು ಸಾಂಪ್ರದಾಯಿಕ ಹಾದಿಯಲ್ಲಿ ಸಾಗಿದ್ದೆವು ಎಂಬುದನ್ನು ವಿವರಿಸಿದ್ದಾರೆ. "ನನ್ನ ಇಡೀ ಜೀವನವನ್ನು ನಾನು ಒಂದು ಸ್ಕ್ರಿಪ್ಟ್‌ನಂತೆಯೇ ಪಾಲಿಸಿಕೊಂಡು ಬಂದಿದ್ದೇನೆ. ಲೆಕ್ಕಾಚಾರ ಮಾಡುವುದು, ಎಂಜಿನಿಯರಿಂಗ್ ಓದುವುದು, ಟೆಕ್ ಕಂಪನಿಯಲ್ಲಿ ಕೆಲಸ ಗಿಟ್ಟಿಸುವುದು, ಹಣ ಸಂಪಾದಿಸುವುದು ಮತ್ತು ಸಮಾಜದಲ್ಲಿ ಮಾನ್ಯತೆ ಪಡೆಯುವುದು- ಇಷ್ಟೇ ನನ್ನ ಬದುಕಾಗಿತ್ತು" ಎಂದು ಅವರು ಬೇಸರದಿಂದಲೇ ಹೇಳಿಕೊಂಡಿದ್ದಾರೆ. ತಮ್ಮನ್ನು ತಾವು 'ಒಂದು ಗೆರೆಯನ್ನು ಅನುಸರಿಸುವ ರೋಬೋಟ್' ಎಂದು ಕರೆದುಕೊಂಡಿರುವ ಅವರು, "ಪ್ರತಿ ಒಳ್ಳೆಯ ಕಥೆಗೂ ಒಂದು ತಿರುವುಬೇಕು. ಹಾಗಾಗಿ, ಈ ರೋಬೋಟ್ ಈಗ ತನ್ನ ದಾರಿ ಬದಲಿಸುತ್ತಿದೆ" ಎಂದಿದ್ದಾರೆ.
ಏಕೆ ಈ ನಿರ್ಧಾರ?
ಆದರೆ, ಗೂಗಲ್ ಉದ್ಯೋಗಿ ರಾಜೀನಾಮೆ ನಿರ್ಧಾರವು ಯಾವುದೇ ಕ್ಷಣಿಕ ಆವೇಶದಿಂದ ತೆಗೆದುಕೊಂಡದ್ದಲ್ಲ. ಮುಂದಿನ ಜೀವನ ನಿರ್ವಹಣೆಗಾಗಿ ಕಳೆದ ನಾಲ್ಕು ವರ್ಷಗಳಿಂದ ಸಾಕಷ್ಟು ಹಣವನ್ನು ಉಳಿತಾಯ ಮಾಡಿರುವುದಾಗಿ ಹರ್ಷಿತ್ ತಿಳಿಸಿದ್ದಾರೆ. ತಮ್ಮ ಪೋಷಕರೊಂದಿಗೆ ಸುದೀರ್ಘ ಚರ್ಚೆ ನಡೆಸಿ, "ಒಂದು ವರ್ಷದ ಪ್ರಯೋಗ" ಎಂಬ ಒಪ್ಪಂದಕ್ಕೆ ಬಂದಿದ್ದಾರೆ. ಒಂದು ವೇಳೆ ಈ ಒಂದು ವರ್ಷದಲ್ಲಿ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಯಶಸ್ಸು ಕಾಣದಿದ್ದರೆ, ಅಥವಾ ಅದನ್ನು ವೃತ್ತಿಯನ್ನಾಗಿ ಪರಿವರ್ತಿಸಲು ಸಾಧ್ಯವಾಗದಿದ್ದರೆ, ಮತ್ತೆ ಟೆಕ್ ವಲಯಕ್ಕೆ ಮರಳುವ ಬ್ಯಾಕ್-ಅಪ್ ಯೋಜನೆಯನ್ನೂ ಅವರು ಹೊಂದಿದ್ದಾರೆ.

ಸದ್ಯಕ್ಕೆ ಅವರು ಮುಕ್ತವಾಗಿ ಬದುಕಲು ಬಯಸಿದ್ದಾರೆ. "ಯಾವುದೇ ನಿಗದಿತ ವೇಳಾಪಟ್ಟಿಯಿಲ್ಲದೆ ನಿದ್ರೆ ಮಾಡುವುದು, ಪ್ರವಾಸ ಮಾಡುವುದು, ವಿವಿಧ ಕಲಾ ಪ್ರಕಾರಗಳನ್ನು ಕಲಿಯುವುದು, ಹೊಸ ಜನರನ್ನು ಭೇಟಿಯಾಗುವುದು ಮತ್ತು ಹೊಸ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುವುದು ನನ್ನ ಮುಂದಿನ ಗುರಿ" ಎಂದು ಅವರು ಬರೆದಿದ್ದಾರೆ. "ಒಂದು ವೇಳೆ ನಾನು ವಿಫಲನಾದರೆ? ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ಅದ್ಭುತ ನೆನಪುಗಳೊಂದಿಗೆ ಮತ್ತೆ ಟೆಕ್ ಜಗತ್ತಿಗೆ ಮರಳುತ್ತೇನೆ. ಆದರೆ, ನನಗೆ ಇಷ್ಟವಾದ ಕೆಲಸದಲ್ಲಿಯೇ ಹಣವೂ ಸಿಕ್ಕರೆ, ಅದು ನಿಜಕ್ಕೂ ಕನಸು ನನಸಾದಂತೆ ಅಲ್ಲವೇ?" ಎಂದು ಅವರು ಪ್ರಶ್ನಿಸಿದ್ದಾರೆ.
"ಇಲ್ಲಿಗೆ ಮುಖವಾಡ ಕಳಚಿಬೀಳುತ್ತದೆ. ನಾಟಕ ಮುಗಿಯುತ್ತದೆ. ನಿಜವಾದ 'ನನ್ನ' ಹುಡುಕಾಟ ಶುರುವಾಗುತ್ತದೆ" ಎಂಬ ಅವರ ಕೊನೆಯ ಸಾಲು ನೆಟ್ಟಿಗರ ಹೃದಯ ಮುಟ್ಟಿದೆ. ಹರ್ಷಿತ್ ಅವರ ಲಿಂಕ್ಡ್‌ಇನ್ ಪೋಸ್ಟ್‌ಗೆ ಸಾವಿರಾರು ಕಮೆಂಟ್‌ಗಳು ಹರಿದುಬರುತ್ತಿದ್ದು, ಅನೇಕರು ಅವರ ಧೈರ್ಯವನ್ನು ಮೆಚ್ಚಿದ್ದಾರೆ. ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯ ಕಚೇರಿ ಕೆಲಸದ ಬದಲು, ನಮ್ಮ ಪ್ಯಾಷನ್ (passion) ಅನ್ನು ಹುಡುಕಿಕೊಂಡು ಹೋಗುವುದು ಜೀವನದ ಅತ್ಯುತ್ತಮ ನಿರ್ಧಾರ ಎಂದು ಹಲವರು ಬೆಂಬಲ ಸೂಚಿಸಿದ್ದಾರೆ.












Click it and Unblock the Notifications