ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಕ್ರಿಯೆ : ನಕ್ಸಲ್ ಚಳವಳಿ ಮತ್ತು ಹಾವಳಿಜಗದ್ಗುರುಗಳು

By Super
|
Google Oneindia Kannada News

Malenadu : Wanted Morale Boosters
ಮಲೆನಾಡು ಇವತ್ತು ಕಂಗೆಟ್ಟಿದೆ ನಿಜ. ಪರಿಹಾರ ಎಲ್ಲಿದೆ? ಪರಿಸ್ಥಿತಿಯನ್ನು ತಿಳಿಗೊಳಿಸುವ ಅನೇಕ ಮಾರ್ಗೋಪಾಯಗಳಲ್ಲಿ ಆ ಪ್ರದೇಶದ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಲು ನಾಡಿನ ಹಿರಿಯಣ್ಣರು ಮನಸ್ಸು ಮಾಡಬೇಕಿರುವುದು ಮುಖ್ಯ.

"ಮಾವಿನಕಾಡು ಮಾವನ ಮನೆಗೆ ಹೋಗೋಕೆ ಕಷ್ಟವಾ? ಅಲ್ಲಿಗೆ ನಕ್ಸಲರು ಬರುತ್ತಾರಂತೆ." ಹೀಗೆ ಬೆಂಗಳೂರಿನ ನೆಂಟರೊಬ್ಬರು ಫೋನಾಯಿಸಿದಾಗ ಸತ್ಯ ಹೇಳಲು ಹಿಂಜರಿಯಬೇಕಾಯಿತು.

ಇತ್ತೀಚಿನ ನಕ್ಸಲ್ ಹತ್ಯಾಕಾಂಡ ಘಟನಾವಳಿಗಳಿಂದ ರಜೆ ಕಳೆಯಲು ಮಲ್ನಾಡಿಗೆ ಓಡೋಡಿ ಬರುತ್ತಿದ್ದ ಬಂಧುಗಳು, ಸ್ನೇಹಿತರು ಈಗ ಪರಿಸ್ಥಿತಿ ಬಗ್ಗೆ ಚರ್ಚಿಸಿ, ಯಾವುದೋ ಅವ್ಯಕ್ತ ಭಯವನ್ನು ತುಂಬಿಕೊಂಡು ಬರುವಂತಾಗಿದೆ.

ಎಲ್ಲಕ್ಕೂ ನಕ್ಸಲರೇ ಕಾರಣವೇ?. . .

ಕೆಲವರಂತೂ ನಿಮ್ಮ ಕಡೆ ಬಂದಿದ್ರಂತೆ? ಏನು ಕೇಳಿದ್ರು? ಹೇಗಿರುತ್ತಾರೆ ಮಾರಾಯಾ..ಆ ಕಾಡಲ್ಲಿ ವೀರಪ್ಪನ್ ಗ್ಯಾಂಗ್ ತರನಾ? ವೆಪನ್ ಏನೇನಿತ್ತು? ಪಕ್ಕಾ ಪೊಲೀಸ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ. ಪ್ರಶ್ನೆಗಳು ನಾನಾ ಬಗೆಯವು. ಈ ಪ್ರಶ್ನೆಗಳಿಗೆಲ್ಲ ಸರಿಯುತ್ತರ ಹೇಳಲು ನಾನೇನು ಸತ್ಯಶೋಧನಾ ಸಮಿತಿಯ ಸದಸ್ಯನಾ? ಅಂಥದೊಂದು ಸಮಿತಿ ಮಲೆನಾಡಿಗೆ ಬರಲಿದೆ ಎಂದು ಪತ್ರಿಕೆಯಲ್ಲಿ ಸುದ್ದಿಯಾಗಿದೆ.

ಹೌದು ಈ ನಕ್ಸಲರು ಯಾರು?.

ನನಗೆ ಅರಿವಿದ್ದಂತೆ ನಮ್ಮ ಒಕ್ಕಲ ಮಕ್ಕಳಲ್ಲಿ ಕೆಲವರು ಬಿಸಿರಕ್ತದ ಯುವಕ/ಯುವತಿರು ನಕ್ಸಲ್ ಸಿದ್ಧಾಂತಕ್ಕೆ ಮಾರು ಹೋಗಿ ಸಂಘ ಕಟ್ಟಿದ್ದಾರೆ. ಇವರಲ್ಲಿ ನಮ್ಮೊಡನೆ ಆಡಿ, ಕಾಲ ಕಳೆದ ವಿದ್ಯಾವಂತ, ಬುದ್ಧಿವಂತ ಮಿತ್ರರಿದ್ದಾರೆ. ಅವರು ತುಳಿಯುತ್ತಿರುವ ಹಾದಿ ತಪ್ಪು ಎನ್ನುವುದು ಬಿಟ್ಟರೆ, ಉಳಿದಂತೆ ಇವರ ಬಗ್ಗೆ ಹತ್ತರಲ್ಲಿ ಹನ್ನೊಂದನೆ ಸಂಘಟನೆ ಎಂದು ತಿಳಿದವರೇ ಹೆಚ್ಚು. ಒಟ್ಟಿನಲ್ಲಿ ದಾರಿ ತಪ್ಪಿದ ಮಕ್ಕಳು" ಎನ್ನಬಹುದು.

ಹೊರಗಿನ ಜನಕ್ಕೆ ಇಲ್ಲಿನ ನಕ್ಸಲರ ಬಗ್ಗೆ ಅರಿವಿದ್ದಂತೆ ತೋರುವುದಿಲ್ಲ. ಇದಕ್ಕೆ ಅತ್ಯಡ್ಕದ ಎನ್ ಕೌಂಟರ್ ಸಾಕ್ಷಿ. ನಕ್ಸಲರ ಜತೆ ಇವತ್ತು ಕಾಣಿಸಿಕೊಂಡರೆ, ನಾಳೆ ನಿಮ್ಮ ಹೆಣ ಬೀಳುತ್ತೆ ಎಂಬ ಭಯ ಶುರುವಾಗಿದೆ. ಮೊದಲೆಲ್ಲಾ ಊರಿನ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ನಮ್ಮೊಡನೆ ಬೆರೆಯುತ್ತಿದ್ದ ಇವರು (ನಕ್ಸಲರು?)ನಮ್ಮ ಜತೆಕಂಡರೆ ನಾಳೆ ಪೊಲೀಸರ ಪಿರಿಪಿರಿ ಶುರುವಾದಂತೆ.

ಇಲ್ಲಿ ತೊಂದರೆ ಶುರುವಾದದ್ದು ಗುಂಡಿನ ಸದ್ದು ಕೇಳಲು ಪ್ರಾರಂಭವಾದ ಮೇಲೆ. ಮೊದಲು ಪೊಲೀಸರು ಶುರುಮಾಡಿದರೊ, ನಕ್ಸಲರು ಶುರು ಮಾಡಿದರೋ ಒಟ್ಟಿನಲ್ಲಿ ನಕ್ಸಲರೆಂದರೆ ಭಯೋತ್ಪಾದಕರು, ಪೊಲೀಸರೆಂದರೆ ಪ್ರಾಣಹಿಂಡುವವರು ಎಂಬ ಭೀತಿ ಎಲ್ಲರಲ್ಲೂ ಆವರಿಸಲು ಶುರುವಾಯಿತು.

ಮಲ್ನಾಡಿನ ಊರಿನಲ್ಲಿ ಹೆಚ್ಚೆಂದರೆ ನಾಲ್ಕಾರು ಸಂಸಾರ ಅವರ ಒಕ್ಕಲುಗಳು ಅಷ್ಟೆ. ಕಷ್ಟ ಸುಖವೆಂದರೆ ಒಬ್ಬರಿಗೆ ಒಬ್ಬರು ಆಗಬೇಕಾಗುತ್ತದೆ.ಆದರೆ ಪೊಲೀಸರ ವಿಚಾರಣೆಯ ಭಯದಿಂದ ಸರಿಹೊತ್ತಿನಲ್ಲಿ ಹೊರಗೆ ಹೋಗುವುದನ್ನು ನಿಲ್ಲಿಸಬೇಕಾಗಿದೆ.

ಹಸಿದ ಹೊಟ್ಟೆಗೆ ಅನ್ನ ನೀಡಬಹುದು. ಆದರೆ ದೋಚಲು ಹವಣಿಸುವ ಮನಸ್ಸನ್ನು ತೃಪ್ತಿಪಡಿಸುವುದು ಸಾಧ್ಯವಿಲ್ಲ.ಯಾವಾಗ ಒಂದೆರಡು ಗುಂಡಿನ ಸದ್ದು ಕೇಳಿತೋ ಸ್ಥಳೀಯ ಪುಢಾರಿಗಳು ಎಚ್ಚೆತ್ತುಕೊಂಡು ಉರಿವ ಬೆಂಕಿಗೆ ತುಪ್ಪ ಸುರಿಯಲು ಶುರುಮಾಡಿದರು.ಸರ್ಕಾರ ಗಿರಿಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುವುದು ಒಂದೆಡೆ,ಅದಕ್ಕೆ ಪ್ರತಿರೋಧವಾಗಿ ಇನ್ನೊಂದು ಪಡೆ.

ಗಿರಿಜನರ ಸುಧಾರಣೆಯಾಗಬೇಕು ನಿಜ, ಆದರೆ ಅವರನ್ನು ಅವರ ಪರಿಸರದಿಂದ ವಂಚಿತರಾಗಿಸುವುದು ಸಲ್ಲ. ಅಷ್ಟಕ್ಕೂ ಸರ್ಕಾರ ಉಳಿಸಲುಹೊರಟಿರುವುದು ಕುದುರೆಮುಖ ಎಂಬ ಏಕಾತಾನತೆಯಿಂದ ಕೂಡಿದ ಅರಣ್ಯ?!. ಒಂದೇ ಬಗೆಯ ಮರ ಗಿಡಗಳಿಂದ ತುಂಬಿದ ವೈವಿಧ್ಯತೆ ಹೇಳಹೆಸರಿಲ್ಲದ್ದಂತೆ ಮಾಯವಾಗಿರುವ ಅಭಯಾರಣ್ಯ(ಅಭಯ ಯಾರಿಗೆ, ಅರಣ್ಯ ಯಾರಿಗೇ ಗೊತ್ತಿಲ್ಲ)ವನ್ನು. ಒಳ್ಳೆ ಫಾರ್ಮ್ ಹೌಸ್ ಮಾಡಲು ಹೊರಟಂತಿದೆ. ಅಭಯಾರಣ್ಯವನ್ನು ಉಳಿಸಿ ಬೆಳೆಸುವ ಹಿಂದಿನ ಉದ್ದೇಶ ಜೀವಿಗಳ ಸಂರಕ್ಷಣೆಯಾಗಿರದೆ, ವಾಣಿಜ್ಯೋದ್ಯಮಿಗಳ ತಂಗುದಾಣವಾಗಲಿದೆ ಎಂಬುದು ಒಂದು ಗುಮಾನಿ. ನೆನ್ನೆ ಮೊನ್ನೆವರೆಗೂ ಶೃಂಗೇರಿಗೆ ಸುಮಾರು 35 ಕಿ.ಮೀ ದೂರವಿರುವ ಕುದುರೆಮುಖ ಸಮೀಪದ ಸೂತನಬ್ಬಿ ಜಲಪಾತ(ಹನುಮಾನ್ ಗುಂಡಿ) ನಾವು ಬೇಕೆಂದಾಗ ಆರಾಮವಾಗಿ ವಿಹರಿಸುತ್ತಿದ್ದ ತಾಣ. ಆದರೆ ಸರ್ಕಾರಕ್ಕೆ ದಿಢೀರನೆ ಇದು ಕಣ್ಣಿಗೆ ಬಿದ್ದು, ಟಿಕೆಟ್ ಇಟ್ಟರು, ಕೆಳಗಿಳಿಯಲು ಮೆಟ್ಟಿಲು ನಿರ್ಮಿಸಿದರು (ಜಾರೋಕ್ಕೆ ಅನ್ಸುತ್ತೆ) , ಸೌಲಭ್ಯದ ಹೆಸರಲ್ಲಿ ದುಡಿಮೆ ಶುರುವಾಯಿತು. ಆನಂತರ ನಕ್ಸಲರು ಸುಳಿಯುವ ಪ್ರದೇಶವೆಂದು, ಈ ತಾಣ ಒಂದು ರೀತಿ ನಿಷೇಧಿತ ಪ್ರದೇಶವಾಗಿಬಿಡ್ತು. ಇದು ಒಂದು ಉದಾಹರಣೆ ಅಷ್ಟೆ.

ಸರ್ಕಾರ, ಬುದ್ಧಿಜೀವಿಗಳು ಹಾಗೂ ನಕ್ಸಲರು ಏನಾದರೂ ಮಾಡಿಕೊಳ್ಳಲಿ, ನಾವು ಮೊದಲಂತೆ ನಮ್ಮ ಮನೆ ಮಟ್ಟಿಗೆ ಅಡ್ಡಾಡುವಂತಾದರೆ ಸಾಕು ಎನಿಸಿದೆ ನಮಗೆಲ್ಲಾ. ಬುದ್ಧಿಜೀವಿಗಳ ವಿವೇಕರಹಿತ ಹೇಳಿಕೆಗಳು, ರಾಜಕಾರಣಿಗಳ ಬಣ್ಣದ ಭರವಸೆ, ಪೊಲೀಸರ ಕುರುಡು ಕಾರ್ಯಾಚರಣೆ, ನಕ್ಸಲರ ಗುರಿಯಿರದ ದಾಹದಿಂದ ಮಲೆನಾಡು ಮುಕ್ತವಾಗಬೇಕಿದೆ.

ಬಿಳಿರಂಗನಬೆಟ್ಟದ ಬಳಿ ಗಿರಿಜನರನ್ನು ಸುಧಾರಣೆ ಮಾಡಿದ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸುದರ್ಶನ್ ಅವರು ಅನುಭವಿಗಳು. ಅರಣ್ಯ,ಗಿರಿಜನ ಸಮಸ್ಯೆ, ಬಡತನ, ಸಾಮಾಜಿಕ ಅಸಮತೋಲನ ಈ ಬಗ್ಗೆ ಅಧ್ಯಯನ ಮಾಡಿದವರು ಮತ್ತು ಕಾಡಿನಲ್ಲಿ ಬಡವರ ಜೀವನ ಸಹನೀಯವಾಗುವ ನಿಟ್ಟಿನಲ್ಲಿ ಅವಿರತವಾಗಿ ಚಿಂತಿಸಿದವರು. ಇಂತವರು ನಮಗೀಗ ಬೇಕಾಗಿದ್ದಾರೆ. ಸುದರ್ಶನ್ ಮಲೆನಾಡಿಗೆ ಭೇಟಿ ಕೊಡಲಿ. ಅಲ್ಲಿ ಮೊಕ್ಕಂ ಮಾಡಲಿ. ತಮ್ಮ ಕಾರ್ಯಕ್ಷೇತ್ರವನ್ನು ಬಿಳಿಗಿರಿ ಬೆಟ್ಟದಿಂದ ಮಲೆನಾಡಿಗೂ ವಿಸ್ತರಿಸಲಿ. ಅರಣಾಚಲದಲ್ಲಿರುವ ಗಿರಿಜನ ಸಮಸ್ಯೆಗಳನ್ನು ಅಧ್ಯಯನ ಮಾಡಲು ಸುದರ್ಶನ್ ಅವರು ಈಶಾನ್ಯ ಭಾರತದಕ್ಕೆ ಹೋಗುತ್ತಿದ್ದಾರೆಂಬ ವರದಿಗಳಿವೆ. ಈ ಮಧ್ಯೆ ಅವರ ಮಾರ್ಗದರ್ಶನ ಕರ್ನಾಟಕಕ್ಕೆ ಬೇಕಾಗಿದೆ.

ಸುದರ್ಶನ್ ಅವರಂತಹ ಸಮಾಜ ಸೇವಕರಲ್ಲದೇ, ಶಾಂತಿಧೂತರ ಅವಶ್ಯಕತೆಯೂ ಇದೆ. ಇಡೀ ಜಗತ್ತಿಗೆ ಧ್ಯಾನ ಹೇಳಿಕೊಡುತ್ತಿರುವ ರವಿಶಂಕರ್ ಗುರೂಜಿ, ಮಲೆನಾಡಿಗೆ ಯಾಕೆ ಬರಬಾರದು? ಕರ್ನಾಟಕದಲ್ಲಿ ಮೂರುವರೆ ಸಾವಿರಕ್ಕೂ ಅಧಿಕ ಮಠಗಳಿವೆ. ಒಂದು ಮಠದ ಜಗದ್ಗುರುವಾದರೂ ಮಲೆನಾಡಿಗೆ ಬಂದು ಆಶೀರ್ವಾದ ಕೊಡುವಂತಾಗಲಿ.

ನಮ್ಮ ರಾಜ್ಯದಲ್ಲಿ ಇಂಥ ಆತಂಕ ಸ್ಥಿತಿ ಬಂದಾಗ ಜವಾಬ್ದಾರಿಯಿರುವ ಹಿರಿಯ ನಾಗರಿಕರು, ಸಮಾಜ ಸುಧಾರಕರು, ಜಗದ್ಗುರುಗಳು ಕ್ಷೋಭೆಯಿಂದ ತತ್ತರಿಸಿರುವ ಸ್ಥಳಕ್ಕೆ ಹೋಗಬೇಕು. ಒಂದು ಪ್ರದೇಶದ ಮನೋಸ್ಥೈರ್ಯವನ್ನು ಕಾಪಾಡಬೇಕು. ಕೇವಲ ಪೊಲೀಸರಿಂದ ಕೆಲಸ ಆಗುವುದಿಲ್ಲ. ರಾಜಕಾರಣದಲ್ಲಿರುವವರು ಏನು ಹೇಳಿದರೂ ಅನುಮಾನದಿಂದಲೇ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಸರ್ಕಾರ ನಕ್ಸಲರ ಹಿಂದೆ ಬಿದ್ದು ಗುಂಡಿಕ್ಕದೆ, ಜತೆಯಲ್ಲಿ ಕೂತು ಸಮಸ್ಯೆಯ ಪರಿಹಾರವನ್ನು ಕಾಣಲಿ. ಅದಕ್ಕೂ ಮುಂಚೆ ಯಾರು ನಕ್ಸಲರು, ಅವರಿಗೆ ನಿಜಕ್ಕೂ ಬೆಂಬಲ ನೀಡುವವರು ಯಾರು? ಯಾರು ಕಳ್ಳರು, ಯಾರು ಲೂಟಿಕೋರರು ಎನ್ನುವುದು ನಿರ್ಧಾರವಾಗಬೇಕು. ಏಕಾಏಕಿ ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಸತ್ಯ ನಕ್ಸಲರಿಗೆ ಮನವರಿಕೆಯಾಗಲಿ. ಇದೇ ನಮ್ಮ ಆಸೆ.

ನಮ್ಮ ಅರಿವೇ ನಮ್ಮ ಗುರು ಎಂಬ ಮಾತಂತೆ, ದಾರಿ ತಪ್ಪಿದ ಮಕ್ಕಳನ್ನು ಸೂಕ್ತ ಮಾರ್ಗದರ್ಶನ ನೀಡಿ ಸರಿದಾರಿಗೆ ತಂದರೆ ಒಳಿತು. ಇಲ್ಲದಿದ್ದರೆ, ಒಬ್ಬರನ್ನು ಒಬ್ಬರು ಕೊಲ್ಲುವ ಕಾಯಕ ಕೊನೆಗೆ ಯಾರನ್ನೂ ಉಳಿಸದು.ಅತ್ತ ದರಿ ಇತ್ತ ಪುಲಿ ಎಂಬಂತೆ ಬೇಡದ ಅತಿಥಿಗಳನ್ನು ಸಲಹುವ ಕರ್ಮಕೊನೆಗೊಳ್ಳಲಿ. ಅತಿಥಿಗಳನ್ನು ಪುರಸ್ಕರಿಸುವುದರಲ್ಲಿ ಹೆಸರಾದ ಮಲೆನಾಡಿನ ಜನಕ್ಕೆ ಈ ಅತಿಥಿಗಳು ಯಾಕೋ ಭಾರಿಯಾಗಿದ್ದಾರೆ.

ದಟ್ಸ್ ಕನ್ನಡದಲ್ಲಿ ನಕ್ಸಲ್ ಹಾಗೂ ಸರ್ಕಾರದ ಧೋರಣೆ ಬಗ್ಗೆ ಚರ್ಚೆ ಶುರುವಾಗಿರೋದು ಸ್ವಾಗತಾರ್ಹ. ಬೇಡದ ಅತಿಥಿಗಳಿಂದ ಮಲೆನಾಡನ್ನು ನಮಗೆ ಉಳಿಸಿಕೊಡಿ.

English summary
Senior citizens including Heads of Maths, business houses, Ngos, and social reformers in Karnataka must visit trouble torn naxal hit malnad region. A sincere effort to boost the morale of the region is need of the hour, Argues Krishna Bhat in Meginabylu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X