ಕಾಲವನ್ನು ತಡೆಯೋರು ಯಾರು ಇಲ್ಲ.......
'ಕಾಲವನ್ನು ತಡೆಯೋರು ಯಾರೂ ಇಲ್ಲ.... ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ.... ನನ್ನಿಂದ ನಿನ್ನ ನಿನ್ನಂದ ನನ್ನ ದೂರ ಮಾಡಲು ಎಂದು ಆಗಲ್ಲ...' ಎಂದು ಹಾಡುತ್ತಾ ದೂರವಾದ ಆಪ್ತಮಿತ್ರ. 'ಮಾತೊಂದು ಹೇಳುವೆ ಹತ್ತಿರ ಹತ್ತಿರ ಬಾ.. ಮುತ್ತೊಂದು ತಂದಿರುವೆ ಮೆತ್ತಗೆ ಮೆತ್ತಗೆ ಬಾ...' ಎಂದು ಕರೆಯುತ್ತಾ ಬಾರದೂರಿಗೆ ಹೋದ ರಾಜಕುಳ್ಳ.
ಹೌದು..... ಕನ್ನಡದ ಆಸ್ತಿ ಚಂದನವನದ ಕುಳ್ಳ ಎಂದೇ ಖ್ಯಾತರಾದ ಹಿರಿಯ ನಟ ದ್ವಾರಕೀಶ್ ಅವರು ಇಂದು ನಮ್ಮನ್ನ ಅಗಲಿದ್ದಾರೆ. ಇಂದು ಬೆಳಗಿನ ಜಾವ ಹೃದಯಾಘಾತದಿಂದ ಅವರು ಕೊನೆಯುಸಿರೆಳಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಕಳೆದ ದಿನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಇಂದು ಅವರು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಹಿರಿಯ ನಟ, ನಿರ್ಮಾಪಕ, ನಿರ್ದೇಶಕರಾಗಿರುವ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 'ಜೇಡರ ಬಲೆ'ಯಲ್ಲಿ ಇದ್ದರೂ 'ನ್ಯಾಯವೇ ದೇವರು' ಎಂದಿದ್ದ ಆಪ್ತಮಿತ್ರನನ್ನು ಕ್ರೂರವಿಧಿ ಕಿಡ್ನ್ಯಾಪ್ ಮಾಡಿದೆ. ಹಾಸ್ಯನಟನಾಗಿ ಹಲವಾರು ಸಿನಿಮಾ ಮಾಡಿದ್ದ ದ್ವಾರಕೀಶ್ ಅವರು ಕಷ್ಟದಲ್ಲಿ ಸಿಲುಕಿದಾಗ ರಜನಿಕಾಂತ ಸಹಾಯ ಮಾಡಿದ್ದರು. ಕನ್ನಡ ಚಿತ್ರ ರಂಗದಲ್ಲಿ ಪಾದರಸದಂತೆ ಇದ್ದ ಅವರು ತಮ್ಮ ಸಾಧನೆ ಬಗ್ಗೆ ಹೆಮ್ಮೆ ಪಡುತ್ತಿದ್ದರು.
ಅಲ್ಲದೆ ರಾಜಕುಮಾರ್ ಹಾಗೂ ವಿಷ್ಣುವರ್ಧನ ಸಿನಿಮಾಗಳನ್ನು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದ ಜನ ಮೆಚ್ಚಿನ ನಟ ಪ್ರಚಂಡ ಕುಳ್ಳ ದ್ವಾರಕೀಶ್ ಅವರು. ಮಂಕುತಿಮ್ಮನ ನಟನೆಯಿಂದ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿದ್ದ ಮೇಯರ್ ಮುತ್ತಣ. ಆದರೀಗ 'ನೀ ಬರೆದ ಕಾದಂಬರಿ'ಯಲ್ಲಿ 'ಬ್ರಹ್ಮಗಂಟು' ಕಳಚಿ ಮರೆಯಾಗಿದೆ. 'ಆಟಗಾರ'ನ ಜೀವನಕ್ಕೆ ವಿಧಿ ಬ್ರೇಕ್ ಹಾಕಿದೆ.

'ಗಲಾಟೆ ಸಂಸಾರ'ದಲ್ಲೂ 'ಭಲೇ ಹುಡುಗ' ಎಸಿನಿಕೊಂಡಿದ್ದ 'ಪೊಲೀಸ್ ಪಾಪಣ್ಣ' ಕಣ್ಮರೆಯಾಗಿದ್ದಾರೆ. 'ಸರ್ವರ್ ಸೋಮಣ್ಣ'ನನ್ನ ವಿಧಿ ಬಾರದೂರಿಗೆ ಕರೆದೋಯ್ದಿದೆ.
ಯಾರು ಏನಂದರು?
ನಟ ಜಗ್ಗೇಶ್, 'ಅವರಿಂದಲೇ ನಾನು ನಿಜವಾದ ಜಗ್ಗೇಶ್ ಆಗಿದ್ದು. ಒಳ್ಳೆಯ ಮನುಷ್ಯ ಅವರು. ನನ್ನ ಮಾತ್ರವಲ್ಲ ಹಲವಾರು ಜನರನ್ನು ಸಿನಿಮಾ ರಂಗದಲ್ಲಿ ಬೆಳೆಸಿದ್ದಾರೆ. ಕನ್ನಡ ಚಿತ್ರ ರಂಗದ ಮರೆಯದ ಮಾಣಿಕ್ಯ ಈಗ ಬರಿ ನೆನಪು ಮಾತ್ರ. ಅವರ ಅಗಲಿಗೆ ನನಗೆ ತುಂಬಾ ನೋವು ತಂದಿದೆ. ಕಲಾ ಜೀವನದಲ್ಲಿ ಗಟ್ಟಿಯಾಗಿ ಉಳಿದಿದ್ದೇವೆ ಅಂದರೆ ಅದು ಅವರಿಂದಲೇ ಮಾತ್ರ. ಸಿಕ್ಕಾಗ ಅವರು ನನಗೆ ಒಂದು ಮಾತು ಅಂದರೆ, 'ನಾನು ಸಿಂಹಾಸನ ಹತ್ತದೇ ಉಳಿದು ಬಿಟ್ಟೆ' ಅಂದಿದ್ದರು. ಅದು ನನಗೆ ತುಂಬಾ ಬೇಸರವಾಯಿತು. ಅವರ ಮನೆಗೆ ಹೋದಾಗ ಅಡುಗೆ ಮಾಡಿ ಬಡಿಸ್ತಾಯಿದ್ದರು. ಅವರು ನೀಡಿದ ಪ್ರೀತಿ ನಾನು ಮರೆಯಲು ಸಾಧ್ಯವೇ ಇಲ್ಲ. ನನಗೆ ಹೆಮ್ಮೆ ಇದೆ ಅಂತಹ ವ್ಯಕ್ತಿ ಜೊತೆಗೆ ಕೆಲಸ ಮಾಡಿದ್ದಕ್ಕೆ ನನಗೆ ಸಂತೋಷವಿದೆ' ಎಂದರು.
ನಿರ್ದೇಶಕ ಭಾರ್ಗವ, 'ವಯೋ ಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಕನ್ನಡ ಸಿನಿಮಾ ರಂಗಕ್ಕೆ ಅವರ ಕೊಡುಗೆ ಅಪಾರ. ಅವರ ಸಿನಿಮಾ ಅವರ ನಟನೆಯನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಸಿನಿಮಾ ನಿರ್ಮಾಣದಲ್ಲಿ ಅವರು ಹಿಂದೇಟು ಹಾಕಿಲ್ಲ. ಗೆದ್ದು ಸೋತು ಗೆದ್ದವರು ದ್ವಾರಕೀಶ್ ಅವರು. ಕುಟುಂಬಸ್ಥರಿಗೆ ದು:ಖ ಭರಿಸುವ ಶಕ್ತಿ ದೇವರು ನೀಡಲಿ' ಎಂದು ಭಾವುಕರಾದರು.
ಆಪ್ತಮಿತ್ರ ಚಿತ್ರದ ನಿರ್ದೇಶಕ ಪಿ.ವಾಸು, 'ಸಿನಿಮಾದ ಬಗ್ಗೆ ರುಚಿ ಇರುವ ನಟ ದ್ವಾರಕೀಶ್ ಅವರು, ನಿರ್ದೇಶಕರನ್ನು ಪ್ರೋತ್ಸಾಹಿಸುತ್ತಿದ್ದರು. ಅವರು ಸಿನಿಮಾ ಮಾಡುವ ಇಚ್ಚೆಯನ್ನು ಕೊನೆವರೆಗೂ ಹೊಂದಿದ್ದರು. ಅವರಿಗೆ ಸಿನಿಮಾ ಅಂದರೆ ಅಷ್ಟೊಂದು ಪ್ರೀತಿ. ಅವರು ಇರಬೇಕಿತ್ತು. ಅವರ ಅಗಲಿಕೆ ನನಗೆ ತುಂಬಾ ನೋವಾಗಿದೆ' ಎಂದು ಬೇಸರಗೊಂಡರು.












Click it and Unblock the Notifications