ಶಂಕರ್ ಕಾರ್ಟೂನಿಸ್ಟ್ ಮತ್ತು ಸೊಗಸಾದ ಕಾಫಿ ಪರಿಮಳ

Posted By: ಪ್ರಸಾದ ನಾಯಿಕ
Subscribe to Oneindia Kannada

"ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ..." ಪುರಂದರ ದಾಸರು ಹಾಡಿದ ಈ ಹಾಡು ಎಷ್ಟು ಅರ್ಥಗರ್ಭಿತವಾಗಿದೆ. ಹೊಟ್ಟೆಪಾಡಿಗಾಗಿ, ನಮ್ಮವರನ್ನು ಸಾಕಿಸಲುಹಲು, ನಮ್ಮ ಶೋಕಿತನಕ್ಕಾಗಿ, ಬಡತನ ಕಳೆದುಕೊಳ್ಳಲಿಕ್ಕಾಗಿ, ಹಣ ಮಾಡುವ ಹುಕಿಗಾಗಿ, ಮತ್ತಷ್ಟು ಶ್ರೀಮಂತಿಕೆಗಾಗಿ, ಸಾಲದ ಇಎಂಐ ಕಟ್ಟಲಿಕ್ಕಾಗಿ... ಅಬ್ಬಬ್ಬಾ ಏನೇನೆಲ್ಲ ಕೆಲಸ ಮಾಡುತ್ತಿರುತ್ತೇವೆ. ಲೋಕದ ವ್ಯಾಪಾರ ನಿರಂತರ.

ಚಮ್ಮಾರ, ಕೂಲಿಕಾರ, ಕೌರಿಕ, ಸಾಫ್ಟ್ ವೇರ್ ಇಂಜಿನಿಯರು, ವೈದ್ಯ, ವಿಜ್ಞಾನಿ... ತಮ್ಮತಮ್ಮ ನೈಪುಣ್ಯಕ್ಕೆ ತಕ್ಕಂತೆ, ಜೀವನದ ಅವಶ್ಯಕತೆಗಳಿಗೆ ತಕ್ಕಂತೆ, ಅನಿವಾರ್ಯತೆಗಳಿಗೆ ತಕ್ಕಂತೆ ದುಡಿಮೆ ಮಾಡಲೇಬೇಕು. ಕಷ್ಟಪಟ್ಟು ದುಡಿದು ಸಾರ್ಥಕ ಬದುಕು ಸವೆಸುವವರದು ಒಂದು ವರ್ಗವಾದರೆ, ಕೆಲಸಭೋಗಸಿಯಿಲ್ಲದೆ ಅನ್ಯರು ದುಡಿದ ತಂದ ಅನ್ನ ಉಣ್ಣುವವರ ವರ್ಗ ಮತ್ತೊಂದೆಡೆ. ಈ ಎರಡನೇ ವರ್ಗಕ್ಕೆ ನಿಮ್ಮದೊಂದು ಧಿಕ್ಕಾರವಿರಲಿ.

ಆದರೆ, ಜೀವನದ ಹೊರೆ ಹೊರಲಿಕ್ಕಾಗಿ, ತನ್ನ ಕುಟುಂಬ ಮಾತ್ರವಲ್ಲ ತನ್ನ ಅಣ್ಣನ ಕುಟುಂಬವನ್ನು ಕೂಡ ಸಾಕಿಸಲುಹಲಿಕ್ಕಾಗಿ, ಯಾವುದೇ ಕೆಲಸದ ಬಗ್ಗೆ ಕೀಳರಿಮೆ ಇಲ್ಲದೆ ಬ್ಯಾಂಕ್ ಎಕ್ಸಿಕ್ಯೂಟಿವ್ ಕೆಲಸದಿಂದ ಹಿಡಿದು ಹೊಲಸು ಹೊರುವ ಕೆಲಸದವರೆಗೆ ನಾನಾ ಬಗೆಯ ಕೆಲಸ ಕೆಲಸ ಮಾಡಿ, ಈಗ ಕೇವಲ ಟಿವಿಎಸ್ ಎಕ್ಸೆಲ್ ಗಾಡಿಯ ಮೇಲೆ ಟೀಕಾಫಿ ಮಾರುತ್ತ ಹೆಮ್ಮೆಯ ಜೀವನ ಸಾಗಿಸುತ್ತಿರುವ ವಿಶಿಷ್ಟಬಗೆಯ ವ್ಯಕ್ತಿತ್ವದ ವ್ಯಕ್ತಿಯ ಕಥೆಯಿದು. [ಕಾಫಿ ಪ್ರಿಯರಿಂದ ಕಾಫಿ ಪ್ರಿಯರಿಗಾಗಿ ಆನ್ಲೈನ್ ಕೆಫೆ]

The world of Shankar Cartoonist and Filter coffee flavour

ಇವರು ಬೆಂಗಳೂರಿನ ನಿವಾಸಿ ಶಂಕರ್ ಅರ್ಥಾತ್ ಶಂಕರ್ ಕಾರ್ಟೂನಿಸ್ಟ್. ಹೆಸರಿನ ಜೊತೆ ಕಾರ್ಟೂನಿಸ್ಟ್ ಎಂದು ಇಟ್ಟುಕೊಳ್ಳಲಿಕ್ಕೂ ಕಾರಣವಿದೆ. ಟೀಕಾಫಿ ಮಾರುವುದು ಇವರ ವೃತ್ತಿಯಾದರೆ, ಬಿಡುವಿನ ಸಮಯದಲ್ಲಿ ಹಾಸ್ಯಪ್ರಜ್ಞೆಗೆ ಒಂದಿಷ್ಟು ಸಾಣೆ ಹಿಡಿದು ವ್ಯಂಗ್ಯಚಿತ್ರ ಬಿಡಿಸುವುದು ಇವರ ಪ್ರವೃತ್ತಿ. ಈ ವೃತ್ತಿ ಮತ್ತು ಪ್ರವೃತ್ತಿಯ ಹಿಂದೆಯೂ ಒಂದೊಂದು ವಿಶಿಷ್ಟವಾದ ಕಥೆಗಳಿವೆ. ಬರೀ ಕಾಫಿ ಮಾರುತ್ತಲೇ ಆರಾಮ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಗಳಿಸುವ ಇವರ ಯಶೋಗಾಥೆ ಇನ್ನೂ ರೋಚಕ.

ಸಮಯವನ್ನು ಸಮಂಜಸವಾಗಿ ಬಳಸಿಕೊಂಡರೆ, ವೇಳೆಯ ಹಂಗಿಲ್ಲದೆ ಕಷ್ಟಪಟ್ಟು ದುಡಿದರೆ, ಯಾವುದೇ ಕೆಲಸವಿದ್ದರೂ ನಿಯತ್ತಾಗಿ ದುಡಿದರೆ ಯಶಸ್ವಿಯಾಗಲು ಸಾಧ್ಯ ಎಂಬುದಕ್ಕೆ ಮೂವತ್ತೊಂಬತ್ತು ವರ್ಷದ ಶಂಕರ್ ಅವರ ಜೀವನವೇ ಸಾಕ್ಷಿ. ಅಪಾರ ಕನ್ನಡ ಪ್ರೇಮಿಯಾಗಿರುವ ಶಂಕರ್ ಅವರ ಚಹಾ ಕಾಫಿಯಲ್ಲೂ ಕನ್ನಡದ ಪ್ರೀತಿ ತುಳುಕಾಡುತ್ತಿರುತ್ತದೆ, ಕನ್ನಡ ಕಸ್ತೂರಿ ಪರಿಮಳ ಹಬೆಯೇರಿ ಬರುತ್ತಿರುತ್ತದೆ. ಶಂಕರ್ ನಗೆಯಲ್ಲೂ ಕನ್ನಡ ಅರಳುತ್ತಿರುತ್ತದೆ. [ಕಾಫಿ-ಕನ್ನಡ ಪ್ರೀತಿಯ ಕೊಂಡಿ ಕಳಚಿಕೊಂಡಿತು]

The world of Shankar Cartoonist and Filter coffee flavour

ಜೀವನದ ಹಲವು ತಿರುವುಗಳು : ಹತ್ತನೇ ಕ್ಲಾಸನ್ನು ಹತ್ತನೇ ಬಾರಿ ಪಾಸ್ ಮಾಡಿಕೊಂಡಿರುವ ಶಂಕರ್ ಅವರು ಕುಮಾರಸ್ವಾಮಿ ಲೇಔಟ್ ನಿವಾಸಿ. ಟೇಲರಿಂಗ್ ಡಿಪ್ಲೋಮಾ ಮಾಡಿರುವ ಅವರು ತಮ್ಮ ಕುಟುಂಬ ಮಾತ್ರವಲ್ಲ ಅಣ್ಣನ ಕುಟುಂಬದ ಜವಾಬ್ದಾರಿ ಹೊತ್ತಿದ್ದರಿಂದ ದುಡಿಮೆಗೆ ಬೀಳದೆ ಅನ್ಯ ದಾರಿ ಇರಲಿಲ್ಲ. ಬಡತನ ನೀಗಿಸಲು, ಮೈಮೇಲೆ ಎಳೆದುಕೊಂಡ ಅಪಾರ ಸಾಲ ತೀರಿಸಲು ಸಿಕ್ಕ ಕೆಲಸವನ್ನು ಮಾಡದೆ ಗತ್ಯಂತರವಿರಲಿಲ್ಲ.

ಹಾಗೂಹೀಗೂ ಬ್ಯಾಂಕ್ ಎಕ್ಸಿಕ್ಯೂಟಿವ್ ಕೆಲ ಗಿಟ್ಟಿಸಿಕೊಂಡರು. ನಾಲ್ಕಾರು ಬ್ಯಾಂಕುಗಳಿಗೆ ಒಟ್ಟಿಗೆ ದುಡಿಯುವ ಅವಕಾಶ. ಆರಂಭದಲ್ಲಿ ಚೆನ್ನಾಗಿತ್ತಾದರೂ, ಬ್ಯಾಂಕುಗಳ ಅಗತ್ಯತೆಗೆ ತಕ್ಕಂತೆ ಕೆಲಸ ಮಾಡುವ ನೈಪುಣ್ಯತೆಯೂ ಇಲ್ಲದ್ದರಿಂದ ಮತ್ತೆ ನಿರುದ್ಯೋಗ ಪರ್ವ ಆರಂಭವಾಯಿತು. ಮಕ್ಕಳ ತುತ್ತಿಗೆ ಅನ್ನ ಎಲ್ಲಿಂದ ತರುವುದು, ಶಾಲೆ ಫೀಸು ಎಲ್ಲಿಂದ ಕಟ್ಟುವುದು, ಸಾಲಗಾರರ ಬಾಯಿ ಹೇಗೆ ಮುಚ್ಚಿಸುವುದು ಎಂಬ ಪರಿಸ್ಥಿತಿ ಬಂದಾಗ ಚೇಂಬರ್ ಕ್ಲೀನ್ ಮಾಡುತ್ತಿದ್ದವನಿಗೆ ಹೆಗಲು ಕೊಡಲು ಕೂಡ ಶಂಕರ್ ಹೇಸಿಲ್ಲ!

ಒನ್ ಫೈನ್ ಡೇ, ಅದ್ಯಾವ ದೈವ ಪ್ರೇರಣೆಯೋ ಏನೋ ಟೀಕಾಫಿ ಮಾರಿ ಯಾಕೆ ಜೀವನ ಸಾಗಿಸಬಾರದು ಎಂಬ ಯೋಚನೆ ಅವರ ತಲೆಯನ್ನು ಕೊರೆದಿದೆ. ಇದಕ್ಕೆ ಅವರ ಧರ್ಮಪತ್ನಿಯ ಬೆಂಬಲವೂ ಸಿಕ್ಕಿದೆ. ಪ್ರೇರಣೆ ನೀಡಿದ ತಮ್ಮ ಇಷ್ಟದೇವರಿಗೆ, ತಮ್ಮ ನೆಚ್ಚಿನ ಕನ್ನಡಾಂಬೆಗೆ ಒಂದು ನಮಸ್ಕಾರ ಹಾಕಿ, ಟಿವಿಎಸ್ ಎಕ್ಸೆಲ್ ಗಾಡಿಗೆ ಡಬ್ಬಿ ಕಟ್ಟಿಕೊಂಡು ಕಿಕ್ ಹೊಡೆದಿದ್ದಾರೆ. ಫಿಲ್ಟರ್ ಕಾಫಿ, ರೆಡಿಮೇಡ್ ಕಾಫಿ ಮತ್ತು ಗರಮಾಗರಂ ಚಹಾ ಮಾರಲು ಶುರು ಹಚ್ಚಿಕೊಂಡಿದ್ದಾರೆ. 9 ವರ್ಷಗಳಿಂದ ತಿರುಗುತ್ತಿರುವ ಟಿವಿಎಸ್ ಎಕ್ಸೆಲ್ ಚಕ್ರ ಇನ್ನೂ ನಿಂತಿಲ್ಲ. [ಕೆಂಪು ಬಣ್ಣದ ಕಾಫಿ ಕಪ್ಪು ವಿಧಿವಶವಾದ ಪ್ರಸಂಗ]

The world of Shankar Cartoonist and Filter coffee flavour

ಬನಶಂಕರಿ ಎರಡನೇ ಹಂತದ ಕಾಂಪ್ಲೆಕ್ಸ್ ಬಳಿಯಿರುವ ಪಿಜ್ಜಾಹಟ್ ಮುಂದಿನ ನೆಲವೇ ಇವರ ಕರ್ಮಭೂಮಿ. ಬೆಳಿಗ್ಗೆ ಮೂರು ಗಂಟೆಗೆ ಎದ್ದು ಅಹ್ನಿಕಗಳನ್ನೆಲ್ಲ ಮುಗಿಸಿಕೊಂಡು, ನಾಲ್ಕೂವರೆ ಐದು ಗಂಟೆಗೆ ಕೆಲಸಕ್ಕೆ ಹೊರಡುತ್ತಾರೆ. ಉತ್ತಮ ಹವಾ ಸೇವನೆಗೆಂದು ಬಂದವರಿಗೆ, ಕೆಲಸಕ್ಕೆ ಲಗುಬಗನೆ ಹೋಗುವವರಿಗೆ ಅರಳಿರುವ ನಗೆಯೊಂದಿಗೆ ಪರಿಮಳ ತುಂಬಿದ ಫಿಲ್ಟರ್ ಕಾಫಿ ರೆಡಿ. ಅಲ್ಲಿನ ಜನರಿಗೆ ಶಂಕರ್ ಫೆವರಿಟ್ ಚಾಯ್‌ವಾಲಾ.

ಬೆಳಗ್ಗೆ ಕಾಫಿ ಮಾರುವ ಕೆಲಸ ಮುಗಿಸಿ, ಮನೆಗೆ ಬಂದು ಮಕ್ಕಳನ್ನು ಶಾಲೆಗೆ ಕಳಿಸಿ, ತಿಂಡಿ ತಿಂದನಂತರ ಒಂಬತ್ತು ಗಂಟೆಗೆ ಎರಡನೇ ಶಿಫ್ಟ್ ಶುರು. ಬನಶಂಕರಿ ಸುತ್ತಲಿರುವ ಹಲವಾರು ಸಾಫ್ಟ್ ವೇರ್ ಕಂಪನಿಗಳಿಗೆ, ಕಾಂಪ್ಲೆಕ್ಸ್ ನಲ್ಲಿರುವ ಕ್ಷೌರಿಕರಿಗೆ, ಪಕ್ಕದಲ್ಲೇ ಇರುವ ಸರಕಾರಿ ಆಸ್ಪತ್ರೆ ಸಿಬ್ಬಂದಿಗೆ ಟೀಕಾಫಿ ಮಾರುವುದು ಶಂಕರ್ ಅವರ ದಿನಚರಿಯಾಗಿದೆ. ಮಧ್ಯಾಹ್ನ ಊಟ ಮುಗಿಸಿ ನಂತರ ಸಂಜೆ ನಾಲ್ಕು ಗಂಟೆಗೆ ಬನಶಂಕರಿಯಲ್ಲಿ ಶಂಕರ್ ಫಿಲ್ಟರ್ ಕಾಫಿ ಮತ್ತೆ ರೆಡಿ. [ನಾನು ಅಪ್ಪಟ ಕನ್ನಡಿಗ ಎಂದಿದ್ದ ಲಕ್ಷ್ಮಣ್ ನೆನಪು]

The world of Shankar Cartoonist and Filter coffee flavour

ಶಂಕರ್ ವ್ಯಂಗ್ಯಚಿತ್ರಕಾರರಾದ ಕಥೆ : ಬಿಡುವಿಲ್ಲದೆ ಇಷ್ಟೆಲ್ಲಾ ದುಡಿಯುವ ಇವರು ವ್ಯಂಗ್ಯಚಿತ್ರ ಯಾವಾಗ ಬಿಡಿಸುತ್ತಾರೆ ಎಂದು ಪ್ರಶ್ನೆ ನೀವು ಕೇಳಬಹುದು. ಅದನ್ನು ತಿಳಿದುಕೊಳ್ಳುವ ಮೊದಲು ಇವರು ಹೇಗೆ ವ್ಯಂಗ್ಯಚಿತ್ರಕಾರರಾದರು ಎಂಬ ಕಥೆಯನ್ನೂ ಓದಿಬಿಡಿ. ಎಸ್ಸೆಸ್ಸೆಲ್ಸಿಯಲ್ಲಿ ವರ್ಷದಿಂದ ವರ್ಷ ಡುಮ್ಕಿ ಹೊಡೆಯುತ್ತಿದ್ದಾಗ ಇವರು ಮಿಮಿಕ್ರಿ ಕಲೆಯನ್ನು ಒಲಿಸಿಕೊಂಡಿದ್ದರು. ಹೀಗಾಗಿ ಕಲೆಯೆಂಬುದು ಇವರ ರಕ್ತದಲ್ಲಿ ಅದು ಹೇಗೋ ಸೇರಿಕೊಂಡಿತ್ತು.

ಮುಂದೊಂದು ದಿನ ಇವರ ಸ್ನೇಹಿತರು, ಸುಮ್ನೆ ಖಾಲಿ ಕೂತು ಏನು ಮಾಡುತ್ತಿಯಾ, ಸು.ವಿ. ಮೂರ್ತಿಯನ್ನೋರು ವ್ಯಂಗ್ಯಚಿತ್ರ ಕಾರ್ಯಗಾರ ನಡೆಸುತ್ತಿದ್ದಾರೆ ಅದನ್ನಾದರೂ ಕಲಿ ಅಂತ ಒತ್ತಾಯಿಸಿದರು. ಸರಿ ಅದೂ ಆಗಲಿ ಅಂತ ಶಂಕರ್ ಕೈಗೆ ಪೇಪರು ಪೆನ್ಸಿಲ್ ರಬ್ಬರ್ ಹಿಡಿದು ವ್ಯಂಗ್ಯಚಿತ್ರಕಾರರಾದರು. "ಮೊದಲು ನಾನು ತುಂಬಾ ಮುಂಗೋಪಿಯಾಗಿದ್ದೆ. ಆದರೆ, ವ್ಯಂಗ್ಯಚಿತ್ರ ನನ್ನಲ್ಲಿ ಕಲೆಯನ್ನು ಅರಳಿಸಿದ್ದು ಮಾತ್ರವಲ್ಲ, ನನ್ನಲ್ಲಿ ಹಾಸ್ಯಪ್ರಜ್ಞೆ ಮತ್ತು ನೋವು ಮರೆಸಿ ಮನಶ್ಶಾಂತಿಯನ್ನೂ ತುಂಬಿದೆ" ಎಂದು ಶಂಕರ್ ಹೇಳುತ್ತಾರೆ.

The world of Shankar Cartoonist and Filter coffee flavour

ಕಾಫಿ ಮಾರುವಾಗ ಸದಾಕಾಲವೂ ಜನರು ಕೊಳ್ಳುವುದಿಲ್ಲವಲ್ಲ? ಅದೇ ಸಮಯವನ್ನು ಶಂಕರ್ ಅವರು ವ್ಯಂಗ್ಯಚಿತ್ರ ಬರೆಯಲು ಬಳಸಿಕೊಳ್ಳುತ್ತಾರೆ. ಇವರ ಸ್ಪೆಷಾಲಿಟಿ ಎಂದರೆ ಪ್ರಸಿದ್ಧ ವ್ಯಕ್ತಿಗಳ ಮತ್ತು ಶ್ರೀಸಾಮಾನ್ಯರ ಕ್ಯಾರಿಕೇಚರು ಬರೆಯುವುದು. ದಂಪತಿಗಳು, ಹೊಸದಾಗಿ ಮದುವೆಯಾಗುವವರು ಇವರನ್ನು ಹುಡುಕಿಕೊಂಡು ಬಂದು ವ್ಯಂಗ್ಯಚಿತ್ರ ಬರೆಸಿಕೊಂಡು ಹೋಗುತ್ತಾರೆ. ಮದುವೆಯಾಗುವ ಅನೇಕರು ಇವರ ವ್ಯಂಗ್ಯಚಿತ್ರವನ್ನೇ ತಮ್ಮ ಆಹ್ವಾನ ಪತ್ರಿಕೆಯಲ್ಲೂ ಮುದ್ರಿಸಿಕೊಂಡಿರುವುದು ಶಂಕರ್ ಅವರ ಪ್ರತಿಭೆಗೆ ಹಿಡಿದ ಕನ್ನಡಿ.

ಸಮಾಜದಿಂದ ಇಷ್ಟೆಲ್ಲಾ ಪಡೆದಿರುವ ನಾನು ಸಮಾಜಕ್ಕೆ ಏನಾದರೊಂದು ಕೊಡಬೇಕು ಎನ್ನುವುದು ಇವರ ಮನದಾಳದ ಇಂಗಿತ. ಮುಂದೊಂದು ದಿನ ಹೋಟೆಲೊಂದನ್ನು ತೆರೆದು, ಅಲ್ಲಿ ಇವರ ಟ್ರೇಡ್ ಮಾರ್ಕ್ ಕಾಫಿ ಮಾತ್ರವಲ್ಲದೆ, ತಿಂಡಿ ತಿನ್ನಲು ಬರುವವರು, ಶಂಕರ್ ಬರೆದಿರುವ ಕಾರ್ಟೂನುಗಳು ಮಾತ್ರವಲ್ಲ, ಇತರ ಪ್ರತಿಭಾವಂತರ ವ್ಯಂಗ್ಯಚಿತ್ರಗಳನ್ನೂ ನೋಡಿ ಸವಿಯಬೇಕು ಎನ್ನುವುದು ಇವರ ಆಸೆ. ಮಾಡುವ ಕೆಲಸವನ್ನು ಆತ್ಮತೃಪ್ತಿಯಿಂದ ಕೆಲಸ ಮಾಡುತ್ತಿರುವ ಶಂಕರ್ ಇನ್ನಷ್ಟು ಬೆಳೆಯಲಿ, ಎಲ್ಲೆಲ್ಲೂ ನಗೆಯ ಹೊನಲು ಹರಿಸಲಿ, ಅವರ ಕಾಫಿ ಪರಿಮಳ ಇನ್ನಷ್ಟು ಹರಡಲಿ ಎಂದು ಆಶಿಸೋಣ.

ಶಂಕರ್ ಅವರನ್ನು ಸಂಪರ್ಕಿಸಬೇಕಿದ್ದರೆ : ಮೊಬೈಲ್ - 95917 78231, ಫೇಸ್ ಬುಕ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Welcome to the world of Shankar Cartoon and filter coffee flavour. Shankar, a Bengalurean, leading a happy life by selling filter and readymade coffee. He has shown that dignity of labour is important to succeed in life. The sense of humor in Shankar has made him a wonderful cartoonist too.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ