• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾಸ್ಟನ್ ನಲ್ಲಿ ನಾವಿಕ ಕನ್ನಡ ಸಮ್ಮೇಳನ ಸಂಪನ್ನ

By ಮಧುಸೂದನ್ ಅಕ್ಕಿಹೆಬ್ಬಾಳ
|

ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಮುಂದಿನ ಪ್ರಪಂಚದೆಲ್ಲೆಡೆ ಇರುವ ಕನ್ನಡದ ಮುಂದಿನ ಪೀಳಿಗೆಗೂ ಅದನ್ನು ಪರಿಚಯಿಸುವ ಅಭಿಲಾಷೆ ಹೊತ್ತ ನಾವಿಕ ಸಂಸ್ಥೆ, ಕಳೆದ ವಾರ ಅಂದರೆ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ಅಮೆರಿಕಾದ ಬಾಸ್ಟನ್ ಸಮೀಪದ ವೂಸ್ಟರ್ ನಗರದಲ್ಲಿ 2ನೆಯ ವಿಶ್ವ ಕನ್ನಡ ಸಮಾವೇಶವನ್ನು ಅದ್ದೂರಿಯಾಗಿ ನಡೆಸಿತು.

ಸುಮಾರು 2 ಸಾವಿರ ಕನ್ನಡಿಗರು ಪ್ರಪಂಚದೆಲ್ಲೆಡೆಯಿಂದ ಆಗಮಿಸಿದ್ದರು. ಅಮೆರಿಕದಲ್ಲಿರುವ 8 ಕನ್ನಡ ಕೂಟಗಳ ಪ್ರತಿನಿಧಿಗಳು, ಮತ್ತು ಯು.ಕೆ. ದ ಕನ್ನಡ ಬಳಗದವರೂ ಭಾಗವಹಿಸಿದ್ದರು. ಭಾರತದಿಂದಲೂ ಹಲವು ಕಲಾವಿದರು, ಸರಕಾರಿ ಗಣ್ಯರು, ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

ಸಮಾವೇಶದ ಸಂಚಾಲಕರಾದ ಶರಣಬಸವ ರಾಜೂರ ಮತ್ತು ಕೃಪಾ ರಾಜೂರ ಅವರು, "ಈ ಸಮಾವೇಶದ ಸಕಲ ಸಿದ್ಧತೆಗಳೂ ಒಂದು ವರ್ಷದಿಂದ ನಡೆದಿದ್ದು, ನೂರಾರು ಸ್ವಯಂಸೇವಕರ ಅವರ ಪ್ರಯತ್ನದ ಫಲ" ಎಂದು ಅಭಿಮಾನದಿಂದ ಹೇಳಿದರು. ನಾವಿಕ ಅಧ್ಯಕ್ಷ ಕೇಶವ ಬಾಬು ಅವರು "ಇಷ್ಟೊಂದು ಮಂದಿ ಕನ್ನಡಿಗರನ್ನು ಒಂದುಗೂಡಿಸಿ, ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಿದ ಸಮಾವೇಶ" ಎಂದು ಸಂತೋಷ ವ್ಯಕ್ತಪಡಿಸಿದರು.

Radhika Pandit

ಕರ್ನಾಟಕದ ನುರಿತ ಕಲಾವಿದರು ಮತ್ತು ಅಮೆರಿಕಾದ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭೆ-ಸೌಂದರ್ಯ-ರಸಪ್ರಶ್ನೆ ಸ್ಪರ್ಧೆಗಳು, ವರ್ಣರಂಜಿತ ಮೆರವಣಿಗೆ, ಉದ್ಯಮ/ಶಿಕ್ಷಣ/ವೈದ್ಯಕೀಯ ಕ್ಷೇತ್ರ/ಯೋಗ/ಯುವ ನಾವಿಕ ವಿಚಾರ ವೇದಿಕೆಗಳು, ವಧು-ವರಾನ್ವೇಷಣೆ ಕಾರ್ಯಕ್ರಮ, ಕಿರು-ಚಿತ್ರ ಪ್ರದರ್ಶನ, ಮಕ್ಕಳ ಮನರಂಜನೆ - ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಎಲ್ಲರ ಮನ ರಂಜಿಸಿತು. [ಗ್ಯಾಲರಿ]

ಗೀತ ವೈಭವ : ಮೊದಲನೇ ದಿನ ವಾಣಿಜ್ಯ ವಿಚಾರ ವೇದಿಕೆಯೊಂದಿಗೆ ಸಮಾವೇಶ ಆರಂಭಗೊಂಡಿತು. ಕರ್ನಾಟಕ ಮೂಲದ ಹಲವಾರು ವಾಣಿಜ್ಯ ತಜ್ಞರು ಮತ್ತು ಗುರುರಾಜ್ ದೇಶಪಾಂಡೆ ಅಂತಹ ಉದ್ಯಮಪತಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಣಿಜ್ಯ ವೇದಿಕೆಯನ್ನು ಪ್ರಾಯೋಜಿಸಿದವರು ಕರ್ನಾಟಕ ಸರಕಾರದ ಐ.ಟಿ./ಬಿ.ಟಿ ವಿಭಾಗದವರು. ಸಾಯಂಕಾಲದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರೊ. ಮಲ್ಲಣ್ಣ ಮತ್ತು ಕೂಟದವರಿಂದ ಅವರ ಗೀತ ವೈಭವ ಕಾರ್ಯಕ್ರಮ, ಅಲ್ಲದೆ ಎಮ್. ಡಿ ಪಲ್ಲವಿ, ಅರುಣ್, "ಜೋಗಿ" ಸುನಿತಾ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನೆರೆದವರ ಮನ ತಣಿಸಿತು!

ಮಾರನೇ ದಿನ ಶನಿವಾರ ಬೆಳಿಗ್ಗೆ ವೂಸ್ಟರ್ ನಗರದ ಪುರ ಭವನದಿಂದ ನಡೆದ ಭವ್ಯ ಮೆರವಣಿಗೆಯಲ್ಲಿ ಕನ್ನಡ ಚಿತ್ರತಾರೆಯರಾದ ಯಶ್ ಮತ್ತು ರಾಧಿಕಾ ಪಂಡಿತ್ ಮತ್ತಿತರ ಗಣ್ಯರು ಪಾಲ್ಗೊಂಡರು. ವಿವಿಧ ವೇಷ-ಪೋಷಾಕು ತೊಟ್ಟ ಮಕ್ಕಳು-ದೊಡ್ಡವರು, ಗಾಯನ-ವಾದನ ಇವೆಲ್ಲಾ ಕೂಡಿದ ವರ್ಣರಂಜಿತ ಮೆರವಣಿಗೆಯಲ್ಲಿ ನಮ್ಮ ಕಲೆ-ಸಂಸ್ಕೃತಿಯ ಸುಂದರ ಪ್ರದರ್ಶನ ನಡೆಯಿತು.

ನಂತರದ ಉದ್ಘಾಟನಾ ಸಮಾರಂಭದಲ್ಲಿ ಸಂಚಾಲಕರಾದ ಶರಣಬಸವ ರಾಜೂರ ಮತ್ತು ಕೃಪಾ ರಾಜೂರ ಅವರು ಎಲ್ಲರನ್ನೂ ಸ್ವಾಗತಿಸಿದರು. ನಾವಿಕ ಅಧ್ಯಕ್ಷ ಕೇಶವ ಬಾಬು ಅವರು ಗಣ್ಯರನ್ನು ವೇದಿಕೆಯ ಮೇಲೆ ಬರಮಾಡಿಕೊಂಡರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ 'ಮುಖ್ಯಮಂತ್ರಿ' ಚಂದ್ರು, ಎನ್.ಆರ್.ಐ ಫೋರಮ್ ನ ಗಣೇಶ್ ಕಾರ್ಣಿಕ್, ಉದ್ಯಮಿ ಗುರುರಾಜ ದೇಶಪಾಂಡೆ, ಜಯಶ್ರೀ ದೇಶಪಾಂಡೆ, ಸಾಹಿತಿ ವೀರಣ್ಣ ರಾಜೂರ, ನಾವಿಕ ಕೇಂದ್ರ ಮಂಡಳಿಯ ರಾಮಪ್ಪ, ವಿಜಯ್ ಕೊಟ್ರಪ್ಪ, ಚಲನಚಿತ್ರ ತಾರೆಯರಾದ ಯಶ್ ಮತ್ತು ರಾಧಿಕಾ ಪಂಡಿತ್, ವೂಸ್ಟರ್ ನಗರದ ಪುರಭವನದ ಅಧಿಕಾರಿಗಳು, ಅತಿಥೇಯ ಕನ್ನಡ ಕೂಟದ ಅಧ್ಯಕ್ಷರಾದ ಮಧುಸೂದನ್ ಅಕ್ಕಿಹೆಬ್ಬಾಳ್ ಮತ್ತು ದಿನೇಶ್ ಹರ್ಯಾಡಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಸಂದೇಶ : ರಾಮಲಿಂಗಾ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಭ ಸಂದೇಶ ತಿಳಿಸಿ ಈ ಸಮಾವೇಶ ಯಶಸ್ವಿಯಾಗಲಿ ಎಂದು ಹಾರೈಸಿದರು. 'ಮುಖ್ಯಮಂತ್ರಿ' ಚಂದ್ರು ಅವರು ತಮ್ಮ ಭಾಷಣದಲ್ಲಿ ಹೊರನಾಡ ಕನ್ನಡಿಗರು, ಕನ್ನಡ ಮತ್ತು ಸಂಸ್ಕೃತಿಯ ಜತೆ ನಂಟನ್ನು ಬಲಗೊಳಿಸಲು ಕರೆ ಕೊಟ್ಟರು. ಗಿರೀಶ್ ಕಾರ್ನಾಡ್ ಅವರು ತಮ್ಮ ವೀಡಿಯೋ ಸಂದೇಶದಲ್ಲಿ ಸಮಾವೇಶಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ "ಸೌರಭ" ಎಂಬ ಸ್ಮರಣ ಸಂಚಿಕೆಯನ್ನು ವೀರಣ್ಣ ರಾಜೂರ ಅವರು ಬಿಡುಗಡೆ ಮಾಡಿದರು.

ಮಧ್ಯಾಹ್ನದ ಕಾರ್ಯಕ್ರಮಗಳಲ್ಲಿ - ನಕ್ಷತ್ರ ಪ್ರತಿಭಾ ಸ್ಪರ್ಧೆ, ಅಪ್ಸರ ಸೌಂದರ್ಯ ಸ್ಪರ್ಧೆ ಮತ್ತು ಕುಬೇರ ರಸಪ್ರಶ್ನೆ ಸ್ಪರ್ಧೆಗಳ ಜತೆ ಯೋಗ / ಉನ್ನತ ಶಿಕ್ಷಣ / ಜೀವನ ಸಂಗಾತಿ / ಕ್ರೀಡೆಗಳಾದ ಚೆಸ್ ಮತ್ತು ಕ್ರಿಕೆಟ್ - ಹೀಗೆ ಹಲವು ವಿಚಾರ ವೇದಿಕೆಗಳನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಲವು ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮಗಳೂ ಆಯೋಜನಗೊಂದಿದ್ದವು. ಸಂಜೆಗೆ ಪ್ರವೀಣ್ ಗೋಡಖಿಂಡಿ ಅವರ ಮೋಹಕ ಕೊಳಲುವಾದನ ಮತ್ತು ನಿರುಪಮ/ರಾಜೇಂದ್ರ ಅವರ ಕಣ್ಮನ ತಣಿಸುವ ನೃತ್ಯ ಕಾರ್ಯಕ್ರಮ ಎಲ್ಲರಿಗೂ ಬಹಳ ಇಷ್ಟವಾಯಿತು.

ಭೂರಿ ಭೋಜನ : ಇವೆಲ್ಲಾ ಕಾರ್ಯಕ್ರಮಗಳ ಮಧ್ಯೆ ಮೂರು ಹೊತ್ತೂ ಕರ್ನಾಟಕದ ಹಲವು ರುಚಿಕರ ತಿಂಡಿ ಮತ್ತು ಭೋಜನವನ್ನು ಆಸ್ವಾದಿಸುವ ಅವಕಾಶ! ಕಡೆಯ ದಿನವಾದ ಭಾನುವಾರ ಬೆಳಿಗ್ಗೆ ವೈದ್ಯಕೀಯ ವಿಚಾರ ವೇದಿಕೆಯಲ್ಲಿ ಕರ್ನಾಟಕದ ಮತ್ತು ಅಮೆರಿಕಾದ ವೈದ್ಯರ ನಡುವೆ ಸಹಕಾರದ ಕುರಿತು ವಿಚಾರ ವಿಮರ್ಶೆ ನಡೆಯಿತು. ಸ್ಥಳೀಯ ಪ್ರತಿಭೆಗಳ ಕಾರ್ಯಕ್ರಮ ಅಲ್ಲದೇ ಗಮಕ ವಿದುಷಿಗಳಾದ ವಸಂತ ವೆಂಕಟೇಶ್ ಮತ್ತು ಬಿ.ಎಚ್. ನಾಗರತ್ನ ಅವರಿಂದ ಗಮಕ ವಾಚನ, ದೀಪ್ತಿ ನವರತ್ನ, ಮತ್ತು ಟಿ. ವಿ. ರಾಮಪ್ರಸಾದ್ ಅವರ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಿತು.

ಮಧ್ಯಾಹ್ನ ನಗೆ ನಾಟಕಗಳಲ್ಲದೇ ಯಕ್ಷ ಮಂಜೂಷ ತಂಡದಿಂದ ಯಕ್ಷಗಾನ, ಭರತ್ ರಾಮ್ ಅವರ ಭರತನಾಟ್ಯ ಮತ್ತು ಸಾಹಿತ್ಯ ಕಮ್ಮಟ ಕಾರ್ಯಕ್ರಮ ನಡೆಯಿತು. 'ಶೃಂಗಾರ' ಸೌಂದರ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸಾಯಂಕಾಲದ ತಾರಾ ಲೋಕ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಪ್ರತಿಭೆಗಳಾದ ವಿಜಯ್ ಪ್ರಕಾಶ್ ಮತ್ತು ಶಮಿತಾ ಮಲ್ನಾಡ್ ಅವರು ಜನರು ಎಡೆಬಿಡದೆ ಕುಣಿಯುವಂಥ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಸುಮಧುರ ಗಾಯನದೊಂದಿಗೆ ಈ ವರ್ಣರಂಜಿತ ವಿಶ್ವ ಕನ್ನಡ ಸಮಾವೇಶಕ್ಕೆ ತೆರೆ ಬಿದ್ದಿತು!

ಎಲ್ಲೆಲ್ಲಿಂದಲೋ ಬಂದ ಕನ್ನಡ ಬಾಂಧವರು - ಮಿಕ್ಕ ಎಲ್ಲಾ ಚಿಂತೆ ಮರೆತು, ಮನೆ ಮಂದಿ - ಸ್ನೇಹಿತರೊಂದಿಗೆ "ಕರ್ನಾಟಕ ದರ್ಶನ"ವಾಯಿತಲ್ಲಾ ಎಂದು ಎಲ್ಲರೂ ಖುಷಿ ಪಟ್ಟು ತಮ್ಮ ಊರಿನೆಡೆಗೆ ಪ್ರಯಾಣ ಮಾಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Navika 2nd World Kannada Conference concludes in Bosgon, USA. More than 2 thousand Kannadigas from America and UK participated. Kannada actors Yash and Radhika Pandit, Praveen Godkhindi enthralled the audience. Report by Madhusudhan Akkihebbal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more