• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನಕ್ಕೆ ಕರ್ನಾಟಕ ಗಣ್ಯರ ಬಸ್

By Shami
|

ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ರಾಜ್ಯದಿಂದ ಅಮೆರಿಕಾಗೆ ಪ್ರವಾಸ ಕೈಗೊಳ್ಳುತ್ತಿರುವ ಆಹ್ವಾನಿತ ಗಣ್ಯರ ಪಟ್ಟಿ ಇದೀಗ ಭರದಿಂದ ತಯಾರಾಗುತ್ತಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಅಂದರೆ, ವೀಸಾ ಸಿಕ್ಕರೆ ಒಟ್ಟಾರೆ 150 ಮಂದಿ ಅಟ್ಲಾಂಟಾ ವಿಮಾನ ಹತ್ತುವುದಕ್ಕೆ ಅರ್ಹತೆ ಪಡೆಯುತ್ತಾರೆ.

ಕನ್ನಡ ಸಮ್ಮೇಳನಗಳಿಗೆ ವಿದೇಶಗಳಿಗೆ ಹೋಗುವವರ ಯಾದಿಯಲ್ಲಿ ಸಾಮಾನ್ಯವಾಗಿ ಕಲಾವಿದರ ಪಾಲೇ ಹೆಚ್ಚಾಗಿರುತ್ತದೆ. ಮನರಂಜನೆಯ ನಾನಾ ವಿಭಾಗಗಳಲ್ಲಿ ಮೂರು ದಿನ ಸಮ್ಮೇಳನಾರ್ಥಿಗಳನ್ನು ರಂಜಿಸುವುದು ಉದ್ದೇಶ.

ಈ ಬಾರಿ ಅಕ್ಕ ಕಲಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವವರ ಪಟ್ಟಿಯಲ್ಲಿ ನಾನಾ ನಮೂನೆಗಳಿವೆ. ಮೊದಲನೆಯದಾಗಿ ಕಪ್ಪಣ್ಣ ಮತ್ತು ವಿಠ್ಠಲ ಮೂರ್ತಿ ನೇತೃತ್ವದ 56 ಮಂದಿಯ ತಂಡ ಅಣಿಯಾಗಿದೆ. ಆದರೆ ಈ ತಂಡಕ್ಕೆ p3 ವೀಸಾ ಅಗತ್ಯ.

ಅಮೆರಿಕಾಗೆ ತಂಡೋಪತಂಡವಾಗಿ ತೆರಳುವ ಭಾರತೀಯ ಸಾಂಸ್ಕೃತಿಕ ತಂಡಗಳಿಗೆ ನೀಡಲಾಗುವ ವೀಸಾಗೆ p3 ವೀಸಾ ಎಂದು ಕರೆಯುತ್ತಾರೆ. ಕಪ್ಪಣ್ಣ ತಂಡಕ್ಕೆ ಈ ವೀಸಾ ಸಿಗುವ ಛಾನ್ಸಸ್ 50:50 ಎಂದು ಅಕ್ಕ ಸಮ್ಮಳನದ ಪ್ರತಿನಿಧಿ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಕಪ್ಪಣ್ಣ-ವಿಠ್ಠಲ ಮೂರ್ತಿ ತಂಡ ತಮ್ಮದೇ ಆದ ಪ್ರಾಯೋಜಕತ್ವದಲ್ಲಿ ಪ್ರವಾಸ ಕೈಗೊಳ್ಳುವರು. ಅವರ ತಂಡದಲ್ಲಿ ಗಾಯಕರು, ನೃತ್ಯಗಾತಿಯರು, ಯಕ್ಷಗಾನ ಮೇಳದವರು, ಶಾಸ್ತ್ರೀಯ ಮತ್ತು ಸುಗಮ ಸಂಗೀತ ಗಾಯಕ ಗಾಯಕಿಯರಿಂದ ತುಂಬಿದ ದೊಡ್ಡ ಬಳಗವೇ ಇದೆ.

ಆದರೆ, ಅಕ್ಕ ಬೊಕ್ಕಸದಿಂದ ಗಣ್ಯ ಅತಿಥಿಯಾಗಿ ಸಮ್ಮೇಳನಕ್ಕೆ ಬರುತ್ತಿರುವವರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಮಾತ್ರ ಎಂದು ಅಕ್ಕ ಅಧಿಕಾರಿಗಳು ಸ್ಪಷ್ಟಪಡಿಸಿದರು.

ಇವರಲ್ಲದೆ ಅಕ್ಕ ಅಂತರ್ಜಾಲ ತಾಣದಲ್ಲಿ ನಮೂದಾಗಿರುವ ಸಾಹಿತಿ ವಲಯದ ಆಹ್ವಾನಿತ ಗಣ್ಯರ ಪಟ್ಟಿಯಲ್ಲಿ ಕಂಬಾರರ ಪತ್ನಿ ಸತ್ಯಭಾಮಾ ಕಂಬಾರ, ಸುವರ್ಣ ಟಿವಿ ವಾಹಿನಿಯ ಹಮೀದ್ ಪಾಳ್ಯ, ಪ್ರಜಾವಾಣಿ ಪತ್ರಿಕೆಯ ಸಂಪಾದಕ ಪದ್ಮರಾಜ್ ದಂಡವತೆ, ಟಿ.ಎನ್. ಸೀತಾರಾಮ್ ಮತ್ತು ಎಚ್ ದುಂಡಿರಾಜ್, ಸಾಹಿತ್ಯ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಮುಂತಾದವರ ಹೆಸರುಗಳಿವೆ.

ರಘು ದೀಕ್ಷಿತ್ ಮತ್ತು ತಂಡ ಈ ಬಾರಿಯ ಸಮ್ಮೇಳನದ ಆಕರ್ಷಣೆಗಳಲ್ಲಿ ಒಂದಾಗಿದೆ. ಅವರ ಆರು ಕಲಾವಿದರ ತಂಡ ಫ್ಯೂಷನ್ ಬ್ಯಾಂಡ್ ಪ್ರಸ್ತುತ ಪಡಿಸುತ್ತದೆ. ಜತೆಗೆ ಶ್ರೀ ವಿದ್ಯಾಭೂಷಣರ ದಾಸಸಾಹಿತ್ಯ ಗಾಯನ ದಾಸೋಹ ಈ ಬಾರಿಯೂ ಅಮೆರಿಕನ್ನಡಿಗರಿಗೆ ಬುಕ್ ಆಗಿದೆ. ಅಂದಹಾಗೆ ಬೆನಕ ತಂಡ ಇದೇ ಮೊದಲ ಬಾರಿಗೆ ಅಕ್ಕ ಅಂಗಳದಲ್ಲಿ ನಾಟಕ ಪ್ರದರ್ಶನ ನೀಡುತ್ತಿದೆ.

ಸಿನಿ ಕಲಾವಿದರು ಹಾಗೂ ತಂತ್ರಜ್ಞರು ಪ್ರಸ್ತುತ ಪಡಿಸುತ್ತಿರುವ ಮೆಗಾ ಶೋಗೆ legends Go Live ಎಂದು ಹೆಸರಿಡಲಾಗಿದೆ. ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪ್ರಿಯಾಮಣಿ, ರಮ್ಯಾ, ರಾಧಿಕಾ ಪಂಡಿತ್, ನಿಧಿ ಸುಬ್ಬಯ್ಯ, ಯಶ್, ದಿಗಂತ್-ಐಂದ್ರಿತಾ, ನಟ ಯೋಗೇಶ್, ಗುರುಕಿರಣ್.. ಪಟ್ಟಿ ದೊಡ್ಡದಿದೆ. ಅಖೈರುಗೊಳಿಸಲಾದ ಪಟ್ಟಿಯನ್ನು ನಿರೀಕ್ಷಿಸಲಾಗಿದೆ.

ಇವರೆಲ್ಲದರ ಜತೆಗೆ ಅಕ್ಕ ಸಮ್ಮೇಳನದ ಮೂಲಕ ಕನ್ನಡ ಸಾಂಸ್ಕೃತಿಕ ಪರಂಪರೆಯನ್ನು ಹಬ್ಬಿಸುವ ಉದ್ದೇಶದ ಕರ್ನಾಟಕ ಸರಕಾರ ಪ್ರಾಯೋಜಿತ ಕಲಾವಿದರ ತಂಡ ಯಥಾಪ್ರಕಾರ ಅಟ್ಲಾಂಟ ಸಮ್ಮೇಳನದಲ್ಲಿ ಭಾಗವಹಿಸುತ್ತದೆ. ಈ ತಂಡದಲ್ಲಿ ಇರುವ ಕಲಾವಿದರ ಪಟ್ಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಿದ್ಧವಾಗುತ್ತಿದೆ.

ಅಟ್ಲಾಂಟಾ ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಈ ಬಾರಿ ಎರಡು ಹೊಸ ಮುಖಗಳು ಮುಖಾಮುಖಿಯಾಗಲಿವೆ. ಕನ್ನಡಿಗರಿಗೆ ಚಿರಪರಿಚಿತರಾಗಿರುವ ಇನ್ಫೋಸಿಸ್ ಫೌಂಡೇಶನ್ನಿನ ಸುಧಾ ನಾರಾಯಣ ಮೂರ್ತಿ ಹಾಗೂ ಅಮೆರಿಕಾದಲ್ಲಿ ಭಾರತದ ರಾಯಭಾರಿಯಾಗಿರುವ ಕನ್ನಡತಿ ನಿರುಪಮಾ ರಾವ್.

ಇದೇ ಆಗಸ್ಟ್ 31ರಿಂದ ಸೆಪ್ಟೆಂಬರ್ 2ರವರೆಗೆ ನಡೆಯುವ ಮೂರು ದಿನಗಳ ಸಮ್ಮೇಳನಕ್ಕೆ ಇನ್ನು 36 ದಿನ ಬಾಕಿ ಇದೆ. ಜುಲೈ 31ರ ಒಳಗೆ ಪ್ರತಿನಿಧಿಯಾಗಿ ಹೆಸರನ್ನು ನೊಂದಾಯಿಕೊಳ್ಳುವವರಿಗೆ $50 ಡಿಸ್ಕೌಂಟ್ ಇರುತ್ತದೆ. ಹರಿಯಪ್ ಎನ್ನುತ್ತಿದ್ದಾರೆ ಸಂಚಾಲಕರಾದ ಡಾ. ಎಚ್ ಎನ್ ರಾಮಸ್ವಾಮಿ, ಶ್ರೀವಿಜಯ ಶ್ರೀನಿವಾಸ ಹಾಗೂ ಅಕ್ಕ ಅಧ್ಯಕ್ಷ ದಯಾಶಂಕರ ಅಡಪ ಮತ್ತು ಕೋಶಾಧಿಕಾರಿ ಸಂಜಯ್ ರಾವ್.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
150 strong Karnataka contingent comprising of actors, singers, writers and dancers expected to participate in 7th AKKA world Kannada Conference 2012 to be held in Atlanta, US. Tentative list published.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more