Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ
Karnataka Weather: ಫೆಬ್ರವರಿ ಅಂತ್ಯದಿಂದಲೇ ಬಿಸಿಲಿನ ತಾಪ ಹೆಚ್ಚಾಗಿದ್ದ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆ (Pre Monsoon Rain 2026) ಅಬ್ಬರಿಸಿದೆ. ಒಂದೇ ದಿನಕ್ಕೆ ಬೇಸಿಗೆ ಮಾಯವಾಗಿ ಚಳಿಗಾಲವೇ ಶುರುವಾಯಿತೇನೋ ಎಂಬಷ್ಟರ ಮಟ್ಟಿಗೆ ತಂಪು ಗಾಳಿ, ಬಿರುಗಾಳಿ ಸಹಿತ ಜೋರು ಮಳೆ ದಾಖಲಾಗಿದೆ. ಬೆಂಗಳೂರು ಸೇರಿ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನೆನ್ನೆ ಮಂಗಳವಾರ (ಮಾ.17) ಸಾಧಾರಣ ಮಳೆ ಆಗಿದ್ದು, ಧಾರವಾಡದಲ್ಲಿ ಅಲಿಕಲ್ಲು ಸಹಿತ ವ್ಯಾಪಕ ಮಳೆ ದಾಖಲಾಗಿ ಸ್ಥಳಿಯರಲ್ಲಿ ಅಚ್ಚರಿ ಮೂಡಿಸಿದೆ. ಉತ್ತರ ಕರ್ನಾಟಕದ ಮಳೆ ಮುನ್ಸೂಚನೆ ವಿವರ ಇಲ್ಲಿದೆ.
ಕಲಬುರಗಿ, ಕೊಪ್ಪಳ, ಧಾರವಾಡ, ಹಾವೇರಿ ಸೇರಿ ಉತ್ತರ ಒಳನಾಡಿನಲ್ಲಿ ಒಂದೂವರೆ ತಿಂಗಳಿನಿಂದ ಶುಷ್ಕ ವಾತಾವರಣ ಇತ್ತು. ಈ ಭಾಗದಲ್ಲಿ ಸುಮಾರು 33-40 ಡಿ.ಸೆ. ವರೆಗೆ ಗರಿಷ್ಠ ತಾಪಮಾನ ದಾಖಲಾಗುತ್ತಿತ್ತು. ನೆನ್ನೆ ಒಂದೇ ದಿನದ ಮಳೆಗೆ ವಾತಾವರಣ ಸಂಪೂರ್ಣ ಬದಲಾಗಿದೆ. ಮಳೆಗಾಲ ರೀತಿ ಭಾಸವಾಗಿದೆ. ಧಾರವಾಡ, ಹಾವೇರಿ, ಕಲಬುರಗಿ, ಬೆಳಗಾವಿ, ವಿಜಯಪುರ, ಕೊಪ್ಪಳ, ಗದಗ ಸೇರಿ ಒಳನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ ಆಗಿದೆ. ಈ ಭಾಗದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿಲೋ ಮೀಟರ್ ವೇಗದಲ್ಲಿ ಕಂಡು ಬಂದಿದೆ.

ಧಾರವಾಡದಲ್ಲಿ ಗರಿಷ್ಠ 101ಮಿ.ಮೀ ಮಳೆ!
ಗರಿಷ್ಠ ಬಿಸಿಲು ಕಾಣುತ್ತಿದ್ದ ಉತ್ತರ ಕರ್ನಾಟಕದ ಧಾರವಾಡದ ಜಿಲ್ಲೆ ವ್ಯಾಪ್ತಿಯಲ್ಲಿ ಮಂಗಳವಾರ ರಾಶಿ ರಾಶಿ ಆಲಿಕಲ್ಲು ಸಹಿತ ವ್ಯಾಪಕ ಮಳೆ ದಾಖಲಾಗಿದೆ. ಧಾರವಾಡ ವ್ಯಾಪ್ತಿಯೊಂದರಲ್ಲೇ ಬರೋಬ್ಬರಿ 101 ಮಿ.ಮೀ ಮಳೆ ಆಗಿದೆ. ಇನ್ನೂ ಮೂರು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಮಾಹಿತಿ ನೀಡಿದೆ.
ರಸ್ತೆ ಮೇಲೆ 1 ಅಡಿಗೂ ಹೆಚ್ಚು ಆಲಿಕಲ್ಲು ರಾಶಿ
ಧಾರವಾಡ ಜಿಲ್ಲೆಯ ಕಲಘಟಗಿಯ ಯತ್ತಿನಹಳ್ಳಿ ಹಾಗೂ ಸುತ್ತಮುತ್ತ ಭರ್ಜರಿ ಆಲಿಕಲ್ಲು ಮಳೆ ಆಗಿದೆ. ಮುಂಡಗೋಡ-ಕಲಘಟಗಿ ರಸ್ತೆಯಲ್ಲಿ ಬಸ್, ಕಾರು ಸೇರಿ ವಾಹನಗಳು ಸಂಚರಿಸಲು ಆಗದಷ್ಟು ರಾಶಿ ರಾಶಿ ಆಲಿಕಲ್ಲುಗಳು ಬಿದ್ದಿವೆ. ದಶಕಗಳಿಂದಲೂ ಇಷ್ಟೊಂದು ರಾಶಿ ಆಲಿಕಲ್ಲು ಮಳೆ ಕಂಡಿಲ್ಲ. ರಸ್ತೆ ಮೇಲೆ ಸುಮಾರು ಒಂದು ಅಡಿಗೂ ಹೆಚ್ಚು ಆಲಿಕಲ್ಲು ಬಿದ್ದಿವೆ. ಬಸ್, ಕಾರು ತೆರಳಲು ಆಗದಂತಹ ಸ್ಥಿತಿ ಇದೆ. ಉತ್ತರ ಕರ್ನಾಟಕದ ಈ ಭಾಗ ಅಕ್ಷರಶಃ ಕಾಶ್ಮಿರದಂತೆ ಕಾಣುವಷ್ಟರ ಮಟ್ಟಿಗೆ ಊರ ತುಂಬ ಆಲಿಕಲ್ಲುಗಳ ರಾಶಿ ಕಂಡು ಬಂದಿದೆ. ಬಿಳಿ ಹಿಮಪಾತದಂತೆ ಆಲಿಕಲ್ಲು ಮಳೆ ಆಗಿದೆ ಎಂದು ಸ್ಥಳೀಯರು ವಿಡಿಯೋ ಮಾಡಿದ್ದಾರೆ ಅಚ್ಚರಿ ವ್ಯಕ್ತಿಪಡಿಸಿದ್ದಾರೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮಂಗಳವಾರ ಸುರಿದ ಮಳೆ ಪ್ರಮಾಣ, ಪಟ್ಟಿ
ಧಾರವಾಡ - 101ಮಿ.ಮೀ
ಕಲಬುರಗಿ- 75.5ಮಿ.ಮೀ
ಚಿಕ್ಕಬಳ್ಳಾಪುರ - 65ಮಿ.ಮೀ
ಬೆಂಗಳೂರು ಗ್ರಾಮಾಂತರ - 59.5ಮಿ.ಮೀ
ಬೀದರ್ - 58.5ಮಿ.ಮೀ
ಬೆಳಗಾವಿ - 56.5ಮಿ.ಮೀ
ತುಮಕೂರು - 55.5ಮಿ.ಮೀ
ಬೆಂಗಳೂರು ದಕ್ಷಿಣ - 51.5ಮಿ.ಮೀ
ಬಳ್ಳಾರಿ - 44.6ಮಿ.ಮೀ
ಹಾವೇರಿ- 40ಮಿ.ಮೀ
ಹಾಸನ - 38.5ಮಿ.ಮೀ
ರಾಯಚೂರು - 38ಮಿ.ಮೀ
ಕೊಪ್ಪಳ - 24.5ಮಿ.ಮೀ
ಬೆಂಗಳೂರು ನಗರ - 24ಮಿ.ಮೀ
ಮೈಸೂರು - 21.8ಮಿ.ಮೀ
ಗದಗ- 21.6ಮಿ.ಮೀ
ಬಾಗಲಕೋಟೆ- 36.5ಮಿ.ಮೀ
ಚಾಮರಾಜನಗರ - 33.5ಮಿ.ಮೀ
ಮಂಡ್ಯ - 33.5ಮಿ.ಮೀ
ವಿಜಯಪುರ - 28ಮಿ.ಮೀ
ಚಿತ್ರದುರ್ಗ - 26.5ಮಿ.ಮೀ. ಮಳೆ ದಾಖಲಾಗಿದೆ.
ಮಾ. 24ರ ವರೆಗೂ ಮಳೆ, ಒಣಹವೆ ಮುನ್ಸೂಚನೆ
ಹವಾಮಾನ ತಜ್ಞ, ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರ ಪ್ರಕಾರ, ಮುಂದಿನ ಮಾರ್ಚ್ 24ರವರೆಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ರಾಜ್ಯಾದ್ಯಂತ ಒಣಹವೆ ಕಂಡು ಬರಲಿದ್ದು, ಅಲ್ಲಲ್ಲಿ ಗುಡುಗು- ಮಿಂಚು ಮತ್ತು ಆಲಿಕಲ್ಲು ಸಹಿತ, ಹಗುರ ಮಳೆ ಆಗಬಹುದು. ಇನ್ನೂ ಕೆಲವೆಡೆ ಜೋರು ಮಳೆಯಾಗುವ ಸಂಭವವಿದೆ. ಗರಿಷ್ಠ ತಾಪಮಾನದಲ್ಲಿ ಇಳಿಕೆ ಸಾಧ್ಯತೆ ಆಗಲಿದ್ದು, ತಂಪು ವಾತಾವರಣ ನಿರ್ಮಾಣವಾಗಲಿದೆ. ಕರಾವಳಿ ಹಾಗೂ ಬೆಂಗಳೂರು ಇನ್ನಿತರ ದಕ್ಷಿಣ ಒಳನಾಡು ಭಾಗಗಳಲ್ಲೂ ಮಳೆ ಎಚ್ಚರಿಕೆ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications