ಪ್ರೇಮ್ ಬರೆದ ಹಾಡು ಅಕ್ಷರ ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ: ಅರುಣ್ ಜೋಳದಕೂಡ್ಲಿಗಿ ಬರಹ
ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್' ಚಿತ್ರದ 'ಸೆರಗ ಸರ್ಸೆ' ಹಾಡು ಬಿಡುಗಡೆಯಾದಾಗಿನಿಂದಲೂ ದೊಡ್ಡ ಮಟ್ಟದ ವಿವಾದಕ್ಕೆ ಗುರಿಯಾಗಿದೆ. 'ಸೆರಗ ಸರ್ಸೆ' ಎಂಬ ಪದಪ್ರಯೋಗವು ಅಶ್ಲೀಲತೆಯಿಂದ ಕೂಡಿದೆ ಮತ್ತು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತದೆ ಎಂಬ ಆರೋಪ ಕೇಳಿಬಂತು. "ಸೆರಗು ಸರಿಸು" ಎಂಬರ್ಥ ಬರುವ ಈ ಸಾಲುಗಳು ಸಭ್ಯ ಸಮಾಜಕ್ಕೆ ಒಪ್ಪುವಂತಿಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವಾಗಿ ಲೇಖಕ ಅರುಣ್ ಜೋಳದಕೂಡ್ಲಿಗಿ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. "ಪ್ರೇಮ್ ಬರೆದಿರೋ ಸರ್ಸೆ ಸರ್ಸೆ ಸಾಂಗ್ ಇರೋ ಬರೋ ಲಿಮಿಟ್ಸ್ ಕ್ರಾಸ್ ಮಾಡಿ 'ಅಕ್ಷರ' ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರ ಬರಹ ಇಲ್ಲಿದೆ.
'ಐಟಮ್ ಸಾಂಗಲ್ಲಿ ಹೆಣ್ಣೇ ಐಟಮ್ಮು...'
'ದೃಶ್ಯದಲ್ಲಿ ಬರಹದಲ್ಲಿ ಸೆಕ್ಸು ಕ್ರೈಮ್ ಅನ್ನು ಮಾರುಕಟ್ಟೆ ಮಾಡಬಹುದು ಅಂತ ಬಹಳ ಹಿಂದೆಯೇ ಅನೇಕರು ಕನ್ನಡದಲ್ಲಿ ತೋರಿಸಿದ್ದಾರೆ. ಬ್ಲಾಕ್ ಟ್ಯಾಬ್ಲೆಡ್ ಪೇಪರ್ ಇದನ್ನು ದೊಡ್ಡಮಟ್ಟದಲ್ಲಿ ಮುನ್ನಲೆಗೆ ತಂದಿತು. ಕನ್ನಡ ಜನಪ್ರಿಯ ಸಿನೆಮಾಕ್ಕೆ 'ಹೆಣ್ಣು' ಗಂಡು ಚಪ್ಪರಿಸುವ ಉಪ್ಪಿನಕಾಯಿಯಂತಲೇ ಭಾವಿಸಿದೆ. ಐಟಮ್ ಸಾಂಗ್ ನಲ್ಲಿ ಹೆಣ್ಣೇ ಐಟಮ್ಮು. ಹೆಣ್ಣನ್ನು ಎಣ್ಣೆಯನ್ನು ನಶೆಯ ಜತೆ ಬೆರೆಸಿಯೇ ನೋಡುವುದನ್ನು ಸಿನೆಮಾ ನೋಡುಗರಿಗೆ ಅಭ್ಯಾಸ ಮಾಡಿಸಿದೆ. ಬಹುಪಾಲು ನೋಡುಗ ವರ್ಗ ಇದನ್ನು ನಿರೀಕ್ಷಿಸುತ್ತದೆ. ಹಿಂದೆ ಹೆಣ್ಣನ್ನು ಗಂಡಿನ ಅಧೀನ ಎಂದು ಕೀಳಾಗಿ ನೋಡುವ ಬಹಳ ಐಟಮ್ ಸಾಂಗ್ ಗಳು ಹಿಟ್ಟಾಗಿವೆ'.

'ಡಬಲ್ ಮೀನಿಂಗ್ ನಲ್ಲಿ ಹತ್ತಾರು ಲೈಂಗಿಕ ಉಪಮೆ ರೂಪಕ ಬಳಸಿ ಗೆದ್ದಿದ್ದಾರೆ. ಗಂಡಸರು ಗೆಲ್ಲಿಸಿದ್ದಾರೆ. ಈಚೆಗೆ ಯೋಗರಾಜ ಭಟ್ಟರು ಉತ್ತರ ಕರ್ನಾಟಕದ ಜನಪದ ಎಂದು ಪಾಪುಲರ್ ಸಾಂಗ್ ಬಳಸಿ 'ಹಿತ್ತಲಕ್ಕೆ ಕರಿಬೇಡ ಮಾವ..' ತರಹದ ಹಾಡನ್ನು ಹಾಡಿಸಿದ್ದರು. ಇಂತಹ ಗಂಡಹಮಿಕೆಯ ಅಭಿರುಚಿಯನ್ನು ಪ್ರೇಮ್ ತುಟ್ಟತುದಿಗೆ ಒಯ್ದಿದ್ದಾರೆ. ಪ್ರೇಮ್ ಬರೆದಿರೋ ಸರ್ಸೆ ಸರ್ಸೆ ಸಾಂಗ್ ಇರೋ ಬರೋ ಲಿಮಿಟ್ಸ್ ಕ್ರಾಸ್ ಮಾಡಿ 'ಅಕ್ಷರ' ರೂಪದ ಬೆತ್ತಲೆ ಸಿನೆಮಾ ತೋರಿಸಿದಂತಿದೆ. ಇದು ಐಟಮ್ ಸಾಂಗಿನ Extreem ಎಂಡ್ ಅನ್ನಿಸುತ್ತೆ. ಬಹುಶಃ ಹುಚ್ಚೆದ್ದು ಉಪ್ಪಿನ ಕಾಯಿ ತರ ಬಾಯ್ ಚಪ್ಪರಿಸಿ ಕೇಳ್ತಾರೆ ಅಂತಾನೆ ಪ್ರೇಮ್ ಭಾವಿಸಿರಬೇಕು. ತೀರಾ ಈಚೆಗೆ ಯಶ್ ಅಭಿನಯದ Toxic ಸಿನೆಮಾದ ಟೀಜರ್ ಕೂಡ ಪ್ರೇಮ್ ಬರೆದ ಹಾಡಿನ ದೃಶ್ಯರೂಪದಂತಿದೆ. ಇದೂ ಕೂಡ ಪ್ರೇಮ್ ಅವರನ್ನು ಪ್ರಭಾವಿಸಿರಬೇಕು'.
'ಎಲ್ಲಾ ಕಾಲವೂ ಒಂದೇ ತರ ಇರಲ್ಲ. ಹೆಣ್ಣು ಎಚ್ಚೆತ್ತ ಕಾಲವಿದು. ತನ್ನನ್ನು ಸರಕು ಮಾಡಿಕೊಂಡದ್ದನ್ನು ಗಟ್ಟಿಯಾಗಿ ವಿರೋಧಿಸುವ ಕಾಲವಿದು. ಬಹುಶಃ ಈ ಹಾಡಿಗೆ ಹೆಣ್ಣು ಮಕ್ಕಳಿಂದಲೇ ಹೆಚ್ಚು ಪ್ರತಿರೋದ ಬಂದದ್ದು. ಗಂಡಸರು ಇದನ್ನು ವಿರೋಧಿಸಿ ಬರೆದರಾದರೂ ಅವರೊಳಗಿನ 'ಗಂಡು' ಮೇಲರಿಮೆ ಈ ಹಾಡನ್ನು ಎರಡೆರಡು ಬಾರಿ ಕೇಳಿಸಿಕೊಂಡು ಇಮೇಜನ್ನು ಕಲ್ಪಿಸಿಕೊಂಡಿರಲಿಕ್ಕೆ ಸಾಕು. ಈ ಹಾಡು ಗಂಡಿನೊಳಗಿನ ಗಂಡಹಮಿಕೆಯ ತಲೆ ಸವರುತ್ತೆ. ಗಂಡಿನೊಳಗಿನ ಗಂಡಹಮಿಕೆಯನ್ನು ಸಂತೃಪ್ತಿಗೊಳಿಸಲೆಂದೇ ಕೋಟ್ಯಾಂತರ ರೂಪಾಯಿ ವ್ಯವಹಾರ ಕುದುರಿಸುವ ದೊಡ್ಡ ಮಾರುಕಟ್ಟೆ ಇದೆ. ಇಂತಹ ಮಾರುಕಟ್ಟೆಯನ್ನು ತಿರುಮುರುಗು ಮಾಡದ ಹೊರತು ಹೀಗೆ ಹೆಣ್ಣನ್ನು ಸರಕಾಗಿ ಮಾರುವುದು ನಿಲ್ಲುವುದಿಲ್ಲ'.
'ನನ್ನ ಪ್ರಕಾರ ಈ ಹಾಡು ಸಾಂಕೇತಿಕ ಅಷ್ಟೇ. ಸಿನೆಮಾದ ಪ್ರತಿಯೊಂದು ವಿಭಾಗವೂ ಪುರುಷಪಾರಮ್ಯದಿಂದಲೇ Construct ಆಗಿದೆ. ಹಾಗಾಗಿ ಈ ಹಾಡಿನ ಜತೆ ಕನ್ನಡ ಸಿನೆಮಾದ ಗಂಡಾಳ್ವಿಕೆಯ ಎಲ್ಲಾ ಗುರುತುಗಳನ್ನೂ ನಿಧಾನಕ್ಕಾದರೂ ವಿರೋಧಿಸಬೇಕಿದೆ. ಇಂತಹ ವಿರೋಧದ ಜತೆಗೆ ಗಂಡುಗಳು ತಮ್ಮೊಳಗಿನ ಗಂಡಹಮಿಕೆಯನ್ನು ಚೂರು ಚೂರೇ ಕಡಿಮೆ ಮಾಡಿಕೊಂಡರೆ ಒಳ್ಳೆಯದು. ಇದು ಎಂತಹ ಕೆಟ್ಟ ಕಾಲ ಎಂದರೆ ಈ ವಿವಾದ ಕೂಡ ಸಿನೆಮಾಕ್ಕೆ ದೊಡ್ಡ ಪಬ್ಲಿಸಿಟಿ ತಂದುಕೊಡ್ತು ಅಂತ ಪಾರ್ಟಿ ಮಾಡಿ ಎಂಜಾಯ್ ಮಾಡೋ ತರಹದ್ದು..' ಎಂದು ಬರೆದುಕೊಂಡಿದ್ದಾರೆ.












Click it and Unblock the Notifications