ಶಿವಮೊಗ್ಗದ ತ್ಯಾವರೆಕೊಪ್ಪದಲ್ಲಿ ನೀರಾನೆ ದಾಳಿಗೆ ಪಶುವೈದ್ಯಾಧಿಕಾರಿ ಬಲಿ
ಶಿವಮೊಗ್ಗ, ಮಾರ್ಚ್ 20: ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ತರಬೇತಿ ಪಡೆಯುತ್ತಿದ್ದ 27 ವರ್ಷದ ಪಶುವೈದ್ಯಾಧಿಕಾರಿಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬೆಂಗಳೂರು ಮೂಲದ ಡಾ.ಸಮೀಕ್ಷಾ ರೆಡ್ಡಿ ಅವರು ಇತ್ತೀಚೆಗಷ್ಟೇ ಈ ಸಫಾರಿಯಲ್ಲಿ ತರಬೇತಿ ಪಶುವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದರು. ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಎರಡು ಪಕ್ಷಿಗಳ ಆರೋಗ್ಯದ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು.

ನೀರಾನೆ ದಾಳಿಯಿಂದ ಪಶುವೈದ್ಯಾಧಿಕಾರಿ ಸಾವು
ಈ ಹಿನ್ನೆಲೆಯಲ್ಲಿ ಅವರು ಗುರುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಸಫಾರಿಯ ಪಶುವೈದ್ಯಕೀಯ ಆಸ್ಪತ್ರೆಯಲ್ಲಿದ್ದು, ಗರ್ಭಿಣಿಯಾಗಿದ್ದ ನೀರಾನೆಯ ದೇಹದ ಉಷ್ಣಾಂಶವನ್ನು ಪರೀಕ್ಷಿಸಲು ನಿರ್ಧರಿಸಿದರು. ಅವರು 'ನಾನ್-ಇನ್ವೇಸಿವ್ ಇನ್ಫ್ರಾರೆಡ್ ಥರ್ಮೋಗ್ರಫಿ' (non-invasive infrared thermography) ತಂತ್ರಜ್ಞಾನವನ್ನು ಬಳಸಿಕೊಂಡು ನೀರಾನೆಯ ಉಷ್ಣತೆಯನ್ನು ಪರೀಕ್ಷಿಸುತ್ತಿದ್ದಾಗ, ಆ ಪ್ರಾಣಿಯು ಅವರ ಮೇಲೆ ದಿಢೀರ್ ದಾಳಿ ಮಾಡಿದೆ.
ಸಫಾರಿಯ ಸಿಬ್ಬಂದಿ ಕೂಡಲೇ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಧಿಕೃತ ಮೂಲಗಳ ಪ್ರಕಾರ, ನೀರಾನೆ ದಾಳಿಯಿಂದಾಗಿ ಅವರ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದವು, ಅತಿಯಾದ ರಕ್ತಸ್ರಾವವಾಗಿತ್ತು ಮತ್ತು ಅವರ ಯಕೃತ್ತು (Liver) ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಈ ಗಂಭೀರ ಗಾಯಗಳಿಂದಾಗಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು (ಮಾರ್ಚ್ 20) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ
ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಮಲೆನಾಡಿನ ರೈತರು ಕಂಗಾಲಾಗಿದ್ದಾರೆ. ತಡರಾತ್ರಿ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಆನೆಗಳು, ರೈತರು ಕಷ್ಟಪಟ್ಟು ಬೆಳೆಸಿದ ಅಡಿಕೆ, ತೆಂಗು ಮತ್ತು ಬಾಳೆ ತೋಟಗಳನ್ನು ಧ್ವಂಸ ಮಾಡುತ್ತಿವೆ. ಆನೆಗಳ ಓಡಾಟದಿಂದಾಗಿ ತೋಟಗಳಿಗೆ ತೆರಳಲು ಕೃಷಿ ಕಾರ್ಮಿಕರು ಮತ್ತು ರೈತರು ಭಯಪಡುತ್ತಿದ್ದಾರೆ. ಮುಂಜಾನೆ ಮತ್ತು ಸಂಜೆ ವೇಳೆ ಒಂಟಿ ಸಲಗಗಳು ರಸ್ತೆಗಳಲ್ಲೇ ಪ್ರತ್ಯಕ್ಷವಾಗುತ್ತಿರುವುದರಿಂದ ವಾಹನ ಸವಾರರು ಜೀವವನ್ನು ಕೈಯಲ್ಲಿಡಿದು ಓಡಾಡುವಂತಾಗಿದೆ.












Click it and Unblock the Notifications