ಗಲ್ಲಿ ಕ್ರಿಕೆಟ್‌ನಲ್ಲಿ 15 ಬಾಲ್‌ಗೆ 40 ರನ್ ಚೇಸ್ ಮಾಡಿದ ಆರ್‌ಸಿಬಿ ಜಿತೇಶ್ ಶರ್ಮಾ: ಎಸ್‌ಆರ್‌ಎಚ್‌ಗೆ ಶುರುವಾಯ್ತು ನಡುಕ
RCB Jitesh Sharma: ಐಪಿಎಲ್ 19ನೇ ಸೀಸನ್ ಮಾರ್ಚ್ 28ರಿಂದ ಆರಂಭ ಆಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಆಟಗಾರ ಗಲ್ಲಿ ಕ್ರಿಕೆಟ್ ಆಡಿ ಕೇವಲ 15 ಎಸೆತಗಳಲ್ಲಿ 40 ರನ್ ಸಿಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಐಪಿಎಲ್ 2026ರ ಸೀಸನ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ತಮ್ಮ ಅಬ್ಬರದ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಐಪಿಎಲ್ ಆರಂಭಕ್ಕೆ ಮೊದಲು ನಡೆದ ಈ 'ಗಲ್ಲಿ ಕ್ರಿಕೆಟ್' ಹಣಾಹಣಿಯಲ್ಲಿ ಮಿಂಚಿದ್ದಾರೆ.

ಗಲ್ಲಿ ಕ್ರಿಕೆಟ್‌ನಲ್ಲಿ ಮಿಂಚಿದ ಜಿತೇಶ್ ಶರ್ಮಾ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಜಿತೇಶ್ ಅವರಿಗೆ 15 ಎಸೆತಗಳಲ್ಲಿ 40 ರನ್ ಚೇಸ್ ಮಾಡುವ ಕಠಿಣ ಸವಾಲು ನೀಡಲಾಗಿತ್ತು. 2025ರ ಐಪಿಎಲ್‌ನಲ್ಲಿ 176.35 ಸ್ಟ್ರೈಕ್ ರೇಟ್ ಹೊಂದಿದ್ದ ಈ ಪವರ್-ಹಿಟ್ಟರ್, ಗಲ್ಲಿ ಕ್ರಿಕೆಟ್‌ನಲ್ಲೂ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈಯುವ ಮೂಲಕ ಗುರಿಯನ್ನು ಅತ್ಯಂತ ಸುಲಭವಾಗಿ ತಲುಪಿದ್ದಾರೆ.
ಜಿತೇಶ್ ತಮ್ಮ ಮೊದಲ 6 ಎಸೆತಗಳಲ್ಲೇ 3 ಬೃಹತ್ ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸುವ ಮೂಲಕ ಮಿಂಚಿದರು. 32 ವರ್ಷದ ಈ ಬ್ಯಾಟರ್ ನಂತರದ ಕೆಲವು ಎಸೆತಗಳನ್ನು ಮಿಸ್ ಮಾಡಿಕೊಂಡರೂ, ಮತ್ತೆರಡು ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಅಂತಿಮ 3 ಎಸೆತಗಳಲ್ಲಿ ಕೇವಲ 2 ರನ್ ಬೇಕಿರುವಂತೆ ಮಾಡಿದರು. ಕೊನೆಯ ಎಸೆತದವರೆಗೂ ಆಡಿದ ಜಿತೇಶ್, ಅಂತಿಮ ಎಸೆತದಲ್ಲಿ ಒಂದು ಸಿಕ್ಸ್ ಬಾರಿಸಿ ಈ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ವಿಡಿಯೋವನ್ನು \
gullycricket_in and jiteshsharma ಎಂಬ ಹಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
2025ರ ಐಪಿಎಲ್‌ನಲ್ಲಿ ಆರ್‌ಸಿಬಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಜಿತೇಶ್ ಶರ್ಮಾ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಕೂಡ ಪ್ರಮುಖ ಕಾರಣವಾಯಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಅವರು ಆಡಿದ ಆಟ ಈವರೆಗೂ ಅಭಿಮಾನಿಗಳ ಮನದಲ್ಲಿ ಅಚ್ಚೊತ್ತಿದೆ. ಆ ಪಂದ್ಯದಲ್ಲಿ ಕೇವಲ 33 ಎಸೆತಗಳಲ್ಲಿ ಅಜೇಯ 85 ರನ್ ಚಚ್ಚುವ ಮೂಲಕ 228 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ತಂಡಕ್ಕೆ ನೆರವಾದರು. ಜಿತೇಶ್ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗೆದ್ದ ಆರ್‌ಸಿಬಿ, ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿತ್ತು.
ವಿಶ್ವಕಪ್ ತಂಡದಿಂದ ಹೊರಗುಳಿದಿದ್ದ ಜಿತೇಶ್
2026ರ ಟಿ20 ವಿಶ್ವಕಪ್‌ನಲ್ಲಿ ವಿಜಯಶಾಲಿಯಾದ ಭಾರತ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಜಿತೇಶ್ ಶರ್ಮಾ ವಿಫಲರಾದರು. ವಿಶ್ವಕಪ್‌ಗೆ ಮುನ್ನ ನಡೆದ ಸರಣಿಗಳಲ್ಲಿ ಅವರು ತಂಡದ ಭಾಗವಾಗಿದ್ದರೂ, ಅಂತಿಮ 15 ಸದಸ್ಯರ ಪಟ್ಟಿಯಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ. ಸಿಸಿಐ ಆಯ್ಕೆ ಸಮಿತಿಯು ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಇಬ್ಬರು ವಿಕೆಟ್ ಕೀಪರ್ ಬ್ಯಾಟರ್‌ಗಳನ್ನು ಆಯ್ಕೆ ಮಾಡಲು ನಿರ್ಧರಿಸಿತು. ಕೆಳ ಕ್ರಮಾಂಕದ ಫಿನಿಶರ್ ಆಗಿದ್ದ ಜಿತೇಶ್ ಬದಲಿಗೆ, ಆರಂಭಿಕ ಅಥವಾ ಮಧ್ಯಮ ಕ್ರಮಾಂಕದ ಆಟಗಾರರಿಗೆ ಆದ್ಯತೆ ನೀಡಿದ್ದರಿಂದ ಜಿತೇಶ್‌ಗೆ ವಿಶ್ವಕಪ್ ಆಡುವ ಅವಕಾಶ ಕೈತಪ್ಪಿತು.
ಆರ್‌ಸಿಬಿಯಲ್ಲಿದೆ ಉತ್ತಮ ಫಿನಿಶರ್‌ಗಳ ದಂಡು
ಐಪಿಎಲ್ 2026ರ ಸೀಸನ್ ಹತ್ತಿರವಾಗುತ್ತಿದ್ದಂತೆ, ಆರ್‌ಸಿಬಿ ಅಭಿಮಾನಿಗಳು ಮತ್ತೊಮ್ಮೆ ಜಿತೇಶ್ ಶರ್ಮಾ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಬಾರಿಯೂ ಉತ್ತಮ ಫಿನಿಶರ್‌ಗಳನ್ನು ಆರ್‌ಸಿಬಿ ಹಂದಿದೆ. ಕಳೆದ ಸೀಸನ್‌ನ ಹೀರೊ ಆಗಿರುವ ಜಿತೇಶ್, ಈ ಬಾರಿಯೂ ಅದ್ಭುತ ಬ್ಯಾಟಿಂಗ್ ಮಾಡುವ ನಿರೀಕ್ಷೆ ಹುಟ್ಟುಹಾಕಿದ್ದಾರೆ.
ಟಿಮ್ ಡೇವಿಡ್ ಅವರು ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿರುವ ಇವರು ತಂಡಕ್ಕೆ ದೊಡ್ಡ ಶಕ್ತಿ. ಮತ್ತೊಂದೆಡೆ, ರೊಮಾರಿಯೋ ಶೆಫರ್ಡ್ ಕೂಡ ಕೊನೆಯ ಓವರ್‌ಗಳಲ್ಲಿ ಸಿಕ್ಸರ್‌ಗಳ ಮಳೆ ಸುರಿಸುವ ಸಾಮರ್ಥ್ಯ ಹೊಂದಿರುವ ಆಲ್‌ರೌಂಡರ್ ಆಗಿದ್ದಾರೆ. ಈ ಮೂವರ ಕಾಂಬಿನೇಷನ್ ಐಪಿಎಲ್ 2026ರಲ್ಲೂ ಅತ್ಯಂತ ಅಪಾಯಕಾರಿ ಮತ್ತು ಅತ್ಯುತ್ತಮ ಫಿನಿಶರ್‌ಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪಂದ್ಯದ ಕೊನೆಯ ಹಂತದಲ್ಲಿ ಎದುರಾಳಿ ಬೌಲರ್‌ಗಳ ಬೆವರಿಳಿಸಲು ಈ ತ್ರಿಮೂರ್ತಿಗಳು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications