ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಕೆಂಪೇಗೌಡರ ಕನ್ನಡೋತ್ಸವದಲ್ಲಿ 'ಅಂಬಿ ನಮನ'

By ಕೆಂಪೇಗೌಡ ಉತ್ಸವ ವರದಿ ತಂಡ
|
Google Oneindia Kannada News

ಬೆಳಿಗ್ಗೆ 10 ಗಂಟೆಗೆ ಶುರುವಾದ ಸಂಭ್ರಮ ನಿರಂತರ ಸಾಗುತ್ತಲೇ ಇತ್ತು. ಸುಮಧುರ ಹಾಡು, ಮನಮೋಹಕ ನೃತ್ಯಗಳ ಜೊತೆಯಲ್ಲಿ ಕರ್ನಾಟಕದ ಶ್ರೀಮಂತ ವಿವಿಧ ಕಲೆಗಳ ಅನಾವರಣಗೊಳ್ಳುತ್ತಿದ್ದ ಪರಿ, ಪರಮ ಪೂಜ್ಯರ ಹಿತನುಡಿಗಳು, ನೆರೆದ ಪ್ರೇಕ್ಷರಿಗೆಲ್ಲ ಒಂದು ಸುಂದರ ನಾಡಿನ ಸೃಷ್ಟಿಯಾಗಿ ಎಲ್ಲರೂ ತಾವು ಕನ್ನಡದ ನೆಲೆಯಲ್ಲಿರುವಂತೆ ಭಾಸವಾಗುತಿತ್ತು.

ಸಿಂಗಪುರದಲ್ಲಿ ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವಸಿಂಗಪುರದಲ್ಲಿ ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ

ಮಧ್ಯಾಹ್ನದ ಭೂರಿಭೋಜನದ ನಂತರ ಎಲ್ಲರೂ ಸಭಾಂಗಣದ ಕಡೆ ಬಂದು ಮತ್ತೆ ಕಾರ್ಯಕ್ರಮಗಳನ್ನು ರಂಜಿಸಲು ಸಜ್ಜಾದರೆ, ಹೆಂಗಳೆಯರು ಯಥಾರೀತಿ ತಮ್ಮ ಉಡುಗೆ ತೊಡುಗೆಗಳ ಸಂಭ್ರಮದ ನೆಲೆಯಲ್ಲಿ ಮಾತು, ಹರಟೆಯ ಕಾರ್ಯಕ್ರಮವನ್ನು ದಣಿವಿಲ್ಲದೆ ಸಾಗಿಸುತ್ತಿದ್ದರು. ಕರ್ನಾಟಕದಿಂದ ಬಂದಂತಹ ಅತಿಥಿ ಬಾಂಧವರ ಉತ್ಸಾಹ ಮರೆಯಲಸಾಧ್ಯ!

2nd International Kempegowda Kannadotsava : Ambareesh Namana

ಮಧ್ಯಾಹ್ನದ ಕಾರ್ಯಕ್ರಮ "ಕನ್ನಡೋತ್ಸವ" ನಾಡಪ್ರಭು ಕೆಂಪೇಗೌಡರ ಸಾಹಸಗಾಥೆಯನ್ನು ಪ್ರತಿಬಿಂಬಿಸುವ ನೃತ್ಯರೂಪಕದೊಂದಿಗೆ ಆರಂಭಗೊಂಡಿದ್ದು ನಿಜಕ್ಕೂ ಕನ್ನಡದ ಉತ್ಸವವೆಂದೇ ಹೇಳಬಹುದು. ಚಿಕ್ಕಮಗಳೂರಿನ ಜ್ಯೋತಿ ಪ್ರಕಾಶ್ ಮತ್ತು ಅವರ ಕಲಾವಿದರ ಗುಂಪು ಕೆಂಪೇಗೌಡನ ಜೀವನವನ್ನು ಆಧರಿಸಿದ ನೃತ್ಯ ರೂಪಕವನ್ನು ಪ್ರಸ್ತುತಗೊಳಿಸಿತು. ಕೆಂಪೇಗೌಡನ ಧೀಮಂತ ವ್ಯಕ್ತಿತ್ವ ರೂಪುಗೊಂಡ ಬಗೆಯನ್ನು ಹಂತ ಹಂತವಾಗಿ ವಿವರಿಸಿದ ಈ ರೂಪಕ, ಹೇಗೆ ಕೆಂಪೇಗೌಡ ಬೆಂಗಳೂರು ನಗರದ ನಿರ್ಮಾಣವನ್ನು ಮಾಡಲು ಮಾಡಿದ ಭಗೀರಥ ಪ್ರಯತ್ನ, ಅದಕ್ಕಾಗಿ ಅವನು ಮಾಡಿದ ತ್ಯಾಗ ಮತ್ತು ಅವನ ದೂರದೃಷ್ಟಿಯನ್ನು ಪದರು ಪದರಾಗಿ ಬಿಚ್ಚಿಟ್ಟಿತು. ಕಥಾ ನಿರೂಪಣೆ, ನೃತ್ಯ, ಸಂಗೀತ ಮತ್ತು ಹಿನ್ನೆಲೆ ಪರದೆಯ ಮೇಲೆ ಮೂಡಿ ಬಂದ ಸಮಯೋಚಿತ ಛಾಯಾಚಿತ್ರಗಳು ಈ ನೃತ್ಯರೂಪಕವನ್ನು ಮತ್ತಷ್ಟು ಶ್ರೀಮಂತಗೊಳಿಸಿದವು.

ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ 'ಕನ್ನಡೋತ್ಸವ' ನಾಡಪ್ರಭು ಕೆಂಪೇಗೌಡರ 2ನೇ ಅಂತಾರಾಷ್ಟ್ರೀಯ ಉತ್ಸವ 'ಕನ್ನಡೋತ್ಸವ'

ಕನ್ನಡ ಸಂಘ (ಸಿಂಗಪುರ)ದಿಂದ ಪ್ರಸ್ತುತಗೊಂಡ ಎರಡು ಅದ್ಭುತವಾದಂತಹ ಕಾರ್ಯಕ್ರಮಗಳೆಂದರೆ, ಮುಖಾಭಿನಯದ "ಮೌನಸಂದೇಶ" ಹಾಗು ಸಿಂಗಪುರದ ಕನ್ನಡ ಮಕ್ಕಳು ಪಾಲ್ಗೊಂಡು ಪ್ರದರ್ಶಿಸಿದ ನಾಟಕ "ಮೂರ್ಖರ ರಾಜ್ಯ". ಮೌನ ಸಂದೇಶದ ತಂಡ ಸುಮಾರು ಐದು ವರ್ಷಗಳಿಂದ ಕನ್ನಡ ಸಂಘ(ಸಿಂಗಪುರ)ದಲ್ಲಿ ನಿರಂತರವಾಗಿ ತಮ್ಮ ಅದ್ಭುತವಾದಂತಹ ಮುಖಾಭಿನಯದ ಮೂಲಕ "ಮೌನ"ವಾಗಿ ಮೌಲ್ಯಾಧಾರಿತ ಸಂದೇಶಗಳನ್ನು ಸಮಾಜದ ಒಳಿತಿಗಾಗಿ ನೀಡುತ್ತಾ ಸಭಿಕರನ್ನು ಮನರಂಜಿಸುತ್ತಾ ಬರುತ್ತಿರುವ ತಂಡ. ಈ ತಂಡದ ರೂವಾರಿ ಪವನ್ ಜೋಷಿ ಪ್ರತಿಸಲವೂ ವೈವಿಧ್ಯಮಯ ಹಾಗೂ ಮನಸ್ಸಿಗೆ ನಾಟುವಂತಹ ಪರಿಕಲ್ಪನೆಗಳನ್ನು ಸೃಷ್ಟಿಸಿ ತಾವೇ ನಿರ್ದೇಶಿಸಿ ಅಭಿನಯಿಸುತ್ತಾರೆ. ಇವರ ಜೊತೆಯಲ್ಲಿ ಅಭಿನಯಿಸಿದವರು ರೂಪಾ, ವಿದ್ಯಾ, ರವಿ, ವಿನಯ್, ರಾಘವೇಂದ್ರ, ರಾಕೇಶ್ ಹಾಗೂ ನವೀನ್. "ನೀರಿದ್ದರೆ ನಾಳೆ" ಎಂಬ ಸಂದೇಶವನ್ನು ಸಾರುವ ಇವರ ಅಭಿನಯವನ್ನು ನೋಡಿ ಸಭಕರೆಲ್ಲಾ ಮೂಕವಿಸ್ಮಿತರಾದರು. ಕಾರ್ಯಕ್ರಮದ ಕೊನೆಯಲ್ಲಿ ನಿರೂಪಕರಾದ ಅರುಣ್ ಸಾಗರ್ ಅವರು ಎಲ್ಲಾ ಸಭಿಕರಲ್ಲಿ ನೀರನ್ನು ವೃಥಾ ವೆಚ್ಚ ಮಾಡದೆ, ಎಲ್ಲಾ ಬಾಟಲ್‌ಗಳನ್ನು ಉಪಯೋಗಿಸಿ ಎಂಬ ಸಮಯೋಚಿತ ವಿನಂತಿಯನ್ನು ಮಾಡಿಕೊಂಡಿದ್ದು ಮೌನಸಂದೇಶದ ತಂಡಕ್ಕೆ ಸಾರ್ಥಕ ಭಾವನೆಯನ್ನು ತಂದುಕೊಟ್ಟಿತೆಂಬುವುದರಲ್ಲಿ ಸಂದೇಹವಿಲ್ಲ.

2nd International Kempegowda Kannadotsava : Ambareesh Namana

ಇದರ ನಂತರ ಚೈತ್ರಾ ಹೊನ್ನವರ್ ಹಾಗು ದರ್ಶನ್ ಅವರು ಸುಂದರ ಗಾಯನವನ್ನು ಪ್ರಸ್ತುತ ಪಡಿಸಿದರು. ಹಾಡಿನ ನಂತರ ಇದಕ್ಕಿದ್ದಂತೆ ಸಭಾಂಗಣ ಸಜ್ಜುಗೊಳ್ಳುತ್ತಿದ್ದನ್ನು ನೋಡಿ ಎಲ್ಲರಿಗೂ ಕುತೂಹಲ. ಚಿತ್ರಕಲೆಯ ಹಲಗೆ ಜೊತೆಗೆ ದರ್ಶನ್ ಅವರು ಹಾಡಲು ಶುರು ಮಾಡಿದ ತಕ್ಷಣ ಮರಳು ಮಣ್ಣಿನ ಕಲೆಯ ಕಲಾವಿದ (ಸ್ಯಾಂಡ್ ಆರ್ಟಿಸ್ಟ್) ಪರಮೇಶ್ ಗುಬ್ಬಿ ತಮ್ಮ ಕೈಚಳಕವನ್ನು ಕಲೆಯ ಹಲಗೆಯ ಮೇಲೆ ಬಿತ್ತರಿಸುತ್ತಾ ಹೋದರು. ಒಂದೆಡೆ ಹಾಡು ಇನ್ನೊಂದೆಡೆ ಚಿತ್ರಕಲೆ. ಚಿತ್ರಕಲೆಯಲ್ಲಿ ಮೂಡುತ್ತಿರುವ ರೂಪಮಾತ್ರ ನಿಗೂಢ. ಹಾಡು ಮುಗಿದ ನಂತರ ಎಲ್ಲರೂ ಏನೆಂದು ವೀಕ್ಷಿಸುತ್ತಿದ್ದರೆ, ಪರಮೇಶ್ ಅವರು ಮಣ್ಣನ್ನು ಆ ಬಿಳಿ ಹಲಗೆಯ ಮೇಲೆ ಮೆಲ್ಲನೆ ಹರಡುತ್ತಾ ಹೋದಂತೆಲ್ಲಾ ರೋಮಾಂಚನಗೊಳ್ಳುವ ಪರಿ ಇಡೀ ಸಭಾಂಗಣದಾಗಿತ್ತು. ನಾಡಪ್ರಭು ಕೆಂಪೇಗೌಡರ ಸುಂದರ ಆಕೃತಿ ಅಲ್ಲಿ ಅನಾವರಣಗೊಂಡಿತ್ತು.

ಸಿಂಗಪುರದಲ್ಲಿ ನಾದತರಂಗಗಳು ಸೃಷ್ಟಿಸಿದ ಅನಂತ ಲೋಕ ಸಿಂಗಪುರದಲ್ಲಿ ನಾದತರಂಗಗಳು ಸೃಷ್ಟಿಸಿದ ಅನಂತ ಲೋಕ

ವಿಶೇಷವೆಂದರೆ ಅವರು ಹರಡಿದ ಆ ಮಣ್ಣನ್ನು ಅವರು ಕೆಂಪೇಗೌಡರ ತವರಿನ ನೆಲದಿಂದ ಈ ಕಾರ್ಯಕ್ರಮಕ್ಕಾಗಿ ತಂದಿದ್ದು ಎಂದು ತಿಳಿಸಿದಾಗ ಎಲ್ಲರೂ ಚಪ್ಪಾಳೆ ತಟ್ಟಿ ಪ್ರಶಂಸಿದರು. ಆ ಸುಂದರ ಕಲೆಯನ್ನು ಕನ್ನಡ ಸಂಘ (ಸಿಂಗಪುರ)ಕ್ಕೆ ಉಡುಗೊರೆಯಾಗಿ ಸಂಘದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರಿಗೆ ನೀಡಲಾಯಿತು. ಇದೊಂದು ಅವಿಸ್ಮರಣೀಯವಾದ ಘಳಿಗೆಯನ್ನು ಸೃಷ್ಟಿಸಿತು ಎಂದರೆ ಅತಿಶಯೋಕ್ತಿಯಾಗಲಾರದು. ಇದೇ ಸಂದರ್ಭದಲ್ಲಿ ಹಿಂದೂಸ್ತಾನಿ ಶೈಲಿಯಲ್ಲಿ ಭಾವಗೀತೆ ಹಾಗೂ ದಾಸವಾಣಿಯನ್ನು ಪಂಡಿತ್ ಎಲ್.ಆರ್. ವಿಜಯರಂಗ ಹಾಗು ಅವರ ತಂಡ ಹಾಗೂ ಆರಾಧನಾ ಡ್ಯಾನ್ಸ್ ಶಾಲೆಯಿಂದ ಪ್ರಸ್ತುತಗೊಂಡ ಗಾಯನವನ್ನು ಪ್ರೇಕ್ಷಕರ ಮನಸೂರೆಗೊಳ್ಳುವಂತೆ ನಡೆಸಿಕೊಟ್ಟರು.

2nd International Kempegowda Kannadotsava : Ambareesh Namana

ಕನ್ನಡ ಸಂಘ(ಸಿಂಗಪುರ) ಪ್ರಸ್ತುತಪಡಿಸಿದ ಇನ್ನೊಂದು ಕಾರ್ಯಕ್ರಮವೆಂದರೆ, ಸಿಂಗನ್ನಡಿಗರ ಮಕ್ಕಳ ನಾಟಕ "ಮೂರ್ಖರ ರಾಜ್ಯ" ಕರ್ನಾಟಕದ ಒಂದು ಜನಪದ ಕಥೆಯನ್ನು ಆಧರಿಸಿ ಸಿಂಗಪುರದವರೇ ಆದ ವೆಂಕಟರತ್ನಯ್ಯ ಅವರು ರಚಿಸಿ, ನಿರ್ದೇಶಿಸಿದ ನಾಟಕವನ್ನು ಮಕ್ಕಳಾದ ಸಾನ್ವಿ ಸುದೀಪ್, ಸವ್ಯ ಶಿವಕುಮಾರ್, ಭಾವಿಕ್ ಕೂಡ್ಲಾಪುರ ಪ್ರಭು, ಕಿಕ್ಕೇರಿ, ಎಸ್.ಸಮರ್ಥ್, ನವ್ಯ ಶ್ರೀ ವೆಂಕಟ್, ಸಾಯಿ ಅಮೋಘ್ ಮುತಾಲಿಕ್ ದೇಸಾಯಿ, ಹಂಷಲ್, ಕ್ಷಿತಿಜ್ ಪಂಡಿತ್, ಅಭಿಜ್ಞಾನ್ ಅಶೋಕ್ ಗಾಲಿ, ಮಾನ್ಯ ಗದ್ದೆಮನೆ, ವಿಶಾಕ್ ರಾಮಕೃಷ್ಣ ಹಾಗೂ ಶ್ರೀ ನಿತ್ಯ ವೆಂಕಟ್ ಅಭಿನಯಿಸಿ ಪ್ರದರ್ಶಿಸಿದರು. ಜಾತ್ರೆಯ ಸಡಗರದ ಸಂಭ್ರಮ, ಭಾವಗೀತೆಗಳ ಲೋಕದ ಸರದಾರ ಉಪಾಸನಾ ಮೋಹನ್ ಸಂಗೀತ ನಿರ್ದೇಶನದ ಹಾಗೂ ಕನ್ನಡ ನಾಡಿನ ಹೆಸರಾಂತ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರ "ಜಕ್ಕಣಕ ಜಕ್ಕಣಕ ಜೈ" ಎನ್ನುವ ಜನಪದ ಹಾಡಿಗೆ ಮಕ್ಕಳೆಲ್ಲರೂ ಕುಣಿಯುತ್ತಾ ಆರಂಭಗೊಂಡ ನಾಟಕ ಎಲ್ಲರೂ ತಲ್ಲೀನರಾಗಿ ನೋಡುತ್ತಾ ಹಾಸ್ಯದಲ್ಲಿ ಮುಳುಗುವಂತೆ ಮಾಡಿತು. ಎಲ್ಲರ ಪ್ರಶಂಸೆಯನ್ನು ಪಡೆದ ಮಕ್ಕಳನ್ನು ಎಲ್ಲರೂ ಚಪ್ಪಾಳೆ ತಟ್ಟುವುದರ ಮೂಲಕ ಪ್ರೋತ್ಸಾಹಿಸಿದರು.

ಕನ್ನಡೋತ್ಸವ ಮುಕ್ತಾಯ ಸಮಾರಂಭದ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದ ದಿಗ್ಗಜರಾದ ಡಾ.ದೊಡ್ಡರಂಗೇ ಗೌಡ, ಕರ್ನಾಟಕದ ಹೆಸರಾಂತ ವಾಗ್ಮಿ ಪ್ರೊ. ಎಂ. ಕೃಷ್ಣೇಗೌಡ್ರು, ಬರಹಗಾರರಾದ ನಾಗತಿಹಳ್ಳಿ ರಮೇಶ್, ಯುವ ರಾಜಕೀಯ ನಾಯಕಿಯಾದ ಸೌಮ್ಯ ರೆಡ್ಡಿ ಇವರೊಂದಿಗೆ ಸಾಹಿತ್ಯ ಸಂವಾದವನ್ನು ನಡೆಸಿಕೊಟ್ಟ ಕನ್ನಡ ಸಂಘ(ಸಿಂಗಪುರ)ದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ ಅವರ ಸಮ್ಮುಖದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆ ಬಗ್ಗೆ ನಡೆದ ವಿಚಾರ ಮಂಥನ ಅರ್ಥಪೂರ್ಣ ವೇದಿಕೆಯಾಗಿತ್ತು.

2nd International Kempegowda Kannadotsava : Ambareesh Namana

ಡಾ.ದೊಡ್ಡರಂಗೇ ಗೌಡರು ಕನ್ನಡ ಸಾಹಿತ್ಯ, ಮತ್ತು ಅದು ಬೆಳೆದು ಬಂದ ದಾರಿಯನ್ನು ವಿವರಿಸಿದರೆ, ಪ್ರೊ.ಎಂ. ಕೃಷ್ಣೇಗೌಡರು ಕನ್ನಡ ಭಾಷೆಯ ಅದರಲ್ಲೂ ಹಳ್ಳಿ ಭಾಷೆಯ ಸೊಗಡನ್ನು ವಿವರಿಸುತ್ತಾ ಕನ್ನಡ ಭಾಷೆ ಅತ್ಯಂತ ಶ್ರೀಮಂತವಾದ ಭಾಷೆ ಅದನ್ನು ಬಳಸುತ್ತಾ ಇದ್ದರೆ ಅದೇ ಸ್ವತಃ ಬೆಳೆಯಬಲ್ಲದು ಎಂದು ಹೇಳುತ್ತಾ ತಮ್ಮದೇ ಆದ ಶೈಲಿಯಲ್ಲಿ ಜನರನ್ನು ನಗಿಸುತ್ತಾ ಸೂಕ್ಷ್ಮವಾಗಿ ಆಂಗ್ಲ ಭಾಷೆಯ ಮಿತಿಯನ್ನು ತಿಳಿಸಿ ಕನ್ನಡವನ್ನು ಪರಿಪೂರ್ಣ ಭಾಷೆ ಎಂದು ಕರೆದರು. ನಾಗತಿಹಳ್ಳಿ ರಮೇಶ್ ಅವರು ತಮ್ಮ ಅಣುಕು ವಾರ್ತೆಗಳನ್ನು ಹೇಳಿ ಎಲ್ಲರನ್ನು ನಗಿಸಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಮೆರೆದರು. ಯುವ ನಾಯಕಿಯರಾದ ಸೌಮ್ಯರೆಡ್ಡಿ ಅವರು ಹೊರದೇಶದಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ನಡೆಸಿಕೊಂಡು ಬರುತ್ತಿರುವುದನ್ನು ಶ್ಲಾಘಿಸಿ, "ಮೌನ ಸಂದೇಶ" ತಂಡದವರು ನಡೆಸಿಕೊಟ್ಟ ಮುಖಾಭಿನಯ "ನೀರಿದ್ದರೆ ನಾಳೆ"ಯನ್ನು ಉದ್ದೇಶಿಸಿ ಮಾತನಾಡುತ್ತಾ ಎಲ್ಲರಲ್ಲೂ ನಮ್ಮ ಪ್ರಕೃತಿ ಪರಿಸರವನ್ನು ಕಾಪಾಡುವ ಸಾಮಾಜಿಕ ಜವಾಬ್ದಾರಿಯ ಮಹತ್ವವನ್ನು ತಿಳಿಸಿದರು.

ಕೊನೆಯಲ್ಲಿ ವಿಜಯ ರಂಗ ಪ್ರಸಾದ್ ಅವರು ಕನ್ನಡ ಭಾಷೆ ಬಗ್ಗೆ ನಡೆದ ಸಂವಾದವು ಕವಿಗಳು, ವಾಗ್ಮಿಗಳು, ಬರಹಗಾರರ ಸಮ್ಮುಖದಲ್ಲಿ ನಡೆದಿದ್ದು ಇಂದಿನ ಈ "ಕನ್ನಡೋತ್ಸವ"ಕ್ಕೆ ಶೋಭೆಯನ್ನು ತಂದಿದೆ ಎಂದು ಹೇಳುತ್ತಾ ಸಮಾರೋಪವನ್ನು ಮಾಡಿದರು. ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಅನೇಕ ಗಣ್ಯರಿಗೆ, ಪ್ರಾಯೋಜಕರಿಗೆ ಹಾಗೂ ಇನ್ನಿತರ ಸಹಾಯಕ ಸದಸ್ಯರಿಗೂ ಕೂಡ ಸನ್ಮಾಯಿಸಲಾಯಿತು. ಕನ್ನಡ ಸಂಘ ಸಿಂಗಪುರದ ಪರವಾಗಿ ವಿಶ್ವ ಒಕ್ಕಲಿಗರ ಮಹಾ ವೇದಿಕೆ(ರಿ) ಅಧ್ಯಕ್ಷರಾದ ರವಿಶಂಕರ್, ಈ ಕಾರ್ಯಕ್ರಮದ ಉಸ್ತುವಾರಿ ಹಾಗೂ ಪ್ರಧಾನ ಕಾರ್ಯದರ್ಶಿ, ಮಹಿಳಾ ವಿಭಾಗದ ಅಧ್ಯಕ್ಷೆ ಭಾರತಿ ಶಂಕರ್ ಅವರಿಗೆ ಶಾಲು ಹೊದಿಸಿ, ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಸಿಂಗಪುರದ ಸ್ವಾಗತ ಕಮಿಟಿಯ ರೂವಾರಿ ವೆಂಕಟೇಶ ಮೂರ್ತಿ ಮತ್ತು ತಂಡದ ಶ್ರಮೆಯನ್ನು ಕರಾಡತನದ ಮೂಲಕ ಪ್ರೋತ್ಸಾಹಿಸಲಾಯಿತು.

2nd International Kempegowda Kannadotsava : Ambareesh Namana

ಸಂಜೆಯನ್ನು ಮತ್ತಷ್ಟು ರಂಗುಗೊಳಿಸಲು ರಂಗ ಸಜ್ಜುಗೊಳ್ಳುತಿತ್ತು, ಎಲ್ಲರಿಗೂ ಒಂದು ಸುತ್ತಿನ ಕಾಫಿ/ಟೀ ಸೇವನೆ ಜೊತೆಗೆ ಮದ್ದೂರು ವಡೆಯ ರುಚಿಯನ್ನು ಸವಿಯುತ್ತಿದ್ದರು. ಕಾಡುಗೋಡು ಸಾಂಸ್ಕೃತಿಕ ವೇದಿಕೆಯ ಅದ್ಧೂರಿ ತಮಟೆಯ ಶಬ್ದ ಇಡೀ ಸಭಾಂಗಣವನ್ನು ಜನಪದ ಲೋಕಕ್ಕೆ ಕರೆದೊಯ್ದಂತಿತ್ತು, ಹುಡುಗಿಯರು ಕುಣಿಯುತ್ತಾ ತಮಟೆಯನ್ನು ನುಡಿಸುತ್ತಿದ್ದುದು ನಿಜಕ್ಕೂ ಎಲ್ಲರ ಗಮನವನ್ನು ಸೆಳೆದು ಕರಾಡತನದ ಮೆಚ್ಚುಗೆ ವ್ಯಕ್ತವಾಗಿತ್ತು.

ಸಂಜೆಯ "ಅಂಬಿ ನಮನ"ಕ್ಕೆ ಪ್ರಮುಖವಾಗಿ ಯುವ ಪ್ರತಿಭೆ ಲೂಸಿಯ ಚಿತ್ರದ "ಜುಮ್ಮ ಜುಮ್ಮ" ಹಾಡಿನ ಖ್ಯಾತಿಯ ಹಿನ್ನಲೆ ಗಾಯಕ ಮತ್ತು ಸಂಗೀತ ನಿರ್ದೇಶಕ ನವೀನ್ ಸಜ್ಜು ಮತ್ತು ತಂಡದಿಂದ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿತ್ತು. ಸಮಯದ ಅಭಾವದ ಕಾರಣ ಕೆಲವು ಕಾರ್ಯಕ್ರಮಗಳು ಮೊಟಕುಗೊಂಡರೂ ಸಂಭ್ರಮಕ್ಕೇನೂ ಕೊರತೆಯಿರಲಿಲ್ಲ, ಪ್ರೇಕ್ಷಕ ಪ್ರಭುವಿನ ಉತ್ಸಾಹ ಮುಗಿಲೇರಿತ್ತು. ಸಂಗೀತ ಸಂಜೆಯ ತಯಾರಿಯ ಹಿನ್ನಲೆಯಲ್ಲಿ ಸ್ಥಳೀಯ ಕಲಾವಿದರಾದ ಲಲಿತಾ ವೈದ್ಯನಾಥನ್ ಮತ್ತು ತಂಡದ "ಲಲಿತಾಂಜಲಿ" ಗಾನವೃಂದದ ಪ್ರದರ್ಶನದ ನಂತರ ಅದ್ಭುತವಾದಂತಹ ಬಲೂನ್ ಡ್ಯಾನ್ಸ್, ಅಮೋಘವಾದಂತಹ ರೋಬೊಟ್ ಗಣೇಶ್ ಎಂದೇ ಹೆಸರುಗಳಿಸಿದ ಗಣೇಶ್ ಅವರಿಂದ ರೋಬೊಟ್ ಡ್ಯಾನ್ಸ್ ಪ್ರಮುಖ ಮನರಂಜನೆಯ ಆಕರ್ಷಣೆಗಳಾಗಿ ಹೊರಹೊಮ್ಮಿದವು.

2nd International Kempegowda Kannadotsava : Ambareesh Namana

ಕಾರ್ಯಕ್ರಮದ ಕೊನೆಯಲ್ಲಿ ನವೀನ್ ಸಜ್ಜು ಎಲ್ಲರನ್ನೂ ಸಂಗೀತದ ಮಾಂತ್ರಿಕ ಲೋಕಕ್ಕೆ ಸ್ಥಳಾಂತರಿಸುವ ಅಬ್ಬರದ ನಡುವೆ ನಮ್ಮ ರಾಖಿ ಭಾಯ್ "ಯಶ್" ನ ಪ್ರವೇಶ ವೇದಿಕೆಗೆ ಬಂದು ಎಲ್ಲರೂ ಕಿಕ್ಕಿರಿದು ನಿಂತರು. ವೇದಿಕೆ ಮೇಲೆ ನಾನು ಬಂದ ಮೇಲೆ ನಂದೇ "ಹವಾ" ಎಂಬುದನ್ನು ಮತ್ತೆ ನಿರೂಪಿಸಿದಂತಿತ್ತು. ಯಶ್ ಅವರ ಮಾತು, ಅವರ ಡೈಲಾಗ್‍ಗಳ ಸುರಿಮಳೆ, ಪ್ರೇಕ್ಷಕರ ಕೋರಿಕೆಯ ಮೇಲೆ ಹಾಡನ್ನೂ ಕೂಡ ಹಾಡಿ ರಂಜಿಸಿದರು.

ನವೀನ್ ಸಜ್ಜು ಅವರ ಹಾಡುಗಳ ಸುರಿಮಳೆಯಲ್ಲಿ ಸಮಯ ನಿಲ್ಲಲೇ ಇಲ್ಲ. ಬೆಳಿಗ್ಗೆ ಹತ್ತರಿಂದ ರಾತ್ರಿ ಹತ್ತರವರೆಗಿನ ನಿರಂತರ ಒಡನಾಟ, ಮನೋರಂಜನೆ ಇಡೀ ಕನ್ನಡ ನಾಡಿನ ಸೊಬಗನ್ನು ಪರಿ ಪರಿಯಾಗಿ ಅನುಭವಿಸಿದ ಮನೋಲ್ಲಾಸ, ಸಂತೋಷ ತೃಪ್ತಿ ಪ್ರೇಕ್ಷರಿಗೆ, ಸುಮಾರು ತಿಂಗಳಿಂದ ಸತತವಾಗಿ ನಿರಾಯಾಸವಾಗಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದ್ದ ಅದೆಷ್ಟೋ ಸ್ವಯಂ ಸೇವಕರ, ಸ್ವಾಗತ ಕಮಿಟಿಯ ಸದಸ್ಯರ ಧನ್ಯತಾಭಾವ, ಸುಸ್ತಿನಲ್ಲೂ ಕಾಣ ಸಿಗುವ ತೃಪ್ತಿ, ನನ್ನ ಸಮುದಾಯಕ್ಕಾಗಿ, ನನ್ನ ಕನ್ನಡಕ್ಕಾಗಿ ಸೇವೆ ಮಾಡಿದ ಮನದಾಳದ ನಿರಾಳ ಭಾವನೆ ಎಲ್ಲಾ ತೊಡುಕುಗಳನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ತಂದುಕೊಡುತ್ತದೆ ಎಂದು ತೋರುವ ಮುಖಭಾವ ಮತ್ತೆಲ್ಲಿ ಸಿಗುತ್ತದೆ ಹೇಳಿ? ಕೇವಲ ನಿಸ್ವಾರ್ಥ ಸೇವೆಯಲ್ಲಿ ಮಾತ್ರವಲ್ಲವೆ?

English summary
2nd International Nadaprabhu Kempegowda Utsava 'Kannadotsava' celebrated in Singapore. Many degnitaries from all over the world were felicitated with coveted awards. Kannada actor Yash, Sumalatha Ambareesh graced the occasion. Artist Arun Sagar compared the event. The event was organized by Vishwa Okkaligara Maha Vedike and Singapore Kannada Sangha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X