108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ವೀಕ್ಷಿಸಲು ಪ್ರವೇಶ ಶುಲ್ಕವಿಲ್ಲ
ಬೆಂಗಳೂರು, ನವೆಂಬರ್ 15; ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರ ಶುಕ್ರವಾರ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಆದರೆ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಲು ಇನ್ನೂ ಅವಕಾಶ ನೀಡಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ.
ಪ್ರತಿಮೆ ಅನಾವರಣಗೊಂಡ ಬಳಿಕ ಶನಿವಾರ ಮತ್ತು ಭಾನುವಾರ ನೂರಾರು ಜನರು ಪ್ರತಿಮೆ ವೀಕ್ಷಣೆ ಮಾಡಲು ತೆರಳಿದರು. ಆದರೆ ಗೇಟ್ ಹಾಕಿರುವ ಕಾರಣ ಅವರು ನಿರಾಸೆಯಿಂದ ವಾಪಸ್ ಆದರು. ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು. ಪ್ರತಿಮೆ ಲೋಕಾರ್ಪಣೆ ಮಾಡಿದರೂ ಅದನ್ನು ವೀಕ್ಷಿಸಲು ಏಕೆ ಅವಕಾಶವಿಲ್ಲ? ಎಂದು ಪ್ರಶ್ನಿಸಿದ್ದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕರ್ನಾಟಕ ಸರ್ಕಾರ 'ಪ್ರಗತಿಯ ಪ್ರತಿಮೆ' ಎಂದು ನಾಮಕರಣ ಮಾಡಿದೆ. ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದರೂ ಸಹ ಜನರು ಅದನ್ನು ವೀಕ್ಷಿಸಲು ಇನ್ನೂ ಅವಕಾಶ ನೀಡಿಲ್ಲ.
ಪ್ರಗತಿಯ ಪ್ರತಿಮೆ ಈಗಾಗಲೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ನಗರವನ್ನು ನಿರ್ಮಾಣ ಮಾಡಿದವರ ಅತಿ ಎತ್ತರದ ಪ್ರತಿಮೆ ಇದು ಎಂಬ ಹೆಗ್ಗೆಳಿಕೆ ಪ್ರಗತಿಯ ಪ್ರತಿಮೆಯದ್ದಾಗಿದೆ. ಈ ಪ್ರತಿಮೆ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಚಿವ ಅಶ್ವಥ ನಾರಾಯಣ್ ಭೇಟಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಕೆಂಪೇಗೌಡ ಪ್ರತಿಮೆಯ ಸ್ಥಳಕ್ಕೆ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ. ಸಿ. ಎನ್. ಅಶ್ವಥ ನಾರಾಯಣ್ ಸೋಮವಾರ ಭೇಟಿ ನೀಡಿದರು. ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಸಚಿವರು ಮಾತನಾಡಿ, "ಕೆಂಪೇಗೌಡ ಪ್ರತಿಮೆ ಸ್ಥಳವನ್ನು ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಅವರಿಗೆ ಸೂಕ್ತ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಆಕರ್ಷಕ ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಇಲ್ಲಿಗೆ ಪ್ರವಾಸಿಗರು ಆಗಮಿಸುತ್ತಿರುವುದು ಸಂತಸ ತಂದಿದೆ" ಎಂದರು.

ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ
ಸಚಿವರು ಮಾತನಾಡಿ, "108 ಅಡಿ ಕೆಂಪೇಗೌಡರ ಪ್ರತಿಮೆ ವೀಕ್ಷಣೆಗೆ ಯಾವುದೇ ಶುಲ್ಕ ಇಲ್ಲ. ಶೀಘ್ರದಲ್ಲೇ ಮತ್ತಷ್ಟು ಸೌಲಭ್ಯವನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡ ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಂಡ ಬಳಿಕ ಪ್ರತಿಮೆ ವೀಕ್ಷಿಸಲು ವ್ಯವಸ್ಥಿತ ಅವಕಾಶ ನೀಡಲಾಗುತ್ತದೆ" ಎಂದು ಹೇಳಿದರು.
"ಸದ್ಯ ಥೀಮ್ ಪಾರ್ಕ್ ಕಾಮಗಾರಿ ನಡೆಯುತ್ತಿದ್ದು, ಮುಗಿದ ಬಳಿಕ ಪ್ರತಿಮೆ ವೀಕ್ಷಣೆಗೆ ಇನ್ನಷ್ಟು ವ್ಯವಸ್ಥಿತ ಸೌಲಭ್ಯ ಒದಗಿಸಲಾಗುವುದು. ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ" ಎಂದು ಸಚಿವರು ತಿಳಿಸಿದರು.

ಪಾರ್ಕಿಂಗ್ ಸೇರಿದಂತೆ ಅಗತ್ಯ ವ್ಯವಸ್ಥೆ
ಸಚಿವರು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿದರು. ಸ್ಥಳದಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಪ್ರತಿಮೆಯ ಬಳಿ ತಲುಪುವ ಮಾರ್ಗದ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ವಿವರವಾಗಿ ಚರ್ಚೆ ನಡೆಸಿದರು. ಪ್ರತಿದಿನ ಸಾವಿರಾರು ಜನರು ಅತ್ಯಂತ ಆಸಕ್ತಿಯಿಂದ ಆಗಮಿಸುತ್ತಿರುವುದು ಸಂತಸ ಉಂಟುಮಾಡಿದೆ" ಎಂದು ಹೇಳಿದರು.

84 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಗುಜರಾತ್‌ನಲ್ಲಿ ಏಕತಾ ಪ್ರತಿಮೆ ನಿರ್ಮಾಣ ಮಾಡಿದ ರಾಮ್ ಸುತಾರ್ ಕ್ರಿಯೇಷನ್ಸ್ ನಿರ್ಮಾಣ ಮಾಡಿದ್ದಾರೆ. ಈ ಪ್ರತಿಮೆ ನಿರ್ಮಾಣಕ್ಕೆ ಸುಮಾರು 84 ಕೋಟಿ ರೂ. ಖರ್ಚಾಗಿದೆ. 120 ಟನ್ ಉಕ್ಕು, 98 ಟನ್ ಕಂಚು ಬಳಕೆ ಮಾಡಲಾಗಿದೆ. ಈ ಪ್ರತಿಮೆಯ ಖಡ್ಗವೇ 4 ಸಾವಿರ ಕೆಜಿ ತೂಕ ಹೊಂದಿದೆ.
ಕೆಂಪೇಗೌಡ ಪ್ರತಿಮೆ ಕೆಳಗೆ 23 ಎಕರೆ ಪ್ರದೇಶದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಸಹ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಶಂಕುಸ್ಥಾಪನೆ ಮಾಡಿದ್ದಾರೆ.












Click it and Unblock the Notifications