ಬೆಂಗಳೂರು ವಿಧಾನಸೌಧ: ಬಸವಣ್ಣ-ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ
ಬೆಂಗಳೂರು, ಮಾರ್ಚ್ 26: ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿ ಸರ್ಕಾರ ನಾಡಪ್ರಭು ನಾಡಪ್ರಭು ಕೇಂಪೆಗೌಡರು ಮತ್ತು ಶರಣ ಬಸವೇಶ್ವರರ ಆದರ್ಶಗಳಡಿ ಆಡಳಿತ ನಡೆಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಾಡಿನ ಶಕ್ತಿಕೇಂದ್ರ ವಿಧಾನಸೌಧದ ಎದುರು ಸ್ಥಾಪಿಸಲಾಗಿರುವ ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಷಾ ಅವರು ಭಾನುವಾರ ಸಂಜೆ ಅನಾವರಣಗೊಳಿಸಿದರು. ಈ ವೇಳೆ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳು ಮಾತನಾಡಿದರು.

ಕಾಯಕದ ಮಹತ್ವ ತಿಳಿಸಿದವರು ಶರಣ ಬಸವೇಶ್ವರರು. ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದೆ. ಸಿಲಿಕಾನ್ ಸಿಟಿ ಉದ್ಯಾನ ನಗರಿ ಎಂಬ ಬಿರುದು ಬರಲು ಕೆಂಪೇಗೌಡರ ಶ್ರಮ ಅಪಾರ. ಅಂತಹ ನಗರದಲ್ಲಿರುವ ವಿದಾನಸೌಧದ ಮುಂದೆ ಈ ಇಬ್ಬರು ನಾಯಕರ ಪ್ರತಿಮೆ ಅನಾವರಣ ಬಹಳ ದಿನಗಳ ಹಿಂದೆ ಆಗಬೇಕಿತ್ತು. ಆದರೆ ಆಗಲಿಲ್ಲ ಎಂದು ನಾನು ಯಾರನ್ನು ದೂಷಿಸುವುದಿಲ್ಲ ಎಂದು ವಿಪಕ್ಷಗಳಿಗೆ ಅವರು ಈ ವೇಳೆ ಟಾಂಗ್ ನೀಡಿದರು.
ಪ್ರಧಾನಿಯವರು ವಿಶ್ವಕ್ಕೆ ಬಸವೇಶ್ವರರ ಅನುಭವ ಮಂಟಪದ ಮೂಲಕ ಸಮಾಜಕ್ಕೆ ಸಮಾನತೆಯ ಸಾರ ಸಾರಿದ್ದಾರೆ. ಬಸವೇಶ್ವರರ ಪ್ರತಿಮೆ ವಿಧಾನಸೌಧದ ಮುಂದೆ ಅಷ್ಟೆ ಅಲ್ಲ, ಹೈಕೋರ್ಟ್ ಎದುರಿಗಿದೆ. ನಾಡ ಪ್ರಭು ಕೆಂಪೇಗೌಡರು ಯಾವುದೇ ನದಿ ಇಲ್ಲದ ಪ್ರದೇಶದಲ್ಲಿ ನಗರ ನಿರ್ಮಾಣ ಮಾಡಿದ್ದಾರೆ. ಎಲ್ಲ ಸಮುದಾಯಗಳಿಗೆ ಮಾರುಕಟ್ಟೆ ನಿರ್ಮಿಸಿ, ನಿಜವಾಗಿ ಬಸವಣ್ಣನವರ ಆದರ್ಶಗಳನ್ನು ಜಾರಿಗೆ ತಂದವರು ಕೆಂಪೇಗೌಡರು ಎಂದರು.
ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಇಡೀ ದೇಶವನ್ನು ಮತ್ತೆ ಒಗ್ಗೂಡಿಸುವ ಕೆಲಸ ಮಾಡಿದ್ದಾರೆ. ನಮ್ಮ ರಾಜ್ಯ, ಆಂಧ್ರಪ್ರದೇಶ, ಓರಿಸ್ಸಾಗಳಲ್ಲಿ ನಕ್ಸಲರ ಹಾವಳಿ ಇತ್ತು. ಅಲ್ಲದೇ ಅನೇಕ ವಿಚಿದ್ರಕಾರಿ ಶಕ್ತಿಗಳನ್ನು ದಮನ ಮಾಡಿ ಇಡಿ ದೇಶವನ್ನು ಅಭಿವೃದ್ಧಿ ಪತದಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಸಚಿವರಾದ ಆರ್.ಅಶೋಕ, ಸಿ.ಸಿ.ಪಾಟೀಲ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಸಿ.ಎನ್.ಆಶ್ವತ್ಥನಾರಾಯಣ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರಿನ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವತೀರ್ಥ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ, ನಂಜಾವಧೂತ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಿಶ್ವ ಒಕ್ಕಲಿಗರ ಪೀಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಾಧೀಶರು ಹಾಜರಿದ್ದರು.

ಸರ್ಕಾರದ ಕಾರ್ಯ ಬಣ್ಣಿಸಿದ ಅಮಿತ್ ಶಾ
ರಾಜ್ಯದಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) 2ಬಿ ವರ್ಗದಡಿ ವರ್ಗದಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ.4 ಮೀಸಲಾತಿ ರಾಜ್ಯ ಬಿಜೆಪಿ ರದ್ದು ಪಡಿಸಿದ ನಿರ್ಧಾರ ಸಮರ್ಥನೀಯ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಪಕ್ಷ ನಾಯಕ ಕಾಂಗ್ರೆಸ್ ನಾಯಕರು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮುಸ್ಲಿಮ್ ಸಮುದಾಯಕ್ಕೆ ಶೇಕಡಾ 4 ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೂ ಹೊಸ ಒಳಮೀಸಲಾತಿ ಜಾರಿಗೆ ತಂದಿದೆ. ಈ ಮೂಲಕ ಪರಿಶಿಷ್ಟ ಜಾತಿಗೆ ಆಗಿರುವ ಅನ್ಯಾಯವನ್ನು ದೂರ ಮಾಡಲು ಪ್ರಯತ್ನಿಸಿದೆ ಎಂದು ರಾಜ್ಯ ಬಿಜೆಪಿ ಸರ್ಕಾರದ ಕಾರ್ಯ ಅಮಿತ್ ಶಾ ಬಣ್ಣಿಸಿದರು.












Click it and Unblock the Notifications