Breaking; ಕೆಂಪೇಗೌಡರ ಪ್ರತಿಮೆ ನೋಡಲು ಹೋದವರಿಗೆ ನಿರಾಸೆ
ಬೆಂಗಳೂರು, ನವೆಂಬರ್ 13; ಭಾರತದ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು. ಭಾನುವಾರ ಪ್ರತಿಮೆ ನೋಡಲು ಹೋದ ಜನರಿಗೆ ನಿರಾಸೆ ಕಾದಿತ್ತು.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 'ಪ್ರಗತಿಯ ಪ್ರತಿಮೆ' ಎಂದೇ ಕರೆಯಲ್ಪಡುವ ನಾಡಪ್ರಭು ಕೆಂಪೇಗೌಡರ 108 ಎತ್ತರದ ಪ್ರತಿಮೆ ಇದೆ. ಭಾನುವಾರ ರಜೆ ದಿನವಾದ ಕಾರಣ ನೂರಾರು ಜನರು ಪ್ರತಿಮೆ ನೋಡಲು ಆಗಮಿಸಿದ್ದರು.
ಪ್ರತಿಮೆಯ ಸಮೀಪ ಭಾನುವಾರ ಜನರನ್ನು ಬಿಡಲಿಲ್ಲ. ಗೇಟ್ ಹಾಕಲಾಗಿದ್ದು, ಪ್ರತಿಮೆ ನೋಡಲು ಹೋದ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಗೇಟ್ ಹಾಕುವುದಿದ್ದರೆ ಉದ್ಘಾಟನೆ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದರು.

ಕೆಂಪೇಗೌಡ ಪ್ರತಿಮೆಯ ಸಮೀಪ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದ್ದರಿಂದ ಪ್ರತಿಮೆ ಲೋಕಾರ್ಪಣೆಗೊಂಡರೂ ಸಹ ಭಾನುವಾರ ಜನರನ್ನು ಸಮೀಪಕ್ಕೆ ಬಿಟ್ಟಿಲ್ಲ. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಜನರು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ನಿಮ್ರಾತೃ ನಾಡಪ್ರಭು ಕೆಂಪೇಗೌಡರ ಕೊಡುಗೆಯನ್ನು ಸ್ಮರಿಸಲು ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಗುಜರಾತ್‌ನಲ್ಲಿ ಏಕತಾ ಪ್ರತಿಮೆ ಯೋಜನೆಯ ಉಸ್ತುವಾರಿವಹಿಸಿಕೊಂಡಿದ್ದ ರಾಮ್ ವಿ ಸುತಾರ್ ಅವರ ಪರಿಕಲ್ಪನೆ ಮತ್ತು ಕೆತ್ತನೆಯಲ್ಲಿ 98 ಟನ್ ಕಂಚು ಮತ್ತು 120 ಟನ್ ಉಕ್ಕಿನಿಂದ ಈ ಪ್ರತಿಮೆ ನಿರ್ಮಾಣ ಮಾಡಲಾಗಿದೆ.
ನಾಡಪ್ರಭು ಕೆಂಪೇಗೌಡರ ಪ್ರತಿಮೆ ಈಗಾಗಲೇ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ನಗರವನ್ನು ನಿರ್ಮಾಣ ಮಾಡಿದವರ ಮೊದಲ ಹಾಗೂ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಇದಾಗಿದೆ. ಈ ಪ್ರತಿಮೆ ಸಮೀಪವೇ ಕೆಂಪೇಗೌಡ ಥೀಮ್ ಪಾರ್ಕ್ ಸಹ 23 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಇದಕ್ಕೆ ಸಹ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದಾರೆ.












Click it and Unblock the Notifications