ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೆ ಆಗಮಿಸುವ ಮೋದಿಗೆ ಡಿಕೆಶಿ ಪ್ರಶ್ನೆಗಳು!

|
Google Oneindia Kannada News

ಬೆಂಗಳೂರು,ನವೆಂಬರ್ 10: "ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆಯದೇ ವಚನಭ್ರಷ್ಟವಾಗಿರುವುದು ಹಾಗೂ ಸರ್ಕಾರದ ಲೋಪಗಳ ಬಗ್ಗೆ ನಾವು ಪ್ರಧಾನಿ ಅವರಿಗೆ ಪತ್ರ ಬರೆಯುತ್ತಿದ್ದು, ರಾಜ್ಯಕ್ಕೆ ಆಗಮಿಸುತ್ತಿರುವ ಅವರು ಇದಕ್ಕೆ ಉತ್ತರಿಸಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಗುರುವಾರ ಸಿದ್ದರಾಮಯ್ಯ ಜೊತೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪತ್ರ ಬರೆದು ಬಿಜೆಪಿ ಸರ್ಕಾರದ ಲೋಪಗಳ ಬಗ್ಗೆ ವಿವರಣೆ ನೀಡುತ್ತಿದ್ದು, ಈ ಬಾರಿ ರಾಜ್ಯಕ್ಕೆ ಬಂದಾಗ ಪ್ರಧಾನಿ ಅವರು ಈ ವಿಚಾರವಾಗಿ ರಾಜ್ಯದ ಜನರಿಗೆ ಉತ್ತರ ನೀಡಬೇಕು" ಎಂದರು.

"ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾವು 2013ರಲ್ಲಿ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದೆವು. ಅಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುತ್ತಿದ್ದಾರೆ. ಸರ್ಕಾರದ ವತಿಯಿಂದ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಉದ್ದೇಶಕ್ಕೆ 2 ಸಾವಿರ ಎಕರೆ ಜಮೀನು ನೀಡಲಾಗಿತ್ತು. ಹೀಗಾಗಿ ಈ ಪ್ರತಿಮೆಯನ್ನು ಸರ್ಕಾರದ ಬದಲು ವಿಮಾನ ನಿಲ್ದಾಣದ ಆಡಳಿತ ಸಂಸ್ಥೆಯೇ ನಿರ್ಮಾಣ ಮಾಡಬಹುದಾಗಿತ್ತು. ಇದಕ್ಕಾಗಿ ಸರ್ಕಾರ ಹಣ ಹಾಕುವ ಅಗತ್ಯ ಇರಲಿಲ್ಲ. ಆದರೂ ಸರ್ಕಾರದ ಹಣದಲ್ಲಿ ಪ್ರತಿಮೆ ಮಾಡಲಾಗಿದೆ"ಎಂದು ಡಿ. ಕೆ. ಶಿವಕುಮಾರ್ ಆರೋಪಿಸಿದರು.

Congress Leader DK Shivakumar Questions To PM Narendra Modi

"ಪ್ರಧಾನಿಗಳು ರಾಜ್ಯಕ್ಕೆ ಆಗಮಿಸುತ್ತಿರುವುದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಆದರೆ ಅವರ ಕಾರ್ಯಕ್ರಮಕ್ಕೆ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ, ಸ್ವಸಹಾಯ ಗುಂಪಿನ ಸದಸ್ಯರನ್ನು ಕರೆ ತರಲು ಮುಂದಾಗಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಜನಬೆಂಬಲ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ" ಎಂದರು.

"ಕಳೆದ ಚುನಾವಣೆ ಸಮಯದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಶೇ.90 ರಷ್ಟು ಈಡೇರಿಸಿಲ್ಲ. ಈ ಬಗ್ಗೆ ನಾವು ನಿತ್ಯ ಒಂದೊಂದು ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದು, ಇದುವರೆಗೂ ಸರ್ಕಾರ ಯಾವುದಕ್ಕೂ ಉತ್ತರ ನೀಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ಯಾವುದೇ ದಾಖಲಾತಿ ಇಲ್ಲದೆ ನಮ್ಮ ಸರಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಗೂಬೆ ಕೂರಿಸಿದರು. ಅದನ್ನು ಸಾಬೀತುಪಡಿಸಲು ನಮ್ಮ ಮೇಲೆ ಯಾವುದೇ ತನಿಖೆ ಮಾಡಲಿಲ್ಲ" ಎಂದು ದೂರಿದರು.

Congress Leader DK Shivakumar Questions To PM Narendra Modi

"ನಿರುದ್ಯೋಗಿ ಯುವಕರು, ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಇದಾವುದೂ ಆಗಿಲ್ಲ. ಬದಲಿಗೆ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕರ್ನಾಟಕ ರಾಜ್ಯ ಭ್ರಷ್ಟಾಚಾರದ ಕಳಂಕ ಹೊತ್ತಿರುವ ಬಗ್ಗೆ ಮಾಧ್ಯಮಗಳೇ ಬರೆದಿವೆ. ಚುನಾವಣೆ ಸಮಯದಲ್ಲಿ ನಾನು ತಿನ್ನುವುದಿಲ್ಲ ಬೇರೆಯವರಿಗೂ ತಿನ್ನಲು ಬಿಡಲ್ಲ ಎಂದು ಹೇಳಿದ್ದಿರಿ. ಈಗ ನಿಮ್ಮವರು ಏನು ತಿನ್ನುತ್ತಿದ್ದಾರೆ? ಎಂದು ಈ ಸಂದರ್ಭದಲ್ಲಿ ಕೇಳುತ್ತಿದ್ದೇವೆ" ಎಂದರು.

"ನೀವು ವಚನಭ್ರಷ್ಟರಾಗಿದ್ದು, ಕೊಟ್ಟ ಮಾತು ಉಳಿಸಿಕೊಂಡಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರಿಗೆ 1 ಲಕ್ಷದವರೆಗೂ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಿರಿ. ಈವರೆಗೂ ಮಾಡಿಲ್ಲ. ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದಿರಿ. ರೈತರ ಆದಾಯ ಡಬಲ್ ಆಗುವ ಬದಲಾಗಿ ರೈತರ ಕೃಷಿ ವೆಚ್ಚ ಡಬಲ್ ಆಗಿದೆ. ಹೀಗೆ ಹತ್ತು ಹಲವು ವಿಚಾರಗಳನ್ನು ಪತ್ರದ ಮೂಲಕ ಕೇಂದ್ರ ಸರ್ಕಾರದ ಮುಂದೆ ಇಡುತ್ತಿದ್ದೇವೆ. ಇದಕ್ಕೆ ಮೋದಿ ಅವರು ಉತ್ತರಿಸಬೇಕು" ಎಂದರು.

"ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಸರ್ಕಾರ ಕೇವಲ ಪ್ರಚಾರಕ್ಕಾಗಿ 10 ಲಕ್ಷ ಕೋಟಿ ರೂ. ಒಪ್ಪಂದ ಮಾಡಿಕೊಂಡಿದೆ. ಇದರಲ್ಲಿ ಶೇ.10 ರಷ್ಟು ಜಾರಿ ಆಗುವುದಿಲ್ಲ. ನಮ್ಮ ಸರ್ಕಾರ ಬಂದ ನಂತರ ಇದೆಲ್ಲವನ್ನು ಪುನರ್ ಪರಿಶೀಲನೆ ಮಾಡುತ್ತೇವೆ. ಸರ್ಕಾರ ಈಗ ತರಾತುರಿಯಲ್ಲಿ 20 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆಯಲು ಹೊರಟಿದೆ. ಈಗ ಆಗಿರುವ ಕೆಲಸಗಳಿಗೇ ಸರ್ಕಾರ ಬಿಲ್ ನೀಡಿಲ್ಲ. ಆರ್ಥಿಕ ಶಿಸ್ತು ಪಾಲನೆ ಆಗದೆ, ಆರ್ಥಿಕ ಇಲಾಖೆಯ ಜತೆ ಚರ್ಚೆ ಮಾಡದೇ ಯಾವುದೇ ಟೆಂಡರ್ ಅನ್ನು ನೀಡಬಾರದು" ಎಂದು ಒತ್ತಾಯಿಸಿದರು.

"ಈಗ ಎಲ್ಲ ಕಾಮಗಾರಿಗಳ ಅಂದಾಜು ವೆಚ್ಚ ಡಬಲ್ ಮಾಡಿ ಸರ್ಕಾರ ಕಲೆಕ್ಷನ್‌ಗೆ ಮುಂದಾಗಿದೆ. ನಾವು ಈ ಟೆಂಡರ್ ಪ್ರಕ್ರಿಯೆ ಪ್ರಶ್ನಿಸಿ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದು, ಈ ವಿಚಾರದಲ್ಲಿ ಗುತ್ತಿಗೆದಾರರು ಎಚ್ಚರವಾಗಿರಬೇಕು. ಯಾವ ಮೂಲಭೂತ ಯೋಜನೆ ಪೂರ್ಣಗೊಂಡಿದೆ ಎಂದು ಹೇಳಿ 10 ಲಕ್ಷ ಕೋಟಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸರ್ಕಾರಕ್ಕೆ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಈಗ ಯಾವ ಹಣವಿದೆ ಎಂದು ಟೆಂಡರ್ ಕರೆಯಲಾಗುತ್ತಿದೆ?. ಈ ಹಿಂದೆ ಮಾಡಲಾಗಿರುವ ಕಾಮಗಾರಿಗಳ ಬಿಲ್ ಕ್ಲಿಯರ್ ಮಾಡಲು ಆಗಿಲ್ಲ. ಇಂತಹ ಸಮಯದಲ್ಲಿ ಹೊಸ ಟೆಂಡರ್ ನೀಡುತ್ತಿರುವುದೇಕೆ? ಹೀಗೆ ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಬಾರದು ಎಂದು ಪ್ರಧಾನಿಗಳಿಗೆ ಪತ್ರ ಬರೆಯುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ" ಎಂದರು.

English summary
PM Narendra Modi visit to Karnataka. KPCC president D. K. Shivakumar question to Narendra Modi. Modi visiting Karnataka on November 11th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X