Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್‌ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ
ಬೆಂಗಳೂರಿನ ಟ್ರಾಫಿಕ್ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸಂಚರಿಸುವ ವಾಹನ ಸವಾರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ನಮ್ಮ ಮೆಟ್ರೋದ ಹಳದಿ ಮಾರ್ಗದ (Yellow Line) ಭಾಗವಾಗಿ ನಿರ್ಮಿಸಲಾದ ನಗರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಮಾರ್ಚ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಲಿದೆ. ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡವರೆಗಿನ ಸುಮಾರು 3.5 ಕಿ.ಮೀ ಉದ್ದದ ಉಳಿದ ಭಾಗದ ಫ್ಲೈಓವರ್ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ಮಾರ್ಚ್ 22ರೊಳಗೆ ಎಲ್ಲಾ ಕೆಲಸಗಳು ಮುಕ್ತಾಯಗೊಳ್ಳಲಿವೆ.
ಬಿಎಂಆರ್‌ಸಿಎಲ್ ಮಾಹಿತಿಯಂತೆ, ಟ್ರಾಫಿಕ್ ಪೊಲೀಸರಿಂದ ಅಧಿಕೃತ ಅನುಮತಿ ಸಿಕ್ಕ ತಕ್ಷಣ ಮಾರ್ಚ್ ಅಂತ್ಯದ ವೇಳೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭವಾಗಲಿದೆ. ಈಗಾಗಲೇ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ಒಂದು ಬದಿಯ ಮಾರ್ಗವು ಜೂನ್ 2024ರಲ್ಲಿ ಲೋಕಾರ್ಪಣೆಯಾಗಿತ್ತು. ಈಗ ಎಚ್‌ಎಸ್‌ಆರ್ ಲೇಔಟ್ ಕಡೆಯಿಂದ ರಾಗಿಗುಡ್ಡ, ಬಿಟಿಎಂ ಲೇಔಟ್, ಜಯನಗರ ಮತ್ತು ಜೆಪಿ ನಗರದ ಕಡೆಗೆ ತೆರಳುವ ಸವಾರರಿಗೆ ಈ ಹೊಸ ಮಾರ್ಗವು ಅನುಕೂಲ ಕಲ್ಪಿಸಲಿದೆ. ಈ ಮೂಲಕ ಸಿಲ್ಕ್ ಬೋರ್ಡ್ ಕೆಳಗಿನ ಟ್ರಾಫಿಕ್ ಸಿಗ್ನಲ್‌ಗಳನ್ನು ತಪ್ಪಿಸಿ ಸಂಚಾರ ಸುಗಮಗೊಳ್ಳಲಿದೆ.

ಯಾವ ಭಾಗದವರಿಗೆ ಅನುಕೂಲ?
ಫ್ಲೈಓವರ್‌ನ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಪ್ರಸ್ತುತ ಉಳಿದಿರುವ ಸಣ್ಣಪುಟ್ಟ ಕೆಲಸಗಳನ್ನು ಮಾರ್ಚ್ 22ರೊಳಗೆ ಮುಗಿಸಲು ಬಿಎಂಆರ್‌ಸಿಎಲ್ ಗಡುವು ವಿಧಿಸಿಕೊಂಡಿದೆ. ವಿನ್ಯಾಸ ಬದಲಾವಣೆ, ಮಳೆ ಮತ್ತು ಸಂಚಾರ ನಿರ್ಬಂಧಗಳ ಕಾರಣದಿಂದಾಗಿ ಈ ಹಿಂದೆ ಹಲವು ಬಾರಿ ಈ ಯೋಜನೆಯ ಗಡುವು ಮುಂದೂಡಲ್ಪಟ್ಟಿತ್ತು. ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಹೊಸೂರು ರಸ್ತೆ ಮೂಲಕ ಬಿಟಿಎಂ ಲೇಔಟ್, ಜಯನಗರ, ಬನಶಂಕರಿ ಕಡೆಗೆ ಹೋಗುವವರಿಗೆ ಇದು ವರದಾನವಾಗಲಿದೆ.
ಈ ಫ್ಲೈಓವರ್ ಪೂರ್ಣ ಪ್ರಮಾಣದಲ್ಲಿ ತೆರೆಯುವುದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲಿನ ವಾಹನ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಟ್ರಾಫಿಕ್ ಪೊಲೀಸರು ಹೇಳಿದ್ದಾರೆ. ಸಿಲ್ಕ್ ಬೋರ್ಡ್‌ನಲ್ಲಿ ಟ್ರಾಫಿಕ್ ಸಮಸ್ಯೆ ಸ್ವಲ್ಪಮಟ್ಟಿಗೆ ಹಗುರವಾದರೂ, ಫ್ಲೈಓವರ್ ಇಳಿದ ನಂತರದ ರಾಗಿಗುಡ್ಡ ಮೆಟ್ರೋ ನಿಲ್ದಾಣ ಮತ್ತು ಮಾರೇನಹಳ್ಳಿ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಮುಂದುವರಿಯುವ ಸಾಧ್ಯತೆಯಿದೆ. ಅಲ್ಲಿನ ರಸ್ತೆಗಳು ಕಿರಿದಾಗಿರುವುದರಿಂದ ದಟ್ಟಣೆ ನಿರ್ವಹಣೆ ಪೊಲೀಸರಿಗೆ ದೊಡ್ಡ ಸವಾಲಾಗಲಿದೆ.
ಈ ಫ್ಲೈಓವರ್ ಲೋಕಾರ್ಪಣೆಯಾದ ನಂತರ ಎಚ್‌ಎಸ್‌ಆರ್ ಲೇಔಟ್ ಮತ್ತು ಹೊಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ನೇರವಾಗಿ ಬಿಟಿಎಂ ಲೇಔಟ್ ಮತ್ತು ರಾಗಿಗುಡ್ಡ ಕಡೆಗೆ ಯಾವುದೇ ಸಿಗ್ನಲ್ ಅಡೆತಡೆಯಿಲ್ಲದೆ ಸಂಚರಿಸಬಹುದಾಗಿದೆ. ವಿನ್ಯಾಸ ಬದಲಾವಣೆ ಮತ್ತು ಸ್ಟೀಲ್ ಗರ್ಡರ್‌ಗಳ ಅಳವಡಿಕೆಯಲ್ಲಿ ಉಂಟಾದ ವಿಳಂಬದಿಂದಾಗಿ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡಕ್ಕೆ ಹೋಗುವ ಮಾರ್ಗ ಬಾಕಿ ಉಳಿದಿತ್ತು. ಈಗ ಈ ಮಾರ್ಗವೂ ಸೇರ್ಪಡೆಯಾಗುವುದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ಶೇ 40ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ಕೇವಲ ರಸ್ತೆ ಫ್ಲೈಓವರ್ ಮಾತ್ರವಲ್ಲದೆ, ಇದೇ ಪಿಲ್ಲರ್‌ಗಳ ಮೇಲೆ ಮೆಟ್ರೋ ರೈಲು ಕೂಡ ಸಂಚರಿಸಲಿರುವುದು ಈ ಯೋಜನೆಯ ವೈಶಿಷ್ಟ್ಯವಾಗಿದೆ.
ಸಂಚಾರದ ಸಮಯ ಉಳಿತಾಯ
ಸಿಲ್ಕ್ ಬೋರ್ಡ್‌ನಲ್ಲಿ ಟ್ರಾಫಿಕ್ ಸಮಸ್ಯೆ ಹಗುರವಾದರೂ, ವಾಹನಗಳು ಫ್ಲೈಓವರ್ ಇಳಿದು ಮುಂದೆ ಸಾಗುವ ರಾಗಿಗುಡ್ಡ ಮೆಟ್ರೋ ನಿಲ್ದಾಣ ಮತ್ತು ಮಾರೆನಹಳ್ಳಿ ರಸ್ತೆಗಳಲ್ಲಿ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ ಎಂಬ ಆತಂಕ ಸಾರ್ವಜನಿಕರಲ್ಲಿದೆ. ಹಲವು ವರ್ಷಗಳ ಕಾಯುವಿಕೆಯ ನಂತರ ಬೆಂಗಳೂರಿನ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ದಕ್ಷಿಣ ಬೆಂಗಳೂರಿನ ಐಟಿ ಕಾರಿಡಾರ್‌ಗೆ ದೊಡ್ಡ ಮಟ್ಟದ ಸಂಚಾರ ಸುಧಾರಣೆ ಸಿಗುವ ಕಾಲ ಹತ್ತಿರ ಬಂದಿದೆ.
ಪ್ರಸ್ತುತ ಸಿಲ್ಕ್ ಬೋರ್ಡ್ ಸಿಗ್ನಲ್ ದಾಟಲು ವಾಹನ ಸವಾರರು ಸರಾಸರಿ 15ರಿಂದ 25 ನಿಮಿಷ ವ್ಯಯಿಸುತ್ತಾರೆ. ಈ ಡಬಲ್ ಡೆಕ್ಕರ್ ಫ್ಲೈಓವರ್ ಸಂಪೂರ್ಣವಾಗಿ ತೆರೆಯುವುದರಿಂದ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡಕ್ಕೆ ಕೇವಲ 5ರಿಂದ 7 ನಿಮಿಷಗಳಲ್ಲಿ ತಲುಪಬಹುದು. ವರ್ಷಕ್ಕೆ ಸುಮಾರು ಲಕ್ಷಾಂತರ ಲೀಟರ್ ಇಂಧನ ಉಳಿತಾಯವಾಗಲಿದ್ದು, ಪರಿಸರ ಮಾಲಿನ್ಯವೂ ಕಡಿಮೆಯಾಗಲಿದೆ.












Click it and Unblock the Notifications