ಒಡಿಶಾ ಕಾಂಗ್ರೆಸ್ ಶಾಸಕರಿಗೆ ತಲಾ ಐದು ಕೋಟಿ ಆಮಿಷ: ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪ
ಬೆಂಗಳೂರು, ಮಾ.15: ಒಡಿಶಾ ರಾಜ್ಯಸಭಾ ಚುನಾವಣೆ ಹಿನ್ನೆಲೆ ಅಡ್ಡಮತದಾನ ತಡೆಯಲು ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿ ಶಾಸಕರನ್ನು ಖರೀದಿಸಲು ಯತ್ನಿಸಿದ ನಾಲ್ವರಲ್ಲಿ ಇಬ್ಬರನ್ನು ಹಿಡಿದು ಪೋಲೀಸರಿಗೆ ಒಪ್ಪಿಸಲಾಗಿದೆ. ಖಾಲಿ ಚೆಕ್‌ಗಳು ಪತ್ತೆಯಾಗಿದ್ದು, ಈ ಕುದುರೆ ವ್ಯಾಪಾರ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಒಡಿಶಾದಿಂದ ಬಂದಿರುವ ನಾಲ್ವರು ಬಿಡದಿಯಲ್ಲಿ ವಾಸ್ತವ್ಯ ಹೂಡಿರುವ ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ, ಅಡ್ಡಮತದಾನಕ್ಕೆ ತಲಾ 5 ಕೋಟಿ ರೂಪಾಯಿ ಹಣದ ಆಮಿಷ ಒಡ್ಡಿದ್ದಾರೆ. ಆದರೆ, ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಸಿದ್ಧರಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು. ಒಡಿಸ್ಸಾದಿಂದ ಬಂದಿರುವ ನಾಲ್ಕು ಜನರು ಸ್ಥಳೀಯ ಬ್ಯಾಟರಾಯನಪುರ ನಿವಾಸಿ ಸುರೇಶ್ ಎಂಬಾತನ ಸಹಾಯ ಪಡೆದು ರೂಮ್ ಬುಕ್ ಮಾಡಿಸಿದ್ದಾರೆ. ನಂತರ ನಮ್ಮ ಶಾಸಕರಿಗೆ ಆಮಿಷ ಒಡ್ಡಿದಾಗ ನಮ್ಮ ಪಕ್ಷದ ಶಾಸಕರು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಾರೆ.
ಆಮಿಷ ಒಡ್ಡಿದ ನಾಲ್ವರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದು, ಮತ್ತಿಬ್ಬರನ್ನು ಹಿಡಿಯಲಾಗಿದೆ. ಅವರು ಇದೇ ಕೆಲಸಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಖಾಲಿ ಚೆಕ್ ತಂದಿದ್ದಾರೆ. ಆ ಮೂಲಕ ಆಪರೇಷನ್ ಕಮಲ ಮಾಡಲಾಗುತ್ತಿದೆ. ಎಐಸಿಸಿ ಕಾರ್ಯದರ್ಶಿಯವರು ಹಾಗೂ ಮಿಕ್ಕ ನಾಯಕರು ಇತರೇ ವಿಚಾರ ತಿಳಿಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದರು.
'ಚುನಾವಣೆ ಎದುರಿಸಲು ಸಿದ್ಧರಿದ್ದೇವೆ'
ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಪಕ್ಷದ ಶಾಸಕರು ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡದೆ ಬಿಜೆಪಿ ಅಧ್ಯಕ್ಷರನ್ನು ಭೇಟಿ ಮಾಡಲು ಆಗುತ್ತದೆಯೇ?" ಎಂದು ಹೇಳಿದರು. ಇನ್ನೂ ಕೇಂದ್ರ ಚುನಾವಣಾ ಆಯೋಗದ ಮಾಧ್ಯಮಗೋಷ್ಠಿಯಲ್ಲಿ ರಾಜ್ಯದ ಉಪಚುನಾವಣೆಯ ಬಗ್ಗೆ ಘೋಷಣೆ ಮಾಡಲಾಗುವುದೇ ಎಂದು ಕೇಳಿದಾಗ, "ಮಾಡಲಿ ಬಿಡಿ, ನಾವು ತಯಾರಾಗಿದ್ದೇವೆ. ನಮಗೆ ಯಾವುದೇ ಅನುಮಾನ ಇಲ್ಲ, ಎಲ್ಲಾ ವರದಿ ತರಿಸಿಕೊಂಡಿದ್ದೇವೆ. ಎಲ್ಲಾ ನಾಯಕರ ಜೊತೆ ಚರ್ಚೆ ನಡೆಸಿದ್ದೇವೆ. ನಾವು ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ," ಎಂದು ಹೇಳಿದರು.
'ಆಮಿಷ ಒಡ್ಡಿದವರ ವಿರುದ್ಧ ದೂರು ನೀಡಲಾಗುವುದು'
ದಾವಣಗೆರೆ ಟಿಕೆಟ್ ಹಂಚಿಕೆ ಗೊಂದಲ ಬಗೆಹರಿದಿದೆಯೇ ಎಂಬ ಪ್ರಶ್ನೆಗೆ, "ಎಲ್ಲಿದೆ ಗೊಂದಲ. ಯಾವ ಗೊಂದಲವೂ ಇಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಒಪ್ಪಿಕೊಳ್ಳುವುದಾಗಿ ಎಲ್ಲಾ ನಾಯಕರು ಹೇಳಿದ್ದಾರೆ," ಎಂದರು. ಆಮಿಷ ಒಡ್ಡಿದವರ ವಿರುದ್ಧ ದೂರು ನೀಡಲಾಗುವುದೇ ಎಂದು ಕೇಳಿದಾಗ, "ಖಂಡಿತ ದೂರು ನೀಡಲಾಗುವುದು. ಕಾನೂನು ಮುಂದಿನದನ್ನು ನೋಡಿಕೊಳ್ಳಲಿದೆ," ಎಂದು ತಿಳಿಸಿದರು.












Click it and Unblock the Notifications