Yash: ಯಶ್ ಡಿಪ್ರೆಶನ್‌ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ
ಸೆಲೆಬ್ರಿಟಿಗಳ ಬಗ್ಗೆ ಭಯಾನಕ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ತೆಲುಗಿನ ಜ್ಯೋತಿಷಿ ವೇಣುಸ್ವಾಮಿ ಅವರು ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಯಶ್ ಅವರ ಮಾನಸಿಕ ಸ್ಥಿತಿ ಮತ್ತು ವೃತ್ತಿಜೀವನದ ಬಗ್ಗೆ ವೇಣುಸ್ವಾಮಿ ಆಡಿರುವ ಮಾತುಗಳು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಟಾಕ್ಸಿಕ್ (Toxic) ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿರುವ ಯಶ್ ಬಗ್ಗೆ ವೇಣುಸ್ವಾಮಿ ನೀಡಿರುವ ಹೇಳಿಕೆ ಈಗ ಕಿಚ್ಚು ಹಚ್ಚಿದೆ.
ಯಶ್ ಪರಿಸ್ಥಿತಿ ಭಯಂಕರವಾಗಿದೆ
ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಯಶ್ ಅವರ ಪರಿಸ್ಥಿತಿ "ತುಂಬಾ ಭಯಂಕರವಾಗಿದೆ" ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. "ಯಶ್ ಕನ್ನಡದ ಹೀರೋ ಆಗಿರುವ ಕಾರಣಕ್ಕೆ ನಾನು ಧೈರ್ಯವಾಗಿ ಅವರ ಹೆಸರು ಹೇಳುತ್ತಿದ್ದೇನೆ. ಅದೇ ತೆಲುಗು ಹೀರೋ ಆಗಿದ್ದರೆ ನಾನು ಇಷ್ಟೊಂದು ನೇರವಾಗಿ ಮಾತನಾಡುತ್ತಿರಲಿಲ್ಲ" ಎಂದು ಹೇಳುವ ಮೂಲಕ ಕನ್ನಡಿಗರಲ್ಲಿ ಕಿಡಿ ಹೊತ್ತಿಸಿದ್ದಾರೆ.

"ಯಶ್ ಈಗಾಗಲೇ ಮಾಡಿರುವ ಕೆಜಿಎಫ್ ಸಿನಿಮಾಗಳು ಎಲ್ಲೋ ಇವೆ. ಆದರೆ ಅದನ್ನೇ 10 ಭಾಗಗಳಲ್ಲಿ ಮಾಡಲು ಸಾಧ್ಯವಿಲ್ಲ. ಈಗ ಜನರಿಗೆ ಅದೇ ಮಟ್ಟದ ಸಿನಿಮಾ ಕೊಡುವುದು ಹೇಗೆ ಎಂಬ ಚಿಂತೆಯಲ್ಲಿ ಯಶ್‌ಗೆ ಹುಚ್ಚು ಹಿಡಿದಂತಾಗಿದೆ" ಎಂದು ವೇಣುಸ್ವಾಮಿ ಲೇವಡಿ ಮಾಡಿದ್ದಾರೆ. ಯಶ್ ಈಗ ಹೊಸ ಸಬ್ಜೆಕ್ಟ್ ಹ್ಯಾಂಡಲ್ ಮಾಡಲು ಒದ್ದಾಡುತ್ತಿದ್ದಾರೆ ಮತ್ತು ಕೆಜಿಎಫ್ ಮಟ್ಟದ ಸಿನಿಮಾ ನೀಡಲು ಯಶ್ ಕೈಯಲ್ಲಿ ಆಗುತ್ತಿಲ್ಲ ಎಂದಿದ್ದಾರೆ.
ಸೆಲೆಬ್ರಿಟಿಗಳ ಜಾತಕ ವಿಶ್ಲೇಷಣೆ ಹೆಸರಲ್ಲಿ ಟೀಕೆ ಮಾಡುವ ವೇಣುಸ್ವಾಮಿ, ಯಶ್ ಅಂತಹ ದೊಡ್ಡ ಸ್ಟಾರ್‌ಗಳೇ ಪರಿಸ್ಥಿತಿ ನಿಭಾಯಿಸಲು ಒದ್ದಾಡುತ್ತಿರುವಾಗ, ಇನ್ನು ಚಿತ್ರರಂಗಕ್ಕೆ ಬರುವ ಹೀರೋಗಳ ಮಕ್ಕಳು ಈ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂದೂ ಪ್ರಶ್ನಿಸಿದ್ದಾರೆ. ಟಾಕ್ಸಿಕ್ ಸಿನಿಮಾದ ಚಿತ್ರೀಕರಣದ ಈ ಸಂದರ್ಭದಲ್ಲಿ ಇಂತಹ ನೆಗೆಟಿವ್ ಮಾತುಗಳನ್ನು ಆಡಿರುವ ವೇಣುಸ್ವಾಮಿ ವಿರುದ್ಧ ಯಶ್ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ.
"ಕನ್ನಡದ ನಟ ಎಂಬ ಕಾರಣಕ್ಕೆ ಹಗುರವಾಗಿ ಮಾತನಾಡಬೇಡಿ" ಎಂದು ಎಚ್ಚರಿಕೆ ನೀಡುತ್ತಿದ್ದಾರೆ. "ಯಶ್ ಅವರ ಪರಿಶ್ರಮ ಮತ್ತು ಯಶಸ್ಸನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಇಂತಹ ಹೇಳಿಕೆ ನೀಡುತ್ತಿದ್ದೀರಾ?" ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಈ ಹಿಂದೆ ನಾಗಚೈತನ್ಯ ಮತ್ತು ಸಮಂತಾ ವಿಚ್ಛೇದನದ ಬಗ್ಗೆ ಭವಿಷ್ಯ ಹೇಳಿ ವಿವಾದಕ್ಕೀಡಾಗಿದ್ದ ವೇಣುಸ್ವಾಮಿ, ಈಗ ಯಶ್ ಬಗ್ಗೆ ಆಡಿರುವ ಮಾತುಗಳು ಅವರ ಅಭಿಮಾನಿ ಬಳಗದಲ್ಲಿ ಆಕ್ರೋಶದ ಜ್ವಾಲೆ ಹೊತ್ತಿಸಿದೆ.
ಯಾರು ಈ ವೇಣುಸ್ವಾಮಿ?
ವೇಣುಸ್ವಾಮಿ ಮೂಲತಃ ತೆಲುಗು ಚಿತ್ರರಂಗ (ಟಾಲಿವುಡ್) ಮತ್ತು ಆಂಧ್ರ-ತೆಲಂಗಾಣ ರಾಜಕೀಯ ಕ್ಷೇತ್ರದಲ್ಲಿ ಭವಿಷ್ಯ ಹೇಳುವ ಮೂಲಕ ಗುರುತಿಸಿಕೊಂಡವರು. ನಟಿ ಸಮಂತಾ-ನಾಗ ಚೈತನ್ಯ ವಿಚ್ಛೇದನವಾಗಲಿದೆ ಎಂದು ಮೊದಲೇ ಭವಿಷ್ಯ ನುಡಿದಿದ್ದರು. ಅದು ನಿಜವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಇವರು ರಾತ್ರೋರಾತ್ರಿ ಪ್ರಸಿದ್ಧಿ ಪಡೆದರು. ದೊಡ್ಡ ದೊಡ್ಡ ನಟ-ನಟಿಯರ ಮನೆಯಲ್ಲಿ ಪರಿಹಾರ ಪೂಜೆಗಳನ್ನು ಮಾಡಿಸುವ ಮೂಲಕ ಇವರು ಟಾಲಿವುಡ್‌ನಲ್ಲಿ ಪ್ರಭಾವ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಟಾಲಿವುಡ್ ನಟರ ಬಗ್ಗೆ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ಭವಿಷ್ಯ ನುಡಿಯುವುದನ್ನೇ ಮುಂದುವರಿಸಿರುವ ಇವರು ಹಲವು ಬಾರಿ ಟೀಕೆ ಮತ್ತು ಕಾನೂನು ಸಂಕಷ್ಟಗಳಿಗೂ ಒಳಗಾಗಿದ್ದಾರೆ.












Click it and Unblock the Notifications