ವಿಧಾನಸೌಧ ಆವರಣದಲ್ಲಿ ಬಸವಣ್ಣ- ಕೆಂಪೇಗೌಡರ ಪುತ್ಥಳಿ: ಭೂಮಿ ಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು, ಜನವರಿ 13: ಜಗಜ್ಯೋತಿ ಬಸವಣ್ಣ ಹಾಗೂ ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರ ಚಿಂತನೆಗಳು ಕನ್ನಡ ನಾಡಿನಾದ್ಯಂತ ಪಸರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ವಿಧಾನಸೌಧದ ಮುಂಭಾಗದಲ್ಲಿ ಸಮಾರಂಭದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಮತ್ತು ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣ ಕಾಮಗಾರಿಯಗೆ ಭೂಮಿ ಪೂಜಾ ಕಾರ್ಯ ನೆರವೇರಿಸಿದರು. ಬಳಿಕ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಮಾನವತಾವಾದಿ ವಿಶ್ವಗುರು ಬಸವಣ್ಣ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಈ ಇಬ್ಬರೂ ಮಹಾನ್ ಪುರುಷರ ಆಡಳಿತ ಮತ್ತು ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನೆಲ್ಲಡೆ ಹರಿಯಬೇಕು. ಈ ಶಕ್ತಿ ಸೌಧದಿಂದ ಅದು ಪಸರಿಸಬೇಕು. ಅವರ ವಿಚಾರಗಳು ಎಲ್ಲಿಗೂ ತಲುಪಬೇಕು. ಅದರಿಂದ ಕರ್ನಾಟಕವು ಸಮಗ್ರವಾಗಿ ಅಭಿವೃದ್ಧಿಯಾಗಿರುವ, ಸಾಮರಸ್ಯವಿರುವ, ಭಾರತದಲ್ಲಿಯೇ ಅತ್ಯಂತ ಶ್ರೇಷ್ಠ ರಾಜ್ಯವಾಗಿ ಬೆಳೆಯಬೇಕು. ಈ ಇಬ್ಬರ ಮಹಾತ್ಮರ ಪ್ರೇರಣೆ ವಿಧಾನಸೌಧದಲ್ಲಿ ನಿಲ್ಲಲಿ ಎಂದು ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ಎರಡು ತಿಂಗಳಲ್ಲಿ ಪುತ್ಥಳಿ ಉದ್ಘಾಟನೆ
ಬರುವ ದಿನಗಳಲ್ಲಿ ನಾಡಿನ ಜನತೆಗೆ ಇನ್ನಷ್ಟು ಒಳ್ಳೆಯದಾಗಿ ನವ ಕರ್ನಾಟಕ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಲಾಗಿದೆ. ಈ ಕೆಲಸ ಇಂದಿನಿಂದಲೇ ಪ್ರಾರಂಭವಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ಎಲ್ಲರೂ ಸೇರಿ ಉದ್ಘಾಟನೆ ಮಾಡೋಣ ಎಂದ ಅವರು ಕನ್ನಡ ನಾಡಿಗೆ ಇದೊಂದು ಶುಭದಿನ ಎಂದು ಅಭಿಪ್ರಾಯಪಟ್ಟರು.
ನಾಡು ಕಟ್ಟಿರುವ ಅಪ್ರತಿಮ ನಾಯಕರು
ಕನ್ನಡನಾಡಿನಲ್ಲಿ ಹುಟ್ಟಿ, ಕ್ರಾಂತಿಯನ್ನು ಮಾಡಿದ ಇಬ್ಬರು ಮಹಾನ್ ಪುರುಷರು. ಒಬ್ಬರು ಬಸವಣ್ಣನವರು ವಿಶ್ವಬಂಧು, ಸಾಮಾಜಿಕ, ಆರ್ಥಿಕ ಹಾಗೂ ವೈಚಾರಿಕ ಕ್ರಾಂತಿಯನ್ನು ಕರ್ನಾಟಕದಲ್ಲಿ 12 ನೇ ಶತಮಾನದಲ್ಲಿ ಮಾಡಿ ಜಗತ್ತಿಗೆ ದರ್ಶನವನ್ನು ನೀಡಿದವರು. ಮತ್ತೊಬ್ಬರು ನಾಡಪ್ರಭು ಕೆಂಪೇಗೌಡರು ನಾಡು ಕಟ್ಟಿರುವ ಅಪ್ರತಿಮ ನಾಯಕರು. ಜನಹಿತಕ್ಕಾಗಿ ಕೆರೆ-ಕಟ್ಟೆಗಳು, ಊರು ಕೇರಿಗಳನ್ನು, ಮಾರುಕಟ್ಟೆಗಳನ್ನು ಕಟ್ಟಿ ಮಾದರಿ ಆಡಳಿತ ಮಾಡಿದವರು.

ಅವರಿಬ್ಬರ ಪುತ್ಥಳಿಯನ್ನು ವಿಧಾನಸೌಧ ಮುಂಭಾಗದಲ್ಲಿ ನಿರ್ಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಯಿತು. ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು, ಎಲ್ಲಾ ನಾಯಕರ ಅನುಮತಿ ಪಡೆದು, ಸಚಿವ ಆರ್. ಅಶೋಕ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಆರ್. ಅಶೋಕ್ ಕೆಲವೇ ವಾರಗಳಲ್ಲಿ ಅಗತ್ಯ ಎಲ್ಲ ಸಿದ್ಧತೆ ನಡೆಸಿ ಪುತ್ಥಳಿ ನಿರ್ಮಾಣದ ಶಂಕುಸ್ಥಾಪನೆ ಆಯೋಜಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಕಂದಾಯ ಸಚಿವ ಆರ್.ಅಶೋಕ್, ಆದಿಚುಂಚನಗಿರಿ ಸಂಸ್ಥಾನ ಮಠದ ನಿರ್ಮಲಾನಂದನಾಥ ಶ್ರೀ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications