• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎನ್.ಡಿ.ಎ.ಗೆ ಚುನಾವಣೆ ಪ್ರಾಯೊಜಿಸಿದ 'ರಿಯಾಲಿಟಿ ಶೊ'

By * ಮಧು ಕೃಷ್ಣಮೂರ್ತಿ
|
ಮೊನ್ನೆ ಚುನಾವಣೆಯಲ್ಲಿ ಯುಪಿಎ ನಿರೀಕ್ಷೆಗೂ ಮೀರಿ ಜಯಭೇರಿ ಹೊಡೆದ್ದದ್ದು ಅಪೇಕ್ಷಿತ ರೀತಿಯಲ್ಲೇ 'ಎನ್.ಡಿ.ಎ' ಹಿಂಬಾಲಕರಿಗೆ ಸಹಿಸಲಾಗದ ನಿರಾಶೆ ಮತ್ತು ಕಳವಳ ಉಂಟುಮಾಡಿದೆ. ನನ್ನ ಸ್ನೇಹಿತರ ಗುಂಪಿನಿಂದ ಕೇಳಿಬಂದದ್ದರ ಸಾರಂಶ ಇದು. "ಅಂತೂ ನಮ್ಮ ದೇಶದ ಜನರಿಗೆ ಯಾವಾಗ್ ಬುದ್ದಿ ಬರುತ್ತೋ ಆ ದೇವ್ರಿಗೆ ಗೊತ್ತು. ಅರವತ್ತು ವರ್ಷಗಳ ಕಾಲ ದೇಶವನ್ನು ಹಾಳು ಮಾಡಿದ ಕಾಂಗ್ರೆಸ್ಸಿಗೆ ಮತ್ತೆ ಮತ ನೀಡಿದ್ದಾರೆ. ಎಲ್ಲಿಯವರೆಗೆ ನಮ್ಮ 'ಅನಕ್ಷರಸ್ತ ಮತ್ತು ಅವಿವೇಕಿ' ಮತದಾರರು ತಮ್ಮ ಮತವನ್ನು ಈ ರೀತಿ ಮಾರಿಕೊಳ್ಳುತ್ತಾರೊ ಅಲ್ಲಿವರೆಗೂ ನಮ್ಮ ದೇಶ ಉದ್ಧಾರ ಆಗಲ್ಲ. ಇನ್ನು ಟೆರರಿಸ್ಟ್ ಅಟ್ಯಾಕ್ ಒಂದರ ಮೇಲೆ ಒಂದರಂತೆ ಶುರುವಾಗತ್ತೆ ನೋಡ್ತಾ ಇರಿ". ಈ ಮಾತು ಕೇಳಿದಾಗ ನನಗನ್ನಿಸಿದ್ದು ಹೀಗೆ.

ಎನ್ ಡಿಎ ಬೆಂಬಲಿಗರಿಗೆ ಭಾರತದ ಪ್ರೌಢ ಮತದಾರರ ಮತ ಬೇಕಿದ್ದಲ್ಲಿ ಅವರ ಸಮಸ್ಯೆಗಳನ್ನು, ಆಸೆ-ಆಕಾಂಕ್ಷೆಗಳನ್ನು ಅರ್ಥ ಮಾಡಿಕೊಂಡು, ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿ, ಗೆದ್ದು ಬಂದಲ್ಲಿ ಮಾತಿಗೆ ತಪ್ಪದೆ ಪಾಲಿಸಬೇಕು. ಎನ್.ಡಿ.ಎದ ಪ್ರಮುಖ ಅಂಗಪಕ್ಷ ಭಾಜಪ ಚುನಾವಣೆಗೆ ಮುನ್ನ ಮಾಡಿದ್ದು ಏನೆಂದರೆ ಇಡಿ ಭಾರತದ ಹೆಚ್ಚಿನ ಜನಸಮೂಹದ ಹಿತದ ಬಗ್ಗೆ ಯೋಚಿಸುವ ಬದಲು ಚುನಾವಣೆಯಲ್ಲಿ ಜಯಗಳಿಸಲು ಹಿಂದುಗಳನ್ನೆಲ್ಲ ಒಂದೆಡೆ ಸೇರಿಸಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ತಂತ್ರ ಬಳಸಿದರು. ಹಿಂದುಗಳ ಅಭಿಮಾನ ಮತ್ತು ರಾಮಮಂದಿರ - ಇಂತಹ ಸಮಸ್ಯೆಗಳು ದೇಶದ ಬಹುಜನರ ಸಮಸ್ಯೆಯಾಗದೆ ಹಿಂದುಗಳನ್ನು ಒಂದೆಡೆಗೆ ಆಕರ್ಷಿಸಲು ಬಳಸಿದ ತಂತ್ರವೆಂದು ನಾನು ಹೇಳಬೇಕಿಲ್ಲ. ಅಷ್ಟೇಕೆ ಅವರು ಅಧಿಕಾರಕ್ಕೆ ಬಂದಾಗ ಈ ವಿಷಯಗಳನ್ನು ಮೂಲೆಗೆ ನೂಕಿದ್ದು ಇದಕ್ಕೆ ಸಾಕ್ಷಿಯಾಗಿವೆ. ಈ ಮಧ್ಯೆ ಆಗಾಗ ನಡೆಯುತ್ತಿದ್ದ ಆತಂಕವಾದಿಗಳ ಹೇಯ ಕೃತ್ಯಗಳು ಭಾಜಪಕ್ಕೆ ಇನ್ನೊಂದು ಅಸ್ತ್ರವನ್ನು ನೀಡಿತು.

'ದೇಶದ ಭದ್ರತೆಯನ್ನು ಕಾಪಾಡಲು ಕಾಂಗ್ರೆಸ್ ಪಕ್ಷ ಅಶಕ್ತವಾದುದು. ಮುಸ್ಲಿಮರನ್ನು ಓಲೈಸುವ ಕಾಂಗ್ರೆಸ್ ಪಕ್ಷ, ವೋಟ್-ಬ್ಯಾಂಕ್ ರಾಜಕಾರಣದಿಂದಾಗಿ ದೇಶದ್ರೋಹ ಎಸಗಿದವರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ. ನಾವಾದರೆ ದೇಶದ್ರೋಹಿ ಎಂದು ಅನುಮಾನಿಸಲು ಒಂದು ಸಣ್ಣ ಸಾಕ್ಷಿ ಸಿಕ್ಕರೂ ಸಾಕು ಅವರನ್ನು ಒದ್ದು ಜೈಲಿಗೆ ಹಾಕಲು ಮುಲಾಜು ನೋಡುವುದಿಲ್ಲ. ಅದ್ದರಿಂದ ನಮಗೆ ಮತ ಹಾಕಿ.' ಮುಂಬೈ ಧಾಳಿ ಆದಮೇಲಂತೂ ತಮಗೆ ಜಯ ದೊರಕುವುದರಲ್ಲಿ ಸಂದೇಹವೇ ಇಲ್ಲ ಎಂದುಕೊಂಡು ಭಾಜಪ ಚುನಾವಣೆಗೆ ಹೋಯಿತು.

ಆದರೆ ಚುನಾವಣೆಯ ಪಲಿತಾಂಶ ತೋರಿದ ವಾಸ್ತವಿಕತೆಯೇ ಬೇರೆಯಾಗಿತ್ತು. ಮತದಾರರು ಎನ್.ಡಿ.ಎ. ಬಳಸಿದ್ದ ತಂತ್ರಗಳ ಜಾಲಕ್ಕೆ ಸಿಕ್ಕಿಬೀಳದೆ ಅದರ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಇದಕ್ಕೆ ಕಾರಣಗಳು ಅನೇಕ.

ಈ ಚುನಾವಣೆಯಲ್ಲಿ ಭಾರತದಾದ್ಯಂತ ಸರಾಸರಿ ಹೆಚ್ಚಿನ ಮತದಾರರು ನೀಡಿರುವ ತೀರ್ಪು ಇದು. 'ಇಂದಿನ ಸಂದರ್ಭದಲ್ಲಿ ನಮ್ಮ ಪ್ರತಿನಿಧಿಯಾಗಿ ಲೋಕಸಭೆಗೆ ಹೋಗಲು ಹೆಚ್ಚು ಸಮರ್ಥರಾದವರು 'ಯುಪಿಎ'. ಇದಕ್ಕೆ ಕಾರಣ, 'ಎನ್.ಡಿ.ಎ' ಬೆಂಬಲಿಗರ ಕಣ್ಣಿಗೆ ಕಾಣುವ ದೇಶದ ಸಮಸ್ಯೆಗಳು, ಭಾರತದ ಬಹು ಪಾಲು ಜನರ ಕಣ್ಣಿನಲ್ಲಿ ಪ್ರಧಾನವಾದ ಸಮಸ್ಯೆಗಳೇ ಆಗಿರಲ್ಲಿಲ್ಲ. ಆದ್ದರಿಂದ ಅವರು ಎನ್.ಡಿ.ಎ ಕಡೆ ಆಕರ್ಷಿತರಾಗಲಿಲ್ಲ. ಇಂಗ್ಲೀಶ್ ಭಾಷೆಯಲ್ಲಿ ಬಳಸುವ ಒಂದು ಮಾತು "ಕಲೆಕ್ಟೀವ್ ವಿಸ್ಡಂ". ಅಂದರೆ ಹೆಚ್ಚು ಜನರು ಸೇರಿ ತೆಗೆದುಕೊಂಡ ನಿರ್ಧಾರ ಹೆಚ್ಚು ಸೂಕ್ತವೂ ಮತ್ತು ಪಕ್ವವೂ ಆಗಿರುತ್ತದೆ. ಈ ಪದಗಳು ಪ್ರಜಾಪ್ರಭುತ್ವದ ಮೂಲ ಸಿದ್ಧಾಂತವನ್ನು ಬೇರೆ ರೀತಿಯಲ್ಲಿ ಹೇಳಿವೆ ಅಷ್ಟೇ. ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೇ ಆದ್ಯತೆ. ಅತಿ ಹೆಚ್ಚು ಜನರು, ಯಾರು ಮತ್ತು ಯಾವ ರೀತಿ ತಮ್ಮ ದೇಶದ ಆಡಳಿತ ನಡೆಸಬೇಕು ಎಂದು ಅಪೇಕ್ಷಿಸುತ್ತಾರೋ ಅದೇ ಸರಿಯಾದ ಮಾರ್ಗ. ಮತದಾರರು ನೀಡಿದ ಈ ತೀರ್ಪನ್ನು ಹಿಯಾಳಿಸದೇ ಆ ನಿರ್ಧಾರಕ್ಕೆ ಮನ್ನಣೆ ನೀಡುವುದು ಮತ್ತು ಮುಂದಿನ ಬಾರಿ ಹೀಗಾಗದಂತೆ ಎಚ್ಚರವಹಿಸುವುದು ತಿರಸ್ಕೃತಗೊಂಡ ಗುಂಪು ಮಾಡಬೇಕಾದ ಕೆಲಸ. ಹೀಗೆ ಮಾಡದೆ "ಮತದಾರನ ಹೆಂಡದ ಅಮಲು, ಹಣದ ಆಸೆ ಮತ್ತು ಅವಿವೇಕವೇ ನಮ್ಮ ಸೋಲಿಗೆ ಕಾರಣ" ಎಂದು ಸಬೂಬು ನೀಡುವುದು ದಡ್ಡತನವಷ್ಟೇ ಅಲ್ಲದೆ ಭಾರತೀಯ ಮತದಾರನ/ಳನ್ನು ಅವಹೇಳನ ಮಾಡುವಂತಹ ಮಾತು. ಪರಾಭವಗೊಂಡ ಎನ್.ಡಿ.ಎ. ನಾಯಕರು ಈ ರೀತಿ ಮಾಡದೆ ಸೋಲಿಗೆ ಕಾರಣಗಳನ್ನು ಹುಡುಕುವುದಾಗಿ ಹೇಳಿಕೆ ನೀಡಿರುವುದು ಭಾರತದಲ್ಲಿ ಪ್ರಜಾಪ್ರಭುತ್ವ ಹೊಂದುತ್ತಿರುವ ಪ್ರೌಢಿಮೆಗೆ ಸಾಕ್ಷಿಯಾಗಿದೆ.

ನನಗೆ ಅನಿಸಿರುವುದು ಮತ್ತು ಅನೇಕ ವಾರ್ತಾ ಪತ್ರಿಕೆಗಳಲ್ಲಿ ಉಲ್ಲೇಖಿಸಿರುವಂತಹ ಒಂದು ವಿಷಯ ಇದು. ಚುನಾವಣೆಗೆ ಮುನ್ನ ಅಡ್ವಾಣಿ ಅವರು ಮನಮೋಹನ್ ಸಿಂಗರ ಮೇಲೆ ನಡೆಸಿದ ವೈಯಕ್ತಿಕ ವಾಗ್ದಾಳಿ ಅಡ್ಡಗೋಡೆ ಮೇಲೆ ಕೂತಿದ್ದ ಮತದಾರರನ್ನು ಮನಮೋಹನ್ ಸಿಂಗರ ಬೆಂಬಲಕ್ಕೆ ಓಡಿಹೋಗುವಂತೆ ಮಾಡಿತು. ಅಡ್ವಾಣಿ ಪ್ರಧಾನ ಮಂತ್ರಿಗಳನ್ನು 'ನಿಕಮ್ಮ' (ಕೈಲಾಗದವರು) ಎಂದು ಕರೆದಾಗ ನನಗಂತು ಬೇಜಾರಾಯಿತು. ಸಿಂಗ್ ಕೂಡ ಅಡ್ವಾಣಿಯವರಿಗೆ ಭಾರಿ ತಿರುಗೇಟು ನೀಡಿಯೆಬಿಟ್ಟರು. ಅದೂ ಸಿಂಗ್ ಕೊಟ್ಟಿದ್ದು ಲೆಫ್ಟ್-ರೈಟ್ ಪಂಚು. ಮೊದಲು "ಪುಂಡರು ಮಸೀದಿ ಕೆಡುವುತ್ತಿದಾಗ ನಾನು ಮೂಲೆಯಲ್ಲಿ ಕಣ್ಣೀರು ಸುರಿಸುತ್ತಿರಲಿಲ್ಲ" ಎಂದರು. ಅದರ ಒತ್ತೊಟ್ಟಿಗೆ ಇನ್ನೊಂದು ಮುಷ್ಠಿ ಪ್ರಹಾರ -"ಇವರು ಗೃಹ ಮಂತ್ರಿಯಾಗಿದ್ದಾಗಲೆ ಅಲ್ಲವೆ ಕಂದಾಹಾರ್ ನಡೆದಿದ್ದು. ಈ ಉಕ್ಕಿನ ನಾಯಕ ಅಂದು ಕರಗಿ ಹೋಗಿದ್ದು ನೆನಪಿಲ್ಲವೆ" ಎಂದು ಅಡ್ವಾಣಿಜಿ ಬಗ್ಗೆ ಸಿಂಗ್ ತಮ್ಮ ತಗ್ಗಿದ ಧ್ವನಿಯಲ್ಲಿಯೆ ಹೇಳಿದರೂ ಮತದಾರನಿಗೆ ಅದು ಸಿಂಹದ ಘರ್ಜನೆಯಂತೆ ಕೇಳಿಸಿತು. ಮ.ಮೋ. ಸಿಂಗ್ ಇಲ್ಲಿ ಅಂಡರ್ ಡಾಗ್. ಅಡ್ವಾಣಿಯಾದರೋ ನಾಲ್ಕೈದು ದಶಕಗಳಿಂದ ರಾಜಕೀಯ ಕಣದಲ್ಲಿ ಹೊಡೆದು-ಬಡೆದು ಪಳಗಿದ ಹೆಬ್ಬುಲಿ. ಅಡ್ವಾಣಿ ನಮ್ಮ ದೇಶದ ರಾಜಕಾರಣಿಗಳ ಆಟಗಾರ. ಸಿಂಗ್ ಆದರೋ ಹೊಲಸು ರಾಜಕೀಯದಲ್ಲಿ ಹುಟ್ಟಿಬರದೇ, ಸಮಾಜದಲ್ಲಿ ಗೌರವಿಸಲ್ಪಟ್ಟ ಸಂಭಾವಿತ ಆದರ್ಶಪ್ರಾಯ ಪ್ರೊಫೆಶನಲ್. ಸಿಂಗ್ ತಿರುಗೇಟು ನೀಡಿದ್ದರಿಂದ ಹಿಗ್ಗಿದ ಮತದಾರನಿಗೆ ಸಿಂಗರ ಬಗ್ಗೆ ಮೆಚ್ಚುಗೆ ಮತ್ತು ವಿಶ್ವಾಸ ಗಟ್ಟಿಯಾಯಿತು. ಮತದಾರನಲ್ಲಿ ಈ ಬದಲಾವಣೆ ಮೂಡಿಸಿದ ಕೀರ್ತಿ ಅಡ್ವಾಣಿಜಿ ಮತ್ತು ಅವರ ಆಪ್ತ ಸಲಹೆಗಾರರಿಗೇ ಸಲ್ಲಬೇಕು. ಈ ಕಾರ್ಯಕ್ಕೆ ಬೆನ್ನುತಟ್ಟಿಕೊಳ್ಳುತ್ತಾರೊ ಅಥವ ಕೈಕೈ ಹಿಸುಕಿಕೊಳ್ಳುತ್ತಾರೊ ಅವರಿಗೆ ಬಿಟ್ಟಿದ್ದು. ಸಿಂಗ್ ನೇತೃತ್ವದ ಯೂ.ಪಿ.ಎ ಜಯಕ್ಕೆ ಇದೂ ಒಂದು ಕಾರಣ. ಇದಿಷ್ಟೇ ಕಾರಣ ಎಂದು ಖಂಡಿತ ಇಲ್ಲಿ ಹೇಳುತ್ತಿಲ್ಲ. ಇದರಜೊತೆಗೆ ಬೇರೆ ಅನೇಕ ವಿದ್ಯಮಾನಗಳು ಈ ಸಲದ ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿವೆ. ಕರ್ನಾಟಕ, ಬಿಹಾರ, ಅಂಧ್ರಪ್ರದೇಶ, ಓರಿಸ್ಸ, ದೆಹೆಲಿ ಇವೇ ರಾಜ್ಯಗಳಲ್ಲಿ ಆಡಳಿತದಲ್ಲಿದ್ದ ಪಕ್ಷಗಳ ಜನಪ್ರಿಯತೆ ಅಲ್ಲಿನ ಫಲಿತಾಂಶಗಳಿಗೆ ಕಾರಣವಾಗಿದೆ. ಅಯೋಧ್ಯೆಪಟ್ಟಣ ಇರುವ ರಾಜ್ಯವಾದ ಉತ್ತರಪ್ರದೇಶದಲ್ಲಿ ವರುಣ್ ಗಾಂಧಿ ತಾವು ಗೆದ್ದರೂ, ಅವರ ಆವೇಶಭರಿತ ಭಾಷಣ ಎನ್.ಡಿ.ಎ.ಗೆ ಕುತ್ತು ತಂದಿರುವುದನ್ನು ನೋಡಬಹುದು.

ಈ ಎಲ್ಲ ಕಾರಣಗಳನ್ನು ಎನ್.ಡಿ.ಎ. ಅರ್ಥಮಾಡಿಕೊಂಡರೆ ಮುಂದಿನ ಚುನಾವಣೆಗಳಲ್ಲಿ ಮತದಾರಳ/ನ ಮನ ಓಲೈಸುವುದರಲ್ಲಿ ಯಶಸ್ವಿ ಆಗಬಹುದು. ಅಥವ 'ಈ ರೀತಿಯ ಮಧ್ಯಪಥದ ಸಹವಾಸವೇ ಬೇಡ. ಹಿಂದುತ್ವವಾದವನ್ನು ತೀವ್ರವಾಗಿ ಬಳಸಿದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ' ಎಂದು ಯೋಚಿಸಿ ಎನ್.ಡಿ.ಎ. ಆ ದಿಕ್ಕಿನಲ್ಲಿ ಹೋಗತೊಡಗಿದರೆ ಅದೊಂದು ದೊಡ್ಡ ದುರಂತ. ಜವಾಬ್ದಾರಿಯುತ ರಾಜಕರಣದ ಮೂಲಕ ರಾಷ್ಟ್ರಹಿತವನ್ನು ಕಾಯುವ ಕೆಲಸವನ್ನು ಎನ್.ಡಿ.ಎ. ತನ್ನದಾಗಿಸಿಕೊಳ್ಳುವುದು ಎಂದು ಇಲ್ಲಿ ಆಶಿಸಬಹುದಷ್ಟೆ.

ಇಲ್ಲಿ ಗಮನಿಸಬಹುದಾದ ಒಂದು ವಿಷಯ ಏನೆಂದರೆ ಭಾರತೀಯ ಮತದಾರರು ದೂರದೂರ ಪ್ರದೇಶಗಳಲ್ಲಿದ್ದರೂ, ಬೇರೆ ಬೇರೆ ಸಮಯಗಳಲ್ಲಿ ಮತ ಚಲಾಯಿಸಿದರೂ ಸಮಾನ ಮನಸ್ಕರಾಗಿ ಮತ ಚಲಾಯಿಸಿದ್ದಾರೆ. ಇದು ವಿಸ್ಮಯಕಾರಿ ಅಂಶ ಸಂಭ್ರಮ ಮೂಡಿಸುವಂತಹುದು ಎಂದರೆ ತಪ್ಪೆನಿಸುವುದಿಲ್ಲ. ಇದು ಭಾರತೀಯರು 'ಅನೇಕತೆಯಲ್ಲಿ ಏಕತೆಯನ್ನು' ಮೆರೆಸುತ್ತಿರುವ ಒಂದು ದೃಷ್ಟಾಂತ. ಮತದಾರ ಪ್ರಭುವಿಗೆ ಅಭಿನಂದನೆಗಳು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more