Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ
Karnataka Budget 2026: ಕರ್ನಾಟಕದ 2026 - 2027ನೇ ಸಾಲಿನ ಬಜೆಟ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದಾರೆ. ಈ ಬಾರಿಯ ಕರ್ನಾಟಕ ಬಜೆಟ್ 40 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ಮುಖ್ಯಮಂತ್ರಿ ಅವರು ಬಜೆಟ್ ಮೇಲಿನ ಭಾಷಣ ಪ್ರಾರಂಭಿಸಿದ್ದು, ಈ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಸೂಕ್ಷ್ಮವಾಗಿ ತಿವಿದಿದ್ದಾರೆ.
ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ದೊಡ್ಡ ಸಾಧನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಕರ್ನಾಟಕವು ಅಭಿವೃದ್ಧಿಯ ಹಾದಿಯಲ್ಲಿ ಸಾಗಿದೆ ಇದು ನಮ್ಮ ಆಡಳಿತ ಮಾದರಿಯಾಗಿದೆ ಎಂದಿದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಹಿತಾಸಕ್ತಿಯ ದೃಷ್ಟಿಯಿಂದ ಎಲ್ಲರೂ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಂತಹ ಹೆಚ್ಚಿನ ಬಂಡವಾಳ ಆಕರ್ಷಣೆ, ನಗರಾಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಇನ್ನು ನಾವು ಬೆಂಕಿಯನ್ನು ಬೆಳಕಾಗಿಸಿ ಮುಂದಿನ ಹೆಜ್ಜೆ ಇರಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಆದಾಯದ ಮೂಲ ಅಂದಾಜು ಮೊತ್ತ (ಕೋಟಿ ರೂ.ಗಳಲ್ಲಿ)
ವಾಣಿಜ್ಯ ತೆರಿಗೆ 1,25,000 ಕೋಟಿ
ರಾಜ್ಯ ಅಬಕಾರಿ 45,000 ಕೋಟಿ
ನೋಂದಣಿ ಮತ್ತು ಮುದ್ರಾಂಕ 29,000 ಕೋಟಿ
ಮೋಟಾರು ವಾಹನ ತೆರಿಗೆ 15,500 ಕೋಟಿ
ಇತರೆ ಮೂಲಗಳು ₹5,500 ಕೋಟಿ
ಕರ್ನಾಟಕ ಬಜೆಟ್‌ನ ಮುಖ್ಯಾಂಶಗಳು
ಕರ್ನಾಟಕದ 2026 - 2027ನೇ ಸಾಲಿನ ಬಜೆಟ್ ಗಾತ್ರ ಹೆಚ್ಚಳವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 6, 2026 ರಂದು ಮಂಡಿಸಿದ ಕರ್ನಾಟಕ ಬಜೆಟ್‌ನ ಗಾತ್ರವು ಒಟ್ಟು 4,48,004 ಕೋಟಿ ಆಗಿದೆ. ಈ ಬಾರಿಯೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ಮತ್ತು ಮೂಲಸೌಕರ್ಯ ವಿಸ್ತರಣೆಗೆ ಒತ್ತು ಕೊಡಲಾಗಿದೆ. ಬಜೆಟ್‌ನಲ್ಲಿ ಶಿಕ್ಷಣಕ್ಕೆ 47,224 ಕೋಟಿ ರೂ., ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 34,929 ಕೋಟಿ ರೂ. ಹಾಗೂ ಕೃಷಿ ವಲಯಕ್ಕೆ 8,373 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ
ಸಾಲ ಪ್ರಮಾಣ ಹೆಚ್ಚಳ
ಇನ್ನು ಈ ಬಾರಿಯ ಕರ್ನಾಟಕ ಬಜೆಟ್‌ನಲ್ಲಿ ಸಾಲದ ಪ್ರಮಾಣವು ಸಹ ಹೆಚ್ಚಳವಾಗಿದೆ. ಒಟ್ಟು ಬಜೆಟ್ ಗಾತ್ರ 4,48,004 ಕೋಟಿ ರೂ. (13.3% ಹೆಚ್ಚಳ). ರಾಜ್ಯ ಸರ್ಕಾರವು ಸುಮಾರು 1.26 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ.
ಬೆಂಗಳೂರು ಅಭಿವೃದ್ಧಿಗೆ ಆದ್ಯತೆ
ಈ ಬಾರಿಯು ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಜೆಟ್‌ನಲ್ಲಿ ಬೆಂಗಳೂರು ನಗರದ ಅಭಿವೃದ್ಧಿಗೆ 3,000 ಕೋಟಿಯಿಂದ 7,000 ಕೋಟಿ ರೂ. ವರೆಗೆ ಅನುದಾನ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಲ್ಲಿ 80,000 ಆಸನಗಳ ಸಾಮರ್ಥ್ಯದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
ನಮ್ಮ ಮೆಟ್ರೋ ವಿಸ್ತರಣೆ: 2026-27 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಸೇವೆಯನ್ನು 41 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳ ಪೂರ್ಣಗೊಳಿಸುವಿಕೆಗೆ ಉದ್ದೇಶಿಸಲಾಗಿದೆ.
ಉದ್ಯೋಗ ಸೃಷ್ಟಿ: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 56,000ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಆದ್ಯತೆ ನೀಡುವುದಾಗಿ ಹೇಳಲಾಗಿದೆ. ಇದರಲ್ಲಿ ಗೃಹ ಇಲಾಖೆಯ 8,000 ಹುದ್ದೆಗಳು ಸೇರಿವೆ.
ಕೃಷಿ ಮತ್ತು ನೀರಾವರಿ: ಕೃಷಿ ವಲಯಕ್ಕೆ 8,373 ಕೋಟಿ ರೂ. ಮತ್ತು ನೀರಾವರಿ ಯೋಜನೆಗಳಿಗೆ 22,436 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
ಕಂದಾಯ ಮತ್ತು ಹಣಕಾಸು: ಅಬಕಾರಿ ಇಲಾಖೆಗೆ 45,000 ಕೋಟಿ ರೂ. ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಒಟ್ಟಾರೆ ಈ ಬಜೆಟ್‌ನಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.












Click it and Unblock the Notifications