ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ
T20 World Cup 2026: ಟೀಂ ವಿಶ್ವಕಪ್ 2026ರ ನಿರ್ಣಾಯಕ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪರ ಓಪನರ್ ಆಗಿ ಕಣಕ್ಕಳಿದ ಅಭಿಷೇಕ್ ಶರ್ಮಾ ಮತ್ತೆ ಫ್ಲಾಪ್ ಆಗಿದ್ದಾರೆ. ಈ ಹಿನ್ನೆಲೆ ಅವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ ಬಗ್ಗೆಯೂ ಮಾತನಾಡಿದ್ದಾರೆ.
ಮಾಜಿ ಟೀಮ್ ಇಂಡಿಯಾ ಮುಖ್ಯ ತರಬೇತುದಾರ ರವಿ ಶಾಸ್ತ್ರಿ ಅವರು ಸಂಜು ಸ್ಯಾಮ್ಸನ್ ಅವರ ಸದೃಢ ಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಹೆಚ್ಚು ಜವಾಬ್ದಾರಿಯುತ ಆಟ ಆಡುತ್ತಿದ್ದು, ಉತ್ತಮ ಲಯದಲ್ಲಿದ್ದಾರೆ. ಅವರು ಸಮಯ ನೋಡಿಕೊಂಡು ಬಿಗ್ ಶಾಟ್‌ಗಳನ್ನು ಹೊಡೆಯುವಲ್ಲಿ ಪರಿಣಿತಿ ಹೊಂದಿದ್ದಾರೆ ಎಂದು ಹೇಳಿದರು.

ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 42 ಎಸೆತಗಳಲ್ಲಿ 89 ರನ್ ಚಚ್ಚಿದ ಸ್ಯಾಮ್ಸನ್, ಟೀಂ ಇಂಡಿಯಾ ಗೆಲುವಿನ ರೂವಾರಿಯಾದರು. ಇದಕ್ಕೂ ಮೊದಲು, ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮಹತ್ವದ ಪಂದ್ಯದಲ್ಲಿ 50 ಎಸೆತಗಳಲ್ಲಿ 97 ರನ್ ಸಿಡಿಸುವ ಮೂಲಕ ಹಾಲಿ ಚಾಂಪಿಯನ್ ಭಾರತ ತಂಡ ಸೆಮಿಫೈನಲ್ ಪ್ರವೇಶಕ್ಕೆ ಪ್ರಮುಖ ಪಾತ್ರವಹಿಸಿದರು.
ಸಂಜು ಸ್ಯಾಮ್ಸನ್ ಬಗ್ಗೆ ರವಿಶಾಸ್ತ್ರಿ ಹೇಳಿದ್ದೇನು?
"ಸಂಜು ಸ್ಯಾಮ್ಸನ್ ಅವರು ಅಂತಿಮವಾಗಿ ತಾವು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ ಎಂಬುದನ್ನು ಅರಿತುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಬಿಗ್ ಶಾಟ್‌ಗಳನ್ನು ಹೊಡೆಯುವಲ್ಲಿ ಹೆಚ್ಚು ಬುದ್ಧಿವಂತಿಕೆಯನ್ನು ತೋರಬೇಕಿದೆ. ಅವರ ಬಳಿ ಕ್ರಿಕೆಟ್ ಪುಸ್ತಕದಲ್ಲಿರುವ ಪ್ರತಿಯೊಂದು ಶಾಟ್ ಕೂಡ ಇದೆ, ಆದರೆ ಏಕಾಗ್ರತೆಯ ಕೊರತೆಯೇ ಅವರಿಗೆ ದೊಡ್ಡ ಸಮಸ್ಯೆಯಾಗಿತ್ತು," ಎಂದು ಹೇಳಿದ್ದಾರೆ.
"ಸಂಜು ಸ್ಯಾಮ್ಸನ್ ಅವರು ಮಾನಸಿಕವಾಗಿ ಹೆಚ್ಚು ಬಲಿಷ್ಠರಾಗಿದ್ದಾರೆ. ತಂಡಕ್ಕೆ ಬಂದಾಗಿನಿಂದ ಅವರ ಪ್ರತಿಭೆಯ ಬಗ್ಗೆ ಯಾರೂ ಎಂದಿಗೂ ಅನುಮಾನ ವ್ಯಕ್ತಪಡಿಸಿರಲಿಲ್ಲ. ಜನರು ನಿರಾಶೆಗೊಂಡಿದ್ದು ಅವರು ತೋರಿಸಬೇಕಾಗಿದ್ದ ಸ್ಥಿರತೆಯ ಕೊರತೆಯ ಬಗ್ಗೆ. ಆದರೆ, ಈಗ ಅವರು ಆ ಹಂತವನ್ನು ದಾಟಿ 'ಪರಿಪಕ್ವತೆ'ಯನ್ನು ಹೊಂದಿದ್ದಾರೆ," ಎಂದು ಹೇಳಿದ್ದಾರೆ.
"ಸಂಜು ಇನ್ನೂ ಕೇವಲ 31 ವರ್ಷದವರು ಮತ್ತು ನಿಜವಾದ 'ಮ್ಯಾಚ್ ವಿನ್ನರ್'. ಗುರುವಾರ ಅವರು ಆಡಿದ ಸ್ಫೋಟಕ ಆಟವನ್ನು ನೋಡಿದರೆ, ಅದರಲ್ಲಿ ಕ್ಲಾಸ್, ಟಚ್, ಪವರ್ ಮತ್ತು ಅದ್ಭುತ ಶಕ್ತಿಯಿದೆ. ಇದು ನಿಜಕ್ಕೂ ನಂಬಲಾಗದಂತಹ ಪ್ರದರ್ಶನ," ಎಂದು ಬಣ್ಣಿಸಿದ್ದಾರೆ.
ಅಭಿಷೇಕ್ ಶರ್ಮಾ ಕುರಿತು ಮಹತ್ವದ ಸಲಹೆ
ಸಂಜು ಸ್ಯಾಮ್ಸನ್ ಅವರ ಅದ್ಭುತ ಫಾರ್ಮ್‌ಗೆ ತದ್ವಿರುದ್ಧವಾಗಿ, ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ಭಾನುವಾರದ ಫೈನಲ್ ಪಂದ್ಯದ ದೃಷ್ಟಿಯಿಂದ ಚಿಂತೆಯ ವಿಷಯವಾಗಿದೆ. ಆದರೂ, ವಿಶ್ವದ ನಂ.1 ಟಿ20 ಬ್ಯಾಟರ್ ಆಗಿರುವ ಅಭಿಷೇಕ್ ಅವರ ಮೇಲೆ ತಂಡದ ಆಡಳಿತ ಮಂಡಳಿ ವಿಶ್ವಾಸವಿಡಬೇಕು ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
"ಈಗ ತಂಡ ಉತ್ತಮ ಲಯದಲ್ಲಿರುವುದರಿಂದ ಯಾವುದೇ ಬದಲಾವಣೆ ಮಾಡಬೇಡಿ. ಅವರ ಮೇಲೆ ನಂಬಿಕೆ ಇರಿಸಿ, ಅವರಿಗೆ ನಿಮ್ಮ ಸಾಮರ್ಥ್ಯದ ಮೇಲೆ ಭರವಸೆಯಿರಲಿ ಮತ್ತು ಭಯಪಟ್ಟು ಆಡಬೇಡಿ ಎಂದು ಹೇಳಿ. ನಾವು ನಿಮ್ಮನ್ನು ಬೆಂಬಲಿಸುತ್ತೇವೆ, ನಿಮ್ಮ ಶಕ್ತಿಯನ್ನು ನಂಬಿ ಆಡಿ ಎಂದು ಹೇಳಿ. ಕೊನೆಯ ಪಂದ್ಯವೇ ಅವರಿಗೆ ಅತ್ಯುತ್ತಮ ಪಂದ್ಯವಾಗಬಹುದು," ಎಂದು ರಾವಿಶಾಸ್ತ್ರಿ ಸಲಹೆ ನೀಡಿದ್ದಾರೆ. ಯಾಕಂದ್ರೆ ಈಗಾಗಲೇ ಸತತ ವಿಫಲರಾಗಿ ನಿರಾಸೆ ಮೂಡಿಸಿರುವ ಅಭಿಷೇಕ್ ಶರ್ಮಾ ಅವರನ್ನು ಫೈನಲ್ ಪಂದ್ಯದಲ್ಲಿ ಆಡಿಸಬೇಕೋ, ಬೇಡವೋ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಇದರ ಬೆನ್ನಲ್ಲೇ ರವಿಶಾಸ್ತ್ರಿ ಅವರು ಈ ಮಹತ್ವದ ಸಲಹೆ ನೀಡಿ ಗಮನ ಸೆಳೆದಿದ್ದಾರೆ.












Click it and Unblock the Notifications