ಬೆಂಗಳೂರಿನ ಹಲವೆಡೆ ಗುಡುಗು, ಮಿಂಚು ಸಹಿತ ಭಾರೀ ಮಳೆ: ಮನೆಯಿಂದ ಆಚೆ ಬರುವ ಮುನ್ನ ಈ ವಿಷಯ ತಿಳಿದಿರಲಿ
ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ ಮಧ್ಯಾಹ್ನದ ನಂತರ ದಿಢೀರನೆ ಗುಡುಗು ಸಹಿತ ಭಾರೀ ಮಳೆ ಆರಂಭವಾಗಿದೆ. ಐಟಿ ಕಾರಿಡಾರ್ ಎಂದೇ ಕರೆಸಿಕೊಳ್ಳುವ ಕೋರಮಂಗಲ ಹಾಗೂ ಹಳೆಯ ಬೆಂಗಳೂರಿನ ಪ್ರಮುಖ ಭಾಗಗಳಾದ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೋರೇಷನ್ ಸರ್ಕಲ್ ಸುತ್ತಮುತ್ತ ಮಳೆಯ ಅಬ್ಬರ ಜೋರಾಗಿದೆ. ಇದರ ಜೊತೆಗೆ ಪ್ಯಾಲೆಸ್ ಗ್ರೌಂಡ್ ಮತ್ತು ಸದಾಶಿವನಗರದ ಸುತ್ತಮುತ್ತ ವರುಣನ ಆರ್ಭಟಕ್ಕೆ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆಯಾಗಿದ್ದು ಒಂದೆಡೆ ತಂಪು ನೀಡಿದ್ದರೆ, ಮತ್ತೊಂದೆಡೆ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಬೆಂಗಳೂರಿನ 'ವೆದರ್ ಯೂನಿಯನ್' ಹವಾಮಾನ ಕೇಂದ್ರಗಳಲ್ಲಿ ಭಾರಿ ಮಳೆ ದಾಖಲಾಗಿದ್ದು ಬ್ರೂಕ್‌ಫೀಲ್ಡ್‌ನಲ್ಲಿ 85.8 ಮಿ.ಮೀ ಮಳೆಯಾಗಿದೆ. ಹಾಗೆಯೇ ವೈಟ್‌ಫೀಲ್ಡ್‌ನಲ್ಲಿ 69.6 ಮಿ.ಮೀನಷ್ಟು ಮಳೆಯಾಗಿದೆ.

ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ
ಮಳೆಯ ಅಬ್ಬರ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರದ ಹೊರವಲಯದಲ್ಲಿರುವ ನೆಲಮಂಗಳ, ನಾಗಸಂದ್ರ, ಜಾಲಹಳ್ಳಿ ಕ್ರಾಸ್, ಚಿಕ್ಕಬಾಣಾವರ ಸೇರಿದಂತೆ ತುಮಕೂರು ರಸ್ತೆಯ ಭಾಗದಲ್ಲಿ ಮಧ್ಯಾಹ್ನದಿಂದಲೇ ಜೋರು ಮಳೆ ಆರಂಭವಾಗಿದೆ. ಇದರಿಂದ ಹೆದ್ದಾರಿ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ಮುಂದಿನ ಮೂರು ಗಂಟೆಗಳಲ್ಲಿ ಈ ಆರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ.
ಮನೆಯಿಂದ ಆಚೆ ಬರುವ ಮುನ್ನ ಎಚ್ಚರ
ಸಾಮಾನ್ಯವಾಗಿ ವಾರಾಂತ್ಯದ ಸಂಜೆ ಹೊತ್ತಿನಲ್ಲಿ ಶಾಪಿಂಗ್, ಸಿನಿಮಾ ಅಂತ ಹೊರಡುವ ಮಂದಿಗೆ ಈ ಮಳೆ ದೊಡ್ಡ ಬ್ರೇಕ್ ಹಾಕಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ಸಂಜೆ ಮತ್ತು ರಾತ್ರಿ ವೇಳೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಅನಿವಾರ್ಯ ಇಲ್ಲದಿದ್ದರೆ ಹೊರಗಡೆ ಹೋಗುವ ಪ್ಲಾನ್ ಮಾಡಿಕೊಂಡಿದ್ರೆ ಅದನ್ನು ಕ್ಯಾನ್ಸಲ್ ಮಾಡಿಕೊಳ್ಳೋದು ಒಳ್ಳೇದು. ರಸ್ತೆಗಳಲ್ಲಿ ಮಳೆ ನೀರು ಶೇಖರಣೆಯಾಗಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳು ಹೆಚ್ಚಿವೆ. ಕಚೇರಿಯಿಂದ ಮನೆಗೆ ಮರಳುವ ಉದ್ಯೋಗಿಗಳು ಆದಷ್ಟು ಬೇಗ ಮನೆ ತಲುಪುವುದು ಅಥವಾ ಮಳೆ ನಿಂತ ಮೇಲೆ ಪ್ರಯಾಣ ಬೆಳೆಸುವುದು ಸುರಕ್ಷಿತ.
ಬೆಂಗಳೂರು ಟ್ರಾಫಿಕ್ ಮುನ್ನೆಚ್ಚರಿಕೆ
ಭಾರೀ ಮಳೆಯಿಂದಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಅಂಡರ್‌ಪಾಸ್‌ಗಳಲ್ಲಿ ನೀರು ನುಗ್ಗುವ ಅಪಾಯವಿರುತ್ತದೆ. ಸಿಲ್ಕ್ ಬೋರ್ಡ್, ಕೆ.ಆರ್.ಪುರಂ, ಹೆಬ್ಬಾಳ, ಮತ್ತು ಮೆಜೆಸ್ಟಿಕ್ ಸುತ್ತಮುತ್ತ ಈಗಾಗಲೇ ವಾಹನ ದಟ್ಟಣೆ ಹೆಚ್ಚಾಗಿದೆ. ಟ್ರಾಫಿಕ್ ಪೊಲೀಸರು ಸುಗಮ ಸಂಚಾರಕ್ಕಾಗಿ ಶ್ರಮಿಸುತ್ತಿದ್ದರೂ, ಮಳೆಯಿಂದಾಗಿ ವಾಹನಗಳ ವೇಗ ಗಣನೀಯವಾಗಿ ಕಡಿಮೆಯಾಗಿದೆ.
ದ್ವಿಚಕ್ರ ವಾಹನ ಸವಾರರು ವಿಶೇಷವಾಗಿ ಮಳೆಗಾಲದಲ್ಲಿ ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಮಳೆ ನೀರಿನಿಂದ ರಸ್ತೆಯಲ್ಲಿರುವ ಗುಂಡಿಗಳು ಮುಚ್ಚಿ ಹೋಗುವುದರಿಂದ ಅಪಘಾತಗಳು ಸಂಭವಿಸುವ ಅಪಾಯ ಹೆಚ್ಚಿರುತ್ತದೆ. ಅದೇ ರೀತಿ, ಪಾದಚಾರಿಗಳು ಫುಟ್‌ಪಾತ್‌ಗಳಲ್ಲಿ ನಡೆದಾಡುವಾಗ ತೆರೆದ ಚರಂಡಿಗಳು ಅಥವಾ ಮ್ಯಾನ್‌ಹೋಲ್‌ಗಳ ಬಗ್ಗೆ ಎಚ್ಚರ ವಹಿಸಬೇಕು ಎಂದು ತಿಳಿಸಲಾಗಿದೆ.














Click it and Unblock the Notifications