ಬೆಳಕು ಹುಡುಕು ಪುಟ್ಟೀ, ನಿನ್ನ ನೆರಳಾಗಿರ್ತಾನೆ ಅಪ್ಪ: ಮಗಳಿಗೊಂದು ಪತ್ರ

ಅಪ್ಪ-ಮಗಳ ಬಂಧ ಒಂದು ಜನ್ಮದ್ದಲ್ಲ. ಯಾವುದೋ ಕಾರಣಕ್ಕೆ ಅಪ್ಪನನ್ನು ಕಳೆದುಕೊಂಡ ಮಗಳಿಗೆ ಅಪ್ಪನೆಂಬುದು ಕಾಡುವ ನೆನಪು, ಎಂದಿಗೂ ಭರ್ತಿಯಾಗದ ಶೂನ್ಯ. ಮಗಳನ್ನು ಬೆಳೆಸುವ ಕರ್ತವ್ಯ ಈಡೇರದ ಅಪ್ಪನಿಗೆ ಈಗ ಭೌತಿಕ ಶರೀರವಿಲ್ಲ. ಅವನ ಆತ್ಮಕ್ಕೂ ಮಗಳೇ ಸರ್ವಸ್ವ. ಇಂಥ ಅಪ್ಪ-ಮಗಳ ಒಡನಾಟದ ಬಂಧ ಕಟ್ಟಿಕೊಡುವ ಪತ್ರ ಇದು. ಅಪ್ಪಂದಿರದ ದಿನದ ಹಿನ್ನೆಲೆಯಲ್ಲಿ ತೇಲಿ ಬಂದ ಲಹರಿ. (ಬರಹ: ಡಿ.ಎಂ.ಘನಶ್ಯಾಮ)

ಪ್ರೀತಿಯ ಮಗಳೇ,

ನಿನಗೆ ಪತ್ರ ಬರೆಯಬೇಕೆನ್ನುವ ಹಂಬಲವೇನೋ ಹತ್ತಾರು ವರ್ಷಗಳಿಂದ ಇತ್ತು. ಆದರೆ ಅವಕಾಶವೇ ಬಂದಿರಲಿಲ್ಲ. ಹಾಗೆ ನೋಡಿದರೆ ನಿನಗೆ ಪತ್ರ ಬರೆಯಬೇಕು ಅಂತ ನನಗೆ ಅನ್ನಿಸೋದೇ ಹಾಸ್ಯಾಸ್ಪದ. ಬರೆದೇ ಬದುಕು ಕಟ್ಟಿಕೊಳ್ಳಬೇಕೆಂದು ಹೊರಟ ನನಗೆ ಪೆನ್ನೇ ದೊಡ್ಡ ಆಸ್ತಿಯಾಗಿತ್ತು. ಆದರೆ ದೇವರು ದೇಹವನ್ನೇ ಕಿತ್ತುಕೊಂಡ ಮೇಲೆ ಪೆನ್ನು ಹಿಡಿಯುವುದಾದರೂ ಹೇಗೆ ಅನ್ನಿಸಿ ಮೂಡುವ ಮೊದಲೇ ಪದಗಳು ಕರಗುತ್ತಿದ್ದವು. ಆದರೂ ಒಮ್ಮೊಮ್ಮೆ ಅಂಥ ಅಸ್ಪಷ್ಟ ಪದಗಳೂ ನಿನ್ನಲ್ಲಿ ಸ್ಪಷ್ಟವಾಗುತ್ತಿದ್ದವು. ಆಗೆಲ್ಲಾ ವಾವ್ ಅನ್ನಿಸಿ ಖುಷಿಪಡುತ್ತಿದ್ದೆ. ಈಗ ಹೇಗೋ ಒಂದು ಅವಕಾಶ ಸಿಕ್ತು ನೋಡು. ಮಿಸ್ ಮಾಡದೇ ಬರೆದುಬಿಟ್ಟೆ. ನಿನಗೆ ಮೈದವಡಿ ಸಾಂತ್ವನ ಹೇಳಲು ನನ್ನ ದೇಹವಂತೂ ಇಲ್ಲ. ಆದರೆ ಮನಸ್ಸು ನಿನ್ನ ಮುಂದಿಡಲು ಈ ಪದಗಳಿವೆ.

ಮೊನ್ನೆಯಷ್ಟೇ ನೀನೊಂದು ವಾಟ್ಸ್ಯಾಪ್ ಸ್ಟೇಟಸ್ ಹಾಕಿಕೊಂಡಿದ್ದೆ ನೆನಪಿದ್ಯಾ? ಈ ಹಿಂದೆ ನಿನ್ನ ಜೊತೆಗಿದ್ದವರೊಬ್ಬರು ಅದನ್ನು ನೋಡುವಾಗ ಕಣ್ಣೀರಾಗಿದ್ದರು. ನಿಜ ಅಂದ್ರೆ ಅದು ನನ್ನದೇ ಕಣ್ಣೀರಾಗಿತ್ತು.

Fathers Day Special

ನೀನೇನು ಬರೆದುಕೊಂಡಿದ್ದೆ ಪುಟ್ಟಿ...

"ಅಪ್ಪಾ, ನೀನು ಇರಬೇಕಿತ್ತು. ನಿನ್ನನ್ನು ನಾನು ವಿಪರೀತ ಮಿಸ್ ಮಾಡಿಕೊಳ್ತಿದ್ದೇನೆ. ನಿನ್ಹತ್ರ ಮಾತಾಡೋದು, ಜಗಳ ಆಡೋದು, ತಮಾಷೆ ಮಾಡೋದು, ರೇಗಿಸೋದು ರಾಶಿಯಿದೆ. ನೀನು ನನಗೆ ಸಿಗಲೇಬೇಕು ಅಪ್ಪಾ, ನೀನು ನನ್ನ ಜೊತೆಗೆ ಇರಬೇಕಿತ್ತು ಅಪ್ಪಾ, ನನ್ನಿಂದ ಆಗ್ತಿಲ್ಲ, ನಾನೂ ನಿನ್ಹತ್ರಕ್ಕೆ ಬಂದು ಬಿಡ್ಲಾ?"

ಅಲ್ವೇ ಚಿನ್ನಿ, ನಾನು ಇಲ್ಲ ಅಂತ ನಿನಗೆ ಯಾರೇ ಹೇಳಿದ್ದು? ನಿನ್ನನ್ನು ಬಿಟ್ಟು ನಾನೆಲ್ಲಿಗೂ ಹೋಗಿಲ್ಲ-ಹೋಗಲ್ಲ. ಅಚಾನಕ್ ಏನೋ ಆಗಬಾರದ್ದು ಆಗಿಹೋಯ್ತು, ನನ್ನ ದೇಹ ಉಳೀಲಿಲ್ಲ. ಆದರೆ ಈ ಶರೀರಕ್ಕೆ ಮೀರಿದ್ದು ಒಂದೇನೋ ಇರುತ್ತೆ ಗೊತ್ತಾ? ಅದು ಹಾಗೆಯೇ ನಿಂತು ಹೋಯ್ತು. ತಕ್ಷಣಕ್ಕೆ ಮತ್ತೊಂದು ಜನ್ಮವೋ, ಮತ್ತೊಂದು ಶರೀರವೋ ನನಗೆ ಸಿಗಲೂ ಇಲ್ಲ, ನಾನು ಬಯಸಲೂ ಇಲ್ಲ. ನನಗೆ ನನ್ನ ಕಂದಮ್ಮನ ಸುತ್ತ ಅಲೆಯುವುದೇ ಖುಷಿ. ಯಾಕಂದ್ರೆ ನಾನು ದೇಹ ಬಿಡುವ ಹೊತ್ತಿಗೂ ನೀನೇ ನೆನಪಾಗ್ತಿದ್ದೆ, ನಿನ್ನ ಭವಿಷ್ಯ ಹೇಗೋ ಅನ್ನೋ ಚಿಂತೆಯೇ ಆ ಹೊತ್ತಿನಲ್ಲೂ ನನ್ನಲ್ಲಿ ತುಂಬಿಕೊಂಡಿತ್ತು. ಅದಕ್ಕೇ ಇರಬೇಕು, ನಿನ್ನ ಬೆಳವಣಿಗೆ, ಆಟಪಾಠ ನೋಡಿಕೊಳ್ತಾ ನಿನ್ನ ಸುತ್ತಮುತ್ತ ಇದ್ದುಬಿಡು ಅಂತ ದೇವರು ನನ್ನನ್ನು ಹೀಗೆಯೇ ಉಳಿಸಿಬಿಟ್ಟ.

ಮಗಳಿಗಾಗಿ ಆಟೋವನ್ನೇ ಮನೆಯನ್ನಾಗಿಸಿಕೊಂಡ ಅಪ್ಪ; ವಿಡಿಯೋ ನೋಡಿ ಕಣ್ಣೀರಿಟ್ಟ ನೆಟ್ಟಿಗರು
ಮಗಳಿಗಾಗಿ ಆಟೋವನ್ನೇ ಮನೆಯನ್ನಾಗಿಸಿಕೊಂಡ ಅಪ್ಪ; ವಿಡಿಯೋ ನೋಡಿ ಕಣ್ಣೀರಿಟ್ಟ ನೆಟ್ಟಿಗರು

ನೀನು ಮರೆತಿರಬಹುದು. ನಿನಗಿನ್ನೂ ಆಗ ಹತ್ತು ವರ್ಷ. ಒಂದಿನ ಜೋರು ಮಳೆಯಲ್ಲಿ ನೀನು ನೆಂದು ತೊಪ್ಪೆಯಾಗಿ ಮನೆ ಕಡೆಗೆ ಬರ್ತಿದ್ದೆ. ಆಗ ಒಬ್ಬರು ನಿನ್ನನ್ನು ಡ್ರಾಪ್ ಮಾಡಿ ಹೋದ್ರು ಗೊತ್ತಿದ್ಯಾ? ಅವರು ಹೊರಡುವ ಮೊದಲು ನಿನ್ನ ನೆತ್ತಿಗೆ ಒಂದು ಮುತ್ತು ಕೊಟ್ರು, ನೆನಪಾಯ್ತಾ? ಅಸಲಿಗೆ ಅವರು ಅವತ್ತು ಆ ರೂಟ್‌ಗೆ ಬರಬೇಕಾದವರೇ ಆಗಿರಲಿಲ್ಲ. ಅವರನ್ನು ಅಲ್ಲಿಗೆ ಬರುವಂತೆ ಮಾಡಿದ್ದೇ ನಾನು. ಅವರು ನಿನ್ನ ಮನೆ ಹತ್ರ ಬಿಟ್ಟು ಮುಂದಕ್ಕೆ ಹೋದಮೇಲೆ ನಾನ್ಯಾಕೆ ಈ ರೂಟ್‌ಗೆ ಬಂದ ಯೋಚಿಸಿ ಯೋಚಿಸಿಯೇ ಸುಸ್ತಾಗಿದ್ದರು.

ಇದು ತೀರಾ ಹಳೇದಾಯ್ತು ಅಂದ್ರೆ ಹೊಸದೊಂದು ಹೇಳ್ತೀನಿ ಕೇಳು. ಮೊನ್ನೆಮೊನ್ನೆ ನಿನ್ನ ಆಫೀಸಿನಲ್ಲಿ ನಿನ್ನ ಹೆಸರು ಹೇಳಿ ನಿನ್ನ ಬಾಸು, "ನಮ್ಮ ರಾಣಿ ಅಂದ್ರೆ ಬ್ರೈಟೆಸ್ಟ್‌ ಎಂಪ್ಲಾಯಿ, ಬಲೇ ಚುರುಕಿನ ಹುಡುಗಿ, ನನ್ನ ಫೇವರಿಟ್" ಅಂದಿದ್ರು ನೆನಪಿದ್ಯಾ? ಆಗ ನೀನು ಇಲ್ಲದ ಕಾಲರ್ ಎಗರಿಹಾಕಿಕೊಂಡು ಹಲ್ಲುಬಿಟ್ಟಿದ್ದೆ. ಅದನ್ನು ನೋಡಿ ನಿನ್ನ ಬಾಸು ಹನಿಗಣ್ಣಾಗಿದ್ದರು. ಸ್ವಲ್ಪ ಹೊತ್ತಾದ ಮೇಲೆ ಅವರಿಗೆ ನಾನ್ಯಾಕೆ ಅತ್ತೆ ಅಂತ ಅನ್ನಿಸಿತ್ತು. ಯಾಕಂದ್ರೆ ಅವತ್ತು ಅವರಲ್ಲಿ ಇದ್ದು ಅತ್ತಿದ್ದು ನಾನು.

ಇಷ್ಟೆಲ್ಲಾ ಹೇಳಿದ ಮೇಲೆ, ಒಂದು ಪ್ರಶ್ನೆ ನಿನ್ನ ಮನಸ್ಸಿನಲ್ಲಿ ಮೂಡಬಹುದು? ಈ ನಾನು, ಅಂದ್ರೆ ನಿಮ್ಮಪ್ಪ ಈಗ ಎಲ್ಲಿದ್ದಾನೆ? ಇದಕ್ಕೆ ಉತ್ತರ ಇಷ್ಟೇ; ಅವನು ನಿನ್ನ ಬಿಟ್ಟು ಎಲ್ಲಿಗೂ ಹೋಗಲೇ ಇಲ್ಲ. ನಿನ್ನ ಜೊತೆಗೇ ಇದ್ದುಬಿಟ್ಟ. ನಿನ್ನ ಹೊಟ್ಟೆಯಲ್ಲೇ ಮತ್ತೊಮ್ಮೆ ಹುಟ್ಟಿ ಬರಬೇಕು ಅನ್ನೋ ಆಸೆಯನ್ನೂ ಹೆಣೆದುಕೊಂಡ.

ಹೌದು ಪುಟ್ಟಿ, ನಿನ್ನ ಬಾಸು ಹೇಳಿದ್ದರಲ್ಲಿ ಯಾವ ಹೆಚ್ಚುಗಾರಿಕೆನೂ ಇಲ್ಲ. ನೀನು ಮೊದಲಿನಿಂದ್ಲೂ ಹಾಗೇ, ನೀನು ಬ್ರೈಟೆಸ್ಟ್‌ ಸ್ಟಾರು. ನೀನು ಅಂದ್ರೆ ರಾಜಕುಮಾರಿ, ಮಹಾರಾಣಿ, ದೇವಿ, ದೇವತೆ, ದೇವದೂತೆ, ಕಿನ್ನರಿ ಎಲ್ಲವೂ. ಆದರೆ ಏನು ಮಾಡೋದು? ಈ ನನ್ನ ಪುಟ್ಟ ಕಿನ್ನರಿಯನ್ನು ದೂರದಿಂದ ನೋಡುವ ಭಾಗ್ಯವಷ್ಟೇ ನನಗೆ ಉಳಿದದ್ದು. ಎತ್ತಿ ಮುದ್ದಾಡುವ ಅವಕಾಶ ಹೆಚ್ಚುಕಾಲ ಸಿಗಲಿಲ್ಲ.

Prithwi Bhat: ನಮ್ಮನ್ನ ಬೇಗ ಮನೆಗೆ ಕರೆಸಿಕೊಳ್ಳಿ ಪ್ಲೀಸ್‌: ಅಪ್ಪನಿಗೆ ಬೇಡಿಕೊಂಡ ಗಾಯಕಿ ಪೃಥ್ವಿ ಭಟ್‌
Prithwi Bhat: ನಮ್ಮನ್ನ ಬೇಗ ಮನೆಗೆ ಕರೆಸಿಕೊಳ್ಳಿ ಪ್ಲೀಸ್‌: ಅಪ್ಪನಿಗೆ ಬೇಡಿಕೊಂಡ ಗಾಯಕಿ ಪೃಥ್ವಿ ಭಟ್‌

ನನ್ನ ಶರೀರ ನನ್ನಿಂದ ದೂರವಾದ ಆರಂಭದ ದಿನಗಳಲ್ಲಿ ನೀನು ನನ್ನನ್ನು ಒಂದಿಷ್ಟು ನೆನಪಿಸಿಕೊಳ್ತಿದ್ದೆ. ಆಗೆಲ್ಲಾ ಇವಳ ಭವಿಷ್ಯ ಹೇಗೋ ಅಂತ ನನಗೂ ಚಿಂತೆಯಾಗ್ತಿತ್ತು. ಅದರೆ ಕ್ರಮೇಣ ನೀನು ಚೇತರಿಸಿಕೊಂಡೆ, ನನ್ನ ನೆನಪುಗಳೂ ದೂರವಾದವು. ಹಾಸ್ಟೆಲ್‌ಗೆ ಸೇರಿ ಓದಿಕೊಂಡೆ, ರ‍್ಯಾಂಕ್ ಬಂದೆ, ಮುಂದೆ ಓದಬೇಕು ಅಂತ ಆಸೆಯಿದ್ರೂ ಕೆಲಸಕ್ಕೆ ಸೇರಿ ತಮ್ಮನ್ನ ಓದಿಸಿದೆ, ಅಜ್ಜಿ ಆರೋಗ್ಯಕ್ಕೆ ದುಡ್ಡು ಖರ್ಚು ಮಾಡಿದೆ, ಅಮ್ಮನಿಗೆ ಸೀರೆ ಕೊಡಿಸಿದೆ, ಮನೆ ನಿಭಾಯಿಸಿದೆ. ಇಷ್ಟೆಲ್ಲದರ ನಡುವೆ ನಡುರಾತ್ರಿಯಲ್ಲಿ ಮುಸುಕು ಹಾಕಿಕೊಂಡು ಯಾರಿಗೂ ಕಾಣದಂತೆ, ಕೇಳಿಸದಂತೆ ಅಳುತ್ತಿದ್ದೆ. ಬೆಳಕಿನಲ್ಲಿ ನಿನ್ನ ಚಂದದ ನಗುಮುಖವನ್ನಷ್ಟೇ ನೋಡುತ್ತಿದ್ದವರಿಗೆ ಆ ಕತ್ತಲಲ್ಲಿ ಕರಗುತ್ತಿದ್ದ ನಿನ್ನ ಕಣ್ಣೀರು ಕಾಣಿಸುತ್ತಲೇ ಇರಲಿಲ್ಲ. ಆ ಹನಿಗಳಿಗೆ ಸಾಕ್ಷಿಯಾದವನು ನಾನೊಬ್ಬನೇ.

ದಿನಕಳೆದಂತೆ ನಿನಗೆ ಅಪ್ಪ ಅಂದ್ರೆ ಗೋಡೆ ಮೇಲಿನ ಫೋಟೊ ಅನ್ನೋದಕ್ಕಿಂತ ಹೆಚ್ಚೇನೂ ಭಾವನೆ ಉಳಿದಿರಲಿಲ್ಲ. ಮನೆಕಟ್ಟಿ ಮುಗಿಸಿದ ಮೇಲಂತೂ "ಅಪ್ಪ ಇಲ್ಲದಿದ್ರೆ ಏನಂತೆ, ಈ ಮನೆಗೆ ನಾನೇ ದಿಕ್ಕು" ಅಂತ ಹೆಮ್ಮೆಪಟ್ಟುಕೊಂಡ ದಿನಗಳೂ ಇದ್ದವೂ ಅನ್ನು.

ಯಾರಾದರೂ ನಮ್ಮನ್ನು ಮರೆತು ತಮ್ಮ ಬದುಕು ಕಟ್ಟಿಕೊಂಡರೂ ಅದು ನನ್ನಂಥ ಅಸಹಾಯಕರಿಗೆ ಖುಷಿಯೇ. ಅದರಲ್ಲೂ ನೀನು "ಮನೆಗೆ ನಾನೇ ದಿಕ್ಕು" ಅಂದುಕೊಂಡ ದಿನ ನಾನಂತೂ ಖುಷಿಯಲ್ಲಿ ಲಾಗ ಹಾಕಿದ್ದೆ.

ಇದೆಲ್ಲಾ ಆಗಿ ತುಂಬಾ ದಿನಗಳೇನೂ ಆಗಿಲ್ಲ. ಅಷ್ಟರಲ್ಲೇ ನಿನ್ನಲ್ಲಿ ಯಾಕೆ ಇಂಥ ಪರಿವರ್ತನೆ? ಎಲ್ಲಿಹೋಯ್ತು ನನ್ನ ರಾಜಕುಮಾರಿಯ ಆತ್ಮವಿಶ್ವಾಸ?

ಮೊನ್ನೆಮೊನ್ನೆ ನಿನಗೆ ಅತಿ ತೀವ್ರವಾಗಿ ನಾನು ಬೇಕೆನಿಸಿದೆ. ನನ್ನ ಭುಜಕ್ಕೆ ಆನಿಸಿ ಏನೋ ಹೇಳಿಕೊಳ್ಳಬೇಕು ಅಂತ ನಿನಗೆ ಅನ್ನಿಸುತ್ತಲೇ ಇತ್ತು. ನೆನಪಿದ್ಯಾ ಅವತ್ತು ನಾನು ನಿನ್ನ ಕನಸಿಗೆ ಬಂದಿದ್ದೆ, ನಿನ್ನ ಜೊತೆಗೆ ರಾಶಿರಾಶಿ ಮಾತನಾಡಿದೆ. 'ಊರಿನ ಕಡೆಯ ಯಾರೋ ಇಷ್ಟವಾಗೋ ಹಾಗಿದ್ದಾರೆ' ಅಂತ ನೀನು ಹೇಳಿದಾಗ ನನಗೂ ಖುಷಿಯಾಯ್ತು. ಯಾಕಂದ್ರೆ ನಿನ್ನ ಮಗನಾಗುವ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೇನೆ.

ನನಗೊಂದು ಶರೀರ ಬೇಕು ಪುಟ್ಟಿ. ನಿನ್ನ ಶರೀರದಿಂದಲೇ ನಾನು ಮತ್ತೆ ಬರಬೇಕು. ಅಪ್ಪನಾಗಿ ನಾನು ಏನೆನೆಲ್ಲಾ ಕಳೆದುಕೊಂಡೆನೋ ಮಗನಾಗಿ ಅವೆಲ್ಲವನ್ನೂ ಅನುಭವಿಸಬೇಕು. ನಾನು ನಿನ್ನ ಕೈಹಿಡಿದು ನಡೆಸಲಿಲ್ಲ- ನೀನು ನನ್ನ ಕೈಹಿಡಿದು ನಡೆಸಬೇಕು. ಆ ನೆಪದಲ್ಲಿಯಾದರೂ ನಾನು ನಿನ್ನ ಜೊತೆಗೆ ಬಾಳುವೆ ಮಾಡಬೇಕು ಅಂತ ಆಸೆಹೊತ್ತು ಕಾಯ್ತಾನೇ ಇದ್ದೇನೆ.

ನಾನು ಇಷ್ಟೆಲ್ಲಾ ಹೇಳ್ತಿದ್ದೀನಿ ಅಂತ ತಕ್ಷಣಕ್ಕೆ ಮದುವೆ ನಿರ್ಧಾರ ಮಾಡಬೇಡ ಮಗಳೇ. ಇಷ್ಟ-ಪ್ರೀತಿ-ಮದುವೆಗೆಲ್ಲಾ ನೀನು ಇನ್ನೂ ಕಾಯಬೇಕು. ಅರ್ಧಕ್ಕೆ ನಿಂತ ನಿನ್ನ ಓದು ಮುಗಿಸಬೇಕು. ನನ್ನ ಕೂಸನ್ನು ಅರ್ಥ ಮಾಡಿಕೊಳ್ಳುವ, ಹೂವಿನಂತೆ ನಡೆಸಿಕೊಳ್ಳುವ, ಅವಳ ಆಸಕ್ತಿ-ಆಸೆಗಳಿಗೆ ಸ್ಪಂದಿಸುವ, ಆಸರೆಯಾಗುವ ತಕ್ಕ ಹುಡುಗನೊಬ್ಬ ಸಿಗಬೇಕು. ನಿನ್ನ ಅಮ್ಮನಿಗೆ ಲೋಕಜ್ಞಾನವೇ ಸಾಲದು. ಅವಳ ಅದೃಷ್ಟಕ್ಕೆ ನಾನು ಗಂಡನಾಗಿ ಸಿಕ್ಕಿದ್ದೆ (ಏನು, ನಗುಬಂತಾ). ನಿನ್ನ ಬದುಕಿನ ಜವಾಬ್ದಾರಿ ನೀನೇ ತೆಗೆದುಕೊಳ್ಳುವಂಥ ಹುಡುಗನನ್ನೇ ನೀನು ಆರಿಸಿಕೊಳ್ಳಬೇಕು.

ಮಗಳನ್ನು ಗಂಡ ಹೇಗೆ ನಡೆಸಿಕೊಳ್ತಾನೋ ಅನ್ನೋದು ಎಲ್ಲ ಅಪ್ಪಂದಿರನ್ನೂ ಕಾಡುವ ಆತಂಕ. ಅವಳು ಸದಾ ಚೆನ್ನಾಗಿಯೇ ಇರಬೇಕು ಅನ್ನೋದು ಎಲ್ಲ ಅಪ್ಪಂದಿರ ಕನಸು. ನನಗೆ ದೇಹವಿಲ್ಲದಿದ್ದರೇನೂ, ಮಗಳ ಮೇಲೆ ಪ್ರೀತಿಯಿಲ್ಲವೇ? ನನ್ನ ಕನಸುಗಳಿಗೆ ಸಾವಿಲ್ಲ ಮುದ್ದು ಬಂಗಾರ.

ಇನ್ನೂ ಒಂದೇನೋ ಹೊಳೀತಿದೆ ಪುಟ್ಟಿ, ಇದೇ ಟೈಮು ಅಂತ ಹೇಳಿಬಿಡ್ಲಾ? ನಾನು ಜೀವಂತ ಇದ್ದಿದ್ರೆ ಇಷ್ಟೊತ್ತಿಗೆ ನನಗೂ 48 ದಾಟಿರ್ತಿತ್ತು. ಅಯ್ಯೋ ನೋಡು, ನಾನೆಷ್ಟು ದಡ್ಡ. ನಿಜ ಅಂದ್ರೆ ನಾನು ಇಂದಿಗೂ ಜೀವಂತವಾಗಿಯೇ ಇದ್ದೇನೆ. ಹೋಗಿರುವುದು ದೇಹ ಮಾತ್ರ. ನೀನು ಹೇಗೂ ಜರ್ನಲಿಸ್ಟ್ ಅಲ್ವಾ? ಒಂದು ಕರೆಕ್ಷನ್ ಹಾಕ್ಕೋ, ನನ್ನ ಜೀವಕ್ಕೆ ನಿನ್ನ ಅಪ್ಪನ ಪಾತ್ರದ ಶರೀರ ಇದ್ದಿದ್ರೆ ಅದಕ್ಕೆ ಮೊನ್ನೆಗೆ 48 ವರ್ಷ ದಾಟಿರ್ತಿತ್ತು ಅಂತ ಸರಿಮಾಡಿಕೊ.

ದೇಹ-ಜೀವ ಅಂತ ಮಾತು ಶುರುವಾದ ಲಯದಲ್ಲಿ ಹೇಳಿಬಿಡ್ತೀನಿ. ನಾನು ನಿನ್ನ ಬಿಟ್ಟು ಎಲ್ಲಿಗೂ ಹೋಗಲಿಲ್ಲ, ಹೋಗಿಲ್ಲ, ಹೋಗುವುದೂ ಇಲ್ಲ. ನೀನು ನಿನ್ನ ಅಮ್ಮನ ಹೊಟ್ಟೆಗೆ ಬಿದ್ದ ಕ್ಷಣದಿಂದಲೂ ನಾನು ನಿನ್ನ ಜೊತೆಗೇ ಇದ್ದೆ, ಈಗಲೂ ಇದ್ದೇನೆ, ಮುಂದೆಯೂ ಇರುತ್ತೇನೆ. ನಾನು ನಿನ್ನ ಕಣ್ಣಿಗೆ ಕಾಣಿಸದಿರಬಹುದು, ಆದರೆ ನೀನು ನನ್ನ ಕಣ್ಣೆದುರೇ ಸದಾ ಇದ್ದೀ. 22 ವರ್ಷಗಳ ಹಿಂದೆ ನನ್ನೆದುರು ಪ್ರತ್ಯಕ್ಷವಾಗಿ, ಪ್ರತಿಕ್ಷಣ ದರ್ಶನ ಕೊಡುತ್ತಲೇ ಇರುವ ದೇವತೆ ನೀನು.

ಅಪ್ಪ ಅಂದ್ರೆ ಆಕಾಶ ಅನ್ನೋದು ಸುಮ್ಮನೆ ಹೇಳೋ ಮಾತಲ್ಲ. ಬೆಳಕಿಲ್ಲದ, ಸದ್ದಿಲ್ಲದ, ಗಾಳಿಯಿಲ್ಲದ ಜಾಗ ಅಂತ ಈ ಜಗತ್ತಿನಲ್ಲಿ ಇರಬಹುದು. ಆಕಾಶ (ಬಯಲು) ಇಲ್ಲದ ಜಾಗ ಅಂತ ಯಾವುದಾದರೂ ಇದ್ಯಾ? ಛಾನ್ಸೇ ಇಲ್ಲ ಅಲ್ವಾ? ರಸ್ತೆ ಬದಿ ಪಾನಿಪೂರಿ ತಿಂದು ಎಂಜಾಯ್ ಮಾಡೋ ವಯಸ್ಸಿನ ಹುಡುಗಿ ನೀನು. ಆದ್ರೂ ನಿನ್ನ ಅಪ್ಪ ಈಗ ವೇದಾಂತ ಹೇಳ್ತೇನೆ. ಸಾಧ್ಯವಾದರೆ ಅರ್ಥ ಮಾಡ್ಕೋ. ಅಟ್‌ಲೀಸ್ಟ್‌ ಓದಿಬಿಡು.

ನನ್ನ ಶರೀರದಲ್ಲೇ ನಾನಿದ್ದು ನಿನ್ನನ್ನು ಬೆಳೆಸಿದ್ರೆ ಇಷ್ಟೆಲ್ಲಾ ನನಗೆ ಅರ್ಥವಾಗ್ತಿತ್ತೋ ಇಲ್ವೋ? ಆದರೆ ಶರೀರವೇ ಇಲ್ಲದ- ಶರೀರವೇ ಬೇಡದ ಈ ನನ್ನ ಸ್ವರೂಪದಲ್ಲಿ ಅಪ್ಪನ ನಿಜವಾದ ಮನಸ್ಸು ಎಂಥದ್ದು ಎಂದು ಚೆನ್ನಾಗಿ ಅರ್ಥವಾಗಿದೆ. ನಿಜ ಅಂದ್ರೆ ಅಪ್ಪ ಅನ್ನೋದು ಒಂದು ಭಾವನೆ. ಅದು ನಮ್ಮ ಶರೀರದಿಂದ ಬಂದ ಮಕ್ಕಳಿಗಷ್ಟೇ ಸೀಮಿತವಾಗುವ ಭಾವನೆಯಲ್ಲ. ಮನಸ್ಸು ವಿಕಸನಗೊಂಡಂತೆ ಎಷ್ಟೋ ಮಕ್ಕಳಿಗೆ ಮೊಗೆಮೊಗೆದು ಹಂಚಬಹುದಾದ ಸಂಪತ್ತು ಆ ಭಾವನೆಯ ರೂಪದಲ್ಲಿ ಧಾರಾಕಾರವಾಗಿ ಹರಿಯುತ್ತೆ. ನಿನ್ನ ಮೇಷ್ಟ್ರು, ನಿನ್ನ ಸೀನಿಯರ್ಸು, ನಿನ್ನ ಬಾಸು, ಬಸ್ ಕಂಡಕ್ಟರು, ಎಳನೀರು ಗೋಪಾಲ... ಹೀಗೆ ಎಲ್ಲರೂ ನಿನ್ನನ್ನು ಕಂಡಿದ್ದು, ಬೆನ್ನುತಟ್ಟಿದ್ದು, ಸಹಾಯ ಮಾಡಿದ್ದು ಇಂಥ ಭಾವನೆಯಿಂದಲೇ. ಆ ಕ್ಷಣಕ್ಕೆ ಅವರೆಲ್ಲರೂ ನಿನ್ನನ್ನು ಮಗಳಾಗಿ ಕಂಡಿದ್ದರು, ಪ್ರೀತಿಯಿಂದ ಹರಸಿದ್ದರು.

ದೇವರು ಎಲ್ಲರ ಮನಸ್ಸಿನಲ್ಲಿ ಈ ಪ್ರೀತಿ (ಪ್ರೇಮ, ವಾತ್ಸಲ್ಯ ಇತ್ಯಾದಿ) ಅನ್ನೋ ಭಾವನೆ ಯಾಕೆ ತಂದಿದ್ದಾನೆ ಗೊತ್ತಾ? ನಾನಾಗಲೀ-ನೀನಾಗಲೀ, ನಮ್ಮ ಸುತ್ತ ಇರುವ ಎಷ್ಟೋ ಜನರಾಗಲೀ, 84 ಲಕ್ಷ ಕೋಟಿ ಜೀವರಾಶಿಗಳಾಗಲೀ ದೇವರಿಂದ ಒಟ್ಟಿಗೆ ಬೇರೆಯಾದೆವು. ನಾನಾ ಜನ್ಮಗಳ ಪಯಣದಲ್ಲಿ ಎಷ್ಟೋ ಸಲ ಜೊತೆಯಾದೆವು. ಒಂದು ಸಲ ನೀನು ಅಮ್ಮ-ನಾನು ಮಗ, ಒಂದು ಸಲ ನಾನು ಅಮ್ಮ-ನೀನು ಮಗ. ಹೀಗೆ ಏನೇನೋ ಆಗಿ ಆಗಿ ಈ ಸಲ ನೀನು ನನ್ನ ಮಗಳಾದೆ. ನಿನ್ನನ್ನು ಎತ್ತಿ ಮುದ್ದಾಡುತ್ತಿದ್ದ ನನ್ನ ಸುಖದ ಪರಾಕಾಷ್ಠೆಯ ದಿನಗಳಲ್ಲಿಯೇ ಶಾರೀರಿಕವಾಗಿ ನಾನು ನಿನ್ನ ಬಿಟ್ಟು ಹೋದೆ. ಆಮೇಲೆ ಮತ್ತೆ ನಿನ್ನ ಮಗನಾಗಬೇಕೆಂದು ಕಾಯುತ್ತಾ ನಿಂತುಬಿಟ್ಟೆ.

ನಿನಗೆ ಹೇಳಬೇಕಾದ ಇನ್ನೊಂದಿಷ್ಟು ವಿಷಯಗಳೂ ಇವೆ ಪುಟ್ಟಿ. ಇವತ್ತು ಈ ಪತ್ರ ಓದುತ್ತಿರುವ ನೀನು ನಿನ್ನ ಅಮ್ಮನ ಹೊಟ್ಟೆಯಲ್ಲಿ ಬೀಳುವ ಮೊದಲು ಎಲ್ಲಿದ್ದೆ- ನನ್ನಲ್ಲಿದ್ದೆ. ನನ್ನೊಳಗೆ ನೀನು ಹೇಗೆ ಬಂದೆ- ಆಹಾರದಿಂದ ಬಂದೆ. ಆ ಆಹಾರದೊಳಗೆ ಹೇಗೆ ಹೋದೆ- ಸಸ್ಯಗಳಿಂದ ಹೋದೆ. ಆ ಸಸ್ಯಗಳಿಗೆ ಹೇಗೆ ಸೇರಿದೆ- ಭೂಮಿಯಿಂದ ಸೇರಿದೆ. ಭೂಮಿಗೆ ಹೇಗೆ ಬಂದೆ- ಮಳೆ ನೀರಿನಲ್ಲಿ ಇಳಿದು ಬಂದೆ. ಮಳೆ ನೀರಿಗೆ ಹೇಗೆ ಸೇರಿಕೊಂಡೆ- ಅಗ್ನಿಯ ತಾಪದಿಂದ ಸೇರಿಕೊಂಡೆ. ಪರಿತಪಿಸುತ್ತಿದ್ದ ನಿನ್ನನ್ನು ಕೈಹಿಡಿದು ಸಂತೈಸಿ ಮಳೆ ನೀರಿನಲ್ಲಿ ಕರಗಿಸಿದವರು ಯಾರು- ಅದು ಗಾಳಿ. ಆ ಗಾಳಿ ಎಲ್ಲಿತ್ತು- ಅದು ಆಕಾಶದಲ್ಲಿ ಅಲ್ವಾ?

ಈ ಆಕಾಶ, ಗಾಳಿ, ಬೆಂಕಿ, ಭೂಮಿ, ನೀರನ್ನು ಇಷ್ಟೆಲ್ಲಾ ವ್ಯವಸ್ಥಿತವಾಗಿ ಕೆಲಸ ಮಾಡುವಂತೆ ನಿಯೋಜಿಸಿ ಸದಾ ನನ್ನನ್ನು-ನಿನ್ನನ್ನು ಕಾಪಾಡುತ್ತಿರುವವನು ಯಾರು ಅಂದ್ಕೊಂಡಿದ್ದೀಯಾ? ಅದು ಭಗವಂತ ಪುಟ್ಟಿ ಭಗವಂತ. ಅದಕ್ಕೇ ನೋಡು ಅಪ್ಪ ಅಂದ್ರೆ ಆಕಾಶ ಅನ್ನೋದು. ಎಲ್ಲೀವರೆಗೆ ನಮಗೆ ಆಕಾಶ ನೋಡೋಕೆ ಆಗುತ್ತೋ, ಎಲ್ಲೀವರೆಗೆ ಆಕಾಶ ನಮ್ಮನ್ನು ನೋಡ್ತಿರುತ್ತೋ ಅಲ್ಲೀವರೆಗೆ ನಾವು ಅನಾಥರಲ್ಲವೇ ಅಲ್ಲ. ಅಲ್ಲಿ ನಮ್ಮೆಲ್ಲರ ಅಪ್ಪ ಇದ್ದೇ ಇರ್ತಾನೆ. ನಮ್ಮನ್ನು ಒಂದಲ್ಲ ಒಂದು ಥರ ಕಾಪಾಡ್ತಾನೇ ಇರ್ತಾನೆ. ಆ ಭಗವಂತನನ್ನು ಭಗವತೀ ಎಂದುಕೊಂಡರೆ ಅವಳೇ ನನ್ನ-ನಿನ್ನ-ಎಲ್ಲರ ಅಮ್ಮನೂ ಆಗಿಬಿಡುತ್ತಾಳೆ.

ನಾವು ಅವನನ್ನು ಮರೆಯಬಹುದು, ದೇವರು ಇಲ್ಲವೇ ಇಲ್ಲ ಎಂದು ವಾದಿಸಿ ಗೆಲ್ಲಬಹುದು. ಆದರೆ ಅವನಿಗೆ ಮಾತ್ರ ತಾನು ಅಪ್ಪ ಎನ್ನುವ ಭಾವನೆ ಒಂದು ಕ್ಷಣವೂ ಮರೆಯುವುದಿಲ್ಲ. ಕೊಡೋ ಕಾಲಕ್ಕೆ ಕೊಡಬೇಕಾದ್ದು ಮಿಸ್ ಮಾಡದೇ ಕೊಡ್ತಾನೆ. ಬುದ್ಧಿ ಕಲಿಸಬೇಕಾದ ಕಾಲಕ್ಕೆ ಕಲಿಸಿಯೇ ಕಲಿಸ್ತಾನೆ. ನನ್ನ ಕೈಗೆ ನಿನ್ನ ಕೊಟ್ಟ ಹಾಗೆ. ನನ್ನ ಶರೀರವನ್ನು ನನ್ನಿಂದ ಕಿತ್ತುಕೊಂಡು ನಿನ್ನ ಸುತ್ತಲೂ ಸುತ್ತುವಂತೆ ಮಾಡಿದ ಹಾಗೆ.

ಈ ಜನ್ಮಕ್ಕೆ ನಿನ್ನ ಅಪ್ಪ ಎನಿಸಿಕೊಂಡು ನಿನ್ನ ಮೊಬೈಲ್ ಸ್ಟೇಟಸ್‌ನ ಫೋಟೊ ಆಗಿ ನಾನಿದ್ದೇನೆ. ಆದರೆ ನಮ್ಮಿಬ್ಬರ ನಿಜವಾದ ಸ್ಟೇಟಸ್ ಮತ್ತು ಅಡ್ರೆಸ್‌ ಅವನೇ. ನನಗೆ ಇಷ್ಟೆಲ್ಲಾ ಅರ್ಥಮಾಡಿಸಲು ನೀನು ಇಷ್ಟು ಬೆಳೆಯಬೇಕಾಯ್ತು ಅಂತ ಎಷ್ಟೋ ಸಲ ಅನ್ನಿಸಿದ್ದಿದೆ. ಈ ಸಲ ನನಗೊಂದು ಶರೀರಕೊಡು. ಅದೇ ಶರೀರ ಬಳಸಿಕೊಂಡು ಸಾಧನೆ ಮಾಡಿ ನಾನೂ ಈ ಜನ್ಮ-ಜನ್ಮಗಳ ಚಕ್ರದಿಂದ ಕಳಚಿಕೊಳ್ತೇನೆ, ನಿನಗೂ ತಿಳಿಸಿಕೊಟ್ಟು, ನಿನ್ನ ಸಾಧನೆಗೂ ಸಹಾಯ ಮಾಡಿ, ನಿನ್ನನ್ನೂ ಪಾರು ಮಾಡ್ತೇನೆ. ಇದು ಮಗನಾಗಿ ಬರುವ ಅಪ್ಪ ತಮ್ಮ ಮಗಳೆಂಬ ಅಮ್ಮನಿಗೆ ಮಾಡುವ ಪ್ರಾಮಿಸ್.

ನಾಳೆ (ಜೂನ್ 21) ಅಪ್ಪಂದಿರ ದಿನವಂತೆ ಹೌದಾ? ಇಷ್ಟೆಲ್ಲಾ ಓದಿದ ಮೇಲೆಯೂ ಮತ್ತೆ 'ಅಪ್ಪ, ನೀನಿರಬೇಕಿತ್ತು' ಅಂತೆಲ್ಲಾ ಅಳಬೇಡ. ಅಪ್ಪ ಎಲ್ಲಿದ್ದಾನೆ ಅಂತ ಅನುಮಾನ ಬಂದ್ರೆ ನಿನ್ನ ಜೊತೆಗೆ ಯಾವಾಗಲೂ ಒಂದು ನೆರಳಿರುತ್ತೆ ನೋಡು. ಅದೇ ನಾನು. ನಾನಂದ್ರೆ ನನ್ನ ಮಗಳ ನೆರಳು.

ನೆರಳನ್ನು ಎಂದಿಗೂ ಹುಡುಕಬೇಡ ಮಗಳೇ, ಸದಾ ಬೆಳಕನ್ನಷ್ಟೇ ಹುಡುಕು. ನಿನಗೆ ನೆರಳು ಕೊಡಲು ಆಗದ ಅಪ್ಪ ನಿನ್ನ ನೆರಳಲ್ಲಿ ಇದ್ದಾನೆ.

ಇತಿ

ನಿನ್ನ ಮಗನಾಗಿ ಹುಟ್ಟಲು ಕಾಯುತ್ತಿರುವ ಅಪ್ಪ

ಬರಹ: ಡಿ.ಎಂ.ಘನಶ್ಯಾಮ, ಸೀನಿಯರ್ ಎಡಿಟರ್, ಸತ್ಯಸಾಯಿ ಪ್ರೇಮಾಮೃತ ಪ್ರಕಾಶನ, ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+