ಬೆಂಗಳೂರಿನ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಹೊಸ ರೂಲ್ಸ್‌; ಆನ್‌ಲೈನ್ ನೋಂದಣಿ ಕಡ್ಡಾಯ, ಶುಲ್ಕ ಎಷ್ಟು?

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರ ನೆರವೇರಿಸುವ ಕುರಿತು ಸಾರ್ವಜನಿಕರಿಗೆ ಪ್ರಮುಖ ನಿರ್ದೇಶನ ಹಾಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪಶ್ಚಿಮ ವಲಯದ ಒಟ್ಟು ಐದು ವಿದ್ಯುತ್ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಪ್ರಾಧಿಕಾರ ಪ್ರಕಟಿಸಿರುವ ಮುಖ್ಯ ನಿರ್ದೇಶನಗಳು ಮತ್ತು ಕಡ್ಡಾಯ ದಾಖಲೆಗಳ ವಿವರ ಇಲ್ಲಿದೆ.

ರಾಜಧಾನಿಯ ಸಾರ್ವಜನಿಕ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸುವ ಹಾಗೂ ಪ್ರಕ್ರಿಯೆಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ ಜಿಬಿಎ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಒಟ್ಟು ಐದು ಪ್ರಮುಖ ವಿದ್ಯುತ್ ಚಿತಾಗಾರಗಳಲ್ಲಿ ಶವಸಂಸ್ಕಾರ ನೆರವೇರಿಸಲು ಹೊಸದಾಗಿ ಕಟ್ಟುನಿಟ್ಟಿನ ಮಾರ್ಗಸೂಚಿ ಹಾಗೂ ನಿಯಮಾವಳಿಗಳನ್ನು ಪ್ರಕಟಿಸಲಾಗಿದೆ. ಇನ್ಮುಂದೆ ಸಾರ್ವಜನಿಕರು ಚಿತಾಗಾರಗಳಿಗೆ ಬರುವ ಮುನ್ನ ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ದಾಖಲೆಗಳ ಸಲ್ಲಿಕೆಯಲ್ಲೂ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ.

Electric Crematoriums

ಆನ್‌ಲೈನ್ ನೋಂದಣಿ ಕಡ್ಡಾಯ

ಇನ್ಮುಂದೆ ಶವಸಂಸ್ಕಾರ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣವಾದ http://bbmp.gov.in ನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ಪ್ರತಿ ಶವಸಂಸ್ಕಾರಕ್ಕೆ ರೂ. 250 ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಾರ್ವಜನಿಕರು ಈ ನಿಗದಿತ ಶುಲ್ಕವನ್ನು ಪಾವತಿಸಿ ಕಡ್ಡಾಯವಾಗಿ ರಶೀದಿ ಪಡೆಯಬೇಕಿರುತ್ತದೆ.

ಶವಸಂಸ್ಕಾರಕ್ಕೆ ಅಗತ್ಯವಿರುವ ಚಟ್ಟ, ಮಡಿಕೆ ಹಾಗೂ ಪೂಜಾ ಸಾಮಗ್ರಿಗಳನ್ನು ಸಾರ್ವಜನಿಕರೇ ಸ್ವತಃ ವ್ಯವಸ್ಥೆ ಮಾಡಿಕೊಳ್ಳಬೇಕು. ಪಾಲಿಕೆ ವತಿಯಿಂದ ಇವುಗಳನ್ನು ಒದಗಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಶವಸಂಸ್ಕಾರದ ಸಂದರ್ಭದಲ್ಲಿ ಈ ಕೆಳಗಿನ ದಾಖಲೆಗಳನ್ನು ತಪ್ಪದೇ ಅಧಿಕಾರಿಗಳಿಗೆ ಸಲ್ಲಿಸಬೇಕು. ಒಂದು ವೇಳೆ ಮೃತರ ಬಳಿ ಯಾವುದೇ ರೀತಿಯ ಅಧಿಕೃತ ಗುರುತಿನ ಚೀಟಿ ಇಲ್ಲದಿದ್ದಲ್ಲಿ, ನೋಟರಿ ಪ್ರಮಾಣಪತ್ರ ನೀಡುವುದು ಕಡ್ಡಾಯ.

ಕಡ್ಡಾಯ ದಾಖಲೆಗಳು

ಚಿತಾಗಾರಕ್ಕೆ ಶವವನ್ನು ತರುವ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದಂತೆ ತಡೆಯಲು ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ. ಸೂಕ್ತ ದಾಖಲಾತಿಗಳಿಲ್ಲದಿದ್ದರೆ ಅಂತ್ಯಸಂಸ್ಕಾರಕ್ಕೆ ಅನುಮತಿ ನಿರಾಕರಿಸಲಾಗುವುದು.

ಅರ್ಜಿ ಮತ್ತು ಮರಣ ವರದಿ: ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿದ ಮನವಿ ಪತ್ರ ಹಾಗೂ ಮರಣದ ವರದಿ ನಮೂನೆ-02 (Form-02).

ವೈದ್ಯಕೀಯ ಪ್ರಮಾಣಪತ್ರ: ಮೃತರ ಸಾವಿಗೆ ಕಾರಣವನ್ನು ದೃಢೀಕರಿಸುವ ವೈದ್ಯರ ಅಧಿಕೃತ ದೃಢೀಕರಣ ಪತ್ರ ನಮೂನೆ-4A (Form-4A) ಅತ್ಯಗತ್ಯ.

ಮೃತರ ಅಧಿಕೃತ ಗುರುತಿನ ಚೀಟಿ: ಕೆಳಕಂಡವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿಯ ಮೂಲ ಅಥವಾ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.

ಆಧಾರ್ ಕಾರ್ಡ್ (Aadhaar Card)

ಪಡಿತರ ಚೀಟಿ (Ration Card)

ಚುನಾವಣಾ ಗುರುತಿನ ಚೀಟಿ (Voter ID)

ಪ್ಯಾನ್ ಕಾರ್ಡ್ (PAN Card)

ವರ್ಗಾವಣೆ ಪ್ರಮಾಣಪತ್ರ (T.C.) ಅಥವಾ ಶವಸಂಸ್ಕಾರ ದೃಢೀಕರಣ ಪತ್ರ

ಪಶ್ಚಿಮ ವಲಯದ 5 ಪ್ರಮುಖ ವಿದ್ಯುತ್ ಚಿತಾಗಾರಗಳ ಪಟ್ಟಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಪಶ್ಚಿಮ ವಲಯದ ಐದು ಚಿತಾಗಾರಗಳಲ್ಲಿ ಸಾರ್ವಜನಿಕರು ಈ ಸೇವೆಗಳನ್ನು ಪಡೆದುಕೊಳ್ಳಬಹುದು. ಹರಿಶ್ಚಂದ್ರಘಾಟ್ ವಿದ್ಯುತ್ ಚಿತಾಗಾರ, ಪೀಣ್ಯ ವಿದ್ಯುತ್ ಚಿತಾಗಾರ ಎಸ್‌ ಆರ್‌ ಎಸ್ (SRS) ಬಸ್ ಸ್ಟಾಪ್ ಹತ್ತಿರ, ಪೀಣ್ಯ ಮೊದಲನೇ ಹಂತ, ಸುಮನಹಳ್ಳಿ ವಿದ್ಯುತ್ ಚಿತಾಗಾರ, ಕೆಂಗೇರಿ ವಿದ್ಯುತ್ ಚಿತಾಗಾರ, ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ಈ ಹೊಸ ನಿಯಮ ಇರಲಿದೆ.

ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ: ಬದಲಾಗುತ್ತಾ ನಗರದ ಚಿತ್ರಣ?
ರಸ್ತೆ ಗುಂಡಿ ಮುಚ್ಚೋದು ರಾಕೆಟ್ ಸೈನ್ಸಾ? ಜಿಬಿಎ ಅಧಿಕಾರಿಗಳಿಗೆ ಕೃಷ್ಣ ಬೈರೇಗೌಡ ತರಾಟೆ: ಬದಲಾಗುತ್ತಾ ನಗರದ ಚಿತ್ರಣ?

ಸಹಾಯವಾಣಿ

ಈ ಹೊಸ ನಿಯಮಗಳು, ಆನ್‌ಲೈನ್ ಬುಕಿಂಗ್ ಪ್ರಕ್ರಿಯೆ ಅಥವಾ ದಾಖಲೆಗಳ ಸಲ್ಲಿಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳು ಎದುರಾದರೆ ಅಥವಾ ಗೊಂದಲಗಳಿದ್ದರೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ವಿವರಗಳಿಗಾಗಿ ಕಾರ್ಯಪಾಲಕ ಅಭಿಯಂತರರಾದ (ವಿದ್ಯುತ್ ವಿಭಾಗ) ನಾಗೇಶ್ ಅವರನ್ನು ದೂರವಾಣಿ ಸಂಖ್ಯೆ: 9480688528 ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಜಿಬಿಎ ತಿಳಿಸಿದೆ.

ಬೆಂಗಳೂರಲ್ಲಿ ಸಾಯುವುದೂ ಕಷ್ಟ: ಸಿ.ಟಿ.ರವಿ ಆಕ್ಷೇಪ

ಬಿಜೆಪಿ ನಾಯಕ ಸಿ.ಟಿ.ರವಿ ಅವರು ಜಿಬಿಎ (GBA) ಹೊರಡಿಸಿರುವ ಈ ಮಾರ್ಗಸೂಚಿಗಳನ್ನು ವಿರೋಧಿಸಿ ಪೋಸ್ಟ್‌ ಹಂಚಿಕೊಂಡಿದ್ದಾರೆ. "ಬಹುಶಃ ಮಾನವೀಯತೆಯನ್ನು ಕಳೆದುಕೊಂಡವರು ಮಾತ್ರ ಶವ ಸಂಸ್ಕಾರದಲ್ಲೂ ದುಃಖಿತರನ್ನು ಶೋಷಿಸಲು ಸಾಧ್ಯ" ಎಂದು ಅವರು ಬರೆದುಕೊಂಡಿದ್ದಾರೆ. ದುಃಖದಲ್ಲಿರುವ ಕುಟುಂಬಗಳಿಗೆ ನೆರವಾಗಬೇಕಾದ ಸರ್ಕಾರ, ಮರಣದ ಸಂದರ್ಭದಲ್ಲೂ ಕಾಗದ ಪತ್ರಗಳಿಗಾಗಿ ಜನರನ್ನು ಅಲೆದಾಡಿಸುತ್ತಿದೆ ಎಂದು ಅವರು ದೂರಿದ್ದಾರೆ.

ಬೆಂಗಳೂರಿನಲ್ಲಿ ಶವ ಸಂಸ್ಕಾರ ನಡೆಸಬೇಕೆಂದರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಜಾಲತಾಣದಲ್ಲಿ ನೋಂದಣಿ ಮಾಡಿ, 250 ರೂಪಾಯಿ ಪಾವತಿಸಬೇಕು. ಶವಸಂಸ್ಕಾರ ನಡೆಸಲು ಮನವಿ ಪತ್ರ, ಮರಣದ ವರದಿ ನಮೂನೆ, ವೈದ್ಯರ ದೃಢೀಕರಣ ಪತ್ರ, ಶವಸಂಸ್ಕಾರ ದೃಢೀಕರಣ ಪತ್ರ, ಮೃತರ ಗುರುತು ಪತ್ರ, ಇಲ್ಲದಿದ್ದರೆ ನೋಟರಿ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ಇದರೊಡನೆ, ದುಃಖತಪ್ತ ಕುಟುಂಬದವರು ಚಟ್ಟ, ಮಡಿಕೆಯ ವ್ಯವಸ್ಥೆಯನ್ನೂ ಮಾಡಬೇಕು. ಅಂತ್ಯಸಂಸ್ಕಾರದ ಸ್ಥಳದಲ್ಲಿ ಇದಾವುದರ ವ್ಯವಸ್ಥೆಯನ್ನೂ ಪೂರೈಸುವುದಿಲ್ಲ ಎಂದರೆ ಪರಿಸ್ಥಿತಿ ಏನು? ಬೆಂಗಳೂರಿನಲ್ಲಿ ಸಾಯುವುದೂ ಕಷ್ಟ ಎನ್ನುವ ಪರಿಸ್ಥಿತಿಯನ್ನು ಆಡಳಿತ ತಂದೊಡ್ಡಿರುವುದು ನಿಜಕ್ಕೂ ವಿಪರ್ಯಾಸ ಎಂದು ಟೀಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+