BMTC: ಹಳದಿ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್, ಹೆಚ್ಚಾಗಲಿವೆ ಬಿಎಂಟಿಸಿ ಫೀಡರ್ ಬಸ್
ಬೆಂಗಳೂರು: ರಾಜಧಾನಿಯ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಮೆಟ್ರೋ ಪ್ರಯಾಣಿಕರ ಕೊನೆಯ ಮೈಲಿ ಸಂಪರ್ಕವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಮಹತ್ವದ ಕ್ರಮ ಕೈಗೊಂಡಿದೆ. ನಮ್ಮ ಮೆಟ್ರೋದ ಬಹುನಿರೀಕ್ಷಿತ 'ಯೆಲ್ಲೋ ಲೈನ್' (ಹಳದಿ ಮಾರ್ಗ) ಪ್ರಯಾಣಿಕರಿಗೆ ಅನುಕೂಲವಾಗುವಂತೆ ಜೂನ್ 22ರಿಂದ ನೂತನ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಪರಿಚಯಿಸಲಾಗುತ್ತಿದೆ.
ಪ್ರಯಾಣಿಕರಿಗೆ ಆರಾಮದಾಯಕ ಹಾಗೂ ಅತ್ಯಂತ ಮಿತವ್ಯಯ ದರದಲ್ಲಿ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ನಾನ್ ಎಸಿ ಫೀಡರ್ ಬಸ್‌ಗಳನ್ನು ರಸ್ತೆಗಿಳಿಸಲಾಗುತ್ತಿದೆ. ಬಿಎಂಟಿಸಿ ಪ್ರಕಟಿಸಿರುವ ಅಧಿಕೃತ ಮಾಹಿತಿಯ ಪ್ರಕಾರ, ಹೊಸ ಮಾರ್ಗದಲ್ಲಿ ಒಟ್ಟು 3 ಬಸ್ಸುಗಳು ನಿರಂತರವಾಗಿ ಕಾರ್ಯಾಚರಣೆ ನಡೆಸಲಿವೆ.

ಹೊಸ ಮೆಟ್ರೋ ಫೀಡರ್ ಮಾರ್ಗದ ವಿವರ
ಮಾರ್ಗ ಸಂಖ್ಯೆ: ಎಂ.ಎಫ್- 22ಜಿ (MF-22G): ಇದು ದೊಮ್ಮಸಂದ್ರ ಬಸ್ ನಿಲ್ದಾಣದಿಂದ ಬೊಮ್ಮಸಂದ್ರ ಬಸ್ ನಿಲ್ದಾಣದವರೆಗೆ ಇರಲಿದೆ. ಈ ಫೀಡರ್ ಬಸ್ಸುಗಳು ಮುತ್ತನಲ್ಲೂರು ಕ್ರಾಸ್, ನಾರಾಯಣಘಟ್ಟ, ರಾಮಸಾಗರ ಮತ್ತು ಚಂದಾಪುರ ಮಾರ್ಗವಾಗಿ ಸಂಚರಿಸಲಿವೆ. ಇದರಿಂದಾಗಿ ಈ ಭಾಗದ ಸುತ್ತಮುತ್ತಲಿನ ಸಾವಿರಾರು ಐಟಿ ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಮೆಟ್ರೋ ನಿಲ್ದಾಣ ತಲುಪುವುದು ಸುಲಭವಾಗಲಿದೆ.
ಬಸ್ ಸಂಚಾರದ ವೇಳಾಪಟ್ಟಿ
ಪ್ರಯಾಣಿಕರ ಅನುಕೂಲಕ್ಕಾಗಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಿಗದಿತ ಸಮಯಕ್ಕೆ ಸರಿಯಾಗಿ ಬಸ್ಸುಗಳು ಲಭ್ಯವಿರಲಿದೆ.
1. ದೊಮ್ಮಸಂದ್ರ ಬಸ್ ನಿಲ್ದಾಣದಿಂದ ಹೊರಡುವ ಸಮಯ: ಬೆಳಿಗ್ಗೆ 7:10, 7:50, 8:30, 9:05, 9:45, 10:25, 11:15, ಮಧ್ಯಾಹ್ನ 12:00, 12:40, 1:40, 2:00, 2:30, ಸಂಜೆ 3:30, 4:20 ಮತ್ತು 5:00 ಗಂಟೆಗೆ.
2. ಬೊಮ್ಮಸಂದ್ರ ಬಸ್ ನಿಲ್ದಾಣದಿಂದ ಹೊರಡುವ ಸಮಯ: ಬೆಳಿಗ್ಗೆ 8:05, 8:45, 9:25, 10:05, 10:45, 11:25, ಮಧ್ಯಾಹ್ನ 12:10, 12:55, 1:35, 2:35, 3:25, 3:50, ಸಂಜೆ 4:50, 5:00, 5:30 ಮತ್ತು ರಾತ್ರಿ 6:00 ಗಂಟೆಗೆ.
ಸಾರ್ವಜನಿಕರಿಗೆ ಅನುಕೂಲ
ಬೊಮ್ಮಸಂದ್ರ ಭಾಗಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸುವ ಈ ಫೀಡರ್ ಬಸ್ ಸೇವೆಯಿಂದಾಗಿ ಆಟೋ ಅಥವಾ ಖಾಸಗಿ ವಾಹನಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದ್ದು, ಪ್ರಯಾಣಿಕರ ಜೇಬಿಗೆ ಹಣ ಉಳಿತಾಯವಾಗಲಿದೆ. ಜೂನ್ 22ರಿಂದ ಜಾರಿಗೆ ಬರಲಿರುವ ಈ ನೂತನ ಬಸ್ ಸೌಲಭ್ಯದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಬಿಎಂಟಿಸಿ ತಿಳಿಸಿದೆ.
ಇಲ್ಲಿಯವರೆಗೆ ದೊಮ್ಮಸಂದ್ರದಿಂದ ಬೊಮ್ಮಸಂದ್ರ ಅಥವಾ ಎಲೆಕ್ಟ್ರಾನಿಕ್ ಸಿಟಿ ಭಾಗಕ್ಕೆ ಹೋಗಬೇಕಾದ ಸಾರ್ವಜನಿಕರು ಆಟೋಗಳನ್ನು ಅವಲಂಬಿಸಬೇಕಿತ್ತು ಅಥವಾ ಕನಿಷ್ಠ 2 ಬಸ್ಸುಗಳನ್ನು ಬದಲಾಯಿಸಬೇಕಿತ್ತು. ಆದರೆ ಈ MF-22G ನೇರ ಬಸ್ ಸೇವೆಯಿಂದಾಗಿ ಹಣ ಮತ್ತು ಸಮಯ ಎರಡೂ ಉಳಿತಾಯವಾಗಲಿದೆ. ಈ ಮಾರ್ಗವು ಪ್ರಮುಖ ವಸತಿ ಪ್ರದೇಶಗಳು ಮತ್ತು ಕೈಗಾರಿಕಾ ವಲಯಗಳನ್ನು ಸಂಪರ್ಕಿಸುತ್ತದೆ. ದೊಮ್ಮಸಂದ್ರದಿಂದ ಬೊಮ್ಮಸಂದ್ರ ಸರಿಸುಮಾರು 15ರಿಂದ 18 ಕಿಲೋಮೀಟರ್ ಅಂತರವಿದ್ದು, ಟ್ರಾಫಿಕ್ ಆಧರಿಸಿ 45ರಿಂದ 60 ನಿಮಿಷಗಳ ಪ್ರಯಾಣದ ಸಮಯ ತೆಗೆದುಕೊಳ್ಳಬಹುದು. ಚಂದಾಪುರ ಸರ್ಕಲ್‌ನಿಂದ ಬೊಮ್ಮಸಂದ್ರ ಕೇವಲ 4-5 ಕಿ.ಮೀ ದೂರದಲ್ಲಿದ್ದು, ಈ ಫೀಡರ್ ಬಸ್ ಆ ಭಾಗದ ಜನರಿಗೆ ದೊಡ್ಡ ವರವಾಗಲಿದೆ.













Click it and Unblock the Notifications