Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್‌ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?
ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಈ ಸಾಲಿನ ಬಜೆಟ್‌ನಲ್ಲಿ ಮಹತ್ವದ ಯೋಜನೆಗಳನ್ನು ಘೋಷಿಸಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವುದರಿಂದ ಹಿಡಿದು, ರಸ್ತೆಗಳ ಗುಣಮಟ್ಟ ಹೆಚ್ಚಿಸುವುದು ಮತ್ತು ರಾಜಕಾಲುವೆಗಳನ್ನು ಸುಧಾರಿಸುವವರೆಗೆ ವಿವಿಧ ಯೋಜನೆಗಳಿಗೆ ಸಾವಿರಾರು ಕೋಟಿ ರೂ.ಗಳ ಅನುದಾನ ಮೀಸಲಿರಿಸಲಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ನೀಡುತ್ತಿದ್ದ ಅನುದಾನವನ್ನು 3,000 ಕೋಟಿ ರೂ.ಗಳಿಂದ 7,000 ಕೋಟಿ ರೂ.ಗಳಿಗೆ ಏರಿಕೆ ಮಾಡುವ ಮೂಲಕ 'ಬ್ರ್ಯಾಂಡ್ ಬೆಂಗಳೂರು' ನಿರ್ಮಾಣಕ್ಕೆ ಸರ್ಕಾರ ಭದ್ರ ಬುನಾದಿ ಹಾಕಿದೆ. ಈ ಬಾರಿ ಬಜೆಟ್‌ನಲ್ಲಿ ಬೆಂಗಳೂರಿಗೆ ಆದ ಪ್ರಮುಖ ಘೋಷಣೆಗಳು ಇಲ್ಲಿವೆ.
* ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗೆ (ಉತ್ತರ-ದಕ್ಷಿಣ) ಮತ್ತು ಕೆ.ಆರ್. ಪುರಂನಿಂದ ಮೈಸೂರು ರಸ್ತೆವರೆಗೆ (ಪೂರ್ವ-ಪಶ್ಚಿಮ) ಒಟ್ಟು 40 ಕಿ.ಮೀ. ಉದ್ದದ ಸುರಂಗ ಮಾರ್ಗವನ್ನು 40,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಮೊದಲ ಹಂತದ 17 ಕಿ.ಮೀ. ಕಾಮಗಾರಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ.

* ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ 73 ಕಿ.ಮೀ. ಉದ್ದದ ಈ ರಸ್ತೆಯನ್ನು 4 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
* ಹೆಬ್ಬಾಳದಿಂದ ಮೇಖ್ರಿ ಸರ್ಕಲ್‌ವರೆಗೆ ಸುರಂಗ ಮತ್ತು ಮೇಲ್ಸೇತುವೆ ರಸ್ತೆಯನ್ನು 2,250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
* ಕಾವೇರಿ 6ನೇ ಹಂತದ ಯೋಜನೆಗೆ ₹6,939 ಕೋಟಿ
ಬೆಂಗಳೂರಿನ ಬೆಳೆಯುತ್ತಿರುವ ಜನಸಂಖ್ಯೆಗೆ ನೀರುಣಿಸಲು ಸರ್ಕಾರವು ಕಾವೇರಿ 6ನೇ ಹಂತದ ಯೋಜನೆಯನ್ನು ರೂಪಿಸಿದೆ. JICA ನೆರವಿನಿಂದ ಜಾರಿಯಾಗಲಿರುವ ಈ ಯೋಜನೆಯ ಮೂಲಕ ಹೆಚ್ಚುವರಿಯಾಗಿ 6 ಟಿ.ಎಂ.ಸಿ. ನೀರನ್ನು ನಗರಕ್ಕೆ ಪೂರೈಸಲಾಗುವುದು.
* ರಸ್ತೆಗಳ ಬಾಳಿಕೆಗೆ 450 ಕಿ.ಮೀ. ವೈಟ್ ಟಾಪಿಂಗ್: ಮುಂದಿನ ಮೂರು ವರ್ಷಗಳಲ್ಲಿ 3,000 ಕೋಟಿ ರೂ. ವೆಚ್ಚದಲ್ಲಿ ನಗರದ ಪ್ರಮುಖ ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡಲಾಗುವುದು.
* ಫುಟ್‌ಪಾತ್-ಸ್ಕೈವಾಕ್: 500 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಅಭಿವೃದ್ಧಿ, 175 ಜಂಕ್ಷನ್‌ಗಳ ಸೌಂದರ್ಯೀಕರಣ ಮತ್ತು 100 ಹೊಸ ಸ್ಕೈವಾಕ್‌ಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
* ಹೊರ ವರ್ತುಲ ರಸ್ತೆಯ ಮೆಟ್ರೋ ಮಾರ್ಗದ ಉದ್ದಕ್ಕೂ 9 ಕಿ.ಮೀ. ಪಾದಚಾರಿ ಮಾರ್ಗವನ್ನು ₹160 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.
* ಬೆಂಗಳೂರಿಗೆ ಪಾರದರ್ಶಕ ಆಡಳಿತ ನೀಡಲು ಐದು ಮಹಾನಗರ ಪಾಲಿಕೆಗಳನ್ನೊಳಗೊಂಡ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ'ವನ್ನು ಸ್ಥಾಪಿಸಲಾಗಿದೆ.
* 2027ರ ಅಂತ್ಯದೊಳಗೆ ನಗರಕ್ಕೆ ಹೊಸ ಮಾಸ್ಟರ್ ಪ್ಲಾನ್ ಜಾರಿಗೊಳಿಸಲಾಗುವುದು.
* ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕ್ರೋಢೀಕರಿಸಲು ಪಾಲಿಕೆಗಳ ಮೂಲಕ 'ಮುನಿಸಿಪಲ್ ಬಾಂಡ್'ಗಳನ್ನು ಹೊರಡಿಸಲಾಗುವುದು.

* ರಾಜಕಾಲುವೆ ಅಭಿವೃದ್ಧಿ
ವಿಶ್ವಬ್ಯಾಂಕ್ ನೆರವಿನೊಂದಿಗೆ 2,000 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳನ್ನು ಮೇಲ್ದರ್ಜೆಗೇರಿಸುವ ಮತ್ತು ವಿಪತ್ತು ನಿರೋಧಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಎದುರಾಗುವ ಪ್ರವಾಹ ಭೀತಿ ತಪ್ಪಲಿದೆ. ಮಳೆಗಾಲದಲ್ಲಿ ಉಂಟಾಗುವ ಪ್ರವಾಹ ಸಮಸ್ಯೆ ನಿಯಂತ್ರಣ ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಇದರ ಭಾಗವಾಗಿ 273 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಮೇಲ್ದರ್ಜೆಗೇರಿಸುವುದು ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರಾಜಕಾಲುವೆಗಳ ದುರಸ್ತಿ, ವಿಸ್ತರಣೆ ಹಾಗೂ ಕೆರೆಗಳ ಪುನರುಜ್ಜೀವನದ ಮೂಲಕ ಮಳೆ ನೀರಿನ ನಿರ್ವಹಣೆಯನ್ನು ಸುಧಾರಿಸುವ ಉದ್ದೇಶ ಹೊಂದಿದೆ.
73 ಕಿ.ಮೀ. ಬಿಸಿನೆಸ್ ಕಾರಿಡಾರ್ ಮತ್ತು ಬೃಹತ್ ಸುರಂಗ ಮಾರ್ಗಗಳ ಯೋಜನೆಗಳು ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ನೀಡುವ ನಿರೀಕ್ಷೆಯಿದೆ. ಜೊತೆಗೆ 6ನೇ ಹಂತದ ಕಾವೇರಿ ಯೋಜನೆಯು ನಗರದ ನೀರಿನ ಬವಣೆಯನ್ನು ನೀಗಿಸಲಿದೆ. ಬೆಂಗಳೂರಿನ ಸಂಚಾರ ವ್ಯವಸ್ಥೆಯನ್ನು ಹಳಿಗೆ ತರಲು ಮತ್ತು ನಗರದ ಸೌಂದರ್ಯವನ್ನು ಹೆಚ್ಚಿಸಲು ಸರ್ಕಾರ ಈ ಬಾರಿ ಬೃಹತ್ ಹೂಡಿಕೆ ಮಾಡಿದೆ. ಈ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ ಬೆಂಗಳೂರಿಗರ 'ಟ್ರಾಫಿಕ್ ಸಂಕಷ್ಟ'ಕ್ಕೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.
ಬೆಂಗಳೂರು ಕೇವಲ ಒಂದು ನಗರವಷ್ಟೇ ಅಲ್ಲ. ಇದು ಅಸಂಖ್ಯಾತ ಕನಸುಗಳ ನೆಲೆಬೀಡು. ನಾಡಪ್ರಭು ಕೆಂಪೇಗೌಡರ ಆಡಳಿತದಿಂದ ಹಿಡಿದು ಇಂದಿನ ಸ್ಟಾರ್ಟ್‌ಅಪ್ ಕ್ರಾಂತಿಯವರೆಗೆ ಈ ನಗರವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಬೆಂಗಳೂರನ್ನು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ಉಲ್ಲೇಖಿಸಿದರು.












Click it and Unblock the Notifications