ಭ್ರಷ್ಟಾಚಾರ ಕೇಸ್: ಸಿಬಿಐ ವಶಕ್ಕೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ
ಭ್ರಷ್ಟಾಚಾರ ಆರೋಪ ಹೊತ್ತು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎನ್‌ಸಿಪಿ ಮುಖಂಡ ಅನಿಲ್ ದೇಶ್‌ಮುಖ್ ಅವರನ್ನು ಸಿಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. ತನ್ನ ಕಸ್ಟಡಿಗೆ ಕೋರಿದ್ದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅನಿಲ್ ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಬಾಂಬೆ ಹೈಕೋರ್ಟ್ ಈ ಹಿಂದೆ ನಿರಾಕರಿಸಿತ್ತು.
ದೇಶಮುಖ್ ಅವರ ಆಪ್ತ ಸಹಾಯಕ ಕುಂದನ್ ಶಿಂಧೆ ಮತ್ತು ಕಾರ್ಯದರ್ಶಿ ಸಂಜೀವ್ ಪಲಾಂಡೆ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿತ್ತು. ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಜೆ ಅವರು ಸೇವೆಯಿಂದ ವಜಾಗೊಂಡಿದ್ದಾರೆ.
ಸಿಬಿಐ ಪ್ರಕರಣದ ಇಬ್ಬರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಈ ಇಬ್ಬರ ಫೋನ್‌ಗಳನ್ನು ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಅವರು ಕದ್ದಾಲಿಕೆ ಮಾಡಿದ್ದಾರೆ, ಅವರ ವರದಿಯ ಪ್ರಕಾರ, ಅಕ್ರಮ ವರ್ಗಾವಣೆ ಪ್ರಕರಣದ ಭಾಗವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ:
ಪ್ರತಿ ತಿಂಗಳು 100 ಕೋಟಿ ವಸೂಲಿ ಮಾಡಿ ನೀಡುವಂತೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಅನಿಲ್ ದೇಶ್‌ಮುಖ್ ಆದೇಶಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ ಪರಮ್ ಬೀರ್ ಸೇರಿದಂತೆ ಅನೇಕರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಯಶ್ರೀ ಪಾಟೀಲ್ ಎಂಬುವವರ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದ ನ್ಯಾಯಾಲಯ, ಪರಮ್ ಬೀರ್ ಸಿಂಗ್, ವಕೀಲರಾದ ಘನಶ್ಯಾಮ್ ಉಪಾಧ್ಯಾಯ್ ಮತ್ತು ಮೋಹನ್ ಭಿಡೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತ್ತು.
ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ ವಾಹನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಪರಮ್ ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಲಂಚದ ಬಗ್ಗೆ ಪ್ರಸ್ತಾಪಿಸಿ ಅನಿಲ್ ವಿರುದ್ಧ ಆರೋಪ ಮಾಡಲಾಗಿದೆ. ಈ ಬಗ್ಗೆ ಅನಿಲ್ ದೇಶ್ ಮುಖ್ ಸ್ಪಷ್ಟನೆ ನೀಡಿ, ಆರೋಪಗಳನ್ನು ತಳ್ಳಿ ಹಾಕಿದ್ದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಪತ್ರ ಬರೆದಿದ್ದು, 100 ಕೋಟಿ ಹಫ್ತಾ ವಸೂಲಿ ಮಾಡಲು ಇಲಾಖೆಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಂದ ಸೂಚನೆ ಬಂದಿತ್ತು ಎಂದು ಗಂಭೀರ ಆರೋಪ ಮಾಡಿದ್ದರು. ಮುಂಬೈ ಹುಕ್ಕಾ ಪಾರ್ಲರ್ ಸಭೆ ಮುಂಬೈ ಹುಕ್ಕಾ ಪಾರ್ಲರ್‌ಗಳ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ನಂತರ ಗೃಹ ಸಚಿವರ ವೈಯಕ್ತಿಕ ಕಾರ್ಯದರ್ಶಿ ಪಲಾಂಡೆ ಅವರು ಎಸಿಪಿ ಪಾಟೀಲ್ ಅವರನ್ನುದ್ದೇಶಿಸಿ ʼಗೃಹಸಚಿವರು ಮುಂಬೈನಲ್ಲಿರುವ ಅಂದಾಜು 1750 ಬಾರ್, ರೆಸ್ಟೋರೆಂಟ್‌ಗಳು ಮತ್ತಿತರ ವ್ಯಾಪಾರಿಗಳಿಂದ ಸುಮಾರು 40ರಿಂದ 50 ಕೋಟಿ ರೂಪಾಯಿ ಸಂಗ್ರಹದ ಗುರಿಹೊಂದಿದ್ದಾರೆ ಎಂದು ತಿಳಿಸಿದರು.












Click it and Unblock the Notifications