Video Viral: ಗ್ರಾಹಕರೇ ಹುಷಾರ್! ಎಲ್‌ಪಿಜಿ ಸಿಲಿಂಡರ್ ಕಳ್ಳರಿದ್ದಾರೆ ಎಚ್ಚರಿಕೆ: ಕಳ್ಳರ ಕೈಚಳಕದ ಸಿಸಿಟಿವಿ ದೃಶ್ಯಗಳು ವೈರಲ್
ಬೆಂಗಳೂರು: ಎಲ್‌ಪಿಜಿ ಸಿಲಿಂಡರ್ ಪೂರೈಕೆ ಕೊರತೆ ಸಮಸ್ಯೆಯು ಬೆಂಗಳೂರು, ಕರ್ನಾಟಕದಾದ್ಯಂತ ಸದ್ದು ಮಾಡುತ್ತಿದೆ. ಮೂರು ಪಟ್ಟು ಹಣ ನೀಡಿ ಅಡುಗೆ ಅನಿಲ ಕೊಳ್ಳುವ ಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸಿಲಿಂಡರ್ ಕಳ್ಳತನಗಳು ನಡೆಯುತ್ತಿವೆ. ದರ ಹೆಚ್ಚಾಯಿತೆಂದು ತಲೆ ಕೆಡಿಸಿಕೊಂಡ ಗ್ರಾಹಕರಿಗೆ ಈ ಕಳ್ಳರು ತಮ್ಮ ಕೈ ಚಳಕ ತೋರಿಸಿ ಆಘಾತ ನೀಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮನೆ ಮುಂದೆ ಇಟ್ಟಿದ್ದ ಸಿಲಿಂಡರ್ ಅನ್ನು ಯಾರಿಗೂ ಗೊತ್ತಾದಂತೆ ಕದ್ದೊಯ್ದ ಘಟನೆಗಳು ಬೆಂಗಳೂರು ಹಾಗೂ ಚೆನ್ನಪ್ಪಟ್ಟಣದಲ್ಲಿ ಮೂರು ಪ್ರತ್ಯೇಕ ಕಡೆಗಳಲ್ಲಿ ದಾಖಲಾಗಿದೆ. ಕಳ್ಳತನದ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂದಿನ ತೈಲ ಬಿಕ್ಕಟ್ಟು, ಎಲ್‌ಪಿಜಿ ಸಿಲಿಂಡರ್ ಸಮಸ್ಯೆ ಉದ್ಭವಿಸಿದ ಹೊತ್ತಿನಲ್ಲಿ ಈ ಸಿಲಿಂಡರ್ ಕಳ್ಳತನದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿವೆ. ದುಪ್ಪಟ್ಟು ಹಣ ಕೊಟ್ಟು ಖರೀದಿಸಿದ ಗ್ರಾಹಕರೇ ಎಚ್ಚರ ಎಂದು ಕೆಲವರು ಎಚ್ಚರಿಸಿದ್ದಾರೆ.

ಮೊದಲ ಪ್ರಕರಣ ಚನ್ನಪಟ್ಟಣದಲ್ಲಿ ಮನೆ ಮುಂದಿರುವ ಕಾಂಪೌಂಡ್ ಗೋಡೆ ಮೇಲಿಟ್ಟಿದ್ದ ಗೃಹ ಬಳಕೆಯ ಸಿಲಿಂಡರ್ ಅನ್ನು ಯುವಕನೊಬ್ಬ ಗೇಟ್ ತೆಗೆದು ಒಳಬಂದು ಹೊತ್ತೊಯ್ದಿದ್ದಾರೆ. ಹಾಡಹಗಲೇ ಯುವಕ ಮನೆ ಪ್ರವೇಶ, ಸಿಲಿಂಡರ್ ಕಳ್ಳತನದ ದೃಶ್ಯಗಳು ಸಿಸಿಟಿವಿಯನ್ನು ಸಂಪೂರ್ಣವಾಗಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬೈಕ್ ಮೇಲೆ ಸಿಲಿಂಡರ್ ಹೊತ್ತೊಯ್ದ ಕಳ್ಳ; ವಿಡಿಯೋ
ಮತ್ತೊಂದು ಎಲ್‌ಪಿಜಿ ಸಿಲಿಂಡರ್ ಕಳ್ಳತನ ಪ್ರಕರಣ ಬೆಂಗಳೂರಿನಲ್ಲಿ ವರದಿ ಆಗಿದೆ. ರಾತ್ರಿ ವೇಳೆ ವಾಹನ ಸವಾರರಂತೆ ಬರುವ ಈ ವ್ಯಕ್ತಿಯು ತಾನು ಸಿಲಿಂಡರ್ ಕದಿಯುವ ಮನೆಯ ಮುಂದೆ ಸಾಮಾನ್ಯರಂತೆ ಬೈಕ್ ನಿಲ್ಲಿಸುತ್ತಾನೆ. ಬಳಿಕ ಸುತ್ತಮುತ್ತ ಯಾರು ಇಲ್ಲದ್ದನ್ನು ಗಮನಿಸಿ ಬಿಳಿ ಚೀಲವೊಂದರಲ್ಲಿ ಸಿಲಿಂಡರ್ ಸುತ್ತಿಕೊಂಡು ಅಲ್ಲಿಂದ ಪಾರಾರಿಯಾಗಿದ್ದಾನೆ. ನೋಡಿದರೆ ಮನೆ ಮಾಲೀಕರೇ ಸಿಲಿಂಡರ್ ಒಯ್ಯುತ್ತಿರಬೇಕು ಎಂಬಂತೆ ಕಾಣುತ್ತಿದೆ. ಆದರೆ ಅಸಲಿಗೆ ಇದು ಕಳ್ಳನ ಕೈಚಳಕವಾಗಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಇನ್ನೊಂದು ಕಡೆಯಲ್ಲಿ ಇಬ್ಬರು ಸ್ಕೂಟರ್‌ನಲ್ಲಿ ಬಂದು ಗ್ಯಾಸ್ ಕದ್ದೊಯ್ದಿದ್ದಾರೆ. ಈ ಪ್ರಕರಣಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
VIDEO | Karnataka: Two cases of LPG cylinder theft reported in Bengaluru. CCTV visuals.
— Press Trust of India (@PTI_News) March 13, 2026
(Source: Third Party)
(Full video available on https://t.co/n147TvrpG7) pic.twitter.com/ZAKKCTPbXb
ಸಾರ್ವಜನಿಕ ನಿದ್ದೆಗೆಡಿಸಿದ ಗ್ಯಾಸ್ ಕಳ್ಳರು
ಇಂದಿನ ಪರಿಸ್ಥಿತಿಯಲ್ಲಿ ಹೋಟೆಲ್‌ಗಳಲ್ಲಿ ಗ್ಯಾಸ್ ದರ ವಿಧಿಸಿ ವಸೂಲಿ ಮಾಡಲಾಗುತ್ತಿದೆ. ದರ ಹೆಚ್ಚಳದಿಂದ ಗ್ರಾಹಕರು ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಗ್ಯಾಸ್ ಖರೀದಿಸುತ್ತಿದ್ದಾರೆ. ಕೆಲವರಿಗೆ ಸಿಲಿಂಡರ್ ಸಿಗುತ್ತಿಲ್ಲ. ಕಾಳಸಂತೆಯಲ್ಲಿ ಹೆಚ್ಚು ಹಣ ನೀಡಿ ಕೆಲವರು ಸಿಲಿಂಡರ್ ತರುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವೆಡೆ ಸಿಲಿಂಡರ್ ಕಳ್ಳತನ ಪ್ರಕರಣಗಳು ವರದಿ ಆಗಿವೆ. ಇದು ಬೆಂಗಳೂರು ಮತ್ತು ಚನ್ನಪಟ್ಟಣ ಸಾರ್ವಜನಿಕ ನಿದ್ದೆಗಡಿಸಿದೆ.












Click it and Unblock the Notifications