Cylinder Shortage: ರಾಜ್ಯದಲ್ಲಿ ಅನಿಲ ಪೂರೈಕೆ ಸಮಸ್ಯೆಗೆ ಮುಕ್ತಿ? ಸಚಿವ ಮುನಿಯಪ್ಪ ಮಹತ್ವ ಮಾಹಿತಿ
ಬೆಂಗಳೂರು: ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಉಂಟಾಗಿರುವ ಅಡುಗೆ ಅನಿಲ ಸಮಸ್ಯೆ ಮುಂದಿನ 08-10 ದಿನಗಳಲ್ಲಿ ಇತ್ಯರ್ಥವಾಗಲಿದೆ. ಹೋಟೆಲ್ ಉದ್ಯಮದವರು ತಾಳ್ಮೆ ಕಾಯ್ದುಕೊಳ್ಳಬೇಕು. ಕಾಳಸಂತೆಯಲ್ಲಿ ಸಿಲಿಂಡರ್ ಮಾರಾಟವಾದರೆ ಕ್ರಮಕ್ಕೆ ಸೂಚಿಸಲಾಗಿದೆ. ಇನ್ನೂ ಅಡುಗೆ ಅನಿಲ ಮೇಲೆ ರಾಜ್ಯ ಸರ್ಕಾರದ ಶೇ.55 ರಷ್ಟು ತೆರಿಗೆ ಹಾಕುತ್ತಿರುವ ಬಗ್ಗೆ ಮಾಹಿತಿ ನೀಡಲಾಗುವುದೆಂದು ರಾಜ್ಯ ಆಹಾರ ಮತ್ತು ನಾಗರಿಕ ವ್ಯವಹಾರ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಶುಕ್ರವಾರ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ್ ಮತ್ತು ಎಂ.ನಾಗರಾಜು ಅವರು ಶೂನ್ಯ ವೇಳೆಯಲ್ಲಿ ಕೇಳಿದ ಪ್ರಶ್ನೆ ಕೇಳಿದರು. ಬೆಂಗಳೂರಿನ ಹೋಟೆಲ್, ಪಿಜಿ, ಅಸ್ಪತ್ರೆಗಳು, ಇಂದಿರಾ ಕ್ಯಾಂಟಿನ್, ದೇವಸ್ಥಾನಗಳಿಗೂ ಬಿಸಿ ತಟ್ಟಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ತೀವ್ರವಾಗಿದೆ ಹಾಗೂ ಕೇಂದ್ರಕ್ಕಿಂತ ರಾಜ್ಯ ಸರ್ಕಾರ ಅಡುಗೆ ಅನಿಲ ಮೇಲೆ ಹೆಚ್ಚಿನ ತೆರಿಗೆ ಹಾಕುತ್ತಿದೆ ಎಂಬ ವರದಿಗಳನ್ನು ಸದನದ ಗಮನಕ್ಕೆ ತಂದರು.

ಈ ವಿಚಾರಗಳಿಗೆ ಉತ್ತರಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರು, ಸದರಿ ಸಮಸ್ಯೆಗಳನ್ನು ಸರ್ಕಾರ ಗಂಭೀರವಗಿ ಪರಿಗಣಿಸಿದೆ. ಇಂದು ಶುಕ್ರವಾರ ಬೆಳಗ್ಗೆ ಇಲಾಖೆ ಕಾರ್ಯದರ್ಶಿ, ಅಧಿಕಾರಿಗಳು ಹಾಗೂ ನಾವು ಆಯಿಲ್ ಕಂಪನಿಗಳ ಜೊತೆಗೆ ಸಭೆ ಮಾಡಿದ್ದೇವೆ. ಅವರು ವಾಣಿಜ್ಯ ಸಿಲಿಂಡರ್ ಪೂರೈಕೆಗೆ ಒಪ್ಪಿದ್ದಾರೆ. ಸಮಸ್ಯೆಗೆ ಶೀಘ್ರವೇ ಮುಕ್ತಿ ದೊರೆಯಲಿದೆ ಎಂದು ಭರವಸೆ ಕೊಟ್ಟರು.
ರಾಜ್ಯದ ಆಸ್ಪತ್ರೆಗಳಲ್ಲಿ ಊಟ ತಯಾರಿಕೆ ಮೇಲೂ ಸಮಸ್ಯೆ ಆಗಿದೆ. ಆಸ್ಪತ್ರೆಗಳಲ್ಲಿ ಅತ್ಯಗತ್ಯ ಪದಾರ್ಥ ತಯಾರಿಕೆಗೆ ಆಗುವಷ್ಟು ಅನಿಲ ಪೂರೈಕೆ ಮಾಡಲು ಸರ್ಕಾರ ಆದ್ಯತೆ ನೀಡಲಿದೆ. ಆಸ್ಪತ್ರೆಗಳ ಪೂರೈಕೆ ನಿಲ್ಲಿಸುವಂತಿಲ್ಲ. ವಾಣಿಜ್ಯ ಸಿಲಿಂಡರ್‌ಗಳು ಅಗತ್ಯದಷ್ಟು ದಾಸ್ತಾನು ಇಲ್ಲ. ಆದರೂ ಆಸ್ಪತ್ರೆಗಳಿಗೆ ಒದಗಿಸಲು ಪೂರೈಕೆದಾರರು ಒಪ್ಪಿದ್ದಾರೆ. ಆದರೆ ಹೋಟೆಲ್ ಉದ್ಯಮಿಗಳು ಮುಂದಿನ ಎಂಟತ್ತು ದಿನ ತಾಳ್ಮೆಯಿಂದ ಕಾಯಬೇಕು. ಹೋಟೆಲ್‌ಗಳಲ್ಲಿ ವಿದ್ಯುತ್ ಒಲೆಯೊಂದಿಗೆ ಅಗತ್ಯ ಆಹಾರ ಪದಾರ್ಥ ಸಿದ್ಧಪಡಿಸಿಕೊಳ್ಳಬೇಕು ಎಂದು ಅವರು ಕೋರಿದರು.
ಶೀಘ್ರವೇ ಬರಲಿವೆ 12 ತೈಲ ಹಡಗು, ಸಮಸ್ಯೆ ನಿವಾರಣೆ
ರೆಸಿಡೆನ್ಸಿಯಲ್ ಸ್ಕೂಲ್, ಹಾಸ್ಟೆಲ್ ಸೇರಿ ಮುಂತಾದ ಕಡೆಗಳಲ್ಲಿ ಆಗಿರುವ ಸಮಸ್ಯೆಯತ್ತಲೂ ಗಮನ ಹರಿಸುತ್ತೇವೆ. ಭಾರತಕ್ಕೆ ಎರಡು ಹಡಗುಗಳು ತೈಲ ಸಮೇತ ಆಗಮಿಸಿವೆ. ಮುಂದೆ ಸುಮಾರು ಹತ್ತರಿಂದ ಹನ್ನೆರಡು ಹಡಗುಗಳು ಬರಲಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಂಡು ಹೆಚ್ಚಿನ ಮಾಹಿತಿ ನೀಡುತ್ತೇನೆ. ಹಾಲಿ ಬಂದ ಹಡುಗಳಿಂದ ತೈಲ ಸಂಸ್ಕರಿಸಿ ರಾಜ್ಯದಲ್ಲಿ ಪೂರೈಕೆಗೆ ಬೇಕಾದ ಏರ್ಪಾಡು ಮಾಡಿಕೊಳ್ಳುವಂತೆ ಅಧಿಕಾರಿಗಳು, ಕಂಪನಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ವಾಣಿಜ್ಯ ಸಿಲಿಂಡರ್ ಹೆಚ್ಚಿನ ಬೆಲೆಗೆ ಮಾರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಗ್ರಾಹಕರಿಗೆ ಸಿಗಬೇಕಾದ ಸಿಲಿಂಡರ್ ಕಾಳಸಂತೆಗೆ ಹೋಗದಂತೆ ತಡೆಯುವಂತೆ ತಿಳಿಸಿದ್ದೇವೆ.
ಆಟೋಗಳ ಅನಿಲ ಸಮಸ್ಯೆ ನಿವಾರಣೆ ಭರವಸೆ
ಇನ್ನೊಂದು ವಾರದಲ್ಲಿ ವಾಣಿಜ್ಯ ಸಿಲಿಂಡರ್ ಸಿಗುವ ಭರವಸೆ ಇದೆ. ಇನ್ನೂ ಬೆಂಗಳೂರು, ಮಂಗಳೂರು ನಗರದಲ್ಲಿ ಎಲ್‌ಪಿಜಿ ಬಳಸಿ ಚಾಲನೆ ಮಾಡುವ ಆಟೋಗಳು ಅನಿಲ ಪೂರೈಕೆ ಸಮಸ್ಯೆ ಎದುರಿಸುತ್ತಿವೆ. ಇದರ ನಿವಾರಣೆಗೆ ಸೂಚಿಸಿದ್ದೇನೆ.
ಈ ಅನಿಲ ಪೂರೈಕೆ ವಲಯವು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ತೆರಿಗೆ ಎಲ್ಲವು ಸರ್ಕಾರ ನೋಡಿಕೊಳ್ಳುತ್ತದೆ. ಆದರೆ ಅಡುಗೆ ಅನಿಲ ಮೇಲೆ ರಾಜ್ಯ ಸರ್ಕಾರ ಶೇ.55 ರಷ್ಟು ತೆರಿಗೆ ಹಾಕಿದ್ದರೆ ಬಗ್ಗೆ ಮಾಹಿತಿ ಇಲ್ಲ ತಿಳಿದುಕೊಂಡು ಆ ಬಗ್ಗೆ ಮಾತನಾಡುವೆ ಎಂದು ಅವರು ಕಲಾಪದಲ್ಲಿ ಉತ್ತರಿಸಿದರು.












Click it and Unblock the Notifications