• search
  • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂರಕ್ಷಿತಾರಣ್ಯದಲ್ಲಿಯೇ ಮರಗಳ ಮಾರಣ ಹೋಮ: ಕಣ್ಮುಚ್ಚಿ ಕುಳಿತ ಅರಣ್ಯಾಧಿಕಾರಿಗಳು

By ಉತ್ತರ ಕನ್ನಡ ಪ್ರತಿನಿಧಿ
|
Google Oneindia Kannada News

ಕಾರವಾರ ನವೆಂಬರ್‌ 12: ಕುಮಟಾ ತಾಲೂಕಿನ ಉಳ್ಳೂರು ಮಠ, ಪಶ್ಚಿಮ ಘಟ್ಟ ಸಾಲಿನ ಬೆಲೆಬಾಳುವ ಮರಗಳಿರುವ ಸಂರಕ್ಷಿತಾರಣ್ಯ ಪ್ರದೇಶ. ಈ ಪ್ರದೇಶದಲ್ಲಿ ಮರಗಳ್ಳತನ ನಡೆಯದಂತೆ ತಡೆಯಲು ದಿನದ 24 ಗಂಟೆಯೂ ಎರಡೆರೆಡು ಚೆಕ್ ಪೋಸ್ಟ್‌ಗಳ ಮೂಲಕ ಕಾವಲು ಕಾಯಲಾಗುತ್ತದೆ.

ಇಷ್ಟಾದರೂ ಈ ಪ್ರದೇಶದಲ್ಲಿ ಸಾಗುವಾನಿಯ ಮರಗಳನ್ನು ಕಡಿದಿದ್ದು ಅರಣ್ಯ ರಕ್ಷಣೆ ಮಾಡಬೇಕಿದ್ದ ಅಧಿಕಾರಿಗಳು ಕೂಡ ಕಣ್ಮುಚ್ಚಿ ಕುಳಿತಿರುವ ಕಾರಣ ಲಕ್ಷಾಂತರ‌ ರೂಪಾಯಿ ಬೆಲೆ ಬಾಳುವ ಮರಗಳು ಕಳ್ಳರ ಪಾಲಾಗುತ್ತಿದೆ.ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಳ್ಳೂರು ಮಠ ಅರಣ್ಯ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಕಾರವಾರದಲ್ಲೊಂದು ಬಲೂನ್ ಜಾತ್ರೆ, ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರಕಾರವಾರದಲ್ಲೊಂದು ಬಲೂನ್ ಜಾತ್ರೆ, ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ

ಇಲ್ಲಿ ಒಂದು ಮರ ಕಡಿದರೂ ಎರಡು ಚೆಕ್‌ಪೋಸ್ಟ್‌ಗಳನ್ನು ದಾಟಿ ಹೋಗಬೇಕಿದ್ದು ಮರ ಕಡಿದು ಸಾಗಿಸುವುದು ಅಸಾಧ್ಯ ಎನ್ನುವಂತಿದೆ. ಇಷ್ಟಾದರೂ ಈ ರಕ್ಷಿತಾರಣ್ಯ ಪ್ರದೇಶದಲ್ಲಿ ಲಕ್ಷಾಂತರ ಮೌಲ್ಯದ ಮರಗಳ ಮಾರಣ ಹೋಮ ನಡೆದಿದೆ. ಸದ್ದೇ ಇಲ್ಲದಂತೆ ಬೆಲೆಬಾಳುವ ಸಾಗುವಾನಿ ಮರಗಳನ್ನು ಕಡಿದುಹಾಕಿದ್ದು ಕೇವಲ ಮರದ ಬುಡ ಮಾತ್ರ ಅಲ್ಲಲ್ಲಿ ಉಳಿದುಕೊಂಡಿದೆ.


ಅಪರೂಪದ ಅಳಿವಿನ ಅಂಚಿನಲ್ಲಿರುವ ಸಿಂಗಳೀಕ ಅರಣ್ಯ ಪ್ರದೇಶವಿರುವ ಸಾಂತಗಲ್, ಉಳ್ಳೂರು, ಸಂತೆಗುಳಿ ರಕ್ಷಿತಾರಣ್ಯವಿರುವ ಗ್ರಾಮಗಳಲ್ಲಿ ಮರಗಳ್ಳರ ಕೃತ್ಯಕ್ಕೆ ಬೆಲೆಬಾಳುವ ಮರಗಳು ಬಲಿಯಾಗಿದೆ. ಈ ಪ್ರದೇಶ ಪಶ್ಚಿಮಘಟ್ಟ ಭಾಗದಲ್ಲಿ ಬರುವುದರಿಂದ ಸೂಕ್ಷ್ಮ ಪ್ರದೇಶವೂ ಆಗಿದೆ. ಹೀಗಾಗಿ ಈ ಭಾಗದಿಂದ ಸಿದ್ದಾಪುರ ಹಾಗೂ ಕುಮಟಾಕ್ಕೆ ತೆರಳುವ ಘಟ್ಟಪ್ರದೇಶದ ಹೆದ್ದಾರಿಯ ಎರಡು ಕಡೆಗಳಲ್ಲಿ ಅರಣ್ಯ ತಪಾಸಣಾ ಕೇಂದ್ರಗಳಿವೆ. ಹೀಗಿದ್ದರೂ ದಟ್ಟ ಅರಣ್ಯ ಭಾಗದಲ್ಲಿ ಇರುವ ಸಾಂತಗಲ್, ಉಳ್ಳೂರುಮಠ, ಸಂತೆಗುಳಿ ಗ್ರಾಮದಲ್ಲಿ ಬೀಟೆ, ಸಾಗವಾನಿ ಮರಗಳನ್ನು ನಿರಂತರವಾಗಿ ಕಡಿದು ಸಾಗಿಸಲಾಗುತ್ತಿದೆ.

ಪ್ರತಿ ಮರವೂ ಎರಡರಿಂದ ಮೂರು ಲಕ್ಷ ಬೆಲೆ ಬಾಳುವಂತಿದ್ದು ಅರಣ್ಯ ಪಾಲಕರು, ಅರಣ್ಯ ಇಲಾಖೆ ತಪಾಸಣಾ ಕೇಂದ್ರಗಳಿದ್ದರೂ ಲಕ್ಷಾಂತರ ಮೌಲ್ಯದ ಮರಗಳ ಕಳ್ಳಸಾಗಾಣಿಕೆ ನಿರಂತರ ನಡೆಯುತ್ತಿದೆ. ಈ ರೀತಿ ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಲು ಅರಣ್ಯಾಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂದು ಗ್ರಾಮ ಅರಣ್ಯ ಸಂರಕ್ಷಣಾ ಸಮಿತಿ ಅಧ್ಯಕ್ಷ ನಾರಾಯಣಗೌಡ ಆರೋಪಿಸಿದ್ದಾರೆ.

Trees Destroyed In Kumta Taluk Ullur Mutt Forest Area

ಇನ್ನು ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಈಗಾಗಲೇ ಐವತ್ತಕ್ಕೂ ಅಧಿಕ ಮರಗಳನ್ನು ಕಡಿದುಕೊಂಡು ಹೋಗಿದ್ದು, ಈ ಸಂಬಂಧ ಯಾರನ್ನೂ ಸಹ ವಶಕ್ಕೆ ಪಡೆದಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಅರಣ್ಯ ವೀಕ್ಷಕರಿದ್ದರೂ ಸಹ ಅವರನ್ನು ಅರಣ್ಯ ಇಲಾಖೆ ನರ್ಸರಿ ಕೆಲಸಕ್ಕೆ ನಿಯೋಜಿಸಿದ್ದು ಅರಣ್ಯ ವೀಕ್ಷಣೆಗೆ ಯಾವ ಸಿಬ್ಬಂದಿಯೂ ಬರುತ್ತಿಲ್ಲ. ರಾತ್ರಿ ವೇಳೆಯೂ ಸಹ ಯಾವುದೇ ಗಸ್ತು ವ್ಯವಸ್ಥೆ ಇಲ್ಲವಾಗಿದ್ದು ಇದು ಮರಗಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ಇನ್ನು ಈ ಬಗ್ಗೆ ಅರಣ್ಯ ಅಧಿಕಾರಿಗಳನ್ನು ಕೇಳಿದಾಗ, ರಕ್ಷಿತಾರಣ್ಯ ಪ್ರದೇಶದಲ್ಲಿನ ಮರಗಳನ್ನು ಸ್ಥಳೀಯರೇ ಕಡಿದು ಬಳಕೆ ಮಾಡಿಕೊಂಡಿದ್ದಾರೆ. ಈಗಾಗಲೇ ಆರೋಪಿಗಳ ವಿರುದ್ಧ ಪ್ರಕರಣ ಸಹ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆ ಉತ್ತಮವಾಗಿದ್ದು ಮರಗಳ ಸಾಗಾಟ ನಡೆದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.

ಒಟ್ಟಾರೆ ಸಂರಕ್ಷಿತಾರಣ್ಯ ಪ್ರದೇಶದಲ್ಲಿದ್ದ ಬೆಲೆಬಾಳುವ ಮರಗಳು ಮಾಯವಾಗುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ತಮಗೆ ಅರಿವೆ ಇಲ್ಲದಂತೆ ಇರುವುದು ಪರೋಕ್ಷವಾಗಿ ಮರಗಳ್ಳರಿಗೆ ಬೆಂಬಲ ನೀಡಿದಂತಾಗಿದೆ. ಕೂಡಲೇ ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಅರಣ್ಯಗಳ್ಳರಿಗೆ ಬಿಸಿ ಮುಟ್ಟಿಸಬೇಕು ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.

English summary
Trees destroyed in Kumta Taluk Ullur Mutt forest area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X