ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾದಿ ಭಾಗ್ಯ : ಅಡಕತ್ತರಿಯಲ್ಲಿ ಸಿಎಂ ಸಿದ್ದರಾಮಯ್ಯ

By Prasad
|
Google Oneindia Kannada News

ಬೆಂಗಳೂರು, ನ. 27 : ಭಾರೀ ಮಹತ್ವಾಕಾಂಕ್ಷೆಯಿಂದ ಆರಂಭಿಸಲಾಗಿರುವ 'ಶಾದಿ ಭಾಗ್ಯ' ಯೋಜನೆ (ಮದುವೆಯಾದ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ತಲಾ 50 ಸಾವಿರ ರು.) ರಾಜ್ಯ ಕಾಂಗ್ರೆಸ್ ಸರಕಾರವನ್ನು ಗೊಂದಲದ ಗೂಡಿಗೆ ತಳ್ಳಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

ಒಂದೆಡೆ ಅಲ್ಪಸಂಖ್ಯಾತ ಸಮುದಾಯ(ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿ, ಸಿಖ್)ದಿಂದ ಬೆಂಬಲ ದೊರೆತಿದ್ದರೆ, ಮತ್ತೊಂದೆಡೆ ವಿರೋಧಪಕ್ಷಗಳು ಇದಕ್ಕೆ ಭಾರೀ ಪ್ರತಿರೋಧ ವ್ಯಕ್ತಪಡಿಸುತ್ತಿವೆ. ಜೊತೆಗೆ ಆಂತರಿಕವಾಗಿ ಕೂಡ ಈ ಯೋಜನೆಯನ್ನು ಕೈಬಿಡಬೇಕೆಂಬ ಒತ್ತಡ ಸಿದ್ದರಾಮಯ್ಯ ಅವರಿಗೆ ಬರುತ್ತಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮೂರು ದಿನಗಳಿಂದ ಸದನದ ಬಾವಿಯಲ್ಲಿ ಚಕ್ಕಂಬಕ್ಕಳ ಹಾಕಿ 'ಶಾದಿ ಭಾಗ್ಯ' ಯೋಜನೆಯನ್ನು ಎಲ್ಲ ಬಡವರ್ಗದವರಿಗೆ ವಿಸ್ತರಿಸಬೇಕು ಎಂದು ಯಡಿಯೂರಪ್ಪ ಕುಳಿತಿದ್ದರು. ಸಿದ್ದರಾಮಯ್ಯ, ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸೇರಿದಂತೆ ಯಾರು ಎಷ್ಟೇ ವಿನಂತಿಸಿಕೊಂಡರೂ ಜಪ್ಪಯ್ಯ ಅಂದರೂ ಯಡಿಯೂರಪ್ಪ ಕದಲಿದ್ದಿಲ್ಲ.

Shaadi Bhagya : Siddaramaiah in dilemma to drop or not

ಸುವರ್ಣ ವಿಧಾನಸೌಧದ ಎದುರಿಗೇ ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಯುವ ರೈತ ವಿಠಲ ಅರಭಾವಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಶಾದಿ ಭಾಗ್ಯ ಎಲ್ಲ ವರ್ಗದವರಿಗೂ ಸಿಗಬೇಕೆಂದು ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟು ರೈತರ ಪರ ಹೋರಾಡುವುದಾಗಿ ಬಿಎಸ್ವೈ ಹೇಳಿದ್ದಾರೆ. ಆದರೆ, ಶಾದಿ ಭಾಗ್ಯವನ್ನು ಅಷ್ಟು ಸುಲಭವಾಗಿ ಕೈಬಿಡುವವರು ಯಡಿಯೂರಪ್ಪ ಅಲ್ಲವೇ ಅಲ್ಲ. [ಬೆಳಗಾವಿಯಲ್ಲಿ ರೈತನ ಆತ್ಮಹತ್ಯೆ]

ಯಡಿಯೂರಪ್ಪನವರ ವಿಪರೀತ ಹಟಮಾರಿತನದಿಂದಾಗಿ ಸಿದ್ದರಾಮಯ್ಯ ಅವರಿಗೆ ಸಾಕಷ್ಟು ಇರುಸುಮುರುಸಾಗಿದೆ. ಆದರೆ, ಈ ನಡುವೆ ಬಗೆಹರಿಯದ ಸಮಸ್ಯೆಯಾಗಿರುವ ಶಾದಿ ಭಾಗ್ಯ ಯೋಜನೆಗೆ ಕಾಂಗ್ರೆಸ್ ಪಕ್ಷದ ಕೆಲ ಹಿರಿಯ ನಿಷ್ಠಾವಂತ ನಾಯಕರಿಂದ ಪ್ರತಿರೋಧ ವ್ಯಕ್ತವಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕೈಬಿಡಬೇಕೆಂದು ಒತ್ತಡ ಹೇರುತ್ತಿದ್ದಾರೆ.

ಕೆಲ ನಿಷ್ಠಾವಂತ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಈ ಶಾದಿ ಭಾಗ್ಯದಿಂದ ಪಕ್ಷಕ್ಕೆ ಕೆಡಕು ಜಾಸ್ತಿಯಾಗುತ್ತಿದೆಯೇ ಹೊರತು ಒಳಿತಾಗುತ್ತಿಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಈ ಯೋಜನೆಯಿಂದಾಗಿ ಬಹುಸಂಖ್ಯಾತ ಜನರ ವಿರೋಧವನ್ನು ಕಟ್ಟಿಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವಿಶ್ವಸನೀಯ ವರದಿಗಳಿಂದ ತಿಳಿದುಬಂದಿದೆ.

ಈ ನಡುವೆ, ಅಲ್ಪಸಂಖ್ಯಾತರನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ನಾಯಕರು, ಶಾದಿ ಭಾಗ್ಯ ಯೋಜನೆಯಂತೆ ನಿಗದಿಪಡಿಸಲಾಗಿರುವ ಹಣ ಯಾವುದಕ್ಕೂ ಸಾಲುವುದಿಲ್ಲ, ಅದನ್ನು 25 ಕೋಟಿ ರು.ಗೆ ವಿಸ್ತರಿಸಬೇಕೆಂಬ ಆಗ್ರಹ ಕೂಡ ಕೇಳಿಬಂದಿದೆ. ಸದ್ಯಕ್ಕೆ ಮುಸ್ಲಿಂ ಸಮುದಾಯದಲ್ಲಿ 2000 ಫಲಾನುಭವಿಗಳಿಗೆ 5 ಕೋಟಿ ರು., ಕ್ರಿಶ್ಚಿಯನ್, ಪಾಸ್ತಿ, ಬೌದ್ಧ, ಸಿಖ್ ಸಮುದಾಯಕ್ಕೆ ತಲಾ 2 ಕೋಟಿ ರು., ಜೈನ ಸಮುದಾಯಕ್ಕೆ 1 ಕೋಟಿ ರು. ಮೀಸಲಿಡಲಾಗಿದೆ.

ಒಂದು ಕಡೆ ಇನ್ನಷ್ಟು ಬೇಕು ಮತ್ತಷ್ಟು ಬೇಕು ಎಂದು ದುಂಬಾಲು ಬಿದ್ದಿರುವ ಅಲ್ಪಸಂಖ್ಯಾತರು, ಮತ್ತೊಂದು ಕಡೆ ಈ ಶಾದಿ ಭಾಗ್ಯದ ಸಹವಾಸವೇ ಬೇಡ ಎಂದು ಕಿವಿ ಹಿಂಡುತ್ತಿರುವ ಕಾಂಗ್ರೆಸ್ ಹಿರಿಯ ನಾಯಕರು. ಮತ್ತೊಂದೆಡೆ ಇದನ್ನು ಎಲ್ಲ ವರ್ಗದವರಿಗೆ ವಿಸ್ತರಿಸಬೇಕು ಎಂದು ಗಂಟುಬಿದ್ದಿರುವ ವಿರೋಧಪಕ್ಷದವರು. ಇವರೆಲ್ಲರ ನಡುವೆ 'ದಿವ್ಯ ಮೌನ' ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಕತ್ತರಿಯಲ್ಲಿ ಸಿಲುಕಿಕೊಂಡ ಅಡಿಕೆಯಂತಾಗಿದ್ದಾರೆ.

English summary
Congress govt's most ambitious project Shaadi Bhagya has put Siddaramaiah govt in trouble as Yeddyurappa and other opposition leaders are demanding this project be extended to all caste. Even few Congress leaders are pressurizing Siddaramaiah to shelve the project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X