ಪಿಂಚಣಿದಾರರ ಮನೆ ಬಾಗಿಲಿಗೆ ಬರಲಿದೆ ಡಿಜಿಟಲ್ ಇ-ಜೀವಂತ ಪ್ರಮಾಣ ಪತ್ರ
ಬೆಂಗಳೂರು, ಡಿಸೆಂಬರ್ 25; ಪಿಂಚಣಿ ಪಡೆಯುವವರು ಪ್ರತಿ ವರ್ಷ ಪ್ರಮಾಣಿಕರಿಸಿ ನೀಡಲಾಗುವ 'ಜೀವಂತ ಪ್ರಮಾಣ ಪತ್ರ' ನೀಡುವ ಸೇವೆಯನ್ನು ರಾಜ್ಯ ಸರ್ಕಾರ ಸರಳಗೊಳಿಸಿದೆ. ಮನೆ ಬಾಗಿಲಿನಲ್ಲಿಯೇ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ.
ಖಜಾನೆ ಇಲಾಖೆ ಅಪರ ನಿರ್ದೇಶಕಿ ಡಾ. ಭಾಗ್ಯಲಕ್ಷ್ಮೀ ಈ ಕುರಿತು ಮಾಹಿತಿ ನೀಡಿದ್ದಾರೆ. ಎಲ್ಲರಿಗೂ ಸುಗಮವಾದ ವ್ಯವಹಾರವನ್ನು ನಡೆಸಲು ಅನುಕೂಲವಾಗಲು ಈ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳಿದ್ದಾರೆ.
ಪಿಂಚಣಿದಾರರ ಮನೆ ಬಾಗಿಲಿಗೆ ಇ-ಜೀವಂತ ಪ್ರಮಾಣ ಪತ್ರವನ್ನು ತಲುಪಿಸಲು ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆಯ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಜೀವಂತ ಪ್ರಮಾಣ ಪತ್ರವನ್ನು 'ಇ-ವಿದ್ಯುನ್ಮಾನ' ಆಡಳಿತ ಅಡಿಯಲ್ಲಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ 'ಪಿಂಚಣಿದಾರರಿಗೆ ಮನೆ ಬಾಗಿಲಿಗೆ ಸೇವೆ" ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿದ್ದು, ಪ್ರತಿ ವರ್ಷ ನವಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಹೇಗೆ ಪಡೆಯಬೇಕು ಪ್ರಮಾಣ ಪತ್ರ; ಇನ್ನು ಮುಂದೆ ಜೀವಂತ ಪ್ರಮಾಣ ಪತ್ರಗಳನ್ನು ಡಿಜಿಟಲ್ ಆಗಿ (ಡಿಜಿಟಲ್ ಜೀವಂತ ಪ್ರಮಾಣ ಪತ್ರ) ಸಲ್ಲಿಸುವ ವ್ಯವಸ್ಥೆಯನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಒದಗಿಸುತ್ತದೆ.
ರಾಜ್ಯ ಸರ್ಕಾರದ ಪಿಂಚಣಿದಾರರಿಗೆ ಈ ಸೇವೆ ವಿಸ್ತರಿಸಲು ಖಜಾನೆ ಇಲಾಖೆ ಮತ್ತು ಭಾರತೀಯ ಅಂಚೆ ಇಲಾಖೆ ಸಹಯೋಗಯೊಂದಿಗೆ ಈ ಸೌಲಭ್ಯವನ್ನು ಒದಗಿಸಲು ಉದ್ದೇಶಿಸಲಾಗಿದೆ.

ಇ-ಜೀವಂತ ಪ್ರಮಾಣ ಪತ್ರ ಪಡೆಯಲು ಪಿಂಚಣಿದಾರರು ತಮ್ಮ ಹೆಸರು, ಪಿಪಿಓ ಸಂಖ್ಯೆ, ಬ್ಯಾಂಕ್ ಖಾತೆ ವಿವರ, ವಿಳಾಸ, ಪಿನ್ ಕೋಡ್ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯ ವಿವರಗಳನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿಗೆ ಒದಗಿಸಬೇಕು.
ಜೀವನ್ ಪ್ರಮಾಣ್ ಪೋರ್ಟಲ್ ಮೂಲಕ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತಂತ್ರಾಂಶದಲ್ಲಿ ಮೇಲ್ಕಂಡ ವಿವರಗಳನ್ನು ಒದಗಿಸಿದ ನಂತರ ಕಾಗದ ರಹಿತ ಟಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ತಯಾರು ಮಾಡಲಾಗುತ್ತದೆ.
ಇ-ಜೀವನ್ ಪ್ರಮಾಣ ಐಡಿಯನ್ನು ಪಿಂಚಣಿದಾರರಿಗೆ ಎಸ್. ಎಮ್. ಎಸ್. ಮೂಲಕ ಕಳುಹಿಸಲಾಗುವುದು, ಈ ಅಧಿಕೃತ ಸಂಖ್ಯೆಯ ನೆರವಿನಿಂದ ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪಿಂಚಣಿದಾರರ ಮನೆ ಬಾಗಿಲಿಗೆ ಬಂದು, ಬಯೋಮೆಟ್ರಿಕ್ ಉಪಕರಣದ ಮೂಲಕ ವಿವರಗಳನ್ನು ಪಡೆದುಕೊಂಡು, ಇ-ಜೀವಂತ ಪ್ರಮಾಣ ಪತ್ರವನ್ನು ಗ್ರಾಮೀಣ ಅಂಚೆ ಸೇವಕರು ನೀಡುವರು.
ಪಿಂಚಣಿದಾರರು ತಮ್ಮ ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಯಾವುದೇ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ. ಪಿಂಚಣಿಯನ್ನು ಪಾವತಿಸುವ ಬ್ಯಾಂಕು ಶಾಖೆಗಳಿಗೆ ವಿದ್ಯುನ್ಮಾನ ತಂತ್ರಾಂಶದ ಮೂಲಕ ನೇರವಾಗಿ ತಮ್ಮ ಜೀವಂತ ಪ್ರಮಾಣ ಪತ್ರಗಳನ್ನು ರವಾನಿಸಬಹುದು.
ಎಷ್ಟು ಶುಲ್ಕ ಪಾವತಿ ಮಾಡಬೇಕು?; ಪಿಂಚಣಿದಾರರು ಈ ಸೇವೆಯನ್ನು ಪಡೆಯಲು 70 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಈ ಪ್ರಕ್ರಿಯೆ ಪ್ರತಿವರ್ಷದ ನವೆಂಬರ್, ಡಿಸಂಬರ್ ತಿಂಗಳುಗಳಲ್ಲಿ ದಾಖಲೀಕರಣಗೊಳ್ಳುತ್ತದೆ. ಪಿಂಚಣಿದಾರರಿಗೆ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಲು ಹತ್ತಿರದ ಅಂಚೆ ಕಛೇರಿ ಅಥವಾ ಪೋಸ್ಟ್ ಮ್ಯಾನ್ ಸಂಪರ್ಕಿಸಬಹುದು.
ಪಿಂಚಣಿಯನ್ನು ಪಾವತಿಸುವ 4 ಪ್ರಮುಖ ಬ್ಯಾಂಕ್‌ಗಳಾದ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ಗಳಲ್ಲಿ ಲಭ್ಯವಿರುವ ತಂತ್ರಾಂಶಗಳ ಮೂಲಕ ನೇರವಾಗಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸುವ ಸೌಲಭ್ಯ ಮುಂದುವರೆಯಲಿವೆ.
ಕಂಪ್ಯೂಟರ್ ತಂತ್ರಾಂಶ ಮತ್ತು ಮೊಬೈಲ್ ಬಳಕೆ ಮಾಡಲು ಸಾಧ್ಯವಿಲ್ಲದ ಸಾಮಾನ್ಯ ಪಿಂಚಣಿದಾರರಿಗೂ ಕೂಡ ಅಂಚೆ ಕಚೇರಿಯ ಮೂಲಕ ಜೀವಂತ ಪ್ರಮಾಣ ಪತ್ರವನ್ನು ಒದಗಿಸಲು ಸರ್ಕಾರ ಮನೆ ಬಾಗಿಲಿಗೆ ಈ ಸೇವೆಯ ಅವಕಾಶ ಕಲ್ಪಿಸಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ರಾಜ್ಯ ಪಿಂಚಣಿ ಪಾವತಿ ಮತ್ತು ನಿರ್ವಹಣಾ ಖಜಾನೆಗೆ ಕರೆ ಮಾಡಬಹುದು. 080-22215073/ 22132031 ಅಥವ ಅಂಚೆ ಕಚೇರಿಯ ದೂರವಾಣಿ ಸಂಖ್ಯೆ 080-25597799 ಸಂಪರ್ಕಿಸಬಹುದು.












Click it and Unblock the Notifications