• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂದಾಯ ಸಚಿವ ಆರ್. ಅಶೋಕ್ ಎದುರು ಕಣ್ಣೀರು ಹಾಕಿದ ಶಾಸಕ ಕುಮಾರಸ್ವಾಮಿ!

|
Google Oneindia Kannada News

ಬೆಂಗಳೂರು, ಆ. 12: ಸಂಪುಟ ವಿಸ್ತರಣೆ ಬಳಿಕ ಮತ್ತೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ತಮ್ಮದೇ ಸರ್ಕಾರದ ವಿರುದ್ಧ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧದ ಮಹಾತ್ಮಾಗಾಂಧಿ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ಮಾಡಿದ್ದಾರೆ. ಬುಧವಾರವಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸಚಿವರಾದ ಆನಂದ್ ಸಿಂಗ್ ಹಾಗೂ ಎಂ.ಟಿ.ಬಿ. ನಾಗರಾಜ್ ಅವರು ಒತ್ತಡ ಹಾಕಿದ್ದರು. ಅದು ಸಂಧಾನದ ಮೂಲಕ ಪರಿಹಾರವಾಗಿದೆ ಎನ್ನುತ್ತಿರುವಾಗಲೇ, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧವೇ ಶಾಸಕರು ಧರಣಿ ಮಾಡಿರುವುದು ಅಚ್ಚರಿ ಮೂಡಿಸಿದೆ. ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಎಚ್ಚರಿಕೆಯೂ ರವಾನೆಯಾಗಿದೆ.

ಮೂಡಿಗೆರೆ ಬಿಜೆಪಿ ಹಿರಿಯ ಶಾಸಕ ಎಂ.ಪಿ. ಕುಮಾರಸ್ವಾಮಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕೊನೆ ಕ್ಷಣದಲ್ಲಿ ಅವರಿಗೆ ಮಂತ್ರಿ ಪದವಿ ಕೈತಪ್ಪಿತ್ತು. ಆ ಅಸಮಾಧಾನ ಕೂಡ ಕುಮಾರಸ್ವಾಮಿ ಅವರಿಗಿತ್ತು. ಇದೇ ಸಂದರ್ಭದಲ್ಲಿ ತಮ್ಮ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಧರಣಿ ಮಾಡಿರುವುದಕ್ಕೆ ಪ್ರಬಲ ಕಾರಣವೂ ಇದೆ. ಕಂದಾಯ ಸಚಿವ ಆರ್. ಅಶೋಕ್ ಕಾರ್ಯವೈಖರಿ ಹೀಗೆ ಮುಂದುವರೆದಲ್ಲಿ ಮತ್ತಷ್ಟು ಶಾಸಕರು ಹೀಗೆ ಮಾಡುತ್ತಾರೆ ಎಂಬ ಆರೋಪವೂ ಎದುರಾಗಿದೆ. ಸಂಧಾನಕ್ಕೆ ತಮ್ಮ ಆಪ್ತ ಕಾರ್ಯದರ್ಶಿಯನ್ನು ಅಶೋಕ್ ಕಳುಹಿದ್ದರು, ಬಳಿಕ ಸ್ವತಃ ಅವರೇ ಬಂದು ಕುಮಾರಸ್ವಾಮಿ ಶಾಸಕರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಎಂ.ಪಿ. ಕುಮಾರಸ್ವಾಮಿ ಕಣ್ಣೀರು ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ, ಅಷ್ಟಕ್ಕೂ ಶಾಸಕ ಕುಮಾರಸ್ವಾಮಿ ಕಣ್ಣೀರು ಹಾಕಿದ್ಯಾಕೆ? ಮುಂದಿದೆ.

ತಮ್ಮ ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಪ್ರತಿಭಟನೆ

ತಮ್ಮ ಸರ್ಕಾರದ ವಿರುದ್ಧವೇ ಬಿಜೆಪಿ ಶಾಸಕ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಶಾಸಕ ಎಂ.ಪಿ. ಕುಮಾರಸ್ವಾಮಿ ವಿಧಾನಸೌಧದಲ್ಲಿ ಧರಣಿ ಮಾಡುತ್ತಿದ್ದಾರೆ. ಸರ್ಕಾರದ ಕಾರ್ಯವೈಖರಿ ವಿರುದ್ಧ ಹೋರಾಟಕ್ಕೆ ಬಿಜೆಪಿ ಶಾಸಕರೇ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ. ಶಾಸಕ ಕುಮಾರಸ್ವಾಮಿ ಧರಣಿ ಮಾಡಲು ಪ್ರಬಲ ಕಾರಣವೂ ಇದೆ. ಅತಿವೃಷ್ಟಿ ತಾಲೂಕು ಘೋಷಣೆಯಲ್ಲಿ ಅನ್ಯಾಯವಾಗಿದೆ ಎಂದು ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಅದು ರಾಜಕೀಯ ಕಾರಣಕ್ಕೆ ಅತಿವೃಷ್ಟಿ ತಾಲೂಕು ಘೋಷಣೆ ಮಾಡಿಲ್ಲ ಎಂಬ ಗಂಭೀರ ಆರೋಪ ಮಾಡಿರುವುದು ಗಮನಿಸಬೇಕಾದ ಅಂಶವಾಗಿದೆ. ಕಂದಾಯ ಸಚಿವ ಆರ್. ಅಶೋಕ್ ಧೋರಣೆ ಖಂಡಿಸಿ ಕುಮಾಸ್ವಾಮಿ ಧರಣಿ ಮಾಡುತ್ತಿದ್ದಾರೆ. ಮೂಡಿಗೆರೆ ತಾಲೂಕನ್ನು ಅತಿವೃಷ್ಟಿ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರತಿಭಟನೆ ಕುರಿತು ಕುಮಾರಸ್ವಾಮಿ ಹೇಳಿದ್ದು ಹೀಗೆ.

ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಶಾಸಕ

ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ ಶಾಸಕ

"ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಯಾಕೋ ಬೆಲೆ ಸಿಗ್ತಿಲ್ಲ. ಮೀಸಲು ಕ್ಷೇತ್ರ ಅನ್ನೋ ಕಾರಣಕ್ಕೋ ಯಾಕೋ ಕಡೆಗಣಿಸುತ್ತಿದ್ದಾರೆ" ಎಂಬ ಗಂಭೀರ ಆರೋಪವನ್ನು ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮದೇ ಬಿಜೆಪಿ ಸರ್ಕಾರ ವಿರುದ್ಧ ಮಾಡಿದ್ದಾರೆ. ಜೊತೆಗೆ, "ನಮ್ಮ ಸರ್ಕಾರವೇ ನಮಗೇ ಈ ರೀತಿ ತಾರತಮ್ಯ ಮಾಡಬಾರದು. ಆದಷ್ಡು ಬೇಗ ಮೂಡಿಗೆರೆ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾಗಲಿ ಎಂದು ಅನಿಸುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಹೀಗೆ ಮಾಡಿದ್ದಾರೆ ಅನಿಸುತ್ತಿಲ್ಲ. ಎಲ್ಲ ಉಸ್ತುವಾರಿ ಮಂತ್ರಿಗಳು ಬರ್ತಾರೆ ಏನೂ ಮಾಡುವುದಿಲ್ಲ. ಇವರಿಗೆ ಬರಿ ಮಾತಲ್ಲಿ ಹೇಳಿದರೆ ಅರ್ಥ ಆಗಲ್ಲ. ಅದಕ್ಕಾಗಿ ನಾನು ಇಲ್ಲಿಯೇ ಧರಣಿ ಕೂಡುತ್ತೇನೆ" ಎಂದೆ ಹೇಲಿ ಧರಣಿ ಮುಂದುವರೆಸಿದ್ದಾರೆ.

ನಿರ್ಲಕ್ಷ ಮಾಡಿದ್ದರ ಹಿಂದೆ ರಾಜಕೀಯ?

ನಿರ್ಲಕ್ಷ ಮಾಡಿದ್ದರ ಹಿಂದೆ ರಾಜಕೀಯ?

ನನ್ನ ಕ್ಷೇತ್ರವನ್ನು ಬಹಳ ನಿರ್ಲಕ್ಷಿಸಿದ್ದಾರೆ. ಏಕಾಏಕಿ ನಿನ್ನೆ ಕಂದಾಯ ಇಲಾಖೆ ಪಟ್ಟಿ ಮಾಡಿದೆ, ಆದರೆ ಮೂಡಿಗೆರೆ ಕ್ಷೇತ್ರವನ್ನು ಕೈ ಬಿಡಲಾಗಿದೆ. ಹೀಗಾಗಿ ಸಂಜೆ ವರೆಗೂ ನಾನು ಇಲ್ಲಿಯೇ ಧರಣಿ ಕೂಡುತ್ತೇನೆ. ಎನ್ ಡಿ ಆರ್ ಎಫ್ ಪಟ್ಟಿಯಲ್ಲಿ ಮೂಡಿಗೆರೆಯನ್ನು ಸೇರಿಸಬೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಹಾರ ಕೊಡಲೇಬೇಕು. 2019ರಲ್ಲಿಯೂ ಅತಿಯಾದ ಅತಿವೃಷ್ಟಿಯಾಗಿತ್ತು. 6 ಜನರು ಮನೆ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಬಹಳಷ್ಟು ಮನೆಗಳು ಕಾಫಿ ತೋಟ ಕೊಚ್ಚಿಕೊಂಡು ಹೋಗಿತ್ತು. ಆಗಲೂ ಪರಿಹಾರ ಕೊಡದೇ ನಿರ್ಲಕ್ಷ ಮಾಡಿದ್ದರು. ಆದರೆ ಮೂಡಿಗೆರೆಯಲ್ಲಿ 900 ಸೆಂಟಿ ಮೀಟರ್ ಮಳೆಯಾಗಿದೆ. ನಾನು 2018ರಲ್ಲಿ ಶಾಸಕನಾದಾಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಅವರು ಸಿಎಂ ಆಗಿದ್ದಾಗ ಕುಮಾರಸ್ವಾಮಿ ನಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ಈಗ ನಮ್ಮದೇ ಸರ್ಕಾರ ಇದ್ದರೂ ನಿರ್ಲಕ್ಷ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಅಶೋಕ್ ಪಿಎಸ್ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

ಅಶೋಕ್ ಪಿಎಸ್ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

ಇದೇ ಸಂದರ್ಭದಲ್ಲಿ ಸಂಧಾನಕ್ಕೆ ತಮ್ಮ ಆಪ್ತ ಕಾರ್ಯದರ್ಶಿ ಪ್ರಶಾಂತ್ ಅವರನ್ನು ಸಚಿವ ಆರ್. ಅಶೋಕ್ ಕಳುಹಿಸಿದ್ದರು. ಶಾಸಕ ಎಂ.ಪಿ ಕುಮಾರಸ್ವಾಮಿ ಧರಣಿ ಮಾಡುತ್ತಿದ್ದ ಸ್ಥಳಕ್ಕೆ ಬಂದಿದ್ದ ಆರ್. ಅಶೋಕ್ ಆಪ್ತ ಕಾರ್ಯದರ್ಶಿಯನ್ನು ಕುಮಾರಸ್ವಾಮಿ ತರಾಟೆ ತೆಗೆದುಕೊಂಡರು. ಸಚಿವ ಆರ್. ಅಶೋಕ್‌ಗೆ ದೂರವಾಣಿ ಕರೆ ಮಾಡಿ ಕೊಡಲು ಪಿಎಸ್‌ ಪ್ರಶಾಂತಬ ಪ್ರಯತ್ನಿಸಿದರು. ಅದರಿಂದ ಮತ್ತಷ್ಟು ಗರಂ ಆದ ಕುಮಾರಸ್ವಾಮಿ, "ನಾನು ಯಾರ ಫೋನೂ ತೆಗೆದುಕೊಳ್ಳಲ್ಲ. ಹೋಗ್ರಿ ಇಲ್ಲಿಂದ. ಇಲಾಖೆಯಲ್ಲಿ ನೀವೇನ್ ಮಾಡಿದ್ದೀರಾ ಹೇಳಿ. ನಾವು ಮನವಿ ತಡಗೆದುಕೊಂಡು ಬಂದಾಗ ಏನ್ ಹೇಳಿದ್ದೀರಿ? ಈಗ ಏನು ಮಾಡಿದ್ದೀರಿ? ಹೋಗ್ರಿ ಇಲ್ಲಿಂದ ಅಂತಾ ತರಾಟೆ ತೆಗೆದುಕೊಂಡಿದ್ದಾರೆ.

Recommended Video

  ಪಾಕಿಸ್ತಾನ್ ಪ್ರಧಾನಿ ಹೊಸ ಆಟ ಶುರು | Oneindia kannada
  ಆರ್. ಅಶೋಕ್ ಎದುರು ಕಣ್ಣೀರು ಹಾಕಿದ ಕುಮಾರಸ್ವಾಮಿ

  ಆರ್. ಅಶೋಕ್ ಎದುರು ಕಣ್ಣೀರು ಹಾಕಿದ ಕುಮಾರಸ್ವಾಮಿ

  ಬಳಿಕ ಕಂದಾಯ ಸಚಿವ ಆರ್. ಅಶೋಕ್ ಅವರೇ ಧರಣಿ ಸ್ಥಳಕ್ಕೆ ಬಂದರು. ಆಗ ಅಶೋಕ್ ಎದುರು ಎಂ.ಪಿ. ಕುಮಾರಸ್ವಾಮಿ ಕಣ್ಣೀರು ಹಾಕಿದರು. "ನಾನು ಹಿರಿಯ ಶಾಸಕ, ನನಗೇ ಹೀಗೆ ಮಾಡೋದು ಸರಿಯಾ? ಎಷ್ಟು ಬೇಜಾರಾಗಲ್ಲ ನಮಗೆ ಹೇಳಿ. ಮಂತ್ರಿ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿಲ್ವಾ? ನಾನು ಪಕ್ಷಕ್ಕೆ ನಿಷ್ಠನಾಗಿಲ್ಲವಾ? ಯಾವತ್ತಾದರೂ ಬ್ಲ್ಯಾಕ್‌ಮೇಲ್ ಮಾಡಿದ್ದೀನಾ? ನಿವೆಲ್ಲ ಹೇಳಿದ್ದು ಕೇಳಿಕೊಂಡಿಲ್ವಾ? ನನ್ನ ಮಾತಿಗೆ ತೂಕ ಇಲ್ಲ ಅಂದ್ರೆ ಹೇಗೆ?" ಎಂದು ಸಚಿವ ಆರ್. ಅಶೋಕ್ ಮುಂದೆ ಎಂ.ಪಿ. ಕುಮಾರಸ್ವಾಮಿ ತಮ್ಮ ಅಳಲು ತೋಡಿಕೊಂಡರು. ಈ ವೇಳೆ ಕಣ್ಣೀರು ಸುರಿಸಿದ ಎಂ.ಪಿ. ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸಲು ತಮ್ಮ ಕಚೇರಿಗೆ ಆರ್. ಅಶೋಕ್ ಕರೆದೊಯ್ದರು.

  ಇದೇ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, "ನಾನು ಅವರು 20 ವರ್ಷದಿಂದ ಸ್ನೇಹಿತರು. ಅನುದಾನ ಸಮಸ್ಯೆ ಆಗಿದೆ, ಬೆಳೆ ಪರಿಹಾರದ ಮನವಿ ಇದೆ. ಮುಖ್ಯಮಂತ್ರಿಗಳ ಬಳಿ ಮಾತನಾಡಿ ಬೆಳೆ ಪರಿಹಾರ ಕೊಡಬೇಕಾಗಿದ್ದನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ತೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ" ಎಂದರು. ಕೊನೆಗೆ ಕಂದಾಯ ಸಚಿವ ಆರ್. ಅಶೋಕ್ ಮನವೊಲಿಕೆಯಿಂದ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಪ್ರತಿಭಟನೆ ವಾಪಸ್ ಪಡೆದರು. ಸಚಿವ ಆರ್ ಅಶೋಕ್ ಹೆಗಲ ಮೇಲೆ ಕೈ ಹಾಕಿ ಶಾಸಕ ಕುಮಾರಸ್ವಾಮಿ ಅವರನ್ನು ತಮ್ಮ ಕೊಠಡಿಗೆ ಕರೆದೊಯ್ದರು.

  English summary
  Mudigere BJP MLA MP Kumaraswamy protest against Bommai government in front of Vidhana Soudha
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X