Summer Health Tips: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಸಲಹೆಗಳು ಇಲ್ಲಿವೆ, ಪಾಲಿಸಿ
ಬೆಂಗಳೂರು: ರಾಜ್ಯದಲ್ಲಿ ಉರಿ ಬಿಸಿಲ ಬೇಗೆ ಹೆಚ್ಚಾಗಿದೆ. ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಮಾರ್ಚ್ ಆರಂಭದಲ್ಲೇ ಸುಡು ಬಿಸಿಲು ದಾಖಲಾಗುತ್ತಿದ್ದು, ಗರಿಷ್ಠ ತಾಪಮಾನ ಏರುಗತಿಯಲ್ಲಿದೆ. ಹೀಗಿರುವಾಗ ನಾವು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಯುತವಾಗಿರಬೇಕು. ಅದಕ್ಕಾಗಿ ಬದಲಾಗುವ ಹವಾಮಾನ ಕಾಲಕ್ಕೆ ಹೊಂದಿಕೊಳ್ಳುವುದು ಮುಖ್ಯವಾಗಿರುತ್ತದೆ. ಬಿಸಿಲಿನಿಂತ ನಿಮ್ಮ ಚರ್ಮದ ಆರೋಗ್ಯ, ದೇಹದಾರೋಗ್ಯ ರಕ್ಷಿಸುವುದಕ್ಕೆ ಒಂದಷ್ಟು ಸಲಹೆಗಳು ಇಲ್ಲಿವೆ.
ಸಾಮಾನ್ಯವಾಗಿ ಪ್ರತಿ ವರ್ಷ ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆ ವೇಳೆ ವಾತಾವರಣ ಬದಲಾಗುತ್ತಿದ್ದಂತೆ ದೇಹ ಅದಕ್ಕೆ ಹೊಂದಿಕೊಳ್ಳಲು ಕೆಲವರಿಗೆ ಕಷ್ಟವಾಗುತ್ತಿದೆ. ದೇಹದಲ್ಲಿ ಬದಲಾವಣೆ ಆಗಿ ಕೊಂಚ ಅನಾರೋಗ್ಯ ಎದುರಾಗುತ್ತದೆ. ಇನ್ನೂ ಬಿಸಿಲಿನಲ್ಲೇ ಕೆಲಸ ಮಾಡುವ ಕಾರ್ಮಿಕರು, ವ್ಯಾಪಾರಗಳ ಪಾಡು ಹೇಳತೀರದ್ದಾಗಿರುತ್ತದೆ. ಇನ್ನೂ ಕಚೇರಿ ನೌಕರರು ಎಸಿ ಯಲ್ಲಿ ಕೂತು ಹೊರ ಬಂದಾಗ ದಿಢೀರ್ ಎದುರಾಗುವ ಬಿಸಿಲಿಗೆ ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗುತ್ತವೆ. ಇದು ಅನಾರೋಗ್ಯಕ್ಕೂ ಕಾರಣವಾಗಬಹುದು. ಆದ್ದರಿಂದ ನೀವು ಇಲ್ಲಿ ನೀಡಲಾಗಿರುವ ಆರೋಗ್ಯ ಸಲಹೆ ಪಾಲಿಸಿದರೆ ಬೇಸಿಗೆಯಲ್ಲೂ ಉಲ್ಲಾಸದಾಯಕ ಜೀವನ ಆನಂದಿಸಬಹುದು.

* ದೇಹದಲ್ಲಿ ನೀರಿನ ಅಂಶ ಕಾಪಾಡಿಕೊಳ್ಳಿ
ಬೇಸಿಗೆಯಲ್ಲಿ ಮಹಿಳೆಯರು, ಮಕ್ಕಳು, ವೃದ್ಧರಿಗೆ ಹೆಚ್ಚು ತೊಂದರೆ ಆಗುತ್ತದೆ. ಸಾಮಾನ್ಯವಾಗಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಆದ್ದರಿಂದ ನಿತ್ಯ ನೀವು 3-4 ಲೀಟರ್ ಕುಡಿಯುತ್ತೀರಿ ಅಂದಾದರೆ ಅದರ ಪ್ರಯಾಣ 4-5 ಲೀಟರ್‌ಗೆ ಹೆಚ್ಚಿಸಿಕೊಳ್ಳಿ. ಬಾಯಾರಿಕೆ ಆಗದಿದ್ದರೂ ಸಹಿತ ಸ್ವಲ್ಪ ಸ್ವಲ್ಪವೇ ನೀರು ಸೇವಿಸುತ್ತಲೇ ಇರಿ. ಬಿಸಿಲಿನಲ್ಲಿ ಆಯಾಸದ ಕೆಲಸ ಮಾಡಲೇಬೇಕಾದಲ್ಲಿ ಅಗತ್ಯ ಎಚ್ಚರಿಕೆ ವಹಿಸಿ. ಹೊರಾಂಗಣ ಸುತ್ತಾಟ, ಟ್ರಾವೆಲ್ ಆದಷ್ಟು ತಪ್ಪಿಸಿ.
* ಏನು ಮಾಡಬೇಕು
ಬೆಳಗ್ಗೆ 11 ಗಂಟೆ ನಂತರ ಮಧ್ಯಾಹ್ನ 3-4ಗಂಟೆವರೆಗೆ ಗರಿಷ್ಠ ತಾಪಮಾನ (40 ಡಿ.ಸೆ.) ಕಂಡು ಬರುವ ಕಾರಣ ಆ ಸಮಯದಲ್ಲಿ ಮನೆಯಿಂದ ಹೊರ ಹೋಗುವುದನ್ನು, ಹೊರಾಂಗಣ ಕೆಲಸಗಳಿಗೆ ಬ್ರೇಕ್ ಹಾಕುವುದು ಉತ್ತಮ. ಚಳಿಗಾಲದ ದಪ್ಪನೆಯ ಉಡುಗೆಗಳಿಗೆ ಗುಡ್ ಬೈ ಹೇಳಿಬಿಡಿ. ತೆಳುವಾದ ಹತ್ತಿ ಬಟ್ಟೆಯನ್ನು ಧರಿಸಿಕೊಳ್ಳಬೇಕು. ಬಿಸಿಲಿಗೆ ಹೋಗಬೇಕಾದಲ್ಲಿ ಕೊಡೆ, ಟೋಪಿ, ನೀರಿನ ಬಾಟಲಿ ಒಯ್ಯುವುದನ್ನು ಮರೆಯಬಾರದು. ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಈ ಸಮಯದಲ್ಲಿ ಆದಷ್ಟು ಮನೆಯಲ್ಲಿದ್ದರೆ ಒಳಿತು.
* ತರಕಾರಿ/ಹಣ್ಣುಗಳನ್ನು ಹೆಚ್ಚು ಸೇವಿಸಿ
ಬೇಸಿಗೆ ಋತುವಿನಲ್ಲಿ ಸಿಗುವ ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ ಇನ್ನಿತರ ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಎಳ ನೀರನ್ನು ಬೇಸಿಗೆ ಮುಗಿಯುವವರೆಗೂ ನಿಯಮಿತವಾಗಿ ಸೇವಿಸಿದರಂತೂ ಹೆಚ್ಚಿನ ಲಾಭವಿದೆ. ಹಣ್ಣುಗಳನ್ನು ತಿನ್ನದೇ ಇರುವವರು ಹಣ್ಣಿನ ರಸ/ಜ್ಯೂಸ್ ಸಹ ಕುಡಿಯಬಹುದು. ಮಜ್ಜಿಗೆ, ನಿಂಬೆ ಜ್ಯೂಸ್ ಸಹ ದೇಶವನ್ನು ತಂಪಾಗಿರುತ್ತವೆ. ಇದರೊಂದಿಗೆ ನೀರಿನ ಅಂಶವಿರುವ ಸೌತೆಕಾಯಿ ಹಾಗೂ ಇನ್ನಿತರ ಹಸಿರು ತರಕಾರಿಗಳನ್ನು ಸೇವಿಸಬಹುದು.
* ಏನು ಮಾಡಬಾರದು?
ಜೀನ್ಸ್ ಸೇರಿದಂತೆ ದಪ್ಪ ಬಟ್ಟೆ ಧರಿಸುವುದನ್ನು ನಿಲ್ಲಿಸಿ. ಅದರಿಂದ ಬೇಸಿಗೆ ವೇಳೆ ಕಿರಿ ಕಿರಿ ಆಗಬಹುದು. ಬಿಸಿಲಿನಲ್ಲಿ ಹೆಚ್ಚಾಗಿ ತಿರುಗಾಡುವುದನ್ನು ತಪ್ಪಿಸಬೇಕು. ಆದಷ್ಟು ಬೇಕರಿ, ಅಂಗಡಿಗಳಲ್ಲಿ ಸಿಗುವ ಸಿದ್ಧ ತಂಪು ಪಾನೀಯಗಳ ಸೇವನೆ ತಪ್ಪಿಸಬೇಕು. ಚಿಕನ್, ಮಟನ್‌ನಂತಹ ಪದಾರ್ಥಗಳ ಹೆಚ್ಚಿನ ಸೇವನೆ ಮಾಡಬಾರದು. ಸಿಗರೇಟ್, ಮದ್ಯ ಸೇವನೆ ಎದೆಯಲ್ಲಿ ಉರಿಯ ಅನುಭವ ನೀಡುವ ಸಾಧ್ಯತೆ ಇರುತ್ತದೆ. ಅದನ್ನು ಕಡಿಮೆ ಮಾಡುವುದು, ಬಿಟ್ಟು ಬಿಡುವುದು ಉತ್ತಮ. ಇನ್ನೂ ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ನಿರ್ಲಕ್ಷಿಸದೇ ಪಾಲಿಸಬೇಕು.
* ಮುಖ, ಚರ್ಮದ ಕಾಂತಿ ಕಾಪಾಡಿಕೊಳ್ಳಿ
ಬಿಸಿಲು, ಧೂಳಿನಲ್ಲಿ ಓಡಾಡುವಾಗ, ಬೈಕ್ ಸವಾರಿ ವೇಳೆ ಮುಖಕ್ಕೆ ತೆಳುವಾದ ಬಟ್ಟೆಯಿಂದ ಮಾಸ್ಕ್ ರೀತಿ ಕಟ್ಟಿಕೊಳ್ಳಬಹುದು. ಇದು ಧೂಳ, ಅಧಿಕ ಬಿಸಿಲಿನಿಂದಾಗುವ ತೊಂದರೆ ಕಡಿಮೆ ಮಾಡುತ್ತದೆ. ಮುಖದ ಚರ್ಮ ಕಾಪಾಡುತ್ತದೆ. ಕೈ, ಕತ್ತು, ಮುಖಕ್ಕೆ ಸನ್ ಸ್ಕ್ರೀನ್, ಸ್ಕಿನ್ ಕೇರ್, ಮೊಯ್ಚ್‌ರಾಯ್ಸಿಂಗ್ ಕ್ರೀಮ್ ಬಳಸಬಹುದು. ಆಗಾಗ ಮುಖ, ಕೈ ಕಾಲು ತೊಳೆದುಕೊಳ್ಳಬೇಕು.
ನೀವು ಅಥವಾ ಬೇರೆ ಯಾರಾದರೂ ಬಿಸಿಲಿನ ತಾಪಕ್ಕೆ ಆರೋಗ್ಯ ಸಮಸ್ಯೆಗೆ ತುತ್ತಾದರೆ ತ್ವರಿತವಾಗಿ ಹತ್ತಿರ ಆಸ್ಪತ್ರೆಗೆ ಭೇಟಿ ಕೊಟ್ಟು ಅಗತ್ಯ ಚಿಕಿತ್ಸೆ ಪಡೆಯಿರಿ. ಇಲ್ಲವೇ ತುರ್ತು ಸ್ಪಂದನೆಗೆ 112/108ಗೆ ಕರೆ ಮಾಡಬಹುದು. ಸಾಧ್ಯವಾದಲ್ಲಿ ನಿಮ್ಮ ಮನೆ ಸುತ್ತಮುತ್ತ, ನೀವಿರುವ ಸ್ಥಳದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಿ.












Click it and Unblock the Notifications