Bus Fare Hike: ನ.5ರಿಂದ ಬಸ್ ಪ್ರಯಾಣ ಇನ್ನಷ್ಟು ದುಬಾರಿ! ಗ್ಯಾರಂಟಿಗಳಿಗೆ ಜನ ಬೆಲೆ ತೆರಬೇಕು: ವಿಪಕ್ಷ ನಾಯಕ
ಬೆಂಗಳೂರು: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಜನರನ್ನು ಕಂಗಾಲಾಗಿಸಿದೆ. ಹಾಲಿನ ದರ ಏರಿಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ನವೆಂಬರ್ 5ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ 4 ನಿಗಮಗಳ ಪ್ರಯಾಣ ದರ ದುಬಾರಿಯಾಗಲಿದೆ. ಎಲ್ಲ ನಿಗಮಗಳ ಮೇಲೆ ಆರ್ಥಿಕ ಒತ್ತಡ ಇದೆ. 9000 ಕೋಟಿ ರೂಪಾಯಿ ಸಾಲವಿದೆ ಎಂದು ಸ್ವತಃ ಸಾರಿಗೆ ಸಚಿವ ಬೈರತಿ ಸಚಿವರೇ ಒಪ್ಪಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, 'ಕಾಂಗ್ರೆಸ್ ಸರ್ಕಾರದ ಎರಡು ತತ್ವಗಳು - ಜನರನ್ನು ಯಾಮಾರಿಸುವುದು, ಮನಬಂದಂತೆ ಬೆಲೆ ಏರಿಸುವುದು!. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಾರ್ವಜನಿಕರು ಬೆಲೆ ತೆರಬೇಕಾಗಿದೆ' ಎಂದು ಟೀಕಿಸಿದ್ದಾರೆ.
ಹಿಂದಿನಿಂದಲೂ ಸಾರಿಗೆ ನಿಗಮಗಳಿಗೆ 'ಶಕ್ತಿ ಯೋಜನೆ'ಯಿಂದ ಹೊರೆ ಆಗಿದೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇತ್ತು. ಸರ್ಕಾರ ನಿಧಾನವಾಗಿ ಒಪ್ಪಿಕೊಂಡಿದ್ದು, ಸಾರಿಗೆ ಸಚಿವರು ಆರ್ಥಿಕ ಒತ್ತಡವನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರದಿಂದ ಹಾಲಿನ ದರ ಏರಿಕೆ, ಮೊಸರಿನ ದರ ಏರಿಕೆ ಆಗಿದೆ. ಇದೀಗ ಈಗ ನವೆಂಬರ್ 5 ರಿಂದ ಬಸ್ ಪ್ರಯಾಣ ದರ ಏರಿಕೆಗೆ ಮುಂದಾಗಿದೆ. ಇದೇನಾ ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತ? ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಹೆಸರಿನಲ್ಲಿ ಒಂದು ಕೈಯಲ್ಲಿ ಉಚಿತ ಪ್ರಯಾಣದ ಭರವಸೆ ನೀಡಿ, ಮತ್ತೊಂದು ಕೈಯಲ್ಲಿ ಪುರುಷರು ಸೇರಿದಂತೆ ಇಡೀ ಕುಟುಂಬದ ಜೇಬಿಗೆ ಕತ್ತರಿ ಹಾಕಲು ಹೊರಟಿದ್ದೀರಿ! ಎಂದು ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ, ರಾಜ್ಯದ ಜನರು ನಿಮ್ಮ ಗ್ಯಾರಂಟಿಗಳ ಬೆಲೆ ತೆರಬೇಕಾದ ಸ್ಥಿತಿ ತಂದಿಟ್ಟಿದ್ದೀರಿ. ಹಾಲಿನ ದರ ಹೆಚ್ಚಳ, ಬಸ್ ಪ್ರಯಾಣ ದರ ಹೆಚ್ಚಳ, ವಿದ್ಯುತ್ ದರ ಹೆಚ್ಚಳ, ಕುಡಿಯುವ ನೀರಿನ ದರ ಹೆಚ್ಚಳ, ಆಸ್ತಿ ತೆರಿಗೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ತೆರಿಗೆಗಳ ಹೊರೆ ಹೆಚ್ಚಳ ಮಾಡದ್ದೀರಿ.
ಸಾರಿಗೆ ಸಂಸ್ಥೆಗಳಿಗೆ ₹9,000 ಕೋಟಿಗೂ ಅಧಿಕ ನಷ್ಟ!
ರಾಜ್ಯದಲ್ಲಿ ಹೀಗೆ ಯಾವುದನ್ನೂ ಬಿಡದೆ ಜನಸಾಮಾನ್ಯರ ಬದುಕನ್ನು ದುಬಾರಿಯಾಗಿಸುತ್ತಿರುವುದೇ ನಿಮ್ಮ ಸಾಧನೆಯೇ? ಈಗಾಗಲೇ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ₹9,000 ಕೋಟಿಗೂ ಅಧಿಕ ನಷ್ಟದಲ್ಲಿವೆ ಎಂದು ಹೇಳುತ್ತಿರುವ ಸರ್ಕಾರ, ಆ ನಷ್ಟಕ್ಕೆ ತನ್ನ ಆರ್ಥಿಕ ನಿರ್ವಹಣೆಯ ವೈಫಲ್ಯವನ್ನು ಮರೆಮಾಚಿ ಜನರ ಮೇಲೆಯೇ ಹೊರೆ ಹೊರಿಸುತ್ತಿದೆ. ಡೀಸೆಲ್ ಬೆಲೆ ಏರಿಕೆಯ ನೆಪ ಹೇಳುವ ಮೊದಲು, ನಿಮ್ಮ ಸರ್ಕಾರದ ಆಡಳಿತಾತ್ಮಕ ವೈಫಲ್ಯಗಳಿಗೆ ಉತ್ತರ ಕೊಡುವಂತೆ ಅವರು ಆಗ್ರಹಿಸಿದ್ದಾರೆ.
ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯ ಆರ್ಥಿಕ ದಿವಾಳಿ
'ಕೈಯಲ್ಲಿ ಇಲ್ಲದ ಕಾಸಿಗೆ ಜಾತ್ರೆ ಮಾಡಿದರಂತೆ' ಎಂಬಂತೆ, ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕತೆಯನ್ನು ದಿವಾಳಿಯ ಅಂಚಿಗೆ ತಳ್ಳಿದ ಕಾಂಗ್ರೆಸ್ ಸರ್ಕಾರ, ಈಗ ಆ ಹೊರೆಯನ್ನು ಜನರ ಜೇಬಿನಿಂದ ವಸೂಲಿ ಮಾಡುತ್ತಿದೆ. ಜನರಿಗೆ ಬೇಕಿರುವುದು ಬೆಲೆ ಏರಿಕೆಯ ಗ್ಯಾರಂಟಿಯಲ್ಲ, ಬದುಕಿಗೆ ನೆಮ್ಮದಿಯ ಗ್ಯಾರಂಟಿ. ಕಾಂಗ್ರೆಸ್ ಸರ್ಕಾರಕ್ಕೆ ಜನರ ಜೇಬು ತುಂಬಿಸುವುದು ಬೇಕಿಲ್ಲ, ಖಾಲಿ ಮಾಡಿಸುವುದೇ ಗ್ಯಾರಂಟಿಯಾಗಿದೆ!
ಬಸ್ ದರ ಏರಿಕೆ ಆಗದಂತೆ ಒತ್ತಾಯ
ಜನವಿರೋಧಿ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಿ. ಇಲ್ಲದಿದ್ದರೆ ಜನರ ಪರವಾಗಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಚ್ಚರಿಸಿದ್ದಾರೆ.
ನವೆಂಬರ್ 3ಕ್ಕೆ ಸಭೆ, 4ಕ್ಕೆ ತೀರ್ಮಾನ, 5ಕ್ಕೆ ಹೆಚ್ಚಳ ಜಾರಿ!
ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಮೇಲೆ 2000 ಕೋಟಿ ರೂಪಾಯಿ ಹೊರೆ ಇದೆ. ಒಟ್ಟಾರೆ 9000 ಕೋಟಿ ರೂ. ಸಾಲದ ಹೊರೆ ಇದೆ. ಆದ್ದರಿಂದ ದರ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಸ್ವತಃ ಸಾರಿಗೆ ಸಚಿವ ಬೈರತಿ ಸುರೇಶ್ ಅವರೇ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಈಗಾಗಲೇ ಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು, ನಾಲ್ಕು ಸಾರಿಗೆ ಸಂಸ್ಥೆಗಳ ಕಾರ್ಯದರ್ಶಿಗಳ ಜೊತೆಗೆ ನವೆಂಬರ್ 3ರಂದು ಸಭೆ ನಡೆಸಿ ತೀರ್ಮಾನಿಸಲಾಗುವುದು. ನವೆಂಬರ್ 4ರಂದು ಸುದ್ದಿಗೋಷ್ಠಿ ನಡೆಸಿ ಹೆಚ್ಚಳ ತೀರ್ಮಾನ ಘೋಷಿಸಲಾಗುವುದು ಎಂದು ಹೇಳಿದ್ದಾರೆ.
ಅಗತ್ಯ ವಸ್ತುಗಳ ದರ ಏರಿಕೆಗೆ ಬೇಸತ್ತಿರುವ ರಾಜ್ಯ ಜನರು, ಬಸ್ ದರ ಏರಿಕೆಯನ್ನು ವಿರೋಧಿಸುತ್ತಿದ್ದಾರೆ. ಒಬ್ಬರಿಂದ ಹಣ ಪಡೆದು, ಮನೆಯ ಗೃಹಿಣಿಗೆ ಹಣ ನೀಡುವ ಯೋಜನೆ ಬೇಕಿಲ್ಲ ಅಂತಲೇ ಸಾರ್ವಜನಿಕರು ದೂರಿದ್ದಾರೆ.


Click it and Unblock the Notifications
